Widgets Magazine

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ವೆಬ್‌ದುನಿಯಾ| Last Updated: ಬುಧವಾರ, 30 ಸೆಪ್ಟಂಬರ್ 2015 (12:14 IST)
PR
ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ನೋಡುವುದು ಭಾರತೀಯ ಸಂಸ್ಕೃತಿಯಲ್ಲಿ ಬೆಳೆದು ಬಂದ ಪರಂಪರೆ. ಶಾಸ್ತ್ರಗಳಲ್ಲೂ ವಿಭಿನ್ನ ಮುಹೂರ್ತ ಸಿದ್ಧಾಂತಗಳನ್ನು ನಾವು ಕಾಣಬಹುದು. ಅವುಗಳ ಅನುಸಾರವಾಗಿ ಪಂಚಾಂಗದ ಮಾಧ್ಯಮದ ಮೂಲಕ ಲೆಕ್ಕಾಚಾರ ಮಾಡಿ ಶುಭ ಮುಹೂರ್ತದ ತಿಥಿ, ವಾರ, ನಕ್ಷತ್ರ, ಮಾಸ ಮತ್ತು ಸಮಯವನ್ನು ನಿರ್ಧರಿಸಲಾಗುತ್ತದೆ.

ಆದರೆ ಕೆಲವೊಂದು ಬಾರಿ ಪರಿಸ್ಥಿತಿವಶಾತ್ ಇಲ್ಲವೇ ಬೇರಾವುದೇ ಕಾರಣಗಳಿಂದ ನಿರ್ದಿಷ್ಟ ದಿನದಂದು ಶುಭ ಮುಹೂರ್ತ ದೊರೆಯದೇ ಹೋದಲ್ಲಿ, ಆ ದಿನದ ಚೌಘಾಡಿಯಾ ನೋಡಿ ಕೆಲಸ ಕಾರ್ಯ ಪೂರೈಸುವ ವಿಧಾನವು ಉತ್ತರ ಭಾರತದಲ್ಲಿದೆ.

ಆಯಾ ವಾರಗಳಲ್ಲಿ ಬರುವ ಆರಂಭಿಕ ಚೌಘಡಿಯಾಗಳನ್ನು ಈ ಕೋಷ್ಟಕದಲ್ಲಿ ನೀಡಲಾಗಿದೆ:
ಹಗಲು ವಾರ ರಾತ್ರಿ
ಉದ್ವೇಗ ಭಾನುವಾರ ಶುಭ
ಅಮೃತ ಸೋಮವಾರ ಚಲ
ರೋಗ ಮಂಗಳವಾರ ಕಾಲ
ಲಾಭ ಬುಧವಾರ ಉದ್ವೇಗ
ಶುಭ ಗುರುವಾರ ಅಮೃತ
ಚಲ ಶುಕ್ರವಾರ ರೋಗ
ಕಾಲ ಶನಿವಾರ ಲಾಭ

ಒಂದು ದಿನ-ರಾತ್ರಿಯಲ್ಲಿ 24 ಗಂಟೆಗಳಿರುತ್ತವೆ. ದಿನದಲ್ಲಿ ಎಂಟು, ರಾತ್ರಿ ಎಂಟು ಚೌಘಡಿಯಾ ಘಳಿಗೆಗಳು ಇರುತ್ತವೆ. ಹೀಗಾಗಿ ಒಟ್ಟು 16 ಚೌಘಡಿಯಾಗಳು. ಸಾಮಾನ್ಯವಾಗಿ ಒಂದೂವರೆ ಗಂಟೆಯ ಅವಧಿಯನ್ನು ಒಂದು ಚೌಘಡಿಯಾ ಎಂದು ಪರಿಗಣಿಸಲಾಗುತ್ತದೆ. ಬೆಳಿಗ್ಗೆ 6ರಿಂದ 7.30ರವರೆಗೆ ಮೊದಲ ಚೌಘಡಿಯಾ, 7.30ರಿಂದ 9ರವರೆಗೆ ಎರಡನೇ ಚೌಘಡಿಯಾ ಎಂದು ಪರಿಭಾವಿಸಲಾಗುತ್ತದೆ. ಆದರೆ ಈ ಲೆಕ್ಕಾಚಾರವೇ ಸರಿ ಅಥವಾ ಸರ್ವಮಾನ್ಯ ಎಂದು ಹೇಳಲಾಗುವುದಿಲ್ಲ. ನಿರ್ದಿಷ್ಟ ಸ್ಥಳದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತ ನಡುವಿನ ಒಟ್ಟು ಸಮಯವನ್ನು ಎಂಟು ಭಾಗಗಳನ್ನಾಗಿ ವಿಂಗಡಿಸಲಾಗುತ್ತದೆ. ಹೀಗಾಗಿ ಅದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ. ಅದರ ಪ್ರಕಾರ, ಚೌಘಡಿಯಾ ಆರಂಭ ಮತ್ತು ಅಂತ್ಯದ ಅವಧಿಯಲ್ಲಿ ವ್ಯತ್ಯಾಸಗಳಿರುತ್ತವೆ.

ಉದಾಹರಣೆಗೆ, ನವೆಂಬರ್ 30ಕ್ಕೆ ಬೆಂಗಳೂರಿನಲ್ಲಿ ಸೂರ್ಯೋದಯ ಬೆಳಿಗ್ಗೆ 6.03 ಹಾಗೂ ಸೂರ್ಯಾಸ್ತ ಸಂಜೆ 6.15 ಅಂತ ಇಟ್ಟುಕೊಳ್ಳೋಣ. ಸೂರ್ಯೋದಯ ಮತ್ತು ಸೂರ್ಯಾಸ್ತ ನಡುವಿನ ಸಮಯ ಒಟ್ಟು 12 ಗಂಟೆ ಮತ್ತು 12 ನಿಮಿಷಗಳು. ಇದನ್ನು (12.12 ಗಂಟೆ = 732 ನಿಮಿಷ) 8ರಿಂದ ಭಾಗಿಸಬೇಕು. ಆಗ ದೊರೆಯುವ ಸಮಯ 1 ಗಂಟೆ 31 ನಿಮಿಷ 30 ಸೆಕೆಂಡ್. ಅಂದರೆ ಆ ದಿನದಂದು ಬೆಳಗ್ಗೆ 6.03 ಗಂಟೆಯಿಂದ 1 ಗಂ. 31 ನಿ.30 ಸೆ. ಅವಧಿಗೆ (ಬೆಳಿಗ್ಗೆ 7 ಗಂಟೆ 34 ನಿಮಿಷ 30 ಸೆಕೆಂಡ್‌ವರೆಗೆ) ಮೊದಲ ಚೌಘಡಿಯಾ ಲಭ್ಯವಿರುತ್ತದೆ.

ಚೌಘಡಿಯಾ ಚಕ್ರದ ಅನುಸಾರ, ಭಾನುವಾರದ ಮೊದಲ ಚೌಘಡಿಯಾ 'ಉದ್ವೇಗ' ಫಲ ಹೊಂದಿರುತ್ತದೆ. ಯಾವ ರೀತಿ ದಿನದ ಚೌಘಡಿಯಾವನ್ನು ಸೂರ್ಯೋದಯದಿಂದ ಸೂರ್ಯಾಸ್ತ ವರೆಗೆ ಲೆಕ್ಕಾಚಾರ ಹಾಕಲಾಗುತ್ತದೆಯೋ, ಅದೇ ಪ್ರಕಾರವಾಗಿ 8 ಸಮಾನ ಭಾಗಗಳನ್ನಾಗಿಸಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೂ ಚೌಘಡಿಯಾ ಗಣನೆ ಮಾಡಲಾಗುತ್ತದೆ.

ರೋಗ, ಉದ್ವೇಗ ಮತ್ತು ಕಾಲ ಚೌಘಡಿಯಾಗಳು ಅಶುಭ ಫಲ ನೀಡುವ ಪಂಕ್ತಿಗೆ ಸೇರಿದ್ದರೆ, ಲಾಭ, ಅಮೃತ, ಶುಭ ಮತ್ತು ಚಲ ಚೌಘಡಿಯಾಗಳು ಶ್ರೇಷ್ಠ ಫಲ ನೀಡುತ್ತವೆ ಎಂಬ ನಂಬಿಕೆ. ಲಾಭ ಚೌಘಡಿಯಾವು ವ್ಯವಹಾರ ಮುಂತಾದ ಲಾಭದಾಯಕ ಕಾರ್ಯಗಳಿಗೆ, ಅಮೃತವು ಔಷಧಿಗೆ ಸಂಬಂಧಿಸಿದ್ದಕ್ಕೆ, ಶುಭವು ಇತರ ಕೆಲಸ ಕಾರ್ಯಗಳಿಗೆ ಮತ್ತು ಚಲ ಚೌಘಡಿಯಾವು ಚರ (ಅಂದರೆ ಯಂತ್ರ ಮುಂತಾದ) ಕಾರ್ಯಗಳಿಗೆ ಶ್ರೇಯಸ್ಕರವಾಗಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :