Widgets Magazine

ನಿಮ್ಮದು ಮಿಥುನ ರಾಶಿಯೇ?

ಇಳಯರಾಜ|
WD
ರಾಶಿಯಲ್ಲಿ ಜನಿಸಿದವರ ಮೂಲ ಸ್ವಭಾವ ಹೆಚ್ಚು ಕಡಿಮೆ ರಾಶಿಯ ಗುಣಸ್ವಭಾವಕ್ಕೆ ಹೊಂದಿಕೊಂಡಿರುತ್ತದೆ. ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಈ ರಾಶಿಯವರು ಬದಲಾದರೂ, ಮೂಲಸ್ವಭಾವ ಎಲ್ಲೋ ಹುದುಗಿಕೊಂಡ ಸ್ಥಿತಿಯಲ್ಲಿ ಇದ್ದೇ ಇರುತ್ತದೆ.

ಪುರುಷ- ಯಾವಾಗಲೂ ಪ್ರೀತಿಯ ಮಳೆ ಸುರಿಸುತ್ತಲೇ ತನ್ನ ಜತೆಗೇ ಇರಬೇಕೆಂದು ಹಪಹಪಿಸುವ ಹುಡುಗಿಯರು ಮಿಥುನ ರಾಶಿಯ ಹುಡುಗರ ಕಡೆಗೆ ವಾಲದಿರುವುದೇ ಉತ್ತಮ. ಕಾರಣ ಮಿಥುನ ರಾಶಿಯ ಪುರುಷರು ಸ್ವಲ್ಪ ಕಾಲ ಪ್ರೀತಿಯ ಮಳೆ ಸುರಿಸಿದರೂ ಕೆಲವು ಕಾಲ ಮಳೆಯೇ ಇಲ್ಲದೆ ಬೆಂಗಾಡಾಗಬಲ್ಲರು. ಇವರಿಗೆ ಸ್ವಲ್ಪ ಸಹನೆ ಕಡಿಮೆಯೇ. ಅತಿ ಬೇಗನೆ ಕೋಪ ನೆತ್ತಿಗೇರುವ, ಉದ್ರಿಕ್ತರಾಗುವ ಸ್ವಭಾವ ಇವರದ್ದು. ಸ್ವಲ್ಪ ಸಂದೇಹವೂ ಹೆಚ್ಚು.

ಮಿಥುನ ರಾಶಿಯ ಒಬ್ಬ ಪುರುಷನೊಂದಿಗೆ ಇರುವುದೆಂದರೆ ಮೂರು ನಾಲ್ಕು ಪುರುಷರೊಂದಿಗೆ ಇದ್ದಂತೆ. ಅರ್ಥಾತ್ ಇವರದು ಬದಲಾಗುತ್ತಿರುವ ಸ್ವಭಾವ. ಇಂಥಹ ಪುರುಷರು ಮೂರು ನಾಲ್ಕು ವ್ಯಕ್ತಿತ್ವಗಳ್ನನು ಹೊಂದಿರುವವರು. ತುಂಬ ಗೆಳೆತನದ ಸ್ವಭಾವ, ಬೇಗ ಹಚ್ಚಿಕೊಂಡುಬಿಡುವ, ಜನರನ್ನು ಬಹುಬೇಗನೆ ನಂಬುವ, ಪ್ರೀತಿಸುವ, ಯಾರ ಜತೆಗಾದರೂ ಏಗಿಬಿಡುವ ಜಾಯಮಾನ ಇವರದ್ದು. ಮಿಥುನ ರಾಶಿಯವರಿಂಗೆ ಇಂಥವರೇ ಗೆಳೆಯರಾಗಬೇಕೆಂದಿಲ್ಲ. ಯಾರಾದರೂ ಆಗುತ್ತದೆ. ಜತೆಗೆ ಮಿಥುನ ರಾಶಿಯ ಪುರುಷರು ಯಾವ ವಿಚಾರವಾದರೂ ಮಾತನಾಡಬಲ್ಲ ವಾಚಾಳಿ. ಜತೆಗೆ ಸ್ವಲ್ಪ ತಮಾಷೆಯ ಸ್ವಭಾವ ಕೂಡಾ ಇವರಿಗಿರುತ್ತದೆ. ಇವರಿಗೆ ಜಾಲಿಯಾಗಿ ಪಾರ್ಟಿ ಮಾಡೋದೂ ಇಷ್ಟ. ಪಾರ್ಟಿಯಲ್ಲೇ ಹುಡುಗಿಯೊಬ್ಬಳಿಗೆ ಮಿಥುನ ರಾಶಿಯ ಪುರುಷ ಇಷ್ಟವಾದರೆ ಧಾರಳವಾಗಿ ಸಂಗಾತಿಯಾಗಿಸಿಕೊಳ್ಳಬಹುದು. ಯಾಕೆಂದರೆ ಅವರ ನಿಜ ಸ್ವಭಾವ ಪಾರ್ಟಿಯಲ್ಲಿ ಕಾಣಬಹುದು.

IFM
ಲವ್ ವಿಷಯದಲ್ಲಿ ಮಿಥುನ ರಾಶಿಯ ಪುರುಷರು ಧಾರಾಳಿಗಳೇ. ಯಾವುದೇ ಸಂದರ್ಭದ ನೆಪಗಳಿಲ್ಲದೆ, ದಿಢೀರನೆ ಸರ್ಪೈಸಾಗಿ ಹೂಗೊಂಚಲು, ಚಾಕೋಲೇಟ್, ಗಿಫ್ಟ್, ಪ್ರೇಮಪತ್ರ ಹೀಗೆ ನೀಡುತ್ತಲೇ ಇರುತ್ತಾರೆ ಇವರು. ಹಾಗೆಯೇ, ಖಂಡಿತ ಇಂತಿಷ್ಟು ಹೊತ್ತಿಗೆ ಸಿಗುತ್ತೇನೆ ಗೆಳತೀ ಎಂದು ರಾಗವೆಳೆದಿದ್ದರೂ, ಕೈಕೊಡುವ ಜಾಯಮಾನವೂ ಇವರಲ್ಲಿದೆ. ಇದರಿಂದ ಮಿಥುನ ರಾಶಿಯ ಪುರುಷರನ್ನು ಪ್ರೀತಿಸುವ ಹುಡುಗಿಯರು ಆತನಿಗೆ ಯದ್ವಾತದ್ವಾ ಬೈಗಳ ಮಳೆ ಹರಿಸಿದರೂ, ಸ್ವಲ್ಪ ಹೊತ್ತಿನಲ್ಲೇ ಮೊದಲಿನ ಹಾಗೆ ಬದಲಾಗಿಬಿಡಬಹುದು. ಆದರೆ ಈ ಬದಲಾವಣೆಯೂ ಶಾಶ್ವತವಲ್ಲ.

ಪುರುಷನಿಂದ ಕಾಳಜಿ, ರಕ್ಷಣೆ, ಭದ್ರತೆ ಇವೆಲ್ಲ ಬೇಕು ಎಂದು ಆಸೆಪಡುವ ಹುಡುಗಿಯರಿಗೆ ಮಿಥುನ ರಾಶಿಯ ಪುರುಷರು ಖಂಡಿತ ನಿರಾಸೆ ಮಾಡುತ್ತಾರೆ. ತುಂಬ ಸೆನ್ಸಿಟಿವ್ ಹುಡುಗಿಯರು ಮಿಥುನ ರಾಶಿಯ ಪುರುಷರೊಂದಿಗೆ ಏಗುವುದು ಕಷ್ಟವೇ. ಏಕೆಂದರೆ ಅವರಿಗೆ ತಮ್ಮ ಹುಡುಗಿಯ ತಳಮಳ ಅರ್ಥವೇ ಆಗುವುದಿಲ್ಲ. ಖಾಸಗಿಯಾಗಿಯೂ ಮಿಥುನ ರಾಶಿಯ ಪುರುಷರು ತಮ್ಮ ಗುಟ್ಟನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ತಮ್ಮ ಸಂಗಾತಿಗೂ ಕೂಡಾ. ಹೀಗಾಗಿ ಈ ರಾಶಿಯ ಪುರುಷರನ್ನು ಹೆಚ್ಚು ಹಚ್ಚಿಕೊಂಡರೂ ಲಾಭವಿಲ್ಲ.

ಹಾಗಂತ, ಇವರಿಗೆ ಯಾವ ಸಂಗಾತಿಯೂ ಸರಿಹೋಗುವುದಿಲ್ಲ ಎಂದಲ್ಲ. ಇಂಥ ಪುರುಷರಿಗೆ ಸರಿಹೋಗುವುದು ಸ್ಪರ್ಧೆಗೆ ಬಿದ್ದು ಪ್ರೀತಿಯಿಂದ ಸೋಲಿಸುವ ಹುಡುಗಿಯರೆಂದರೆ ಇಷ್ಟ. ತನ್ನಂತೆ ಸದಾ ಬದಲಾಗುತ್ತಿರುವ, ಜೀವನವನ್ನು ತುಂಬ ಕುತೂಹಲದಿಂದ ನೋಡುವ, ಏನಾದರೊಂದು ಚಿತ್ರವಿಚಿತ್ರವಾದ ಕೆಲಸ ಮಾಡುತ್ತಲೇ ಇರುವ ಬಹುಮುಖಿ, ಬುದ್ಧಿವಂತ ಹುಡುಗಿಯರಿಂದ ಮಿಥುನ ರಾಶಿಯ ಹುಡುಗರು ಬೇಗನೆ ಇಂಪ್ರೆಸ್ ಆಗುತ್ತಾರೆ. ಮಿಥುನ ಪುರುಷರಿಗೆ ಅಹಂ ಇರುವುದಿಲ್ಲ. ಅಯ್ಯೋ ತನ್ನನ್ನು ಒಬ್ಬ ಹುಡುಗಿ ಸೋಲಿಸಿಬಿಟ್ಟಳಲ್ಲ, ಇದರಿಂದ ನನ್ನ ಅಹಂಗೆ ಧಕ್ಕೆ ಬಂತಲ್ಲ ಎಂದು ಯೋಚಿಸುವವರು ಇವರಂತೂ ಅಲ್ಲ. ಬದಲಾಗಿ, ತನ್ನನ್ನು ಸೋಲಿಸಿದ ಹುಡುಗಿಯ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತಾರೆ. ಜತೆಗೆ ಆಸಕ್ತಿಯನ್ನೂ.

ಮಿಥುನ ರಾಶಿಯ ಪುರುಷರು ಹಳೇ ಫ್ರೆಂಡುಗಳಿಗೇ ಜೋತುಬೀಳುವವರಲ್ಲ. ಹೊಸ ಹೊಸ ಗೆಳೆಯ ಗೆಳತಿಯರನ್ನು ಮಾಡುತ್ತಲೇ ಇರುತ್ತಾರೆ ಇವರು. ಜನರು, ಗೌಜು, ಗದ್ದಲವನ್ನು ಇಷ್ಟವಡುವ ಇವರು ಏಕಾಂಗಿತನವನ್ನು ಇಷ್ಟಪಡೋದಿಲ್ಲ. ಮಿಥುನ ರಾಶಿಯ ಪುರುಷರ ಹೃದಯ ಕದಿಯಬೇಕೆಂದು ಮನಸ್ಸಾದ ಹುಡುಗಿಯರು ಮಾಡಬೇಕಾದ್ದು ಇಷ್ಟೆ, ಅವರ ಬಳಿ ಸದಾ ಜೋತು ಬೀಳದೆ, ನಿನಗೆ ನಿನ್ನದೇ ಆದ ಖಾಸಗಿ ತನವ್ನು ಕೊಡುತ್ತೇನೆ ಎಂದು ಭರವಸೆ ನೀಡಿದರೆ ಸಾಕು. ಅಂಥ ಹುಡುಗಿಯರ ಜತೆಗೆ ಮಿಥುನ ರಾಶಿಯ ಪುರುಷ ಬಿಂದಾಸ್ ಆಗಿ ಪ್ರೀತಿಸುತ್ತಾನೆ. ಆತ ನೋಡುವುದನ್ನೆಲ್ಲ ತ್ನ ಹುಡುಗಿಗೂ ತೋರಿಸುತ್ತಾನೆ. ಹೋಗುವಲ್ಲಿಗೆಲ್ಲ ಕರೆದುಕೊಂಡೂ ಹೋಗುತ್ತಾನೆ. ಹಣವನ್ನೂ ಧಾರಾಳವಾಗಿ ಖರ್ಚು ಮಾಡುವ ಇವರ ಕೆಲವೊಮ್ಮೆ ಜಿಪುಣನಂತೆ ವರ್ತಿಸುತ್ತಾರೆ. ಮಿಥುನ ರಾಶಿಯ ಪುರುಷರು ತುಂಬ ಪೊಸೆಸಿವ್ ಅಲ್ಲ. ನೀವು ಆತನನ್ನು ನಂಬಿದರೆ ಆತ ನಿಮ್ಮನ್ನೂ ನಂಬುತ್ತಾನೆ. ಆತನೊಂದಿಗೆ ನಿಮಗೆ ಸೋತಂತೆ ಆನಿಸಿದರೆ ಆತ ನಿಮಗೆ ಧೈರ್ಯ ನೀಡುತ್ತಾನೆ. ನಿಮ್ಮನ್ನು ಉತ್ಸಾಹಿತನನ್ನಾಗಿ ಮಾಡುತ್ತಾನೆ. ರೊಮ್ಯಾನ್ಸಿನಲ್ಲೂ ಮಿಥುನ ರಾಶಿಯ ಪುರುಷರು ಕಡಿಮೆಯೇನೂ ಇಲ್ಲ. ಮಿಥುನ ರಾಶಿಯ ಪುರುಷರು ಉತ್ತಮ ಅಪ್ಪನೂ ಆಗಬಲ್ಲರು. ತನ್ನ ಮಕ್ಕಳನ್ನ ಗೆಳೆಯರಂತೆ ಪ್ರೀತಿಯಿಂದ ನೋಡಬಲ್ಲ ತಾಕತ್ತೂ ಇವರಲ್ಲಿದೆ.

IFM
ಮಹಿಳೆ- ಒಬ್ಬ ಮಿಥುನ ರಾಶಿಯ ಹುಡುಗಿಯನ್ನು ಮದುವೆಯಾಗೋದೆಂದರೆ ಇಬ್ಬರು ಹೆಂಡಿರ ಜತೆಗೆ ಜೀವಿಸಿದಂತೆ. ಅರ್ಥಾತ್ ಎರಡೆರಡು ವ್ಯಕ್ತಿತ್ವವನ್ನು ಮಿಥುನ ರಾಶಿಯ ಮಹಿಳೆಯರೂ ಹೊಂದಿರುತ್ತಾರೆ. ಒಬ್ಬರೊಂದಿಗೆ ತುಂಬ ಹಚ್ಚಿಕೊಂಡು ಕಚ್ಚಿಕೊಂಡು ಇರೋದಕ್ಕೆ ಮಿಥುನ ರಾಶಿಯ ಸ್ತ್ರೀಯರಿಗೆ ಸಾಧ್ಯವಾಗೋದಿಲ್ಲ. ಹಾಗೆಯೇ ಒಂದು ಸ್ಥಳಕ್ಕೂ ಅಂಟಿಕೊಂಡು ಬಿಡುವ ಜಾಯಮಾನ ಇವರದಲ್ಲ. ಬದಲಾವಣೆಯೇ ಜಗದ ನಿಯಮ ಅಂದುಕೊಂಡು ತಿರುಗಾಡುವ ವ್ಯಕ್ತಿತ್ವ ಇವರದು. ಮಿಥುನ ರಾಶಿಯ ಸ್ತ್ರೀಯರನ್ನು ಯೌವನದಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲ. ಅವರಿಗೆ ತುಂಬ ಪ್ರೀತಿ, ನಂಬಿಕೆ, ಕಕ್ಕುಲತೆಯನ್ನು ತೋರಿದಲ್ಲಿ ಮಾತ್ರ ಅವರು ಅಂಥವರಿಗೆ ಅಂಟಿಕೊಂಡು ಬಿಡಬಹುದು. ಇಲ್ಲವಾದರೆ ಪ್ರೀತಿಯನ್ನು ಬೇರೆಲ್ಲಿಯೋ ಅರಸುತ್ತಾರೆ. ಅಷ್ಟೇ ಅಲ್ಲ, ತನ್ನ ಸಂಗಾತಿಯ ತುಂಬ ಕೆಟ್ಟ ಅಭ್ಯಾಸವನ್ನೂ ಈಗ ಸಹಿಸಿಕೊಂಡ ಮಿಥುನ ರಾಶಿಯ ಸ್ತ್ರೀ, ಇನ್ನೊಂದೆರಡೇ ಗಂಟೆಗಳಲ್ಲಿ ಸಂಗಾತಿಯ ಬದಲಾದ ಹೇರ್‌ಸ್ಟೈಲ್‌ಗೂ ತಗಾದೆ, ಚಿರಿಪಿರಿ ತೆಗೆಯುವ ವ್ಯಕ್ತಿತ್ವ ಹೊಂದಿರುತ್ತಾಳೆ!

ಮಿಥುನ ರಾಶಿಯ ಸ್ತ್ರೀಯರು ರೊಮ್ಯಾಂಟಿಕ್ ಅಲ್ಲ. ಆದರೆ ರೊಮ್ಯಾನ್ಸ್ ಮಾಡಲು ಬರೋದಿಲ್ಲ ಅಂತೇನೂ ಇಲ್ಲ. ಅವರಿಗೆ ರೊಮ್ಯಾನ್ಸ್ ಅನ್ನೋದು ಕೇವಲ ಸಂವಹನ ಅಷ್ಟೆ. ಜತೆಗೆ ಇಂತಹ ಸ್ತ್ರೀ ತನ್ನ ಪುರುಷನ ಎಲ್ಲ ಗುಣಗಳನ್ನೂ ಎದೆಗವಚಿಕೊಂಡು ಪ್ರೀತಿಸುವ ಜಾಯಮಾನದವಳಲ್ಲ. ತನ್ನ ಪುರುಷನ ಬುದ್ಧಿಮತ್ತೆಯನ್ನು ಪ್ರೀತಿಸುವ ಆಕೆ, ಅದೇ ಪುರುಷ ಕ್ರಿಯೇಟಿವ್ ಅಲ್ಲ ಎಂದು ತೆಗಳಲೂ ರೆಡಿ.

ಹಾಗಿದ್ದರೂ ಮಿಥುನ ಸ್ತ್ರೀ ತನ್ನ ಪುರುಷನಿಗೆ ಆಗಾಗಾ ತನ್ನ ಪ್ರೀತಿಯ ಪ್ರದರ್ಶನ ಬೇರೆ ಬೇರೆ ರೀತಿಯಲ್ಲೇ ಮಾಡುತ್ತಿರುತ್ತಾಳೆ. ಜೀವನದಲ್ಲಿ ಬೊಗಸೆ ತುಂಬ ಪ್ರೀತಿ ಸುರಿಸುವ ಅದ್ಭುತ ಕಲೆಯೂ ಆಕೆಗೆ ಗೊತ್ತು. ಕೆಲವೊಮ್ಮೆ ನಾರಿಯ ಸಹಜ ಮನೋಸ್ಥಿತಿಯಲ್ಲಿ ಆಕೆಯಿದ್ದರೆ ಮತ್ತೊಮ್ಮೆ ಬೇರೆಯೇ ಆಗಬಹುದು. ಹಾಗಾಗಿ ಮಿಥುನ ರಾಶಿಯ ಸ್ತ್ರೀಯರು ಎಂದಿಗೂ ತಮ್ಮ ಪತಿಯನ್ನು ಬೋರ್ ಹೊಡೆಸುವುದಿಲ್ಲ. ಏನಾದರೊಂದು ಹೊಸತನ ಅವರಲ್ಲಿರುತ್ತದೆ.

ಪುರುಷನಲ್ಲೂ ಏನಾದರೊಂದು ಅದ್ಭುತ ಗುಣಗಳನ್ನು ಕಂಡುಹಿಡಿಯುತ್ತಾರೆ. ಆದರೆ, ಅವರಲ್ಲೇ ಕೆಟ್ಟದನ್ನೂ ಅಷ್ಟೇ ಸುಲಭವಾಗಿ ಪತ್ತೆ ಹಚ್ಚುತ್ತಾರೆ. ಹಾಗಾಗಿ ಮಿಥುನ ರಾಶಿಯ ಸ್ತ್ರೀಯರು ತಮ್ಮ ಸಂಗಾತಿಯ ಆಯ್ಕೆಯಲ್ಲಿ ತುಂಬ ಚ್ಯೂಸಿ. ಸಂಗಾತಿಯನ್ನು ತುಂಬ ಪ್ರೀತಿಸುತ್ತಿದ್ದರೂ, ಬೇಗನೆ ಇತರರಿಂದ ಆಕರ್ಷಿತರಾಗುವ ಸಂಭವವೂ ಇವರಲ್ಲಿ ಹೆಚ್ಚು.

ಮಿಥುನ ಸ್ತ್ರೀ ಯಾವತ್ತೂ ತಮ್ಮ ಸಂಗಾತಿಯನ್ನು ಸಂದೇಹದಿಂದ ನೋಡೋದಿಲ್ಲ. ಮಧ್ಯರಾತ್ರಿ ತಡವಾಗಿ ಬಂದರೂ ಪೊರಕೆಯೋ, ಲಟ್ಟಣಿಗೆಯನ್ನೋ ಕೈಯಲ್ಲಿ ಹಿಡಿದು ಕೆಂಪನೆ ಕಣ್ಣುಗಳಿಂದ ಸಂಗಾತಿಯನ್ನು ಬರಮಾಡಿಕೊಳ್ಳುವ ಅಭ್ಯಾಸ ಇವರದಲ್ಲ. ಸಂಗಾತಿ ಬೇಗ ಮನೆಗೆ ಬಂದಾಗಿನ ಪ್ರೀತಿಯೇ ತಡವಾಗಿ ಬಂದಾಗಲೂ ಇವರು ತೋರಿಸುತ್ತಾರೆ. ತುಂಬ ಚೆನ್ನಾಗಿ ಅಡುಗೆ ಮಾಡೋದು ಕೂಡಾ ಇವರಿಗೆ ಕರಗತ. ಮಿಥುನ ರಾಶಿಯ ಪತ್ನಿ ಹೊಂದಿರುವ ಪುರುಷರಿಗೆ ಖಂಡಿತ ತನ್ನ ಪತ್ನಿ ಡಿಫರೆಂಟ್ ಅನಿಸದಿರದು. ಮಿಥುನ ರಾಶಿಯ ಸ್ತ್ರೀಯರಿಗೆ ಹಾರೋದು ಹೇಗೆಂದು ತಿಳಿಯದಿದ್ದರೂ ಹಾರುವ ಕನಸು ಕಾಣುತ್ತಾರೆ. ಬದುಕಿನ ತುಂಬ ಆಶಾವಾದವನ್ನೂ ಇವರು ಹೊಂದಿರುತ್ತಾರೆ.

WD
ಮಕ್ಕಳು- ಮಿಥುನ ರಾಶಿಯ ಮಕ್ಕಳು ತಂಟೆಕೋರರು. ಇವರು ನಡೆಯುತ್ತಾರೆ ಅಂದುಕೊಂಡರೆ ಓಡುತ್ತಿರುತ್ತಾರೆ, ಹಾಗಿರುವ ಸ್ವಭಾವ ಮಿಥುನ ರಾಶಿಯ ಮಕ್ಕಳದ್ದು! ಒಂದೇ ಜಾಗದಲ್ಲಿ ಇಂಥ ಮಕ್ಕಳು ಆಟವಾಡುತ್ತಾ ಕೂರೋದಿಲ್ಲ. ಏನಾದರೊಂದು ಹೊಸತು ಪೋಕರಿತನ ಮಾಡುತ್ತಾ, ಅನ್ವೇಷಣೆಯ ಗುಂಗಿನಲ್ಲಿರುತ್ತಾರೆ. ಇಂಥ ಮಕ್ಕಳನ್ನು ಹೊಡೆದು ಬಡಿದು ಹೆದರಿಸಿ ಸುಮ್ಮನೆ ಕೂರಲು ಹೇಳೋದು ಸರಿಯಲ್ಲ. ಇದರಿಂದ ಅವರ ಉದ್ವೇಗ ಇನ್ನಷ್ಟು ಹೆಚ್ಚುತ್ತದೆ. ಅಳುವಾಗ ಪೆಟ್ಟು ನೀಡಿ ಅಳು ನಿಲ್ಲಿಸಿ ಎಂದರೆ ಇವರು ಅಳು ನಿಲ್ಲಿಸಲ್ಲ. ಬದಲಾಗಿ ಇನ್ನೂ ಅಳು ಹೆಚ್ಚಿಸುತ್ತಾರೆ.

ಈ ಮಕ್ಕಳಿಗೆ ಸಹನೆ ಎಂಬುದೇ ಇಲ್ಲ. ಒಂದೇ ಜಾಗದಲ್ಲಿ ತುಂಬ ಹೊತ್ತು ಕೂರುವುದೇ ಇಲ್ಲ. ಎಲ್ಲರೊಂದಿಗೆ ಬೆರೆಯುವ ಗೆಳೆತನ, ಸುಲುಗೆ ಮಾಡಿಕೊಳ್ಳುವ ಈ ಮಕ್ಕಳು ತುಂಬ ಆಕ್ಟಿವ್ ಆಗಿ ಬುದ್ಧಿವಂತರಾಗಿರುತ್ತಾರೆ. ತಮಾಷೆಯಲ್ಲೂ ಈ ಮಕ್ಕಳು ಎತ್ತಿದ ಕೈ. ಸತ್ಯವನ್ನು ಸ್ವಲ್ಪ ಮಸಾಲೆ ಸೇರಿಸಿ ಹೇಳುವ ಜಾಯಮಾನವೂ ಇವರಲ್ಲಿದೆ. ಬಣ್ಣಹಚ್ಚಿ, ಕಥೆಕಟ್ಟಿ ನಂಬಿಸಿಬಿಡುತ್ತಾರೆ ಈ ಮಕ್ಕಳು. ಆದರೆ, ಯಾವುದೇ ಅಪಾಯವನ್ನು ಯಾರಿಗೂ ಮಾಡೋದಿಲ್ಲ. ಇಂಥ ಮಕ್ಕಳು ಇನ್ನೊಬ್ಬರ ಜತೆ ಮಾತನಾಡುವಾಗ, ಹರಟೆ ಹೊಡೆಯುವಾಗ ಅದನ್ನು ನಿಲ್ಲಿಸುವ ಪ್ರಯತ್ನ ಮಾಡಬೇಡಿ. ಬುದ್ಧಿ ಮಾತನ್ನು ಕೇಳೋದು ಸ್ವಲ್ಪ ಕಡಿಮೆಯೇ. ಏನಾದರೊಂದು ತರಲೆ ಮಾಡುತ್ತಲೇ ಇರುವ ಈ ಮಕ್ಕಳಿಗೆ ಬದ್ಧತೆ ಕಡಿಮೆ.


ಇದರಲ್ಲಿ ಇನ್ನಷ್ಟು ಓದಿ :