ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 12- ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು

[ಕರಾವಳಿಯ ಅದ್ಭುತ ಕಲೆ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]

Bannada baduku
WD
ಶಿರ್ವದಲ್ಲಿ ಆಟ ಮುಗಿದ ತರುವಾಯ, ಮುಂದಿನ ಪ್ರದರ್ಶನಕ್ಕೆ ನನಗೆ ಅವಕಾಶ ಕೊಡಿ ಎಂದು ಬೇಡುವ ಸಂದರ್ಭ ಬರಲೇ ಇಲ್ಲ. ನಾನು ಬಣ್ಣ ತೆಗೆಯುತ್ತಿದ್ದಲ್ಲಿಗೆ ಬಂದ ಕಟ್ಪಾಡಿಯ ಶ್ರೀ ಮುದ್ದು ಸುವರ್ಣರು ನಮ್ಮೂರಿಗೆ ಬನ್ನಿ ಎಂದು ವೀಳ್ಯ ಕೊಟ್ಟರು. ಅವರ ಹಿಂದೆಯೇ ಇನ್ನಿಬ್ಬರು ಬಂದರು. ಅವರಿಗಿಂತಲೂ ಮೊದಲೇ 3 ಆಟಗಳಿಗೆ ವೀಳ್ಯ ಪಡೆದಿದ್ದ ಫಲಿಮಾರಿಗೆ, ಮಾತು ಕೊಟ್ಟಂತೆ ಹೋಗಿ ಆಟಗಳನ್ನು ಆಡಿದೆವು.

ಅಲ್ಲಿಯೂ "ಬ್ರಹ್ಮ ಕಪಾಲ". ಅದನ್ನು ನೋಡಲು ಉಡುಪಿ, ಮಲ್ಪೆ, ಕಲ್ಯಾಣಪುರಗಳಿಂದ ಜನರು ಬಂದಿದ್ದರು. ಅವರೆಲ್ಲ ಹಿಂತಿರುಗಿದಾಗ ಮಾಡಿದ್ದ ಪ್ರಚಾರವೇ ನಾವು ಕಟ್ಪಾಡಿ-ಕಾಪುಗಳ ಆಟ ಮುಗಿಸಿ, ಮಲ್ಪೆಯ ಸಮೀಪದ ಕ್ರೋಢಪುರಕ್ಕೆ (ಅದಕ್ಕೆ ಶಂಕರ ನಾರಾಯಣವೆಂಬ ಹೆಸರೂ ವಾಡಿಕೆಯಲ್ಲಿದೆ) ಬಂದಾಗ, ನಮಗೆ ಬಡಗು ನಾಡಿನಿಂದ ಅನಿರೀಕ್ಷಿತ ಸ್ವಾಗತವನ್ನು ಕೊಡಿಸಿತು.

"ವಿಶ್ವಾಮಿತ್ರ-ಮೇನಕೆ" ಮತ್ತು "ಕಂಸವಧೆ" ಎಂಬ ಎರಡು ಕಥಾಭಾಗಗಳನ್ನು ಇರಿಸಿಕೊಂಡು ಕ್ರೋಢಪುರದಲ್ಲಿ ನಾವು ಆಟವಾಡಿದೆವು. ಮೊದಲು ವಿಶ್ವಾಮಿತ್ರನಾಗಿಯೂ, ಅನಂತರ ಕೃಷ್ಣನಾಗಿಯೂ ಪಾತ್ರ ವಹಿಸಿದ ನಾನು, ಪ್ರೇಕ್ಷಕರ ಹರ್ಷಭರಿತ ಕರತಾಡನಗಳ ಆನಂದವನ್ನು ಅನುಭವಿಸುತ್ತಿದ್ದೆ. ಜನಸಮೂಹದಲ್ಲಿದ್ದ, ಅಲ್ಲಿನ ಪಂಡಿತರೊಬ್ಬರು ನಮಗೆಲ್ಲ ಹಾರ ಸಮರ್ಪಣೆ ಮಾಡಿದರು.

ನಡುವೆ, ಅಂತಹ ಕಾರಣದಿಂದ ಕೆಲವು ನಿಮಿಷಗಳ ಕಾಲ ಬಿಡುವು ದೊರೆತರೆ, ಮುಂದಿನ ಆಟ ನಡೆಯಲಿರುವ ಸ್ಥಳವನ್ನು ರಂಗಸ್ಥಳದಿಂದ ಕರೆದು ಹೇಳುವ ಪದ್ಧತಿ. ಮುಂದಿನ ಒಂದು ದಿನದ ವಿವರವನ್ನು ಸಾರಲೆಂದು ಹಾಸ್ಯಗಾರರು ರಂಗಸ್ಥಳವನ್ನು ಸೇರುವಾಗಲೇ ಅವರ ಕೈಗೆ ಆರು ಕಡೆಗಳ ಆಟ ನಿರ್ಣಯವಾದ ಚೀಟಿ ಸೇರಿತು. ಅವುಗಳನ್ನೂ ಹೇಳತೊಡಗಿದಾಗ ಇನ್ನೂ ಕೆಲವು ಸ್ಥಳಗಳೂ ತಾರೀಕುಗಳೂ ಸೂಚಿಸಲ್ಪಟ್ಟವು. ಬೇಡಿಕೆ ಹೆಚ್ಚುವ ಸೂಚನೆ ಕಂಡು ಬಂದಾಗ, ಮುಂದಿನ ಎಲ್ಲ (ನಿಶ್ಚಯವಾದ) ಆಟಗಳ ಕುರಿತು ಸ್ಥಳ ಮತ್ತು ತಾರೀಕುಗಳ ಒಂದು ಯಾದಿಯನ್ನು ತಯಾರಿಸಿ ಅವರ ಕೈಗೆ ಕೊಟ್ಟಾಗ, ಒಟ್ಟು 33 ಆಟಗಳು ನಿಶ್ಚಯವಾದುದು ಗೊತ್ತಾಯಿತು.

ಆಟಗಳ ದಾಖಲೆ
"ಅಡ್ವಾನ್ಸ್ ಬುಕ್ಕಿಂಗ್"ನಲ್ಲಿ 33 ಆಟಗಳ ದಾಖಲೆಯನ್ನು ನಿರ್ಮಿಸಿದ ತಂಡ ನಮ್ಮದು ಮಾತ್ರವೇ ಎಂದು ಈಗಲೂ ಹೇಳಬಲ್ಲೆ.

ಉಡುಪಿಯಲ್ಲಿ- ಶ್ರೀ ಕೃಷ್ಣ ಸನ್ನಿಧಿಯಲ್ಲಿ ಶ್ರೀ ಶಿರೂರು ಮಠಾಧೀಶರ ಆಶ್ರಯದಲ್ಲಿ ಆಟವಾಡಿ, ಶಾಲು ಜೋಡಿ- ಫಲ ಮಂತ್ರಾಕ್ಷತೆ- ಮಾನಪತ್ರಗಳನ್ನು ಪಡೆದೆವು. ಒಂದು ವಾರ ಕಳೆದು ಶ್ರೀ ಪೇಜಾವರ ಮಠದ ರಾಜಾಂಗಣದಲ್ಲಿ ಆಡಿ, ಶ್ರೀ ಮಠಾಧೀಶರಿಂದ ಶಾಲು ಜೋಡಿ ಪಡಕೊಂಡೆವು.

ಯಶಸ್ವೀ ಪ್ರದರ್ಶನಗಳನ್ನೇ ಮಾಡುತ್ತಾ ಮುಂದುವರಿದ, ಎಷ್ಟೋ ಊರುಗಳಲ್ಲಿ ಆಟವಾಡಿಸಿದ ಮತ್ತು ಆಟ ನೋಡಲು ಬಂದ ಕಲಾಭಿಮಾನಿಗಳು ಭಾಗವತರಾದಿಯಾಗಿ ಕೂಲಿಯಾಳುಗಳವರೆಗೆ ಎಲ್ಲರಿಗೂ ಜರಿಶಾಲು- ಧೋತಿಗಳ ಸನ್ಮಾನ ಮಾಡಿದರು.

ಕುಂದಾಪುರ, ಶಂಕರನಾರಾಯಣ, ಬೈಂದೂರು ಈ ಕಡೆಗಳಿಗೆ-ಆಹ್ವಾನದ ಮೇಲೆಯೇ- ಮುಟ್ಟಿದಾಗ ಅಲ್ಲೆಲ್ಲ ಸ್ಥಳೀಯ ಪವಿತ್ರ ಕಾರ್ಯಗಳಿಗಾಗಿ ಸಹಾಯಾರ್ಥ ಆಟಗಳನ್ನೂ ಆಡಿದೆವು.

ಬಂದವರನ್ನು ಸ್ವಕೀಯರೆಂದು ಬಗೆಯುವಷ್ಟರ ಮಟ್ಟಿಗೆ ಜನರು ಮುಂದುವರಿದಾಗ, ನಾವು ಇದಕ್ಕೆ ಮೊದಲೇ ಈ ಕಡೆ ಬರಲಿಲ್ಲವೇಕೆ? ಎಂದುಕೊಂಡೆ. ಹೋಗದೆ ಇದ್ದ ಕಡೆಯ ಸ್ವಾಗತ ಅತ್ಯಪೂರ್ವವಾಗಿತ್ತು; ಆತ್ಯಾನಂದಕರವಾಗಿತ್ತು.

ಕಲಾಸಂಗ
Bannada baduku
WD
ಕುಂದಾಪುರ ತಾಲ್ಲೂಕಿನ ಕಂಡ್ಲೂರಿನಲ್ಲಿ ನಮ್ಮ ಮೇಳವಿದ್ದ ದಿನ ಅಲ್ಲಿಂದ 13 ಮೈಲು ದೂರದ ಬಿಸಿಗಲ್ಲು ಕಟ್ಟೆಯಲ್ಲಿ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಆಟವಿದೆ ಎಂದು ತಿಳಿದು ಬಂತು. ಶ್ರೀ ಹಾರಾಡಿ ರಾಮ ಗಾಣಿಗರೂ (ರಾಷ್ಟ್ರ ಪ್ರಶಸ್ತಿ ಪಡಿದಿದ್ದಾರೆ) ಆ ಮೇಳದಲ್ಲಿನ ಪಾತ್ರಧಾರಿಯಾದ ಕಾರಣ ಅವರ ವೇಷವನ್ನು ನೋಡಬೇಕೆಂಬ ಆಸೆ ಮೂಡಿತು.

ಹಾಗೆ, ಪ್ರಥಮ ಭಾಗದಲ್ಲಿ ನನಗಿದ್ದ ವೇಷವನ್ನು ಮಾಡಿ ಮುಗಿಸಿ, ಬಿಸಿಗಲ್ಲು ಕಟ್ಟೆಗೆ ಹೋಗಿ, ಆಟದ ಸ್ಥಳವನ್ನು ಸೇರಿದೆ.

ನಾನು ಅಲ್ಲಿಗೆ ಬಂದ ವಿಷಯ ಯಾರ ಮೂಲಕವೋ ಶ್ರೀ ರಾಮ ಗಾಣಿಗರ ಕಿವಿಗೆ ಬಿತ್ತು. ಅವರು ಆಟವಾಡಿಸುವವರನ್ನು ಕರೆಸಿ ನನ್ನನ್ನು ಗೌರವದಿಂದ ಕುಳ್ಳಿರಿಸಲು ಏರ್ಪಾಡು ಮಾಡಬೇಕೆಂದರಂತೆ. ವ್ಯವಸ್ಥಾಪಕರು ನನ್ನನ್ನು ಹುಡುಕಿ ಬಂದು, ಕೈ ಹಿಡಿದು ಕರೆದುಕೊಂಡು ರಂಗಸ್ಥಳದ ಕಡೆಗೆ ಹೋದರು.

ಕೇಂದ್ರಬಿಂದ
ವಿಶೇಷ ಅತಿಥಿಗಳು ಅಥವಾ ಗಣ್ಯವ್ಯಕ್ತಿಗಳು ಯಾರಾದರೂ ಆಟ ನೋಡಲು ಬಂದರೆ, ಅವರನ್ನು ರಂಗಸ್ಥಳದಲ್ಲಿ -ವೇಷಧಾರಿಗಳು ಕುಣಿಯುವ ಸ್ಥಳದಲ್ಲಿ -ಒಳಗೇ ಕುಳ್ಳಿರಿಸಿ ಗೌರವಿಸುವುದು ಅಲ್ಲಿನ ಪದ್ಧತಿಯಂತೆ.

ಆ ಪದ್ಧತಿಯ ನೆನಪು ಆದಾಗ, ಸಾವಿರ ಕಣ್ಣುಗಳ ಕೇಂದ್ರಬಿಂದುವಾಗಿ ಆ ಸ್ಥಳದಲ್ಲಿ ಕುಳ್ಳಿರುವುದಾದರೂ ಹೇಗೆ? ಎಂಬ ಭೀತಿ ನನ್ನನ್ನು ಕಾಡತೊಡಗಿತು.

ಧರ್ಮಕರ್ಮ ಸಂಯೋಗದಿಂದ, ಅಂದಿನ ಪ್ರದರ್ಶನಕ್ಕೆ ಕುಂದಾಪುರದಿಂದ ಯಕ್ಷಗಾನ ಕಲಾಸಕ್ತರಾದ ವಕೀಲ್ ಶ್ರೀ ಮುತ್ತಯ್ಯ ಹೆಗ್ಡೆಯವರೂ ತಮ್ಮ ಮಿತ್ರರೊಂದಿಗೆ ಆಗಮಿಸಿದ್ದರು. ಅವರಿಗೂ ಅದೇ ರೀತಿಯ ಗೌರವಾಸನ ವ್ಯವಸ್ಥೆಯಾಗಿತ್ತು. ಪರಿಚಿತರಾದ ಅವರೂ ಅಲ್ಲಿದ್ದರಾದ ಕಾರಣ ಧೈರ್ಯಮಾಡಿ ರಂಗಸ್ಥಳದ ಒಳಗೇ ಕುಳಿತು, ಬೆಳಗಿನ ತನಕವೂ ಆ ಕಲಾಪ್ರದರ್ಶನ ನೋಡಿ ಸಂತೋಷಗೊಂಡೆ.

ಪ್ರದರ್ಶನವನ್ನು ನೋಡುತ್ತಿದ್ದಂತೆ- "ವೇಷಭೂಷಣಗಳಲ್ಲಿ ಮತ್ತು ನಾಟ್ಯದ ಹೆಜ್ಜೆಗಾರಿಕೆಯಲ್ಲಿ ಅಲ್ಲಲ್ಲಿನ ಸಂಪ್ರಾದಯದಂತೆ, ನಮ್ಮ ತೆಂಕುತಿಟ್ಟಿಗೂ ಇಲ್ಲಿನ ಬಡಗುತಿಟ್ಟಿಗೂ ಅಲ್ಪ ಸ್ವಲ್ಪ ವ್ಯತ್ಯಾಸವಿರಬಹುದು. ಅದನ್ನೇ ಮಹಾಮೇರುವಾಗಿ ಮಾಡಿ ಕಲಾವಿದರೊಳಗೆ ಮತ್ತು ಕಲಾಸಕ್ತರೊಳಗೆ ಸಲ್ಲದ ವೈಷಮ್ಯ- ತಿರಸ್ಕಾರ ಅಸಹಕಾರಗಳನ್ನು ಉಂಟು ಮಾಡುವುದು ಅನ್ಯಾಯ."ಇದರಲ್ಲಿ ಇನ್ನಷ್ಟು ಓದಿ :  

ಲೇಖನ

'ಕಡತೋಕ ಶೈಲಿ'ಯ ರೂವಾರಿ ಮಂಜುನಾಥ ಭಾಗವತರು ಇನ್ನಿಲ್ಲ

ಮಂಗಳೂರು: ಐದು ದಶಕಗಳ ಹೆಚ್ಚು ಕಾಲ ತಮ್ಮ ಕಂಠ ಸಿರಿಯಿಂದ ಯಕ್ಷಗಾನ ಪ್ರಿಯರನ್ನು ರಂಜಿಸಿದ್ದ, ಯಕ್ಷಗಾನದ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 8- ಅಸೂಯೆ ತಂದ ಆಡಳಿತ

ಯಕ್ಷಗಾನ ಪ್ರಪಂಚವೆಂದರೆ ಒಂದು ಮಹಾಸಾಗರ. ದೂರದಿಂದ ನೋಡುವವನಿಗೆ ಅದು ಬಹು ಆಕರ್ಷಣೀಯ. ಬದಿಯಲ್ಲಿ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 7- ಗುರುವಿಗಾಗಿ ನಾಟ್ಯಶಾಲೆ

ಆಂಜನೇಯನ ವೇಷ, ಅವನಿಗಾಗಿಯೇ ಇರುವ ಒಂದು ವಿಶಿಷ್ಟ ಕಿರೀಟದಿಂದ ಮಾತ್ರವೇ ಗುರುತಿಸುವಂತೆ ಇರುತ್ತಿತ್ತು. ...

ಹಳ್ಳಿಗಾಡಲ್ಲೊಂದು ಸಂಚಾರಿ ತಾಳ ಮದ್ದಳೆ ಯಾತ್ರೆ

ತಾಳಮದ್ದಳೆಗಳಲ್ಲಿ ಸಾಧಾರಣವಾಗಿ ಕಾಣಸಿಗದ 'ದೃಶ್ಯಾತ್ಮಕ ನಾಟಕೀಯ ಕೈಕರಣ'ವನ್ನು ಹೆಚ್ಚು ಬಳಸುತ್ತಾರೆ ಇವರು. ...

Widgets Magazine