ವಿಕೃತಿ ಕಳೆದು ಖರ ನಾಮ ಯುಗದ ಆದಿ ಈ ಯುಗಾದಿ

 
WD
'ಯುಗ'ವೆಂದರೆ ಸೃಷ್ಟಿಯ ಕಾಲಮಾನ ಅಥವಾ 'ಆದಿ' ಎಂದರೆ ವರ್ಷದ ಪ್ರಾರಂಭ ದಿನ. ಅಂದರೆ ಹೊಸ ವರ್ಷದ ಪ್ರಾರಂಭ ದಿನವೇ 'ಯುಗಾದಿ'. ನಮ್ಮಲ್ಲಿ ಯುಗಾದಿ ಹಬ್ಬವನ್ನು ಎರಡು ರೀತಿಯಿಂದ ಆಚರಿಸುವ ಪದ್ಧತಿಯಿದೆ. ಯುಗಾದಿ ಮತ್ತು ಯುಗಾದಿ. ಚಂದ್ರನ ಚಲನೆಯನ್ನು ಆಧರಿಸಿ, ಅಮಾವಾಸ್ಯೆ ಹುಣ್ಣಿಮೆಗಳ ಆಧಾರದ ಮೇಲೆ ಮಾಸ ಗಣನೆ ಮಾಡುವ ಪದ್ಧತಿಗೆ ಚಾಂದ್ರಮಾನ ಎಂದು ಹೆಸರು ಬಂದಿದೆ. ಚಂದ್ರನ ಚಲನೆಯಲ್ಲಿ ವ್ಯತ್ಯಾಸವಾಗುವುದರಿಂದ ಚಾಂದ್ರಮಾನ ಯುಗಾದಿ ನಿಗದಿತ ಸಮಯದಲ್ಲಿ ಬರುವುದಿಲ್ಲ. ಮೇಷ ರಾಶಿಗೆ ಸೂರ್ಯನು ಪ್ರವೇಶಿಸುವ ದಿವಸ ಸೌರಮಾನ ಯುಗಾದಿಯನ್ನು ಆಚರಿಸಲಾಗುತ್ತಿದೆ. ಭೂಮಿಯ ಚಲನೆಯಲ್ಲಿ ಹೆಚ್ಚಿನ ವ್ಯತ್ಯಾಸ ಬರುವುದಿಲ್ಲವಾದ್ದರಿಂದ ಸಾಮಾನ್ಯವಾಗಿ ನಿಗದಿತ ಸಮಯದಲ್ಲಿ ಅಂದರೆ ಏಪ್ರಿಲ್ 14ರಂದು ಸೌರಮಾನ ಯುಗಾದಿ ಬರುತ್ತದೆ.

ಈ ವರ್ಷ ಚಾಂದ್ರಮಾನ ಯುಗಾದಿಯು, ಚೈತ್ರ, ಮಾಸ ಶುಕ್ಲ ಪಕ್ಷ ಪ್ರತಿಪದೆ, ಏಪ್ರಿಲ್ 4 ರಂದು ಸೋಮವಾರ ಸೂರ್ಯೋದಯಕ್ಕೆ ಸಂವತ್ಸರದೊಂದಿಗೆ ಪ್ರಾರಂಭವಾಗುತ್ತದೆ. ಸೂರ್ಯನು ಏಪ್ರಿಲ್ 14 ರಂದು ಗುರುವಾರ ಮೇಷ ರಾಶಿಗೆ ಪ್ರವೇಶಿಸುವುದರಿಂದ ಅಂದು ಸೌರಮಾನ ಯುಗಾದಿ ಪ್ರಾರಂಭವಾಗುತ್ತದೆ.

ಈ ಸೃಷ್ಟಿಯು ಜನಿಸಿ ಇಂದಿಗೆ 195,58,85,112 ವರ್ಷಗಳು ಮುಗಿದಿದೆ. ಚತುರ್ದಶ ಮನುಗಳಲ್ಲಿ ಸ್ವಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ ಎಂಬ ಆರು ಮನ್ವಂತರಗಳು ಕಳೆದಿದ್ದು, ಏಳನೇ ವೈವಸ್ವತ ಮನ್ವಂತರದಲ್ಲಿ, ಇಪ್ಪತ್ತೇಳು ಮಹಾ ಯುಗಗಳು ಕಳೆದು, ಇಪ್ಪತ್ತೆಂಟನೇ ಮಹಾಯುಗದಲ್ಲಿ ಕೃತ ಯುಗ, ತ್ರೇತಾ ಯುಗ, ದ್ವಾಪರಾ ಯುಗ ಕಳೆದು ಕಲಿಯುಗ ಪ್ರಾರಂಭವಾಗಿದೆ. ಈ ಕಲಿಯುಗ 4,32,000 ವರ್ಷಗಳಲ್ಲಿ 5112 ವರ್ಷಗಳು ಕಳೆದು, 5113 ನೆಯ ವರ್ಷ ಆರಂಭವಾಗುತ್ತಿದೆ.

ವರ್ಷದ ಮೂರೂವರೆ ಶುಭ ಮುಹೂರ್ತಗಳು, ಯುಗಾದಿ, ಅಕ್ಷಯ ತೃತೀಯ, ವಿಜಯದಶಮಿ ಮತ್ತು ಬಲಿಪಾಡ್ಯಮಿಯ ಅರ್ಧ ದಿವಸ. ಈ ಮೂರೂವರೆ ಶುಭ ಮುಹೂರ್ತಗಳಲ್ಲಿ ನಮಗೆ ಯುಗಾದಿಯೇ ವರ್ಷದ ಪ್ರಾರಂಭ ಅತ್ಯಂತ ಶುಭ ದಿವಸವಾಗಿದೆ. ಈ ದಿವಸ ಉತ್ಸವಗಳು ವರ್ಷದುದ್ದಕ್ಕೂ ಬಾಳಿನ ಬೆಂಬಲ, ಮುಂಬಲವಾಗಿ ಬರುತ್ತಿವೆ ಎಂದು ನಂಬಿಕೆ. ಕೆಲವರು ಈ ಶುಭ ಮುಹೂರ್ತದಲ್ಲಿ ಹೊಸ ಹೊಸ ಜೀವನೋಪಾಯಗಳನ್ನೂ ಹೊಸ ಹೊಸ ಉದ್ಯಮಗಳನ್ನು ಪ್ರಾರಂಭಿಸುವರು. ಏಕೆಂದರೆ ಯುಗ ಯುಗಗಳಿಂದಲೂ ಅತ್ಯಂತ ಮಹತ್ವದ ಕಾರ್ಯಗಳು ಈ ಶುಭ ದಿವಸವೇ ನಡೆದುವೆಂದು ಶಾಸ್ತ್ರ ಪುರಾಣಗಳು ಹೇಳಿವೆ.

ಯುಗಾದಿ ಹಲವು ಪರಂಪರೆಗಳ ಪ್ರಾರಂಭ ದಿನ. ಬ್ರಹ್ಮನು ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನು. ಅಂದೇ ಗ್ರಹ, ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನು ಸೃಷ್ಟಿಸಿ, ಕಾಲಗಣನೆ ಆರಂಭಿಸಿದನೆಂದು ಪುರಾಣದಲ್ಲಿದೆ. ಶ್ರೀ ರಾಮನು, ರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಬಂದು ರಾಮರಾಜ್ಯವಾಳಲು ಪ್ರಾರಂಭಿಸಿದ್ದು, ಈ ಯುಗಾದಿ ದಿವಸವೇ. ಶಾಲಿವಾಹನ ಶಕೆ ಪ್ರಾರಂಭವಾಗಿದ್ದು, ಯುಗಾದಿ ದಿವಸವೇ. ವೇದವ್ಯಾಸರ ವಿದ್ಯಾರಂಭವಾಗಿದ್ದು ಯುಗಾದಿಯಂದೆ ಎಂದು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ.

ಈ ಯುಗಾದಿಯಂದು ಶಾಲಿವಾಹನ ಶಕೆ 1933 ಪ್ರಾರಂಭವಾಗುತ್ತದೆ. ಈ ಶಾಲಿವಾಹನ ಶಕೆ 1933 ಕ್ಕೆ 12 ಸಂಖ್ಯೆ ಕೂಡಿಸಿ, 60 ಸಂಖ್ಯೆಯಿಂದ ಭಾಗಿಸಿದಾಗ ಉಳಿಯುವ ಶೇಷವೇ 25. ಪ್ರಭವ ಸಂವತ್ಸರದಿಂಧ 25 ನೇ ಸಂವತ್ಸರವೇ ಖರ ಸಂವತ್ಸರ. ಇದೇ ರೀತಿ ಪ್ರತಿ ವರ್ಷದ ಸಂವತ್ಸರವನ್ನು ಕಂಡು ಹಿಡಿಯಬಹುದು. ಕೈಸ್ತ ವರ್ಷಕ್ಕೂ ಶಾಲಿವಾಹನ ಶಕೆ ವರ್ಷಕ್ಕೂ 78 ವರ್ಷಗಳ ವ್ಯತ್ಯಾಸವಿದೆ. ಶಾಲಿವಾಹನ ಶಕೆ ವರ್ಷಕ್ಕೆ 78 ವರ್ಷ ಕೂಡಿದರೆ ಕ್ರೈಸ್ತ ವರ್ಷ ಬರುತ್ತದೆ (1933 + 78 = 2011).

ಯುಗಾದಿ ದಿವಸ ಬೆಳಗಿನ ಜಾವ, ಬೇಗ ಎದ್ದು, ಮಂಗಳ ಸ್ನಾನ ಮಾಡಿ (ತೈಲಾಭ್ಯಂಗ) ಹೊಸ ಬಟ್ಟೆ ಧರಿಸಿಕೊಂಡು ಮನೆಯನ್ನೆಲ್ಲಾ ಮಾವು-ಬೇವು ಎಲೆಗಳಿಂದ ಶೃಂಗರಿಸಿ, ಹೊಸ ವರ್ಷವನ್ನು ಬರಮಾಡಿಕೊಂಡು, ವಿಶೇಷವಾಗಿ ವರ್ಷವೆಲ್ಲಾ ಹರ್ಷದಾಯಕವಾಗಲಿ, ಸಿಹಿಯೊಂದಿಗೆ ಕಹಿಯನ್ನು ಬರಮಾಡಿಕೊಂಡು, ಇದನ್ನು ಸಹಿಸುವ ಶಕ್ತಿ ಬರಲಿ ಎಂದು ಬೇವು-ಬೆಲ್ಲ ಸವಿಯಲಾಗುತ್ತದೆ. ಬೇವು-ಬೆಲ್ಲ ನಮ್ಮ ಜೀವನದುದ್ದಕ್ಕೂ ಕಾಣುವ ಸುಖ-ದುಃಖ, ಹಗಲು-ರಾತ್ರಿ, ನೋವು-ನಲಿವು, ಪ್ರೀತಿ-ದ್ವೇಷ, ಲಾಭ-ನಷ್ಟ ಇವುಗಳನ್ನು ಸಮಾನ ಮನೋಭಾವದಿಂದ ಸ್ವೀಕರಿಸಿ ವರ್ಷವಿಡೀ ಸಮರಸವಾಗಿರಲಿ ಎಂಬುದೇ ಇದರ ಐತಿಹ್ಯ.

ಯುಗಾದಿಯಂದು ಜ್ಯೋತಿಷಿಗಳಿಂದ ಹೊಸವರ್ಷದ ಫಲಗಳನ್ನು ಕೇಳುವುದು ರೂಢಿಯಲ್ಲಿದೆ. ವರ್ಷದ ಫಲ ತಿಳಿದುಕೊಳ್ಳಬೇಕೆಂದು ಧರ್ಮಸಿಂಧವಿನಲ್ಲಿ 'ಪ್ರತಿಗೃಹಂ, ಧ್ವಜಾರೋಹಣಂ, ನಿಂಬಪತ್ರಾಶನಂ, ವತ್ಸರಾಧಿಫಲ ಶ್ರವಣಂ, ನವರಾತ್ರಾರಂಭಃ ತೈಲ ಅಭ್ಯಂಗಾದಿಶ್ಚ ಶುದ್ಧಮಾಸ ಪ್ರತಿಪದೆ ಕಾರ್ಯಃ' ಅಂದರೆ ಮನೆಯನ್ನೆಲ್ಲಾ ಮಾವು, ಬೇವು, ತಳಿರು-ತೋರಣಗಳಿಂದ ಅಲಂಕರಿಸಿ, ಧ್ವಜಾರೋಹಣ ಬೇವು-ಬೆಲ್ಲ ಸೇವಿಸುವುದು, ಪಂಚಾಂಗ ಶ್ರವಣ, ನವರಾತ್ರಿ ಆರಂಭ. ಇಷ್ಟದೇವತಾ ಪೂಜೆಯ ಜೊತೆಗೆ ಸೃಷ್ಟಿಕರ್ತನಾದ ಬ್ರಹ್ಮದೇವನ ಕಾಲ ಪುರುಷನ ಹಾಗೂ ವರ್ಷಾಧಿಪತಿಯ ಆರಾಧನೆ. ಚಂದ್ರದರ್ಶನ ಇವು ಯುಗಾದಿಯ ವೈಶಿಷ್ಟ್ಯ.

ಆರ್. ಸೀತಾರಾಮಯ್ಯ,
ಜ್ಯೋತೀಷ್ಕರು,
ಶಿವಮೊಗ್ಗ - 577 201
9449048340ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...