Widgets Magazine

ಆ.18-ಸೆ.16ರವರೆಗೆ ಅಧಿಕ ಮಾಸ: ಶುಭ ಕಾರ್ಯ ಮಾಡೋ ಹಾಗಿಲ್ಲ...

ನಾಗೇಂದ್ರ ತ್ರಾಸಿ|

PR
ನಂದನನಾಮ ಸಂವತ್ಸರದಲ್ಲಿ ಆಗಸ್ಟ್ 18 ರಿಂದ ಸೆಪ್ಟಂಬರ್ 16 ರವರೆಗೆ ಅಧಿಕ ಭಾದ್ರಪದ ಮಾಸವಿರುತ್ತದೆ. ಯಾವ ಚಾಂದ್ರಮಾಸದಲ್ಲಿ ಸೂರ್ಯ ಸಂಕ್ರಾಂತಿ ಇರುವುದಿಲ್ಲವೋ ಆ ಮಾಸವನ್ನು ಅಧಿಕ ಮಾಸವೆಂದು ಪರಿಗಣಿಸಲಾಗುವುದು. ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸುವುದನ್ನು ಸಂಕ್ರಾಂತಿ ಎಂದು ಕರೆಯಲಾಗುವುದು. ಪ್ರತೀ 33ನೇ ಚಾಂದ್ರಮಾಸವು ಅಧಿಕ ಮಾಸವಾಗಿರುತ್ತದೆ. ವಶಿಷ್ಟ ಸಿದ್ದಾಂತ ಪ್ರಕಾರ ಅಧಿಕ ಮಾಸವು 32 ತಿಂಗಳು 16 ದಿವಸಗಳು, 3 ಗಂಟೆ 12 ನಿಮಿಷಕ್ಕೆ ಬರುತ್ತದೆ. ಈ ಅಧಿಕ ಮಾಸಕ್ಕೆ ಮಲಮಾಸ, ಪುರುಷೋತ್ತಮಮಾಸ, ಮಲಿಮ್ಮಾಚ ಎಂದೂ ಕರೆಯುತ್ತಾರೆ.

ಅಧಿಕಮಾಸವು ಸಹ ಖಗೋಳ ವಿಜ್ಞಾನ ಮತ್ತು ಗಣಿತ ಸೂತ್ರಗಳನ್ನು ಆಧರಿಸಿದ ಪರಸ್ಪರ ತುಲನೆಯ ಲೆಕ್ಕಾಚಾರವಾಗಿದೆ. ಭೂಮಿಯ ಮೇಲಿನ ಕಾಲಗಣನೆಯು ಋತುಗಳಿಗೆ ಬದ್ಧವಾಗಿರ ಬೇಕಾಗಿರುತ್ತದೆ. ಋತು ಆವರ್ತವು, ಭೂ ವಾರ್ಷಿಕ ಚಲನೆಗೆ ಪರ್ಯಾಯವಾಗಿ ಉಂಟಾಗುವ ಪ್ರಾಕೃತಿಕ ಪ್ರಕ್ರಿಯೆ. ಆದ್ದರಿಂದ ಸೌರಮಾನವು ಋತುಗಣನೆಯ ಅಳತೆಯಾಗಿದೆ. ಆದರೆ ಜಗತ್ತಿನಾದ್ಯಂತ ಪೂರ್ವ ಕಾಲದಿಂದಲೂ ಚಂದ್ರನು ಕಣ್ಣಿಗೆ ಕಾಣಿಸುವ ಹಂತಗಳನ್ನು ಆಧರಿಸಿ ಬಳಕೆಯಲ್ಲಿದೆ. ಹಾಗಾಗಿ ನಮ್ಮಲ್ಲಿ ಮತ್ತು ಚಾಂದ್ರಮಾನ ಎರಡೂ ಕಾಲಗಣನೆ ಬಳಕೆಯಲ್ಲಿದೆ. ಸೌರಮಾನ ಚಾಂದ್ರಮಾನಗಳೆರಡೂ ಋತುಗಳಿಗೆ ಬದ್ಧವಾಗಿರುವಂತೆ ಅವೆರಡನ್ನು ಸಮೀಕರಿಸಲಾಗಿದೆ.

ಭೂಮಿಯು ಸೂರ್ಯನ ಸುತ್ತ, ಒಂದು ಸುತ್ತು ಸುತ್ತಿ ಬರಲು (1 ಆವರ್ತ) 365, 2422 ದಿವಸಗಳು ಬೇಕು. ಇದು ಸೌರಮಾನದ ವಾರ್ಷಿಕ ಚಲನೆಯಾಗಿದೆ.

ಚಂದ್ರನು ಭೂಮಿಯ ಸುತ್ತಲೂ ಒಂದು ಸುತ್ತು ಸುತ್ತಿ ಬರಲು 27.3 ದಿವಸಗಳು ಬೇಕು. ಇದು ಚಂದ್ರಮಾನದ ಮಾಸಿಕ ಚಲನೆಯಾಗಿದೆ. ಅಂದರೆ ಭೂಮಿ ಮತ್ತು ಚಂದ್ರರ 27.3 ದಿವಸಗಳ ಚಲನೆ ಅಂದರೆ ನಿಯಮದ ಪ್ರಕಾರ ಸೂರ್ಯನ ಸುತ್ತಲೂ 1/12 ಭಾಗವನ್ನು ಚಲಿಸಿರುತ್ತದೆ. ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆವರೆಗೆ ಚಲಿಸಲು 2.2 ಹೆಚ್ಚಿನ ದಿವಸಗಳನ್ನು ತೆಗೆದುಕೊಳ್ಳುತ್ತದೆ. ಇದು ಸೂರ್ಯನ ಸುತ್ತಲು ಚಲಿಸುವ ಭೂಮಿಯ ಪಥವು ಸಮನಾಗಿಲ್ಲವಾಗಿರುವುದರಿಂದ ವ್ಯತ್ಯಾಸವಾಗುತ್ತದೆ. ಚಂದ್ರನು ಭೂಮಿಯ ಸುತ್ತಲು ಚಲಿಸುತ್ತಿರುವಾಗ ಭೂಮಿಯೂ ಸಹಾ ಸೂರ್ಯನ ಸುತ್ತಲೂ ಚಲಿಸುತ್ತಿರುವುದರಿಂದ ಚಂದ್ರನು ಹುಣ್ಣಿಮೆಯಿಂದ ಮುಂದಿನ ಹುಣ್ಣಿಮೆಯವರೆಗೆ ಚಲಿಸಲು 29.531 ದಿವಸಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಚಾಂದ್ರಮಾನದ ವಾರ್ಷಿಕ ಚಲನೆ 29.531 x 12 = 354.372 ದಿವಸಗಳಾಗಿರುತ್ತದೆ.

ಸೌರಮಾನದ ವಾರ್ಷಿಕ ಚಲನೆ (1 ಆವರ್ತನ) = 365.2422
ಚಾಂದ್ರಮಾನದ ವಾರ್ಷಿಕ ಚಲನೆ (29.531 x 12) = 354.372
ಸೌರಮಾನ ಮತ್ತು ಚಾಂದ್ರಮಾನದ ವಾರ್ಷಿಕ ವ್ಯತ್ಯಾಸ: 10.8702 ದಿವಸಗಳ

ಈ ವ್ಯತ್ಯಾಸ 3 ವರ್ಷಗಳಲ್ಲಿ 32.6106 ದಿವಸಗಳಾಗುತ್ತದೆ. ಈ ವ್ಯತ್ಯಾಸ ಸರಿತೂಗಿಸಲು 3ನೇ ವರ್ಷದಲ್ಲಿ ಅಧಿಕ ಮಾಸ ಬರುತ್ತದೆ. ಆಂದರೆ ಪ್ರತೀ 33ನೇ ಚಾಂದ್ರಮಾಸವು ಅಧಿಕಮಾಸವಾಗಿರುತ್ತದೆ. ಈ ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಾಂತಿಯಿರುವುದಿಲ್ಲ.

ಕಾಲ ನಿರ್ಣಯ ಗ್ರಂಥದಲ್ಲಿ ಚಾಂದ್ರಮಾಸೋಹಿ ಅಸಂಕ್ರಾಂತೋ ಮಲಮಾಸ ಪ್ರಕೀರ್ತಿತಃ, ಮಲಂಲು ಚೈಸ ಮಾಕ್ರಾಂತಂ, ಸೂರ್ಯ ಸಂಕ್ರಾಂತಿ ವರ್ಜಿತಂ, ಮಲಂ ವದಂತಿ ಕಾಲಸ್ಯ ಮಾಸಂ ಕಾಲವಿದೋದಿಕ ಮಿತಿಷಿ ಎಂದು ವಿವರಿಸಿದ್ದಾರೆ.

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಸಂವತ್ಸರಗಳಿಗಿರುವಂತೆಯೇ 12 ಮಾಸಗಳಿಗೂ ಅಧಿಪತಿಗಳಿದ್ದಾರೆ. ಚೈತ್ರಮಾಸಕ್ಕೆ ವಿಷ್ಣು, ವೈಶಾಖಕ್ಕೆ ಮಧುಸೂದನ, ಜೇಷ್ಠಕ್ಕೆ ತ್ರಿವಿಕ್ರಮ, ಆಷಾಡಕ್ಕೆ ವಾಮನ, ಶ್ರಾವಣಕ್ಕೆ ಶ್ರೀಧರ, ಭಾದ್ರಪದಕ್ಕೆ ಹೃಷಿಕೇಶ, ಆಶ್ವಯುಜಕ್ಕೆ ಪದ್ಮನಾಭ, ಕಾರ್ತಿಕಕ್ಕೆ ದಾಮೋದರ, ಮಾರ್ಗಶಿರಕ್ಕೆ ಕೇಶವ, ಪುಷ್ಯಕ್ಕೆ ನಾರಾಯಣ, ಮಾಘಕ್ಕೆ ಮಾಧವ, ಫಾಲ್ಗುಣಕ್ಕೆ ಗೋವಿಂದ ಅಧಿಪತಿಗಳಾಗಿದ್ದಾರೆ. ಅಧಿಕ ಮಾಸಕ್ಕೆ ಪುರುಷೋತ್ತಮನೇ ಅಧಿಪತಿಯಾಗಿದ್ದಾನೆ. ಹಾಗಾಗಿ ಅಧಿಕಮಾಸವನ್ನು ಪುರುಷೋತ್ತಮ ಮಾಸವೆಂದು ಕರೆಯುತ್ತಾರೆ.

ಅಧಿಕ ಮಾಸದಲ್ಲಿ ಏಕಾದಶ ರುದ್ರರು, ದ್ವಾದಶ ಆದಿತ್ಯರು, ಅಷ್ಟವಸುಗಳು, ಪ್ರಜಾಪತಿ ಮತ್ತು ವಷಟ್ಕಾರ ಎಂಬ 33 ದೇವತೆಗಳು ಅಧಿಕಮಾಸದ ದೇವತೆಗಳು. ಆದ್ದರಿಂದ ಅಧಿಕ ಮಾಸದಲ್ಲಿ ಪುಣ್ಯ ಸಂಪಾದನೆ ಅಧಿಕ. ಭಗವಂತನು ಈ ಮಾಸದಲ್ಲಿ ಪಾಪಗಳನ್ನು ತೊಲಗಿಸಲಿಕ್ಕೆ ಸಹಾಯ ಮಾಡುತ್ತಾನೆ. ಆದ್ದರಿಂದ ಈ ಮಾಸಕ್ಕೆ ಮಲ ಮಾಸವೆಂದು ಕರೆಯುತ್ತಾರೆ. ಈ ಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಅಧಿಕ ಮಾಸ ಕರ್ತವ್ಯಗಳನ್ನು ಪರಿಪಾಲಿಸುವ ಹೆಣ್ಣುಮಕ್ಕಳಿಗೆ ಭಗವಂತನು ಸೌಭಾಗ್ಯವನ್ನು ಭಗವಂತನಲ್ಲಿ ಶ್ರದ್ದಾ ಭಕ್ತಿಯುಳ್ಳ ಗಂಡು ಸಂತಾನವನ್ನು ನೀಡುತ್ತಾನೆ. ಅಧಿಕ ಮಾಸ, ಸ್ನಾನಾದಿ ಕರ್ತವ್ಯಗಳನ್ನು ಮಾಡುವವರಿಗೆ ಗರ್ಭ ಸ್ರಾವ ಉಂಟಾಗುವುದಿಲ್ಲ. ನಾವು ಮಾಡುವ ಪೂಜೆ - ಪುನಸ್ಕಾರಗಳು ಅಧಿಕವಾಗುತ್ತದೆ.

ಬೇರೆ ಯಾವ ಮಾಸವೂ ಪುರುಷೋತ್ತಮ ಮಾಸಕ್ಕೆ ಸಮಾನವಲ್ಲ. ಆದ್ದರಿಂದ ಅಧಿಕಮಾಸದಲ್ಲಿ ಶುಭ ಕಾರ್ಯಗಳನ್ನು ಮಾಡದೆ, ವ್ರತಗಳು ಮತ್ತು ಕೈಲಾದ ದಾನಗಳನ್ನು ಮಾಡುವುದು ಶ್ರೇಷ್ಠ. ಅಖಂಡದೀಪ, ದೀಪಸೇವೆ, ಧಾರಣ - ಪಾರಣ, ವ್ರತ, ವಿಷ್ಣು ಪಂಚಕ ವ್ರತಗಳನ್ನು ಮಾಸ ಪೂರ್ತಿ ಮಾಡಬೇಕು, ಸಾಧ್ಯವಾಗದಿದ್ದಲ್ಲಿ ವಿಶೇಷ ದಿವಸಗಳಾದ ಶುಕ್ಲ ದ್ವಾದಶಿ, ಪೌರ್ಣಿಮೆ, ಮತ್ತು ಕೃಷ್ಣಪಕ್ಷದ ಅಷ್ಟಮಿ, ನವಮಿ, ದ್ವಾದಶಿ, ಚತುರ್ದಶಿ ಮತ್ತು ಅಮಾವಾಸ್ಯೆಗಳಲ್ಲಿ ಮಾಡುವುದು ಸೂಕ್ತ. ಆಗ ನಮ್ಮಲ್ಲಿರುವ ಲೋಪ ದೋಷಗಳನ್ನು ಭಗವಂತನು ನಿವಾರಿಸುತ್ತಾನೆಂಬುದೇ ಅಧಿಕಮಾಸದ ಐತಿಹ್ಯವಾಗಿದೆ.

ಆರ್. ಸೀತಾರಾಮಯ್ಯ,
ಜೋತೀಷ್ಕರು,
ಕಮಲ, 5ನೇ ತಿರುವು,
ಬಸವನಗುಡಿ,
ಶಿವಮೊಗ್ಗ - 577 201
ಮೋ: 94490 48340
ಪೋನ್: 08182-227344


ಇದರಲ್ಲಿ ಇನ್ನಷ್ಟು ಓದಿ :