Widgets Magazine

ಗ್ರಹಣದಿಂದ ನಿಮ್ಮ ರಾಶಿ ಮೇಲೆ ಶುಭಾಶುಭ ಫಲಗಳು

ಇಳಯರಾಜ|
ND
ಭಾನುವಾರ ಭಾರತೀಯ ಕಾಲಮಾನ ರಾತ್ರಿ 11.45ಕ್ಕೆ ಸಂಭವಿಸಿದೆ. ಚಿಲಿ, ಅರ್ಜೆಂಟೈನಾ ಮೊದಲಾದ ದೇಶಗಳಲ್ಲಿ ಇದು ಕಾಣಿಸಿದ್ದು, ಭಾರತದಲ್ಲಿ ರಾತ್ರಿಯಾದ್ದರಿಂದ ಗೋಚರವಾಗಿಲ್ಲ. ಮಿಥುನ ರಾಶಿಯಲ್ಲಿ ಈ ಬಾರಿ ಗ್ರಹಣ ಹಿಡಿದಿದೆ. ಈ ಬಾರಿಯ ಗ್ರಹಣದಿಂದ ಕೊಂಚ ಶುಭಾಶುಭ ಫಲಗಳು ಗೋಚರವಾಗಲಿದ್ದು, ದೇವಸ್ಥಾನ ಸಂಬಂಧಿಸಿ ಹಗರಣಗಳು ಬೆಳಕಿಗೆ ಬರಲಿದೆ. ಭೂಕಂಪ, ನೆರೆ ಮತ್ತಿತರ ಪ್ರಕೃತಿ ವಿಕೋಪಗಳೂ ದೇವತಾ ಮನುಷ್ಯರಿಗೆ ತೊಂದರೆಗಳು, ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತವೆ. ಹೊಸ ಖಾಯಿಲೆಗಳು ಹೆಚ್ಚಾಗಲಿದ್ದು, ಕ್ರೌರ್ಯ ಹೆಚ್ಚಾಗಲಿದೆ. ರಾಶಿಗಳ ಮೇಲೆಯೂ ಈ ಬಾರಿಯ ಸೂರ್ಯಗ್ರಹಣ ಕೊಂಚ ಪ್ರಭಾವ ಬೀರಲಿದೆ. ಆಯಾ ರಾಶಿಗುಣವಾಗಿ ಸೂರ್ಯಗ್ರಹಣದ ಪ್ರಭಾವ ಹೀಗಿದೆ.

ಮೇಷ- ಮದುವೆಯಾಗದವರಿಗೆ ಮದುವೆಯಾಗಲಿದೆ. ಧನ ಆಗಮನ ಸಾಧ್ಯತೆ. ಅಣ್ಣ ತಮ್ಮ ಅಥವಾ ಅಕ್ಕ ತಂಗಿಯರಿದ್ದರೆ ವಿರಸವಾಗಬಹುದು. ಮಗುವೇ ಆಗದ ವಿವಾಹಿತರಿಗೆ ಹೆಣ್ಣುಮಗು ಆಗಬಹುದು. ಹೊಟ್ಟೆ ಸಂಬಂಧೀ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ವಿದ್ಯಾರ್ಥಿಗಳ ಪಾಲಿಗೆ ಉತ್ತಮ. ಕೆಲಸದಲ್ಲಿರುವ ಹೆಣ್ಣುಮಕ್ಕಳು ಮಂದಿ ಬಾಸ್ ಜೊತೆಗೆ ಹುಷಾರಾಗಿರಬೇಕು. ಪರಿಹಾರಕ್ಕಾಗಿ ಮೂರು ತಿಂಗಳ ಕಾಲ ಆದಿತ್ಯ ಹೃದಯ ಪಾರಾಯಣ, ಭಾನುವಾರ ವಿಷ್ಣು ಸಂಬಂಧಿಸಿದ ದೇವಾಲಯದಲ್ಲಿ ಅರ್ಚನೆ ಮಾಡುವುದು ಒಳ್ಳೆಯದು.

ವೃಷಭ- ಎರಡನೇ ಮನೆಯಲ್ಲಿ ಸೂರ್ಯ, ಚಂದ್ರ, ಕೇತು ಇರುವುದರಿಂದ ಕಣ್ಣಿಗೆ ಸಂಬಂಧಿಸಿದ ತೊಂದರೆ. ವಿಶೇಷವಾಗಿ ಗಂಡು ಮಕ್ಕಳಿಗೆ ತಮ್ಮ ತಾಯಿ ಜೊತೆಗೆ ಅಸಮಾಧಾನ ಉಂಟಾಗಬಹುದು. ಪಿತ್ತ ಹೆಚ್ಚಾಗುತ್ತದೆ. ಅಕ್ಟೋಬರ್ ತಿಂಗಳಲ್ಲಿ ಪ್ರಯಾಣ ಕಡಿಮೆ ಮಾಡಿ. ಅಫಘಾತ ಭಯವಿದೆ. ವ್ಯಾಜ್ಯದಿಂದ ಲಾಭ. ಉತ್ತಮ ದುಡ್ಡು ಸಂಪಾದನೆಯಾಗುತ್ತದೆ. ಲಲಿತ ಸಹಸ್ರನಾಮ ಪಾರಾಯಣ, ಬೆಳ್ಳಿ ಉಂಗುರದಲ್ಲಿ ಬಿಳಿ ಹವಳ ಧಾರಣೆ, ಭಾನುವಾರದಂದು ಬಡಜನರಿಗೆ ರವೆ ದಾನ ಮಾಡುವುದರಿಂದ ಪರಿಹಾರ ಸಾಧ್ಯ.

ಮಿಥುನ- ಇದೇ ರಾಶಿಯಲ್ಲಿ ಗ್ರಹಣ ನಡೆಯುವುದರಿಂದ ಪರಿಣಾಮ ಜಾಸ್ತಿ ಇದ್ದು, ಎಲ್ಲಾ ವಿಚಾರದಲ್ಲೂ ಹುಷಾರಾಗಿರಬೇಕು. ಮುಂದಿನ ಅಮವಾಸ್ಯೆ (ತಿಂಗಳೊಳಗೆ) ಅಫಘಾತ ಸಂಭವ ಹೆಚ್ಚು ಇರುವುದರಿಂದ ಸ್ವಂತ ಗಾಡಿ ಓಡಿಸಬೇಡಿ. ವಿದೇಶ ಪ್ರಯಾಣ ಯೋಗವಿದೆ. ಅಕ್ಕ ಅಥವಾ ತಂಗಿ ಇದ್ದರೆ ಅವರಿಗೆ ಒಳ್ಳೆಯದಲ್ಲ. ಹಿರಿಯರೊಂದಿಗೆ ಅಸಮಾಧಾನ ಹೆಚ್ಚುವುದರಿಂದ ಪ್ರತ್ಯೇಕವಾಗುವ ಸಾಧ್ಯತೆ ಇದೆ. ಮದುವೆಯಾಗದಿದ್ದವರಿಗೆ ಮೋಸದಿಂದ ಮದುವೆಯಾಗುತ್ತದೆ. ನರಗಳ ದೌರ್ಬಲ್ಯ ತೊಂದರೆ ಆಗಬಹುದು. ವೈಢೂರ್ಯವನ್ನು ಚಿನ್ನದುಂಗರದಲ್ಲಿ ಧರಿಸುವುದು, ಗಣಪತಿ ಅಷ್ಟೋತ್ತರ ನಾಮಾವಳಿ ಪಠಣದಿಂದ ತಕ್ಕಮಟ್ಟಿಗೆ ಪರಿಹಾರ ಕಾಣಬಹುದು.

ಕರ್ಕ- ಈ ರಾಶಿಯವರಿಗೆ ಗ್ರಹಣ ಪರಿಣಾಮದಿಂದಾಗಿ ಖರ್ಚು ಹೆಚ್ಚುತ್ತದೆ. ಇದರಿಂದ ನಷ್ಟವಾಗುತ್ತದೆ. ದೊಡ್ಡ ಖರೀದಿ ಬೇಡ. ಬೆನ್ನು ನೋವು ಮತ್ತಿತರ ತೊಂದರೆ ಕಾಣಿಸಬಹುದು. ಆಸ್ತಿ, ವಾಹನ ಖರೀದಿ ಯೋಗವಿದ್ದರೂ, ನಷ್ಟವೇ ಹೆಚ್ಚು. ಪ್ರಯಾಣ ಜಾಸ್ತಿಯಾಗುತ್ತದೆ. ತಾಯಿಯಂದಿರಿಗೆ ಆರೋಗ್ಯದ ಏರುಪೇರಾಗಬಹುದು. ಇದರಿಂದಲೂ ಖರ್ಚು ಹೆಚ್ಚಾಗಬಹುದು. ಗರ್ಭ ಧರಿಸಿರುವ ಮಂದಿ ಹುಷಾರಾಗಿರಬೇಕು. ಶತ್ರುಗಳಿಂದ ಲಾಭ ಹಾಗೂ ತಂದೆಯಿಂದಲೂ ಲಾಭ. ಪರಿಹಾರಕ್ಕಾಗಿ ಶಿವ ಅಷ್ಟೋತ್ತರ ನಾಮಾವಳಿಯನ್ನು ಮೂರು ತಿಂಗಳು ಪಾರಾಯಣ ಮಾಡಬೇಕು. ಹಳದಿ ವಸ್ತ್ರ ಧಾರಣೆ, 9 ಸೋಮವಾರ ಈಶ್ವರದ ದೇವಾಲಯದಲ್ಲಿ ಹಾಲು ಅಭಿಷೇಕ ಮಾಡುವುದರಿಂದ ಕೊಂಚ ನೆಮ್ಮದಿ ಕಾಣಬಹುದು.

ಸಿಂಹ- ಲವ್ ಅಫೇರ್ ಇದ್ದವರಿಗೆ ತೊಂದರೆಗಳು ಪರಿಹಾರವಾಗಿ ಮದುವೆಯಾಗುತ್ತದೆ. ಹೊಸ ಮನೆ, ವಾಹನ ಖರೀದಿ ಯೋಗವಿದೆ. ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ಇನ್ ಫೆಕ್ಷನ್ ಆಗುವ ಸಾಧ್ಯತೆಗಳಿವೆ. ಧನ ಲಾಭವಾಗುತ್ತದೆ. ಶ್ವಾಸಕೋಶ ತೊಂದರೆಗಳ ಸಾಧ್ಯತೆಯಿದೆ. ಆಸ್ತಿಯಿಂದ ಲಾಭ. ಆದರೆ, ತಂದೆ ತಾಯಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದಿತ್ಯ ಹೃದಯ ಪಾರಾಯಣ, ಸಂಜೆ ಹೊತ್ತು ಲಲಿತ ಸಹಸ್ರ ನಾಮ ಪಠಣ, ಮಂಗಳವಾರ ಸುಬ್ರಹ್ಮಣ್ಯ ದೇವಾಲಯದಲ್ಲಿ ಅಱ್ಚನೆ ಮಾಡುವುದು, ಚಿನ್ನ ಅಥವಾ ಬೆಳ್ಳಿಯ ಉಂಗುರದಲ್ಲಿ ಕೆಂಪು ಉಂಗುರ ಧರಿಸುವುದರಿಂದ ನೆಮ್ಮದಿ ದೊರೆಯಬಹುದು.

ಕನ್ಯಾ- ಸಾಡೇಸಾತಿ ಪ್ರಭಾವ ಇದೆ. ಎಪ್ರಿಲ್ ತಿಂಗಳೊಳಗೆ ಹೊರದೇಶಕ್ಕೆ ಹೋಗುವ ಸಾಧ್ಯತೆಗಳಿವೆ. ಮದುವೆಯಾಗದವರಿಗೆ ವಿವಾಹಯೋಗ ಭಾಗ್ಯವಿದೆ. ಧನಾಗಮನ ಆಗಲಿದೆ. ಆರೋಗ್ಯ ಕೆಡುತ್ತದೆ. ಕಣ್ಣುಗಳ ತೊಂದರೆ, ನರ ದೌರ್ಬಲ್ಯ ತೊಂದರೆಗಳ ಸಾಧ್ಯತೆಯಿದೆ. ದಂಪತಿಗಳಲ್ಲಿ ವಿರಸ, ವಾಹನ ಕಳ್ಳತನ ಮುಂತಾದ ತೊಂದರೆಗಳು ಉಂಟಾಗಬಹುದು. ಪರಿಹಾರಕ್ಕಾಗಿ ಹಸಿರು ಬಟ್ಟೆ ಧರಿಸಿ. ಶಿವ ಸಹಸ್ರನಾಮ ಪಾರಾಯಣ, ದಕ್ಷಿಣಾ ಮೂರ್ತಿ ಪಾರಾಯಣ, 8 ಶನಿವಾರ ಗಂಡಸರು ಬಡವರಿಗೆ ಕಪ್ಪು ವಸ್ತ್ರ ದಾನ ಮಾಡುವುದರಿಂದ ನೆಮ್ಮದಿ.

ತುಲಾ- ಆಸ್ತಿಯಿಂದ, ಹೆಂಡತಿಯಿಂದ ಲಾಭವಾಗುತ್ತದೆ. ತಾಯಿ ತಂದೆ ಆರೋಗ್ಯಕ್ಕೆ ತೊಂದರೆಯಾಗಬಹುದು. ಉದ್ಯೋಗದಲ್ಲಿ ಭಡ್ತಿಯಾಗುತ್ತದೆ. ಇದರಿಂದ ಆದಾಯ ಹೆಚ್ಚಾಗುತ್ತದೆ. ಆದರೆ ದೇಹದಲ್ಲಿ ನೋವು, ಕತ್ತಿನ ಭಾಗದಲ್ಲಿ ತೊಂದರೆ, ಎಡಗಣ್ಣಿನ ತೊಂದರೆ ಕಾಣಿಸಬಹುದು. ತಮ್ಮ ಹೆಣ್ಣುಮಕ್ಕಳಿಂದ ಅಸಮಾಧಾನ ಇರಬಹುದು. ಮಕ್ಕಳಿರದ ಮಂದಿಗೆ ಮಕ್ಕಳಾಗುವ ಸಾಧ್ಯತೆಗಳಿವೆ. ಪರಿಹಾರಕ್ಕಾಗಿ ಸುಬ್ರಹ್ಮಣ್ಯ ಆರಾಧನೆ, ಆರು ಮುಖದ ರುದ್ರಾಕ್ಷಿ ಕತ್ತಿಗೆ ಧಾರಣೆ, ಚಿನ್ನದುಂಗುರದಲ್ಲಿ ಮಾಣಿಕ್ಯ ಧಾರಣೆ ಮಾಡಬಹುದು.

ವೃಶ್ಚಿಕ ರಾಶಿ- ಏಪ್ರಿಲ್ 2011ರವರೆಗೆ ವ್ಯಾಪಾರದಲ್ಲಿ ತುಂಬ ವೃದ್ಧಿಯಾಗುತ್ತದೆ. ಏಪ್ರಿಲ್ 2011ರವರೆಗೆ ಚಿತ್ರರಂಗದಲ್ಲಿರುವ ಮಂದಿಗೆ ಉತ್ತಮ. ನಂತರ ಆಗಸ್ಟ್ ವರೆಗೆ ಒಳ್ಳೆಯದಲ್ಲ. ಮೇ, ಜೂನ್ 2011ವಾಹನ ಅಫಘಾತ ಸಾಧ್ಯತೆ, ಆರೋಗ್ಯದಲ್ಲಿ ಏರುಪೇರು, ಹಲ್ಲಿನ ಸಮಸ್ಯೆ ಉಂಟಾಗಬಹುದು. ಸೊಸೆ ಅಳಿಯನ ಜೊತೆ ಜಗಳವಾಗಿ ದೂರಾಗುವ ಸಂಭವವಿರುವುದರಿಂದ ಮಾತಿನ ಮೇಲೆ ನಿಗಾ ಇರಲಿ. ಪರಿಹಾರಕ್ಕಾಗಿ ಚಿನ್ನದುಂಗುರದಲ್ಲಿ ಕನಕ ಪುಷ್ಯರಾಗ ಧಾರಣೆ, 9 ಗುರುವಾರ ಗಣಪತಿ ಗುಡಿಯಲ್ಲಿ ಕಡಲೆ ಕಾಳು ದಾನ, ಗಣಪತಿ ಅಷ್ಟೋತ್ತರ ಪಾರಾಯಣ ಮಾಡಬಹುದು.

ಧನುಸ್ಸು- ಸಪ್ತಮ ಸ್ಥಾನದಲ್ಲಿ ರವಿ, ಚಂದ್ರ, ಕೇತು. ಆಗಸ್ಟ್ ತಿಂಗಳಿಂದ ಡಿಸೆಂಬರ್ ತಿಂಗಳೊಳಗೆ ತಾಯಿ ಅಥವಾ ತಂದೆ ಕಳಕೊಳ್ಳುವ ಸಂಭವ (ರೈಲು ) ಬೆನ್ನು ನೋವು (ನೀರಿರುವ ಜಾಗದಲ್ಲೇ ಬಿದ್ದು). ಕೆಟ್ಟ ಕನಸುಗಳು ಬೀಳುವ ಸಂಭವ, ಮಾಟ ಮಂತ್ರ ಪ್ರಯೋಗದಿಂದ ತೊಂದರೆ. ತಾಯಿ ಆರೋಗ್ಯದಲ್ಲಿ ಏರುಪೇರು. ತಂದೆಗೆ ಅಶುಭ. ವೃತ್ತಿಯಲಿರುವವರಿಗೆ ಒಳ್ಳೆಯದು. ಬಲಗಣ್ಣಿನ ವಿಚಾರದಲ್ಲಿ ಹುಷಾರಾಗಿರಿ. ಪರಿಹಾರಕ್ಕಾಗಿ ಶಿವ ಸಹಸ್ರನಾಮ ಪಾರಾಯಣ, ಮೃತ್ಯುಂಜಯ ಜಪ ಹಾಗೂ ಹೋಮ, ಚಿನ್ನದುಂಗುರದಲ್ಲಿ ಕೆಂಪು ಹವಳ ಧಾರಣೆಯಿಂದ ನೆಮ್ಮದಿ ಕಾಣಬಹುದು.

ಮಕರ- ಈ ರಾಶಿಯವರಿಗೆ ತಂದೆಯಿಂದ ಲಾಭ. ಪ್ರಯಾಣ ಹೆಚ್ಚಾಗುತ್ತದೆ. ದಂಪತಿಗಳಿಗೆ ಕಿತ್ತಾಟ, ವಿರಸ ಸಂಭವವಿದೆ. ಹೊಕ್ಕಳು, ಮರ್ಮಾಂಗಕ್ಕೆ ಸಂಬಂಧಿಸಿ ಶಸ್ತ್ರಚಿಕಿತ್ಸೆ ನಡೆಯುವ ಸಂಭವವಿದೆ. ಬ್ಯುಸಿನೆಸ್‌ನಲ್ಲಿ ಬೆಂಕಿ ಅಫಘಾತದಿಂದ ತೊಂದರೆಗಳುಂಟಾಗುವ ಸಾಧ್ಯತೆಗಳಿವೆ. ಮೂಳೆ ಸಂಬಂಧಿ ರೋಗ ಉಂಟಾಗುವ ಸಾಧ್ಯತೆಗಳಿವೆ. ವಿಷ್ಣು ಸಹಸ್ರನಾಮ ಪಾರಾಯಣ, ಪಚ್ಚೆಯನ್ನು ಚಿನ್ನದುಂಗುರದಲ್ಲಿ ಧಾರಣೆಯಿಂದ ಪರಿಹಾರ ಸಾಧ್ಯ. ಬಿಳಿ ಬಟ್ಟೆ ಧರಿಸುವುದು ಒಳ್ಳೆಯದು.

ಕುಂಭ- ಮದುವೆಯಾಗದವರಿಗೆ ಮದುವೆಯಾಗುವ ಯೋಗವಿದೆ. ದಂಪತಿಗಳಲ್ಲಿ ವಿರಸ, ಜಗಳ ಉಂಟಾಗಬಹುದು. ಪ್ರೀತಿ ಪ್ರೇಮ ವಿಚಾರದಲ್ಲಿ ಮೋಸವಾಗುವ ಸಂಭವವಿದೆ. ಷೇರುಮಾರುಕಟ್ಟೆಯಿಂದ ನಷ್ಟವಾಗುವ ಸಂಭವವಿರುವುದರಿಂದ ಹೂಡಿಕೆ ಬೇಡ. ಮನೆ ಖರೀದಿ ಯೋಗವಿದೆ. ಶ್ವಾಸಕೋಶದಲ್ಲಿ ತೊಂದರೆ, ಭುಜದ ಭಾಗದಲ್ಲಿ ತೊಂದರೆ ಉಂಟಾಗಬಹುದು. ಕುಂಭ ರಾಶಿಯ ಮಕ್ಕಳು ಪದೇ ಪದೇ ಎಡವಿ ಬೀಳುವ ಸಾಧ್ಯತೆಗಳಿರುವುದರಿಂದ ಕೊಂಚ ಜಾಗ್ರತೆ ಅಗತ್ಯ. ಪರಿಹಾರಕ್ಕಾಗಿ ಆದಿತ್ಯ ಹೃದಯ ಪಾರಾಯಣ, ಲಲಿತಾ ತ್ರಿಶತಿ ನಾಮಾವಳಿ ಪಾರಾಯಣ, ಆದಿಶೇಷನ ಗುಡಿಯಲ್ಲಿ 9 ಮಂಗಳವಾರಗಳ ಕಾಲ ಹಾಲಿನ ಅಭಿಷೇಕ, ಇಂದ್ರನೀಲವನ್ನು ಚಿನ್ನದಲ್ಲಿ ಧಾರಣೆ ಮಾಡುವುದರಿಂದ ಕೊಂಚ ಪರಿಹಾರ ಕಾಣಬಹುದು.

ಮೀನ- ಈ ರಾಶಿಯ ಮಂದಿ ಮದ್ಯಪಾನ ವ್ಯಸನಿಗಳಾಗಿದ್ದರೆ ಅದಕ್ಕೆ ಕಡಿವಾಣ ಹಾಕಿ. ಇಲ್ಲವಾದಲ್ಲಿ ಲಿವರ್ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ನವೆಂಬರ್ ಡಿಸೆಂಬರ್ ತಿಂಗಳಲ್ಲಿ ವಾಣಿಜ್ಯ ವಾಹನಗಳಿಂದ ಅಫಘಾತವಾಗುವ ಸಂಭವವಿದೆ. ಮದುವೆಯಾಗದವರಿಗೆ ಮದುವೆಯಾಗುವ ಭಾಗ್ಯವಿದೆ. ಮಕ್ಕಳಾಗದವರಿಗೆ ಮಕ್ಕಳಾಗುತ್ತದೆ. ರಾಹು ಮೂಲ ಮಂತ್ರ ಪಠಣ, ಶನಿ ಮಂತ್ರ 28 ಬಾರಿ ಪಾರಾಯಣ, ಕನಕ ಪುಷ್ಯರಾಗವನ್ನು ಚಿನ್ನದುಂಗುರ ಧಾರಣೆ ಮಾಡುವುದರಿಂದ ಪರಿಹಾರ ಸಾಧ್ಯವಿದೆ.


ಇದರಲ್ಲಿ ಇನ್ನಷ್ಟು ಓದಿ :