ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 13- ಯಂತ್ರಗಳು, ಯಾಂತ್ರಿಕರು...

Bannadabaduku
WD
[ಕರಾವಳಿಯ ಅದ್ಭುತ ಕಲೆ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]

[ಕಳೆದ ವಾರದಿಂದ]

ಆಧುನಿಕ ವಿಜ್ಞಾನವು ಇತ್ತ ಕೊಡುಗೆಗಳನ್ನು ನಾವು ಜೀವನದಲ್ಲಿ ಉಪಯೋಗಿಸಿಕೊಳ್ಳಲೇ ಬೇಕಷ್ಟೆ. ಕಲೆಗೂ ಕೆಲವು ಕೊಡುಗೆಗಳನ್ನು ವಿಜ್ಞಾನವು ಇತ್ತಿದೆ. ಇತರ ಕಲೆಗಳಂತೆ ಯಕ್ಷಗಾನದಲ್ಲೂ ಅವುಗಳ ಉಪಯೋಗವಾಗುತ್ತಿದೆ.

ಸರಿಯಾಗಿ ಉಪಯೋಗ ಮಾಡಿಕೊಳ್ಳುವ ಮೊದಲು, ವಿಜ್ಞಾನವಿತ್ತ ಹಲವು ಸಲಕರಣೆಗಳೂ, 'ಅನುಕೂಲಗಳೂ' ನನಗೆ ಉಪಟಳವಿತ್ತಿವೆ.

ನಾವು ಉತ್ತರ ಕನ್ನಡ ಪ್ರವಾಸ ಕೈಕೊಂಡ ಮಾರನೆಯ ವರ್ಷ ಡೇರೆಯ ಅಗತ್ಯ ನಮಗಾಯಿತು. ಅದಕ್ಕೆ ಮೊದಲೇ ಶ್ರೀ ಕೊರಗಪ್ಪ ಶೆಟ್ಟರು ತಮ್ಮ ಮೇಳಕ್ಕೆ ಒಂದು ಡೇರೆಯನ್ನು ಮಾಡಿಸಿಕೊಂಡಿದ್ದರು. ನಮ್ಮ ಮನೆಯಲ್ಲೇ ಬೇಕಾದ ವಸ್ತುಗಳನ್ನು ತರಿಸಿ ಹೊಸ ಡೇರೆಯೊಂದನ್ನು ತಂದೆಯವರು ಮಾಡಿಸಲು ತೊಡಗಿದರು. ಮೊದಲು ಹೊರಗಿನ ಆವರಣ ಮಾತ್ರ ಸಾಕು ಎಂದಿದ್ದುದು, ಅನಂತರ- ಆಟವಾಡುವ ಸ್ಥಳದ ಅರ್ಧ ಬಯಲನ್ನು ಮುಚ್ಚುವ ದೊಡ್ಡ ಡೇರೆಯಾಗಿಯೇ ಪರಿವರ್ತನೆಗೊಂಡಿತು. ಆಗ ಅದಕ್ಕೆ ತಕ್ಕಂತೆ ಕಟ್ಟಿ- ಬಿಚ್ಚಿ- ಜೋಡಿಸಿ ಸಾಗಿಸಬಲ್ಲ ಒಂದು ರಂಗಸ್ಥಳವೂ ಬೇಕು ಎನಿಸಿತು. ಅನಂತರ ಬಂದುದು ವಿದ್ಯುತ್ತಿನ ವ್ಯವಸ್ಥೆ; ಧ್ವನಿವರ್ಧಕದ ಏರ್ಪಾಡು.

ಈ ನಡುವೆ ಸಂಚಾರ- ಸಾಗಾಟಗಳಿಗೆ ಅನುಕೂಲವಾಗುವಂತೆ ಒಂದು 'ಷೆವರ್ಲೆ' ವ್ಯಾನನ್ನೂ ಕೊಂಡಿದ್ದೆ. ಆದರೆ, ಖರೀದಿ ಮಾಡಿದ ಸ್ಥಳದಿಂದ ನಮ್ಮ ಮನೆಯನ್ನು ತಲುಪುವ ಮೊದಲೇ ಅದು ಅಪಘಾತಕ್ಕೆ ಒಳಗಾಗಿ ತನ್ನ ಉದರದೊಳಗಿನ ವಿವಿಧ ಭಾಗಗಳ ಪರಿಚಯವನ್ನೂ (ಗ್ಯಾರೇಜಿನಲ್ಲಿ) ನನಗೆ ಮಾಡಿಸಿಕೊಟ್ಟಿತು.

ಬರಿಯ ರಥಿಕ ನಾನಾದರೆ ಸಾಲದು, ಸಾರಥಿಯೂ ಆಗುವುದು ಅಗತ್ಯ ಎಂದು ತಿಳಿದು ವ್ಯಾನನ್ನು ಓಡಿಸಲೂ ಕಲಿಯಬೇಕಾಯಿತು. ಹಲವಾರು ವರ್ಷಗಳವರೆಗೆ ಸೇವೆ ಸಲ್ಲಿಸಿದ ಆ ವ್ಯಾನಿನಲ್ಲಿ 'ಡ್ರೈವಿಂಗ್' ಎಂದರೆ ಎಷ್ಟು "ಸುಖಕರ"ವಾದ ವೃತ್ತಿ ಎಂಬುದರ ಮರ್ಮವನ್ನು ನಾನರಿಯುವಂತಾಯಿತು.

ಒಂದು ಶಿಬಿರದಿಂದ ಇನ್ನೊಂದು ಶಿಬಿರಕ್ಕೆ ಐವತ್ತು ಮೈಲುಗಳ ಅಂತರವಿದ್ದರೂ ಬೆದರದೆ ಸಾಗುವ ಅನುಕೂಲ- ಆಗಾಗ ಕೈ ಕೊಡುತ್ತಿದ್ದರೂ - ಆ ವ್ಯಾನಿನಿಂದ ನಮಗಾಯಿತು.

ಮೈಕಾಸುರ
Bannada baduku
WD
ಧ್ವನಿವರ್ಧಕಗಳನ್ನು ನಾವು ಉಪಯೋಗಿಸತೊಡಗುವಾಗ, ಸ್ವಲ್ಪ ವಿಳಂಬವಾಗಿತ್ತು. ಆದರೆ ಅದಕ್ಕೆ ಮೊದಲು ಕೆಲವು ಕಡೆ ಕರೆಸಿ ಆಡಿದ ಆಟಗಳಲ್ಲೂ, ಮಳೆಗಾಲಗಳಲ್ಲಿ ಮುಂಬಯಿಗೆ ತೆರಳಿದ್ದಾಗಲೂ 'ಮೈಕ್'ನ ಒಳಗಿನಿಂದ ನನ್ನ ಮಾತು ಹೊರಡಬೇಕಾದರೆ ಹೇಗೆ ನಿಲ್ಲಬೇಕು, ಎಲ್ಲಿ ಕುಣಿಯಬೇಕು ಎಂಬುದನ್ನು ತಿಳಿದುಕೊಂಡಿದ್ದೆ. ಆದುದರಿಂದ ವೈಯಕ್ತಿಕವಾಗಿ ನನಗೆ ಅಷ್ಟೊಂದು ಶ್ರಮವಾಗಲಿಲ್ಲವಾದರೂ, ಇತರರ ಮಟ್ಟಿಗೆ 'ಮೈಕಾಸುರನೆಲ್ಲಿರುವ?' ಎಂದು ಆಗಾಗ ನೆನಪು ಮಾಡಿಕೊಳ್ಳುವ ಪ್ರಮೇಯ ಬಂದೊದಗಿ ಆರಂಭದ ದಿನಗಳಲ್ಲಿ ಕಷ್ಟವಾಯಿತು.

ರಂಗಸ್ಥಳದ ಯಾವ ಭಾಗದಲ್ಲಿ ಅದನ್ನು ತೂಗು ಹಾಕಿದರೆ, ಸಂದರ್ಭವಶಾತ್ ಸಭೆಗೆ ಬೆನ್ನು ತೋರಿಸಿ ಮಾತನಾಡಿದವನ ಮಾತೂ ಕೇಳಿಸುವಂತಾಗಬಹುದು ಎಂದು ಕಂಡು ಹಿಡಿಯಲು ಕೆಲವು ದಿನಗಳೇ ಹಿಡಿಯಿತು. ಹಾಗೆಯೇ ತಾರಸ್ಥಾಯಿಯಲ್ಲಿ ಸ್ವರ ಹೊರಡಿಸುವ ಭಾಗವತರು ಮತ್ತು ವಿಶಿಷ್ಟ ನಾದದ ಚೆಂಡೆ ಇವುಗಳೆಲ್ಲಕ್ಕೂ ಹೊಂದಾಣಿಕೆಯಾಗುವಂತೆ ಅದನ್ನು ಜೋಡಿಸಿಕೊಳ್ಳಲೂ ಕಲಿಯಬೇಕಾಯಿತು.

ರಂಗಸ್ಥಳಕ್ಕೆ ಮತ್ತು ಡೇರೆಯ ಇತರ ಕಡೆಗಳಿಗೆ ಬೆಳಕನ್ನು ಒದಗಿಸುವ "ಜನರೇಟರ್" ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ವಿದ್ಯುತ್ತಿನ ವಿತರಣೆ ಹೇಗೆ ಆಗುತ್ತದೆ? ಎಂಬುದನ್ನು ಅನಂತರದ ವರ್ಷ ಕಲಿಯುವ ಅವಕಾಶ ಬಂತು.

ಆಗ 'ದೊಂದಿ' ಯುಗದಿಂದ ಪೆಟ್ರೊಮೆಕ್ಸ್ ಯುಗಕ್ಕೆ ಬಂದ ಬಣ್ಣಗಾರಿಕೆ ಸಾಲದು; ವಿದ್ಯುದ್ದೀಪಗಳಿಗೆ ಅನುಗುಣವಾಗಿ, ಮುಖಕ್ಕೆ ಬಳಿಯುವ ಬಣ್ಣದ ಛಾಯೆಯಲ್ಲೂ ಬದಲಾವಣೆಯಾಗಬೇಕಾಗುತ್ತದೆ ಎಂಬುದೂ ತಿಳಿಯಿತು. ಅದನ್ನು ಇತರರಿಗೂ ತಿಳಿಸಿ ಕೊಡಬೇಕಾಯಿತು.

ರಂಗಸ್ಥಳಕ್ಕೆ ಹೆಚ್ಚಿನ ಪ್ರಕಾಶವನ್ನು ಒದಗಿಸುವ ದೀಪಗಳಿಂದಾಗಿ ಜನರ ಕಣ್ಣು ಕುಕ್ಕುವಂತಾಗಬಾರದು- ಅವುಗಳನ್ನು ಹೊರ ಭಾಗದಿಂದ ಮುಚ್ಚಿರಬೇಕು. ಕುಳಿತುಕೊಳ್ಳುವಲ್ಲಿ ಸಂಪೂರ್ಣ ಕತ್ತಲೆ ಮಾಡಲು ಸಾಧ್ಯವಿಲ್ಲದ ಕಾರಣ ಎರಡೂ ಕಡೆಯ ವ್ಯವಸ್ಥೆ ಸಮರ್ಪಕವಾಗಿರಬೇಕು ಎಂದೂ ತಿಳಿದುಕೊಳ್ಳಬೇಕಾಯಿತು.

ದಾರಿಯಲ್ಲೇ ಬಾಯ್ಬಿಟ್ಟು ಕೈಕೊಡುವ ಟೈರನ್ನು ತೇಪೆ ಹಾಕಲೂ ಕಲಿತೆ. ಎಂಜಿನಿನ ತಡೆಗೆ ಇರುವ ಕಾರಣ- ನಿವಾರಣೆಗಳನ್ನೂ ಅರಿತೆ. ಜೊತೆಗೆ, ಯಾವ ರಸ್ತೆಯಲ್ಲಿ ಯಾವ ಕಡೆಗೆ ಕೈ ತೋರಬೇಕು? ಪೊಲೀಸರು ಯಾವ ರಸ್ತೆಯ ಅಂಚಿನಲ್ಲಿ ಹೊಂಚು ಹಾಕುತ್ತಾರೆ- ಎಲ್ಲಿ ಧೈರ್ಯವಾಗಿ ಎದುರು ನಿಂತು, ನಮ್ಮನ್ನು ನಿಲ್ಲಿಸುತ್ತಾರೆ ಎಂಬುದನ್ನೂ ತಿಳಿದುಕೊಂಡೆ.

ವಾಲ್ಟ್‌ಗಳ ಪರಿಚಯವೂ ಆಯಿತು. ಧ್ವನಿ ಹಿಗ್ಗಿಸುವ ಚೌಕಟ್ಟಿನಲ್ಲಿ ಇರುವ ನಾಲ್ಕು ಗುಂಡಿಗಳನ್ನು ತಿರುವುವುದೇಕೆ? ಎಂದೂ ತಿಳಿಯಿತು.

ಡೀಸೆಲ್ ಎಂಜಿನಿಗೆ 'ಸ್ಪಾರ್ಕ್ ಪ್ಲಗ್' ಏಕೆ ಬೇಡ? ಎಂಬುದನ್ನೂ ತಿಳಿದುಕೊಳ್ಳಬೇಕಾಯಿತು. ಸ್ವಿಚ್ ಬೋರ್ಡ್ ಏನು ಎಂಬುದೂ ಗೊತ್ತಾಯಿತು.

ಒಂದೊಂದು ಹೊಸ ಸಲಕರಣೆ ಬರುವಾಗಲೂ, ಅದು ಹೇಗೆ ಕೆಲಸ ಮಾಡುತ್ತದೆ? ಎಂದು ಕುತೂಹಲ ತೋರುತ್ತಿದ್ದ ನನ್ನನ್ನು-

"ಅವೆಲ್ಲವನ್ನೂ ತಿಳಿದು ಏನು ಮಾಡುತ್ತೀಯಾ?" ಎಂದವರಿದ್ದಾರೆ.

"ಯಕ್ಷಗಾನಕ್ಕೆ ಅವೆಲ್ಲ ಬೇಕು ಎಂದಾದರೆ ನಾನೂ ಅವುಗಳ ವಿಷಯ ತಿಳಿದುಕೊಳ್ಳಬೇಕು. ನಾನೂ ಯಕ್ಷಗಾನದ ಒಂದು ಕಣ ತಾನೆ?" ಎಂದಿದ್ದೆ.

ಈಗ, ಅವುಗಳಾವುವೂ ನನ್ನ ಉಪಯೋಗಕ್ಕೆ ಇಲ್ಲ. ಅವುಗಳ ಅಗತ್ಯವೂ ನನಗೆ ಇಲ್ಲ. ಆದರೆ, ಆಗಿನ ಪರಿಚಯ ಮತ್ತು ಅನುಭವಗಳಿಂದ-

ಯಾವುದನ್ನು ಎಲ್ಲಿ ಉಪಯೋಗ ಮಾಡಿಕೊಳ್ಳಬಹುದು? ಹೇಗೆ ಅವುಗಳ ಪ್ರಯೋಜನ ಪಡೆಯಬಹುದು? ಇನ್ನೂ ಯಾವ ವಸ್ತುಗಳು ಉಪಯೋಗಕ್ಕೆ ಬರುವಂತೆ ಮಾಡಬಹುದು? ಎಂದು ಆಸಕ್ತರಿಗಾದರೂ ಸಲಹೆ ಕೊಡುವಂತಾಗಿದ್ದೇನೆ.ಇದರಲ್ಲಿ ಇನ್ನಷ್ಟು ಓದಿ :  

ಲೇಖನ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 12- ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು

ಶಿರ್ವದಲ್ಲಿ ಆಟ ಮುಗಿದ ತರುವಾಯ, ಮುಂದಿನ ಪ್ರದರ್ಶನಕ್ಕೆ ನನಗೆ ಅವಕಾಶ ಕೊಡಿ ಎಂದು ಬೇಡುವ ಸಂದರ್ಭ ಬರಲೇ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 11- ಮದ್ದಿಗೆ ಒದಗಿದ ಸಿದ್ಧೌಷಧ

ಒಂದು ದಿನವಂತೂ "ಭಿಕ್ಷಾಂದೇಹಿ" ಎಂದು ಬಂದ ಶಿವನನ್ನು ಹಂಗಿಸಿದ ಯಕ್ಷಿಗೆ ಶಾಸ್ತಿ ಮಾಡುವ ನೃತ್ಯದಲ್ಲಿ ಎರಡೂ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 10- ಮೇಳವನ್ನು ಉಳಿಸಿದ ಹರಕೆಯ ಆಟಗಳು

ಹೊಸಬನಾದ ನನ್ನ ಕೈಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆಡಳಿತವನ್ನು ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 9- ಯುದ್ಧಕಾಲದ ಅಭಾವಗಳ ಬಿಸಿ

ಕಿರುಕುಳ, ಸಮಸ್ಯೆಗಳಿಂದಾಗಿ ನಾನೆಣಿಸಿಕೊಂಡಿದ್ದಂತೆ ಮಾಡಬೇಕೆಂದು ಭಾವಿಸಿದ ಪ್ರಯೋಗಗಳಲ್ಲಿ ಹೆಚ್ಚಿನವು ...

Widgets Magazine