Widgets Magazine

ಸೂರ್ಯಂಗೂ ನಿಮ್ ಹೃದಯಕ್ಕೂ ಏನ್ ಸಂಬಂಧ?

PTI
ನಿಮ್ಮ ಹೃದಯದ ಸ್ಥಿತಿಗತಿಯ ಮೇಲೆ ತಾರೆಗಳ ಪ್ರಭಾವವೂ ಸಾಕಷ್ಟಿದೆ. ಇದು ಮೂಢನಂಬಿಕೆಯ ಮಾತಲ್ಲ, ಅಥವಾ ಸಾಮಾನ್ಯ ಜ್ಯೋತಿಷಿಗಳು ಹೇಳುವ ಮಾತಲ್ಲ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಂಸ್ಕೃತ ಮತ್ತು ವಿದ್ಯಾ ಧರ್ಮ ವಿಜ್ಞಾನ ವಿಭಾಗದ ಸಿಬ್ಬಂದಿಗಳು ಅಧ್ಯಯನ ನಡೆಸಿ ಕಂಡುಕೊಂಡ ಅಂಶ.

ಹಿಂದೂ ಪುರಾಣಗಳ ಪ್ರಕಕಾರ, ಮನುಷ್ಯ ದೇಹದ ಪ್ರತಿಯೊಂದು ಅಂಗವೂ ಒಂಬತ್ತು ಗ್ರಹಗಳಿಂದ ನಿಯಂತ್ರಿಸಲ್ಪಡುತ್ತವೆ. ಈ ಗ್ರಹಗಳು ಅಂಗಗಳ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪ್ರಭಾವ ಬೀರಬಹುದಾಗಿದೆ. ಇವುಗಳಲ್ಲಿ ಹೃದಯದ ಅಧಿಪತಿ ಸೂರ್ಯ. ಜುಲೈ 22ರಂದು ಈ ಶತಮಾನದ ಸುದೀರ್ಘವಾದ ಖಗ್ರಾಸ ಗ್ರಹಣದ ದಿನ. ಈ ಹಿನ್ನೆಲೆಯಲ್ಲಿ ಬನರಾಸ್ ವಿವಿ ಪಂಡಿತರು ಅಧ್ಯಯನವೊಂದನ್ನು ನಡೆಸಿ, ದೇಹದ ಮೇಲೆ ಗ್ರಹಗಳು ಯಾವ ರೀತಿ ಪ್ರಭಾವ ಬೀರುತ್ತವೆ ಎಂದು ಕೆಲವೊಂದು ರೋಗಿಗಳನ್ನು ತಪಾಸಣೆಗೊಳಪಡಿಸಿ ತಿಳಿದುಕೊಂಡಿದ್ದಾರೆ. ಅವರೀಗ ಈ ವರದಿಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ಗೆ ಸಲ್ಲಿಸಿದ್ದಾರೆ.

ಕೆಲವು ತಿಂಗಳ ಹಿಂದೆ, ಈ ವರದಿಯ ಆಧಾರದಲ್ಲಿ ಯುಜಿಸಿ ಈ ಸಿಬ್ಬಂದಿಗೆ 6 ಲಕ್ಷ ರೂ. ಅನುದಾನದಲ್ಲಿ ಒಂದು ಯೋಜನೆಯನ್ನು ವಹಿಸಿದೆ. ಅದೆಂದರೆ "ಹೃದ್ರೋಗದ ಜ್ಯೋತಿಷ್ಯಶಾಸ್ತ್ರೀಯ ರೋಗನಿದಾನ ಮತ್ತು ಚಿಕಿತ್ಸೆ". ಉಪನ್ಯಾಸಕ ಶತ್ರುಘ್ನ ತ್ರಿಪಾಠಿ ಅವರು ಈ ಮೂರು ವರ್ಷಗಳ ಯೋಜನೆಯ ಉಸ್ತುವಾರಿ.

ತಮ್ಮ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯ ಸಾಧ್ಯತೆಯ ಬಗ್ಗೆ ಜನರಿಗೆ ಮುಂಚಿತವಾಗಿ ತಿಳಿದುಕೊಳ್ಳಲು ಅನುಕೂಲವಾಗುವ ಮಾದರಿಯೊಂದನ್ನು ಸಿದ್ಧಪಡಿಸುವ ಗುರಿ ಈ ಯೋಜನೆಯದ್ದು. ಮಾತ್ರವಲ್ಲದೆ ಇದು ಚಿಕಿತ್ಸಾ ವಿಧಾನಗಳನ್ನೂ ನಿರೂಪಿಸಲಿದೆ. ಅಂದರೆ ಪುರಾತನ ಮತ್ತು ವೇದ ಗ್ರಂಥಗಳ ಆಧಾರದಲ್ಲಿ ರತ್ನಗಳ ಬಳಕೆ, ಮಂತ್ರಗಳನ್ನು ಚಿಕಿತ್ಸೆಗೆ ಹೇಗೆ ಬಳಸುವುದು ಎಂಬುದನ್ನು ತಿಳಿಸಲಾಗುತ್ತದೆ ಎಂದು ವಿವರಿಸುತ್ತಾರೆ ತ್ರಿಪಾಠಿ.

ರತ್ನ ಚಿಕಿತ್ಸೆ, ಮಂತ್ರ ಚಿಕಿತ್ಸೆ ಮತ್ತು ಆಯಾ ರಾಶಿಗಳಿಗೆ ಅನುಗುಣವಾದ ಗಿಡಮೂಲಿಕೆಗಳನ್ನು ಬಳಸುವ ನೈಸರ್ಗಿಕ ಚಿಕಿತ್ಸೆ - ಹೀಗೆ ಮೂರು ರೀತಿಯ ಚಿಕಿತ್ಸೆಗಳನ್ನು ನಾವು ಸೂಚಿಸಲಿದ್ದೇವೆ ಎಂದಿದ್ದಾರವರು.

ಸೂರ್ಯನು ಹೃದಯದ ಅಧಿಪತಿಯಾಗಿರುವುದರಿಂದ ದೇಹದ ಪ್ರಧಾನ ಭಾಗವು ಈ ಶಕ್ತಿ ಶಾಲಿ ಗ್ರಹದಿಂದ ತೀವ್ರ ಪ್ರಭಾವಕ್ಕೀಡಾಗುತ್ತದೆ ಎನ್ನುತ್ತಾರೆ ತ್ರಿಪಾಠಿ.

ಇದುವರೆಗೆ 76 ರೋಗಿಗಳ ಕುಂಡಲಿಯನ್ನು ಆಧರಿಸಿ ಅಧ್ಯಯನ ಮಾಡಿದ್ದೇವೆ. ಅವರಲ್ಲಿ ಕೆಲವರು ಈಗಾಗಲೇ ಮೃತಪಟ್ಟಿದ್ದಾರೆ. ಈ ಎಲ್ಲ ಹೃದ್ರೋಗಿಗಳಲ್ಲಿಯೂ ಗ್ರಹದ ಪ್ರಭಾವ ಶ್ರುತಪಟ್ಟಿದೆ ಎಂದಿರುವ ತ್ರಿಪಾಠಿ ಹಿಂದೂ ಕುಂಡಲಿ ಬಗ್ಗೆ ವಿವರಣೆ ನೀಡುತ್ತಾರೆ.

"ಕುಂಡಲಿ ಅಥವಾ ಜಾತಕದಲ್ಲಿ 12 ಮನೆಗಳಿರುತ್ತವೆ. ಈ ಸ್ಥಾನಗಳಲ್ಲಿ ಜಾತಕನ ಜನನ ಕಾಲದ ಆಧಾರದಲ್ಲಿ 9 ಗ್ರಹಗಳು ನಿರ್ದಿಷ್ಟ ಮನೆಯೊಂದರಲ್ಲಿ ಕುಳಿತುಕೊಳ್ಳುತ್ತವೆ. ಒಂದು ಗ್ರಹವು ಒಂದೇ ಮನೆಯಲ್ಲಿ ಇರಬೇಕೆಂದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ಎರಡು ಅಥವಾ ಮೂರು ಗ್ರಹಗಳು ಒಂದೇ ಮನೆಯಲ್ಲಿರಬಹುದು. ಕೆಲವು ಮನೆಗಳು ಖಾಲಿಬಿದ್ದಿರಬಹುದು. ಬ್ರಹ್ಮಾಂಡದಲ್ಲಿ ಗ್ರಹಗಳ ಸ್ಥಾನವನ್ನು ಅಥವಾ ನಕ್ಷತ್ರವನ್ನು ಆಧರಿಸಿ ಈ ಗ್ರಹಗಳು ಮನೆಯನ್ನೂ ಬದಲಾಯಿಸುತ್ತಿರುತ್ತವೆ" ಎಂದು ವಿವರಿಸಿದ್ದಾರೆ ತ್ರಿಪಾಠಿ.

ವೃಷಭ ರಾಶಿಯವರೇ ಆಗಿರುವ ಶೇ.70 ಹೃದ್ರೋಗಿಗಳಲ್ಲಿ, ಸೂರ್ಯ, ಶನಿ ಮತ್ತು ರಾಹು ಎಂಬ ತ್ರಿಮೂರ್ತಿಗಳು ಜಾತಕದ ನಾಲ್ಕನೇ ಮನೆಯಲ್ಲಿದ್ದವು. ಅಲ್ಲದೆ, ನಾಲ್ಕನೇ ಮನೆಯಲ್ಲಿ ಶುಕ್ರ, ಅವರ ಆರೋಗ್ಯ ಅಧಿಪತಿ ಗ್ರಹವು ಕುಂಡಲಿಯ 6ನೇ ಮತ್ತು 12ನೇ ಮನೆಯಲ್ಲಿ ಇರುವ ಎಲ್ಲ ವೃಷಭ ರಾಶಿಯವರಿಗೆ ಕವಾಟಕ್ಕೆ ಸಂಬಂಧಿಸಿದ ಮತ್ತು ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು, ಬಡಿತದಲ್ಲಿನ ಅತಿಯಾದ ಏರುಪೇರು ಸಾಮಾನ್ಯವಾಗಿತ್ತು.

ರಕ್ತನಾಳದ ನೋವಿನ ಚರಿತ್ರೆ ಇರುವ ಕುಟುಂಬದಿಂದ ಬಂದ ಸಿಂಹ ಮತ್ತು ಕರ್ಕಾಟಕ ರಾಶಿಯವರಲ್ಲಿ, ನಾಲ್ಕನೇ ಮತ್ತು ಐದನೇ ಮನೆಯಲ್ಲಿ ರಾಹು ಮತ್ತು ಶನಿಯಿದ್ದುದು ಸಾಮಾನ್ಯವಾಗಿತ್ತು. ಅದೇ ರೀತಿ ಹೃದ್ರೋಗ ಇರುವ ಕುಂಭ ರಾಶಿಯವರಲ್ಲಿ, ಸೂರ್ಯನು ಜಾತಕದ ಐದನೇ ಮನೆಯಲ್ಲಿದ್ದುದು ಸಾಮಾನ್ಯವಾಗಿತ್ತು.

ಹೃದಯ ಸಂಬಂಧೀ ಕಾಯಿಲೆ ಇರುವವರ ಜಾತಕ ಕಲೆಹಾಕಲು ಆರಂಭಿಸಿರುವ ಈ ವಿದ್ಯಾಸಂಸ್ಥೆಯ ಸಿಬ್ಬಂದಿಗಳು, ವಿಶೇಷವಾಗಿ ಜನ್ಮಜಾತವಾಗಿ ಹೃದಯದಲ್ಲಿ ರಂಧ್ರ ಇರುವವ, ಮಹಿಳಾ ಹೃದ್ರೋಗಿಗಳು ಹಾಗೂ 40ಕ್ಕಿಂತ ಹೆಚ್ಚು ವಯಸ್ಸಿನವರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಮೆಟ್ರೋ ನಗರಗಳಲ್ಲಿರುವ ಹೃದ್ರೋಗ ಚಿಕಿತ್ಸಾ ಕೇಂದ್ರಗಳಿಂದ ವಿವರಗಳನ್ನು ಪಡೆಯಲಾಗುತ್ತದೆ. ಆ ಬಳಿಕ ಈ ಕುರಿತ ಸಮಗ್ರ ಡಾಟಾಬೇಸ್ ಸಿದ್ಧಪಡಿಸಲಾಗುತ್ತದೆ. ಈ ಡಾಟಾಬೇಸ್ ನೆರವಿನಿಂದ ಜನರ ಹೃದಯದ ಕಾಯಿಲೆಯನ್ನು ಮುಂಚಿತವಾಗಿಯೇ ತಿಳಿದುಕೊಳ್ಳಲು ಅನುವಾಗುವ ವ್ಯವಸ್ಥೆಯೊಂದನ್ನು ರೂಪಿಸಲಾಗುತ್ತದೆ ಎಂದು ತ್ರಿಪಾಠಿ ವಿವರಿಸಿದ್ದಾರೆ.

ಇಳಯರಾಜ|
ಆದರೆ ವೈದ್ಯಕೀಯ ತಜ್ಞರು ಏನನ್ನುತ್ತಾರೆ? ಗ್ರಹ, ನಕ್ಷತ್ರ ತಾರೆಗಳನ್ನು ನಂಬುವುದೋ ಬಿಡುವುದೋ ಎಂಬುದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಇದೊಂದು ಹೊಸ ಬೆಳವಣಿಗೆ. ಅದರ ಫಲಿತಾಂಶಕ್ಕಾಗಿ ಕಾದು ನೋಡೋಣ ಎಂದಿದ್ದಾರೆ ಲಕ್ನೋದ ಹಿರಿಯ ಹೃದ್ರೋಗ ತಜ್ಞ ವಿ.ಎಸ್.ನಾರಾಯಣನ್.


ಇದರಲ್ಲಿ ಇನ್ನಷ್ಟು ಓದಿ :