ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 15- ಸಣ್ಣವರು, ದೊಡ್ಡವರು....

[ಕರಾವಳಿಯ ಅದ್ಭುತ ಕಲೆ ಕಂಡ ಮೇರು ಕಲಾವಿದ ದಿವಂಗತ ಕುರಿಯ ವಿಠಲ ಶಾಸ್ತ್ರಿಯವರ ಜನ್ಮಶತಮಾನ ವರ್ಷ (ಜನನ: 08-09-1912) ಹಿನ್ನೆಲೆಯಲ್ಲಿ ಅವರ ಪ.ಗೋ. ನಿರೂಪಿಸಿದ ಶಾಸ್ತ್ರಿಗಳ ಆತ್ಮ ಕಥನ "ಬಣ್ಣದ ಬದುಕು" ಪ್ರತೀ ಗುರುವಾರ ವೆಬ್‌ದುನಿಯಾದಲ್ಲಿ ಸರಣಿ ರೂಪದಲ್ಲಿ ಪ್ರಕಟವಾಗುತ್ತಿದೆ.- ಸಂ]
[ಕಳೆದ ವಾರದಿಂದ]

Bannada baduku
WD
ಸಣ್ಣವರು ದೊಡ್ಡವರು...
ನಾನು ಸಣ್ಣವನಿದ್ದಾಗ, ಹಲವು ಮಂದಿ ದೊಡ್ಡವರು ನನ್ನ ಕೈ ಹಿಡಿದು ನಡೆಸಿದ್ದರು. ದೈನಂದಿನ ಜೀವನಕ್ಕೆ ಅನ್ವಯಿಸುವಷ್ಟೇ ಪರಿಣಾಮಕಾರಿಯಾಗಿ ಆ ಮಾತು ಕಲಾ ಜೀವನಕ್ಕೂ ಅನ್ವಯಿಸುವಂತಹುದು.

ಆಮೇಲೆ, ನಾನೂ ಒಬ್ಬ ಕಲಾವಿದ ಎಂದು ಹೇಳಿಕೊಳ್ಳುವ ಶಕ್ತಿ ಬಂದಾಗ (ಶಕ್ತಿಗಿಂತಲೂ ಹೆಚ್ಚಿನ ಕುರುಡು ಧೈರ್ಯವೂ ಇದ್ದಾಗ) ಹಲವು ಮಂದಿ ದೊಡ್ಡವರೆನಿಸಿಕೊಂಡವರ ಸ್ನೇಹ-ಪರಿಚಯಗಳನ್ನು ಮಾಡಿಕೊಂಡಿದ್ದೇನೆ. ಎಷ್ಟೋ ಮಂದಿ ಸಣ್ಣವರನ್ನು ಕಲಾರಂಗಕ್ಕೆ ಪರಿಚಯ ಮಾಡಿಸಿಕೊಟ್ಟಿದ್ದೇನೆ.

ದೊಡ್ಡವರೆನಿಸಿದವರು ಹಲವರಲ್ಲಿ ಕೆಲವರು ಈಗ ಕಣ್ಮರೆಯಾಗಿದ್ದಾರೆ. ಇನ್ನು ಕೆಲವರು ನಿವೃತ್ತರಾಗಿದ್ದಾರೆ. ಸಣ್ಣವರಾಗಿದ್ದವರು ಮೆಲ್ಲಮೆಲ್ಲನೆ ದೊಡ್ಡವರಾಗುತ್ತಲಿದ್ದಾರೆ.

ನಾನು ಎಳೆಯ ಕಲಾವಿದರನ್ನು ತರಬೇತಿಗಾಗಿ ನಮ್ಮಲ್ಲಿಗೆ ಎಳೆದು ತಂದಾಗ, ನನ್ನ ಆಯ್ಕೆಯ ಕ್ಷೇತ್ರವನ್ನು ವಿಸ್ತಾರಗೊಳಿಸುವ ಧೈರ್ಯ ನನಗಿರಲಿಲ್ಲ. ಮನೆಯವರಿಂದ ಬೇರ್ಪಡಿಸಿ ಹುಡುಗರನ್ನು ನನ್ನ ಬಳಿಗೆ ಕರೆತರಿಸಿಕೊಳ್ಳುವುದು ಅಷ್ಟು ಸುಲಭದ ಕೆಲಸವೂ ಆಗಿರಲಿಲ್ಲ. ನಮ್ಮ ಮನೆಯ ಸಮೀಪದವರನ್ನಾದರೂ ಕರೆತಂದು ಸೇರಿಸಿಕೊಳ್ಳುವ ಮೊದಲು "ನಿಮ್ಮ ಹುಡುಗನಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತೇನೆ." ಎಂಬ ಭರವಸೆ ಕೊಟ್ಟೇ ಕರೆತರಬೇಕಾಗುತ್ತಿತ್ತು.

ಹಾಗೆ ತಂದು ತರಬೇತಿ ಮಾಡಿಸಿದವರಲ್ಲಿ ಹೆಚ್ಚಿನವರು ತಮ್ಮ ರಂಗಪ್ರವೇಶದ ಹಾರೈಕೆಗಳನ್ನು ಸಾರ್ಥಕಗೊಳಿಸಿದ್ದಾರೆ. ಇನ್ನು ಕೆಲವರು ತಾವು ಪರಿಣತರಾದೆವೆಂದು ತಿಳಿದುಕೊಂಡಿದ್ದಾರೆ. ಇನ್ನೂ ಕೆಲವರು, ಜೀವನದ ಇತರ ಜಂಜಾಟಗಳಿಗೆ ಸಿಕ್ಕಿ ತಮ್ಮ ಪ್ರತಿಭೆಯನ್ನು ಕಳೆದುಕೊಳ್ಳುವ ಮಟ್ಟಕ್ಕೂ ಮುಟ್ಟಿದ್ದಾರೆ.

ಎಲ್ಲರೂ ಒಂದೇ ರೀತಿಯಾಗಿರಬೇಕೆಂದು ನಿರೀಕ್ಷಿಸುವುದಾದರೂ ಹೇಗೆ? ಏಕರೂಪದ ಸಾಕಾರವೇ ಸಾಕ್ಷಾತ್ಕಾರವಾಗುವುದಾದರೆ, ಭಗವದ್ ಸೃಷ್ಟಿಯಲ್ಲಿ ವೈವಿಧ್ಯವೇ ಇರಲಾರದಲ್ಲ?

ನನ್ನೊಂದಿಗೆ ಸಣ್ಣವರಾಗಿದ್ದು ದೊಡ್ಡವರಾಗುತ್ತಿರುವಾಗಲೇ ವಿಧಿಯ ಕಡೆ ಸೇರಿದವರು ಇಬ್ಬರು-ನಮ್ಮ ದೊಡ್ಡಪ್ಪನ ಮಕ್ಕಳು. ಒಬ್ಬನ ಹೆಸರು ರಾಮ, ಇನ್ನೊಬ್ಬನ ಹೆಸರು ಕೃಷ್ಣ.

ರಾಮನ ಹೆಸರು ಅವನು ನಿರ್ವಹಿಸುತ್ತಿದ್ದ ರಾಕ್ಷಸ ಪಾತ್ರಗಳಿಂದಾಗಿ ಮೆರೆದಿತ್ತು. ಕೃಷ್ಣ ಸ್ತ್ರೀ ಪಾತ್ರಗಳಿಗೆ ಹೆಸರಾಗಿದ್ದ. ಅವರಿಬ್ಬರೂ ಪಡೆದು ಬಂದಿದ್ದ ಪ್ರತಿಭೆಯನ್ನು ಮೆರೆಸಲು ಸರಿಯಾದ ಅವಕಾಶ ದೊರೆಯುವ ಮೊದಲೇ ಇಬ್ಬರೂ ಅನಾರೋಗ್ಯಕ್ಕೆ ತುತ್ತಾದರು.

ನನ್ನ ಜೊತೆಗೇ- ಅಥವಾ ಒಂದೆರಡು ವರ್ಷಗಳ ಹಿಂದು ಮುಂದಿನ ವ್ಯತ್ಯಾಸದಲ್ಲಿ- ರಂಗಪ್ರವೇಶ ಮಾಡಿ ಇಂದಿಗೂ ತಮ್ಮ ಕಲಾಸೇವೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಂಡು ಹೋಗುತ್ತಲಿರುವವರು ಕೆಲವರಿದ್ದಾರೆ. ಅವರೆಲ್ಲರನ್ನೂ ನಾನು ಪ್ರತ್ಯೇಕವಾಗಿ ಹೆಸರಿಸಬೇಕಾಗಿಲ್ಲ. ಕರಾವಳಿಯ ಸೀಮೆಯ ಜನರು ಅವರ ವಿವಿಧ ವೇಷಗಳನ್ನು ನೋಡಿ ಆನಂದಿಸುತ್ತಿದ್ದಾರೆ.

ನನ್ನ ಮೂಲಕವೇ ತರಬೇತಿ ಪಡೆದು ತಮ್ಮ ವೈಯಕ್ತಿಕ ಸಾಮರ್ಥ್ಯವನ್ನು ಪಡೆದು ಹೆಚ್ಚಿಸಿಕೊಂಡ ರಾಮಚಂದ್ರ- ನಾರಾಯಣರಂತಹ ಕೆಲಮಂದಿ ಯುವಕರು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಲಿದ್ದಾರೆ.

ಉಪಚಾರದ ಬೆಲೆ
ಅಧಿಕಾರ ಸ್ಥಾನದಿಂದಾಗಲಿ, ಕಲಾ ನೈಪುಣ್ಯದಿಂದಾಗಲೀ ದೊಡ್ಡವರೆನಿಸಿಕೊಂಡವರು ಹಲವರನ್ನು ಕಂಡು ಪರಿಚಯ ಮಾಡಿಕೊಳ್ಳುವ ಸುಯೋಗ ನನಗೊದಗಿತ್ತು.

ಅಧಿಕಾರದ ಪದವಿಗಳಿಂದಾಗಿ ದೊಡ್ಡವರಾದವರು ಎಷ್ಟೋ ಮಂದಿ, ನನ್ನನ್ನು ಕಂಡು ಆಡಿದ ಮಾತುಗಳ ಉಪಚಾರದ ಬೆಲೆ- ಈಗ ಅವರ ಮುಂದೆ ಕಲಾವಿದನಂತೆ ನಿಲ್ಲಲಾರದ ಸಂದರ್ಭದಲ್ಲಿ ನೆನಪಿಗೆ ಬರುತ್ತಲಿದೆ.

ಕಲೆಯಿಂದಾಗಿ ದೊಡ್ಡವರಾದವರು ಈಗಲೂ ನೆನಪಿನ ಸುಳಿಯಲ್ಲಿ ತಿರುಗುತ್ತ ಇದ್ದಾರೆ. ಅವರಲ್ಲಿ ಒಬ್ಬರು ನೆನಪು ಮಾಡಿಕೊಟ್ಟ-

ಅರಸರ್ ಕೊಡುವಾ ಕಾರ್ತ
ಸ್ವರ ಕಂಕಣಮಿರ್ಕೆ ಸರಸರಾಸ್ವಾದಿಸಿ ಕಾ|
ವ್ಯ ರಸವ ಸೂಸುವ ಸುಖ ಭಾ
ಸ್ವರಾಶ್ರು ಕಣ್ಕಣಮೆ ಕವಿಗೆ ಕಂಕಣ ಮಲೆ|

ಎಂಬ ಕಂದಪದ್ಯ ಇನ್ನೂ ನೆನಪಿನಲ್ಲಿ ಉಳಿದಿದೆ.

ಆತ್ಮಪರೀಕ್ಷೆ
ಅಷ್ಟೊಂದು ವರ್ಷಗಳ ಕಾಲ ಕಲಾಸಾಗರದಲ್ಲೇ ಈಜಾಡುತ್ತಲಿದ್ದರೂ, ಯಕ್ಷಗಾನದ ಬಗ್ಗೆಯಾಗಲಿ ನನ್ನ ಜೀವನದ ಕುರಿತಾಗಲಿ ಅಂತರ್ಮುಖಿಯಾಗಿ ವಿಮರ್ಶೆ ನಡೆಸಲು ಅವಕಾಶ ನನಗೆ ದೊರೆತಿರಲಿಲ್ಲ.

ಅಂತಹ ಅವಕಾಶ ಸಿಗಬೇಕಾದರೆ, ತಿಂಗಳುಗಟ್ಟಲೆ ವಿಶ್ರಾಂತಿಯಿಂದಲೇ ಇರಬೇಕಾಗುವುದೇ? ಎನಿಸುತ್ತಲಿತ್ತು ಒಮ್ಮೊಮ್ಮೆ. ದೇಹದ ದಣಿವು- ಮನಸ್ಸಿನ ಆಯಾಸ, ಎರಡೂ ಸೇರಿಕೊಂಡು ನನ್ನನ್ನು ಹಣ್ಣು ಮಾಡತೊಡಗಿದ್ದುವು.

ಕಟ್ಟಿದ ವೇಷವನ್ನು ಬಿಚ್ಚಿ, ಉಜ್ಜಿದ ಬಣ್ಣವನ್ನು ಆಳಿಸಿ ಒಮ್ಮೆ ಬಿದ್ದುಕೊಂಡರೆ ಸಾಕು ಎನ್ನುವ ಸ್ಥಿತಿ 1960ರ ದಶಕದಲ್ಲಿ ಬರತೊಡಗಿತ್ತು. ನಾನು ಹೇಗಾದರೂ ಮುಂದೆ ಸಾಗುತ್ತಿದ್ದೆ, ಎಂದಾದರೆ ಚೆಂಡೆಯ ಪೆಟ್ಟಿನ ಆಕರ್ಷಣೆಯೇ ಕಾರಣವಾಗಿತ್ತು.

1965ನೇ ಇಸವಿ ಆಗುವಾಗ, ಹೊಸ ಪ್ರಸಂಗಗಳನ್ನು ತಮಗಾಗಿಯೇ ಬರೆಸಿಕೊಂಡು ಕೃತಿಕರ್ತೃಗಳ ಶ್ರಮಕ್ಕೆ ಕಿಂಚಿತ್ ಕಾಣಿಕೆ ಸಲ್ಲಿಸುವ ಅಭ್ಯಾಸ ದಶಾವತಾರ ಮೇಳಗಳವರಲ್ಲಿ ಬೆಳೆಯತೊಡಗಿತ್ತು.

ನಮ್ಮ ಧರ್ಮಸ್ಥಳ ಮೇಳದ ಪರವಾಗಿ ಆ ವರ್ಷ ಒಂದು ಹೊಸ ಪ್ರಸಂಗವನ್ನು ಬರೆಸಲಾಯಿತು. ವೈಶಿಷ್ಟ್ಯಪೂರ್ಣ ಹಿನ್ನೆಲೆಯುಳ್ಳ ಶ್ರೀ ಧರ್ಮಸ್ಥಳ ಕ್ಷೇತ್ರವೇ ಪ್ರಸಂಗಕ್ಕೆ ಸ್ಫೂರ್ತಿ. ಧರ್ಮಸ್ಥಳದ ಮಹಾತ್ಮೆಯೇ ಕಥಾವಸ್ತುವಾಯಿತು. ಶ್ರೀಮಾನ್ ರತ್ನವರ್ಮ ಹೆಗ್ಗಡೆಯವರ ಅಪೇಕ್ಷೆಯಂತೆ ಶ್ರೀ ಪದ್ಯಾಣ ವೆಂಕಟೇಶ್ವರ ಭಟ್ಟರಿಂದ "ಧರ್ಮಸ್ಥಳ ಮಹಾತ್ಮೆ" ಪ್ರಸಂಗವನ್ನು ಬರೆಸಿದೆ. ಆ ವರ್ಷ ಧರ್ಮಸ್ಥಳದಲ್ಲೇ ಶ್ರೀ ಹೆಗ್ಗಡೆಯವರ ಸಮ್ಮುಖದಲ್ಲೇ ಯಶಸ್ವಿಯಾದ ಪ್ರಥಮ ಪ್ರಯೋಗವಾಯಿತು.

ತಿರುಗಾಟಕ್ಕೆ ಹೊರಟಾಗ, ಹೆಚ್ಚಿನ ಕಡೆಗಳಲ್ಲಿ ಪ್ರಸಂಗದ ಎರಡು ಪ್ರಾಮುಖ್ಯ ಪಾತ್ರಗಳಾದ ಶಿವ ಮತ್ತು ಅಣ್ಣಪ್ಪ ದೈವ- ಇವೆರಡನ್ನೂ ನಾನೇ ಮಾಡಬೇಕಾಗಿ ಬರುತ್ತಿತ್ತು.

ದೇಹಶ್ರಮ ಅಧಿಕಾವಾಗುತ್ತಾ ಬಂದಿತ್ತು. ಆದರೆ ಕಾಲನ್ನು ಕುಣಿಸುವ ಕಾಲ ಕೇಳುತ್ತಿರಲಿಲ್ಲ.

1965ರ ಜನವರಿ 14ನೇ ತಾರೀಕಿನ ರಾತ್ರಿ-

ಉಡುಪಿಯಿಂದಾಚೆ ಪೆರ್ಡೂರಿನಲ್ಲಿ- ವೇಷಧಾರಣೆಗೆ ಪ್ರಾರಂಭಿಸಿದಾಗ ಅಷ್ಟೊಂದು ಆಯಾಸ ಕಂಡುಬರಲಿಲ್ಲ. ಅದೇ ಧೈರ್ಯದಿಂದ ಶಿವನಾಗಿ ರಂಗಸ್ಥಳ ಪ್ರವೇಶಿಸಿ ತಾಂಡವವನ್ನಾಡತೊಡಗಿದೆ.

ಇದ್ದಕ್ಕಿದ್ದಂತೆ ಎದೆಯ ಬಡಿತ ಹೆಚ್ಚಾಗಿ ತೊಡಗಿ, ಉಸಿರು ಕಟ್ಟತೊಡಗಿತು. ಒಂದು ತಾಳದ ಹೊಡೆತಕ್ಕೆ ಭಾಗವತರ ಬಳಿಯ "ರಥ"ದ ಮೇಲೆ ಒರಗಲೇಬೇಕಾಯಿತು.

ಏನೋ ಆಗಿದೆ ಎಂಬ ಸೂಚನೆ ಭಾಗವತರಾದ ಶ್ರೀ ಕಡತೋಕ ಮಂಜುನಾಥ ಭಾಗವತರಿಗೆ ದೊರೆತಿತಂತೆ. ಅವರು ತಮ್ಮ ಬಳಿಯಲ್ಲಿ (ತಮಗಾಗಿ) ತರಿಸಿಟ್ಟಿದ್ದ ಚಹಾದ ಗ್ಲಾಸನ್ನು ಎತ್ತಿ ನನಗೆ ಕೊಡಲು ಪ್ರಯತ್ನಿಸಿದರು.

"ಆಯಾಸ- ಅಲ್ಲ- ಏನೋ ಭಯಂಕರ ಸ್ಥಿತಿ- ಹೇಳಲಾರೆ- ಕಥೆ ಮುಂದುವರಿಸಿ ಮುಂದಿನ ಪಾತ್ರ- ರಂಗಪ್ರವೇಶ" ಎಂದು ಹೇಗಾದರೂ ಮೇಲುಸಿರಿನಲ್ಲಿ ತಿಳಿಸಿದಾಗ ಭಾಗವತರು ಮುಂದಿನ ಪಾತ್ರಗಳ ಪ್ರವೇಶ ಸೂಚನೆಯನ್ನು ತಾಳದಲ್ಲೇ ತಿಳಿಸಿದರು.

ವೇಷಗಳು ಬಂದೊಡನೆ, ಮುಂದಿನ ಕಥಾಸಂದರ್ಭವನ್ನು ಎಳೆದ ಉಸಿರಿನ ಮಾತಿನಲ್ಲೇ ತಿಳಿಸಿ, ಕುಸಿದು ತೆವಳುವಂತಾಗಿ ರಂಗಸ್ಥಳದಿಂದ ಮೆಲ್ಲನೆ ಸರಿದೆ.

ಬಳಿಯ ಚೌಕಿಯಲ್ಲಿ ಇತರ ವೇಷಧಾರಿಗಳು ಇನ್ನೂ ಬಣ್ಣ ಬಳಿಯುತ್ತಿರುವಲ್ಲಿಗೆ ಬಂದು ಹೇಗಾದರೂ ಇತರರ ಆಧಾರದಿಂದ ಸೇರುವಾಗ ವಾಂತಿಯಾಯಿತು. ಪ್ರಜ್ಞೆ ತಪ್ಪಿತು. ಮೇಳದ ಶ್ರೀ ಮಹಾಗಣಪತಿಯನ್ನು ಕಣ್ಣಿಂದ ನೋಡುತ್ತಿದ್ದಂತೆ ಕೆಳಕ್ಕೆ ಬಿದ್ದೆ-

ನನಗೆ ಮೂರ್ಛೆ ತಿಳಿದಾಗ-

ನಾನು ಪೆರ್ಡೂರಿನ ಆಟದ ಚೌಕಿಯಲ್ಲಿರಲಿಲ್ಲ. ಒಂದು ಮಂಚದ ಮೇಲಿದ್ದೆ. ಮೂಗಿನಲ್ಲಿ ಎರೆಹುಳುವಿನಂತೆ ಒಂದು ರಬ್ಬರ್ ನಳಿಗೆ ಇದ್ದುದು ಕಂಡಿತು. ನನ್ನವರೆನ್ನುವವರು ಯಾರೊಬ್ಬರೂ ಬಳಿಯಲ್ಲಿ ಇರಲಿಲ್ಲ. ಮನಸ್ಸಿಗೇ ಕತ್ತಲು ತುಂಬಿಕೊಂಡಿತ್ತು.

ಎಚ್ಚರ ತಪ್ಪಿ ಮುಚ್ಚಿದ ಕಣ್ಣು ತೆರೆಯುವಾಗ ಮರುದಿನ ಮಧ್ಯಾಹ್ನವಾಗಿತ್ತು ಎಂದು ತಿಳಿದು ಬಂದುದು ಅನಂತರ.ಇದರಲ್ಲಿ ಇನ್ನಷ್ಟು ಓದಿ :  

ಲೇಖನ

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 12- ಯಕ್ಷಗಾನ ತಾಯಿಯ ಮಡಿಲಲ್ಲಿ ಬೆಳೆದ ಮಕ್ಕಳು

ಶಿರ್ವದಲ್ಲಿ ಆಟ ಮುಗಿದ ತರುವಾಯ, ಮುಂದಿನ ಪ್ರದರ್ಶನಕ್ಕೆ ನನಗೆ ಅವಕಾಶ ಕೊಡಿ ಎಂದು ಬೇಡುವ ಸಂದರ್ಭ ಬರಲೇ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 11- ಮದ್ದಿಗೆ ಒದಗಿದ ಸಿದ್ಧೌಷಧ

ಒಂದು ದಿನವಂತೂ "ಭಿಕ್ಷಾಂದೇಹಿ" ಎಂದು ಬಂದ ಶಿವನನ್ನು ಹಂಗಿಸಿದ ಯಕ್ಷಿಗೆ ಶಾಸ್ತಿ ಮಾಡುವ ನೃತ್ಯದಲ್ಲಿ ಎರಡೂ ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 10- ಮೇಳವನ್ನು ಉಳಿಸಿದ ಹರಕೆಯ ಆಟಗಳು

ಹೊಸಬನಾದ ನನ್ನ ಕೈಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಆಡಳಿತವನ್ನು ...

ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ 9- ಯುದ್ಧಕಾಲದ ಅಭಾವಗಳ ಬಿಸಿ

ಕಿರುಕುಳ, ಸಮಸ್ಯೆಗಳಿಂದಾಗಿ ನಾನೆಣಿಸಿಕೊಂಡಿದ್ದಂತೆ ಮಾಡಬೇಕೆಂದು ಭಾವಿಸಿದ ಪ್ರಯೋಗಗಳಲ್ಲಿ ಹೆಚ್ಚಿನವು ...

Widgets Magazine