ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 11- ಮದ್ದಿಗೆ ಒದಗಿದ ಸಿದ್ಧೌಷಧ

[ಕರಾವಳಿಯ ಅದ್ಭುತ ಕಲೆ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]
ಮದ್ದಿಗೆ ಒದಗಿದ ಸಿದ್ಧೌಷದ......

Bannada baduku
WD
WD
ವೆಂಕಟರಮಣ ಭಟ್ಟರನ್ನು ಮೂಡಬಿದರೆಗೆ ಕರೆತರಲು ಜನ ಕಳುಹಿಸಿದೆ. ಅವರು ಬಂದರು.

"ಏನಾಗಬೇಕಿತ್ತು, ಜ್ಞಾನದಾಸಕ್ತನೇ, ಆನು ಬಂದುದರಿಂದ ಆಗಲೇನಿಹುದು?" ಎಂದರು. ಪ್ರಾಸಬದ್ಧವಾಗಿ ಮಾತನಾಡುವುದು ಅವರಿಗೊಂದು ಶ್ರಮದ ಕಾರ್ಯವಲ್ಲ.

ಕಾಗದ ಲೇಖನಿಗಳನ್ನು ಸಿದ್ಧವಾಗಿರಿಸಿಕೊಂಡೇ, ಅವರಲ್ಲಿ ನನ್ನ ಅಗತ್ಯಗಳನ್ನು ವಿವರಿಸಿದೆ.

ಪ್ರಸಂಗ ರಚನೆ
"ಕಥೆಯನ್ನು ಹೇಳಿ" ಎಂದುದಕ್ಕೆ, ಆ ಕಥೆಯನ್ನು ವಿವರಿಸಿದೆ.

ನನ್ನ ಕಥಾ ವಿವರಣೆ ಒಂದರ್ಧ ಗಂಟೆಯ ಹೊತ್ತು ಮಾತ್ರ ನಡೆದಿರಬಹುದು.

"ಹೂಂ ಬರೆದುಕೊಳ್ಳಿ" ಎಂಬ ಅಪ್ಪಣೆ ಆಯಿತು.

ನಾನು ಬರೆದುಕೊಳ್ಳತೊಡಗಿದೆ.

ಅವರು,
ಶ್ರೀ ಧರ್ಮಸ್ಥಳವಾಸ ಮಿತ್ರ ಘನ ಸಂಕಾಶಾತ್ಮಕಂ ಸುಂದರಂ
ಖೇದಾರಣ್ಯ ದಾವಾಗ್ನಿ ರೂಪ ಭವ ಸಂಹಾರಾದ್ರಿ ಸದ್ಭೂಷಣಮ್
ವೇದಾರಾಧಿತ ಪಾದ ಪದ್ಮಯುಗಳಂ ನಿರ್ಲೇಪನಿಶ್ಚಿಂತಿತಂ
ಶ್ರೀ ಧರ್ಮಪ್ರಿಯ ನಿತ್ಯಮಂಗಳ ನಿರಾಕಾರಂ ಶುಭಾಂಗಂ ಭಜೇ

ಎಂಬ ಪದ್ಯದಿಂದ ಆರಂಭಿಸಿ ಹೇಳುತ್ತಾ ಹೋದರು.

ಮಾಸ್ತರ್ ಭಟ್ಟರ ಆಗಮನದ ವಿಚಾರ ಮಿತ್ರರು ಕೆಲವರಿಗೆ ತಿಳಿಯಿತು. ಅವರೂ ಅಲ್ಲಿ ಬಂದು ಸೇರಿದರು. ಒಬ್ಬಿಬ್ಬರು ನಮ್ಮ ವೇಷಧಾರಿಗಳೂ ಬಂದರು.

ಪದ್ಯಗಳನ್ನು ಅವರು ಹೇಳುತ್ತಾ ಹೋದಂತೆ, ಬರೆದುಕೊಳ್ಳುವ ಕೆಲಸವನ್ನು ನಾನು, ಶ್ರೀ ಕೆ. ರಾಮಚಂದ್ರ ಬಲ್ಯಾಯರು, ಶ್ರೀ ಕೆ. ಸುಬ್ಬಣ್ಣ ಭಟ್ಟರು ಮತ್ತು ಇನ್ನೊಬ್ಬರು ಮಿತ್ರರು ಒಬ್ಬರ ಹಿಂದೊಬ್ಬರಂತೆ ಮಾಡಿ ಮುಗಿಸಿಕೊಂಡೆವು.

ಎರಡೇ ದಿನಗಳಲ್ಲಿ ಪ್ರಸಂಗ ರಚನೆ ಪೂರ್ಣವಾಯಿತು. ಬರೆದು ಬರೆದು ನಮ್ಮ ಕೈಗಳು ಸೋತಿದ್ದುವಷ್ಟೆ; ಕವಿಯ ಬಾಯಿಯನ್ನು ಸೋಲಿಸಲಾಗಲಿಲ್ಲ.

ಹಾಗೆ ಸೃಷ್ಟಿಯಾದ "ಬ್ರಹ್ಮ ಕಪಾಲ" ಪ್ರಸಂಗವನ್ನು ನಮಗೆ ಇತ್ತವರು ಈಗ ಇಲ್ಲವಾಗಿದ್ದಾರೆ.

ಇತರರ ಮಟ್ಟಿಗೇನಾದರೂ ಆಗಲಿ, ನನಗಂತೂ ಆ ಹಿತ್ತಲ ಗಿಡ ಸಿದ್ಧೌಷಧವನ್ನೇ ಇತ್ತಿತ್ತು.

(ಬಡತನದಲ್ಲೇ ಕೊನೆಗಾಲವನ್ನು ಕಂಡ ಅವರ ಜೀವನವನ್ನು ನೆನೆದಾಗ ಕಂಬನಿ ಮಿಡಿಯುತ್ತದೆ.)

ಅವರು ನಮಗಿತ್ತು ಹೋದ "ಬ್ರಹ್ಮ ಕಪಾಲ"ದ ಪ್ರದರ್ಶನಕ್ಕಾಗಿ ಎರಡು ದಿನಗಳ ಅಭ್ಯಾಸ ನಡೆಸಿ, ಮಾರನೇ ದಿನದಂದು ಮೂಡಬಿದರೆಯಲ್ಲೇ ಪ್ರದರ್ಶನವನ್ನು ಆರಂಭಿಸಿದೆವು.

ಮೊದಲನೆಯ ಪ್ರಯೋಗದಲ್ಲೇ ಅದು ಯಶಸ್ಸಿನ ಸೂಚನೆಯನ್ನು ಸ್ಪಷ್ಟವಾಗಿ ತೋರಿಸಿತು. ಅದೊಂದೇ ಥಿಯೇಟರಿನಲ್ಲಿ 16 ದಿನಗಳ ಕಾಲ ನಡೆದು, ನಮಗೆ ವೀಳ್ಯ ಕೊಟ್ಟು ಕರೆಸಿ, ಆಟವಾಡಿಸಿ, ನಷ್ಟ ಮಾಡಿಕೊಂಡಿದ್ದ ಮಿತ್ರರೊಬ್ಬರ ನಷ್ಟವನ್ನೂ ತುಂಬಿಸಿಕೊಡಲು ದಾರಿಯಾಯಿತು.

ನನಗೆ ಬೇಕಾದಂತೆ ಕಥಾ ನಿರೂಪಣೆಯ ತಂತ್ರವನ್ನಷ್ಟು ಅಳವಡಿಸಿಕೊಂಡಿದ್ದೆ. ಶಿವನ ಪಾತ್ರವೂ ನನ್ನದೇ.

ಹಬ್ಬಿದ ಖ್ಯಾತಿ
Shiva tandava
WD
WD
ಕುಣಿಯಬೇಕೆನ್ನಿಸಿದಷ್ಟೂ ಕುಣಿದೆ. ಮಾತನಾಡಬೇಕು ಎನ್ನಿಸಿದಷ್ಟೂ ಮಾತನಾಡಿದೆ. ಬೇರೆಯವರನ್ನೂ ಕುಣಿಸಿ- ಮಾತನಾಡಿಸಿದೆ.

ಶಿವತಾಂಡವಕ್ಕೂ ಅಲ್ಲಿ ಅವಕಾಶವಿತ್ತು. ಲಾಸ್ಯಕ್ಕೂ ಎಡೆಯಿತ್ತು. ಶೃಂಗಾರದಿಂದ ಹಿಡಿದು ಭೀಭತ್ಸ, ಭಯಾನಕ ರಸದವರೆಗೂ ಪ್ರದರ್ಶನವಾಗುತ್ತಿತ್ತು.

ಒಂದು ದಿನವಂತೂ "ಭಿಕ್ಷಾಂದೇಹಿ" ಎಂದು ಬಂದ ಶಿವನನ್ನು ಹಂಗಿಸಿದ ಯಕ್ಷಿಗೆ ಶಾಸ್ತಿ ಮಾಡುವ ನೃತ್ಯದಲ್ಲಿ ಎರಡೂ ಕಾಲುಗಳನ್ನು ಒಮ್ಮೆಲೇ ನೆಲದಿಂದ ಎತ್ತಿ ಯಕ್ಷಿಯ ಪಾತ್ರಧಾರಿಯ ಎದೆಗೆ ಒದ್ದಿದ್ದೆನಂತೆ. ಆ ಹುಡುಗ ಬೆದರಿಕೊಂಡನಾದರೂ ಆಗುವ ನೋವನ್ನು ತಪ್ಪಿಸಲೆಂದು, ಮರುದಿನದ ಪ್ರದರ್ಶನದಲ್ಲಿ ಒದೆತದ ಸನ್ನಿವೇಶ ಬಂದಾಗ ಮೈಯನ್ನು ತಪ್ಪಿಸಿ ನಿಂತ. ನನ್ನ ಆಯ ತಪ್ಪಿತ್ತು ಆದರೆ ಕಾಲು ಬೇರೆ ಕಡೆಗೆ ತಾಗಿ ನೋವಾಯಿತಾದರೂ, ಆಗ ಗೊತ್ತಾಗಲಿಲ್ಲ. ಇತರರೂ ಗಮನಿಸುವಂತಿರಲಿಲ್ಲ.

ಆ ವರ್ಷ ಉಳಿದೆಲ್ಲ ಕಡೆಗಳಲ್ಲೂ ನಾವು "ಬ್ರಹ್ಮ ಕಪಾಲ"ವನ್ನೇ ಆಡುವ ಪರಿಸ್ಥಿತಿ ಬಂದೊದಗಿತು. ಮೂಡಬಿದರೆಯಿಂದ "ಬ್ರಹ್ಮಕಪಾಲ"ದ ಖ್ಯಾತಿ ಬಹಳ ದೂರದವರೆಗೂ ಹಬ್ಬಿತ್ತು. ಮಂಗಳೂರಿನಿಂದಲೂ ಅದನ್ನು ನೋಡಲೆಂದೇ ಜನರು ಬಂದುದಿತ್ತು.

ಬೇರೇನನ್ನೂ ಜನರು ಆಡಗೊಡದೆ, ಬ್ರಹ್ಮಕಪಾಲವನ್ನು ಮಾತ್ರವೇ ಆಡಿರೆನ್ನುವಾಗ, ಜ್ವರ ಬಂದರೂ ಸರಿ, ಆಯಾಸವಿದ್ದರೂ ಸರಿ, ನಾನೇ ಒದ್ದಾಡಬೇಕಾಗುತ್ತಿತ್ತು. ಕೆಲವೊಮ್ಮೆ ಪೂರ್ವಾರ್ಧದ ಈಶ್ವರನ ಪಾತ್ರವನ್ನು ಇನ್ನೊಬ್ಬರು ನಿರ್ವಹಿಸಿ, ಉತ್ತರಾರ್ಧದ ಈಶ್ವರ ನಾನಾಗಬೇಕಾಗುತ್ತಿತ್ತು.

ಒಟ್ಟಿನಲ್ಲಿ "ಬ್ರಹ್ಮಕಪಾಲ" ನನ್ನನ್ನು ಸರಿಯಾಗಿಯೇ ಕಚ್ಚಿ ಹಿಡಿಯಿತು. ಹಿಂಡಿ ಹಿಪ್ಪೆ ಮಾಡಿತು. ಆದರೆ, ಅದು ನಾನಾಗಿಯೇ ತಂದುಕೊಂಡ ಬವಣೆ.

ನನ್ನ ವೈಯಕ್ತಿಕ ಕಷ್ಟಗಳಾಗಲೀ, ದೈಹಿಕ ಶ್ರಮವಾಗಲೀ ನನ್ನನ್ನು ಬೇಸರಗೊಳಿಸಿಲ್ಲ. ಸರಿಯಾಗಿ ನಿರ್ವಹಿಸಬಲ್ಲವರು ಇದ್ದರೆ, ಅತ್ಯದ್ಭುತ ಯಶಸ್ಸನ್ನು ಗಳಿಸುವ ಸಂತೃಪ್ತಿಕರ ಅಂಶವೊಂದನ್ನು ಯಕ್ಷಗಾನ ಕಲೆಗೆ ಸೇರಿಸಿದೆನೆಂಬ ಸಮಾಧಾನ ನನಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಲೇಖನ

'ಕಡತೋಕ ಶೈಲಿ'ಯ ರೂವಾರಿ ಮಂಜುನಾಥ ಭಾಗವತರು ಇನ್ನಿಲ್ಲ

ಮಂಗಳೂರು: ಐದು ದಶಕಗಳ ಹೆಚ್ಚು ಕಾಲ ತಮ್ಮ ಕಂಠ ಸಿರಿಯಿಂದ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದ, ಯಕ್ಷಗಾನದ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 8- ಅಸೂಯೆ ತಂದ ಆಡಳಿತ

ಯಕ್ಷಗಾನ ಪ್ರಪಂಚವೆಂದರೆ ಒಂದು ಮಹಾಸಾಗರ. ದೂರದಿಂದ ನೋಡುವವನಿಗೆ ಅದು ಬಹು ಆಕರ್ಷಣೀಯ. ಬದಿಯಲ್ಲಿ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 7- ಗುರುವಿಗಾಗಿ ನಾಟ್ಯಶಾಲೆ

ಆಂಜನೇಯನ ವೇಷ, ಅವನಿಗಾಗಿಯೇ ಇರುವ ಒಂದು ವಿಶಿಷ್ಟ ಕಿರೀಟದಿಂದ ಮಾತ್ರವೇ ಗುರುತಿಸುವಂತೆ ಇರುತ್ತಿತ್ತು. ...

ಹಳ್ಳಿಗಾಡಲ್ಲೊಂದು ಸಂಚಾರಿ ತಾಳ ಮದ್ದಳೆ ಯಾತ್ರೆ

ತಾಳಮದ್ದಳೆಗಳಲ್ಲಿ ಸಾಧಾರಣವಾಗಿ ಕಾಣಸಿಗದ 'ದೃಶ್ಯಾತ್ಮಕ ನಾಟಕೀಯ ಕೈಕರಣ'ವನ್ನು ಹೆಚ್ಚು ಬಳಸುತ್ತಾರೆ ಇವರು. ...

Widgets Magazine