Widgets Magazine

ವೃಷಭ ರಾಶಿಯವರು ಹೀಗಿರ್ತಾರೆ!

Taurus
WD
ವೃಷಭ ರಾಶಿಯ ಪುರುಷ, ಮಹಿಳೆ, ಮಕ್ಕಳು ಹೀಗೆ ಮೂರು ವರ್ಗದಲ್ಲೂ ರಾಶಿಯ ಗುಣ ಅವರ ಜನ್ಮಜಾತ ಗುಣವಾಗಿರುತ್ತದೆ. ಆದರೆ ಇದು ಕಾಲಕ್ರಮೇಣ ಪರಿಸರಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಬಹುದು. ಆದರೆ, ಮೂಲ ಸ್ವಭಾವ ಮಾತ್ರ ಇದ್ದೇ ಇರುತ್ತದೆ. ಕೆಲವೊಮ್ಮೆ ಮಾತ್ರ ಅದು ಗೌಣವಾಗುತ್ತದೆ. ವೃಷಭ ರಾಶಿಯ ಗುಣಾವಗುಣಗಳು ಇಲ್ಲಿವೆ.

ಪುರುಷ- ವೃಷಭ ರಾಶಿಯ ಪುರುಷ ಶಾಂತಚಿತ್ತದ, ಸಮಾಧಾನದ ವಿನಯ ಶೀಲ ವ್ಯಕ್ತಿಯಾಗಿರುತ್ತಾನೆ. ಅಷ್ಟೇ ಪ್ರಾಕ್ಟಿಕಲ್ ಕೂಡಾ. ಇವರು ಮೊದಲ ನೋಟದಲ್ಲೇ ಪ್ರೇಮಕ್ಕೆ ಬಿದ್ದುಬಿಡುವಂಥವರಲ್ಲ. ತನಗೆ ಪರಿಚಯವಾದವರು ಎಂಥವರು ಎಂದು ತಿಳಿದ ಮೇಲಷ್ಟೇ ಇವರು ಅವರೊಂದಿಗೆ ಸ್ನೇಹ ಹೊಂದುತ್ತಾರೆ. ಸಂಗಾತಿಯ ವಿಷಯದಲ್ಲೂ ಅಷ್ಟೆ. ಜೀವನಪೂರ್ತಿ ತನ್ನ ಜತೆ ನೆಮ್ಮದಿಯಿಂದ ಬಾಳುತ್ತಾಳೋ ಎಂದು ಅಳೆದು ತೂಗಿ ಒಪ್ಪುತ್ತಾರೆ. ಆದರೆ ತನಗೆ ಈ ಹುಡುಗಿ ಸೂಕ್ತ ಎಂದು ಒಮ್ಮೆ ನಿರ್ಧರಿಸಿದರೆ ಮತ್ತೆ ಇವರು ಹಿಂದೆ ಸರಿಯುವ ಮನಸ್ಥಿತಿಯವರಲ್ಲ. ಈ ರಾಶಿಯ ಪುರುಷರು ತುಂಬ ರೊಮ್ಯಾಂಟಿಕ್. ಸಂಗಾತಿಯನ್ನು ತುಂಬ ಇಷ್ಟಪಡುತ್ತಾರೆ. ಹೂವು ಕೊಡುತ್ತಾ, ಸಂಗಾತಿಗಾಗಿ ಪದ್ಯ ಬರೆಯುವ ಇವರು ಸಂಗಾತಿಯ ಬಗ್ಗೆ ಅತಿಯಾದ ಕಾಳಜಿಯನ್ನೂ ಹೊಂದಿರುತ್ತಾರೆ.

ಅಲ್ಲದೆ, ಇಂಥವರಿಗೆ ಗಂಡುಬೀರಿ ಹುಡುಗಿಯರೆಂದರೆ ಇಷ್ಟವಾಗುವುದಿಲ್ಲ. ಹುಡುಗಿಯರು ಹುಡುಗಿಯರಂತಿದ್ರೆ ಚಂದ ಎನ್ನುವ ಜಾಯಮಾನದವರು. ಸಾರ್ವಜನಿಕವಾಗಿ ಅವರಿಗೆ ಮುಜುಗರವಾಗುವಂತೆ ಸಂಗಾತಿ ವರ್ತಿಸಿದರೆ ಇಂಥವರಿಗೆ ವಿಪರೀತ ಸಿಟ್ಟೂ ಬರುತ್ತದೆ. ಆದರೆ ಸಾರಿ ಕೇಳಿದರೆ ಕೂಲ್ ಆಗುತ್ತಾರೆ. ಅಷ್ಟೇ ಅಲ್ಲ, ಇಂಥವರು ಅವರ ಮನೆ, ಕುಟುಂಬದ ವಿಷಯದಲ್ಲಿ ಇನ್ನೊಬ್ಬರು ತಲೆ ಹಾಕುವುದನ್ನು ಇಷ್ಟಪಡುವುದಿಲ್ಲ. ಆದರೆ ಸಂಗಾತಿಗೆ ಆಕೆಯದೇ ಆದ ಸ್ವಾತಂತ್ರ್ಯ ನೀಡುತ್ತಾರೆ, ಜತೆಗೆ ತಾವೂ ಬಯಸುತ್ತಾರೆ.

ವೃಷಭ ರಾಶಿಯ ಗಂಡನನ್ನು ಪಡೆದವರು ಆತನೊಂದಿಗೆ ಕೂಲ್ ಆಗಿಯೇ ಇದ್ದರೆ ಆತ ಆಕೆಗಾಗಿ ಏನು ಮಾಡಲೂ ಸಿದ್ಧನಿರುತ್ತಾನೆ. ಮನೆಯನ್ನು ಒಪ್ಪ ಓರಣವಾಗಿಟ್ಟರಷ್ಟೆ ಆತನಿಗೆ ಇಷ್ಟ. ಆದರೆ ಕಸದ ತೊಟ್ಟಿಯಂತಿದ್ದರೆ, ಯಾವಾಗಲೂ ಟೀಕೆ ಮಾಡುತ್ತಾ ಇರುವುದೂ ಇಲ್ಲ. ತುಂಬ ತಾಳ್ಮೆಯಿರುವ ಇವರು ಮನೆಗೆ ತಾವೇ ಯಜಮಾನ ಎಂದುಕೊಳ್ಳುವವರು. ಆದರೆ, ಹೆಂಡತಿಯ ಮಾತಿಗೆ ಬೆಲೆಯನ್ನೂ ಕೊಡುವವರು.

ಮಹಿಳೆ- ವೃಷಭ ರಾಶಿಯ ಮಹಿಳೆಯರಿಗೆ ಮಾನಸಿಕ ಸಾಮರ್ಥ್ಯ ಅಧಿಕ. ಎಂಥಾ ಕಷ್ಟ ಬಂದರೂ ಒಂದು ತೊಟ್ಟು ಕಣ್ಣೀರು ಹರಿಸದೆ, ಜಗ್ಗದೆ ನಿಲ್ಲುವವರು ಇವರು. ಆದರೆ ಬೇಗ ಕೋಪಗೊಳ್ಳುವ ಇವರು ಅಷ್ಟೇ ಬೇಗ ತಣ್ಣಗಾಗುವವರು ಕೂಡಾ. ಸ್ತ್ರೀಸಹಜ ಮನೋಧರ್ಮ ಇವರಲ್ಲಿ ಎದ್ದು ಕಾಣುತ್ತದೆ. ಇಂಥವರು ತಮ್ಮ ಗಂಡನ ಮೇಲೆ ಅಧಿಕಾರ ಚಲಾಯಿಸುವುದಿಲ್ಲ.

WD
ಗಂಡ ಹೆಮ್ಮೆ ತರುವ ಕೆಲಸ ಮಾಡಿದರೆ ಇವರು ತುಂಬ ಹೆಮ್ಮೆ ಪಡುತ್ತಾರೆ. ಆದರೆ ಗಂಡ ಯಾವುದರಲ್ಲಾದರೂ ವಿಫಲವಾದರೆ, ಇವರು ಮಾತಾಡದೆ ಸಹಿಸಿಕೊಳ್ಳುತ್ತಾರೆ. ಇಂಥವರು ತಮಗೆ ಯಾರಾಗದರೂ ಆಗದಿದ್ದರೂ ಅವರೊಂದಿಗೆ ಕಾಲು ಕೆರೆದು ಜಗಳಕ್ಕೆ ಹೋಗೋದಿಲ್ಲ. ಇವರಿಗಿರುವ ಗೆಳೆಯ ವರ್ಗವೂ ಚಿಕ್ಕದೇ. ಆದರೆ ಗೆಳತಿಯರು ತಮ್ಮಿಂದ ವಿಷಯ ಮುಚ್ಚಿಟ್ಟರೆ ಇವರಿಗೆ ಇಷ್ಟವಾಗುವುದಿಲ್ಲ. ಗಂಡ ತನಗೆ ನಿಷ್ಠನಾಗಿರಬೇಕೆಂದು ಬಯಸುವ ಇವರು ಗಂಡನ ಪ್ರೇತ್ಸಾಹಕ್ಕೂ ಆಸೆಪಡುವವರೇ. ಕೃತಕವಾಗಿ ಮಾತನಾಡಿದರೆ, ವ್ಯವಹರಿಸಿದರೆ ಇವರಿಗೆ ಇಷ್ಟವಾಗೋದಿಲ್ಲ.

ಕೊಳಕಾಗಿದ್ದರೂ ಇವರಿಗೆ ವಿಪರೀತ ಸಿಟ್ಟು ಬರುತ್ತದೆ. ಹೂದೋಟ, ಹೂವು ಎಂದರೆ ಇವರಿಗೆ ಇಷ್ಟ. ತುಂಬ ಉತ್ತಮ ಅಭಿರುಚಿ ಹೊಂದಿರುವ ಇವರು, ಉತ್ತಮವಾಗಿ ಅಡುಗೆಯನ್ನೂ ಮಾಡಬಲ್ಲರು. ಪೇಂಟಿಂಗ್, ಚಿತ್ರಗಳನ್ನು ಇಷ್ಟಪಡುವ ಇವರು ಭಾವುಕವಾಗಿ ಹುಡುಗರ ಮನಸ್ಸನ್ನೂ ಹೊಂದಿರುತ್ತಾರೆ. ಅರ್ಥಾತ್, ಕುದುರೆ ಸವಾರಿ, ಮೀನು ಹಿಡಿಯೋದು ಮತ್ತಿತರ ಕೆಲಸಗಳಲ್ಲಿ ಆಸಕ್ತಿಯಿರುತ್ತದೆ.

ತುಂಬ ಸಿಂಪಲ್ ಆಗಿ ಡ್ರೆಸ್ ಮಾಡುವ ಇವರು ತುಂಬ ಸುಂದರವಾಗಿಯೂ ಕಾಣುತ್ತಾರೆ. ಪ್ರಾಮಾಣಿಕತೆಯೂ ಇವರ ಶಕ್ತಿ. ಸಂಗಾತಿಯೊಂದಿಗೆ ಸುತ್ತಾಡುವುದನ್ನೂ ಇವರು ಇಷ್ಟಪಡುತ್ತಾರೆ. ಇವರು ತುಂಬ ಉತ್ತಮ ತಾಯಿಯೂ ಆಗುತ್ತಾರೆ. ಆದರೆ ಮಕ್ಕಳು ಶಿಸ್ತಿನಿಂದ ಇಲ್ಲದಿದ್ದರೆ ಇವರ ತಾಳ್ಮೆ ಕೆಡುತ್ತದೆ. ಸಿಟ್ಟು ತರಿಸುತ್ತದೆ. ಆದರೆ ಮಕ್ಕಳೊಂದಿಗೆ ಸ್ನೇಹಿತೆಯಂತೆಯೇ ಇರುತ್ತಾರೆ. ಇವರು ತುಂಬ ಮಾನಸಿಕ ಒತ್ತಡ ಅನುಭವಿಸುತ್ತಾರೆ. ಆರ್ಥಿಕವಾಗಿಯೂ ತುಂಬ ಚೆನ್ನಾಗಿ ವ್ಯವಹಾರ ಮಾಡಬಲ್ಲರು ಇವರು. ಕಾರ್ಯಕ್ರಮ ನಡೆಸುವುದರಲ್ಲೂ ಇವರು ಎತ್ತಿದ ಕೈ. ತಮ್ಮ ಸಂಗಾತಿ ಹಾಗೂ ಮಕ್ಕಳಿಗೆ, ಪ್ರೀತಿಪಾತ್ರರಿಗೆ ತುಂಬ ಬೆಚ್ಚನೆಯ ಕಾಳಜಿ, ಪ್ರೀತಿ, ಕಕ್ಕುಲತೆ ಇವರು ತೋರಿಸುತ್ತಾರೆ.

ಇಳಯರಾಜ|
ಮಕ್ಕಳು- ವೃಷಭ ರಾಶಿಯ ಮಕ್ಕಳು ತಮಗೆ ಇಷ್ಟ ಬಂದ ಹಾಗೆ ವರ್ತಿಸುತ್ತಾರೆ. ಅವರನ್ನು ಇದು ಮಾಡು, ಅದು ಮಾಡು ಎಂದೆಲ್ಲ ಒತ್ತಡ ಹೇರುವುದು ಒಳಿತಲ್ಲ. ಇದು ಮಾಡಬೇಡ ಎಂದರೆ ಅವರಿಗೆ ಅದರ ಮೇಲೆ ಆಸಕ್ತಿ ಹೆಚ್ಚಾಗುತ್ತದೆ. ಈ ರಾಶಿಯ ಮಕ್ಕಳು ನೋಡಲು ಗುಂಡುಗುಂಡಗೆ ಚೆಂದಕ್ಕೆ ಇರುತ್ತಾರೆ. ಜತೆಗೆ ಅವರು ಹೆತ್ತವರಿಂದ ತುಂಬ ಪ್ರೀತಿಯನ್ನು ಬಯಸುತ್ತಾರೆ. ಅಂಥ ಮಕ್ಕಳನ್ನ ಅಪ್ಪಿ ಹಿಡಿದುಕೊಂಡರೆ ಅವರಿಗೆ ತುಂಬ ಸಂತೋಷವಾಗುತ್ತದೆ. ಜತೆಗೆ ನಿಮಗೂ ಅವರು ಪ್ರೀತಿಯಿಂದ ಬಳಸಿ ಮುತ್ತು ನೀಡುತ್ತಾರೆ. ಅದರಲ್ಲೂ ವೃಷಭರಾಶಿಯ ಗಂಡು ಮಗು ಯಾವಾಗಲೂ ಅಮ್ಮನಿಗೆ ಪ್ರಿಯವಾಗಿರುತ್ತದೆ. ವೃಷಭ ರಾಶಿಯ ಹೆಣ್ಣುಮಗು ಅಪ್ಪನಿಗೆ ಸ್ವಲ್ಪ ಹೆಚ್ಚು ಆಪ್ತವಿರುತ್ತದೆ. ಅಲ್ಲದೆ, ವೃಷಭ ರಾಶಿಯ ಮಕ್ಕಳು ಇತರರಿಗಿಂತ ಹೆಚ್ಚು ಪ್ರೌಢತನ ತೋರಿಸುತ್ತಾರೆ. ಶಾಂತ ಚಿತ್ತದಿಂದ ಇರುವ ಇವರು, ಸ್ವಲ್ಪ ಒರಟಾಗಿಯೂ ವರ್ತಿಸುತ್ತಾರೆ. ಚಿತ್ರಕಲೆ, ಪೇಂಟಿಂಗ್‌ಗಳನ್ನು ಇಷ್ಟಪಡುವ ಇವರಿಗೆ ಧನಾತ್ಮಕ ವಾತಾವರಣ ದಕ್ಕಿದರೆ ಪ್ರತಿಭಾನ್ವಿತರಾಗುತ್ತಾರೆ.


ಇದರಲ್ಲಿ ಇನ್ನಷ್ಟು ಓದಿ :