Widgets Magazine

ನಿಮ್ಮದು ತುಲಾರಾಶಿಯೇ? ಹಾಗಾದರೆ ಈ ಲೇಖನ ಖಂಡಿತ ಓದಲೇ ಬೇಕು

Rajesh patil| Last Modified ಮಂಗಳವಾರ, 27 ಸೆಪ್ಟಂಬರ್ 2016 (14:08 IST)
ತುಲಾ ರಾಶಿಯಲ್ಲಿ ಜನಿಸಿದ ಸ್ತ್ರೀ ಪುರುಷ ಮಕ್ಕಳ ಗುಣ ನಡತೆಗಳು ಆ ರಾಶಿಯ ಗುಣವಿಶೇಷಕ್ಕೆ ತಕ್ಕಂತಿರುತ್ತದೆ. ಆ ವಿವರಗಳು ಇಲ್ಲಿವೆ.
ಪುರುಷ- ತುಲಾ ರಾಶಿಯ ಪುರುಷ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬಲ್ಲವನಾಗಿದ್ದರೂ, ನಿಮ್ಮ ತೀರಾ ಬಾಲಿಶ, ಪಕ್ಕಾ ಹೆಣ್ಣುಮಕ್ಕಳ ಕನಸನ್ನು ನನಸು ಮಾಡಲಾರ. ತುಲಾ ರಾಶಿಯ ಪುರುಷ ಎಲ್ಲವನ್ನು ಸರಿದೂಗಿಸಿಕೊಂಡು ಸಮಾನಾಂತರ ಕಾಯ್ದುಕೊಳ್ಳಬೇಕೆನ್ನುವ ವ್ಯಕ್ತಿತ್ವ ಹೊಂದಿರುವಾತ. ಆತ ಈ ಧೋರಣೆಯನ್ನು ಪ್ರೀತಿಯ ಬಗ್ಗೆಯೂ ಹೊಂದಿರುತ್ತಾನೆ. ನೀವು ಆತನ ಜೀವನದಿಂದ ಹೊರ ಹೋಗಲು ಪ್ರಯತ್ನಿಸಿದರೂ, ಆತನ ವ್ಯಕ್ತಿತ್ವವೇ ಮತ್ತೆ ನಿಮ್ಮನ್ನು ಆಕರ್ಷಿಸುತ್ತದೆ. ಹಾಗಾಗಿ ಮತ್ತೆ ಆತನಿಗೇ ನೀವು ಜೋತು ಬೀಳುತ್ತೀರಿ.
 
ಒಮ್ಮೆ ಈತ ನಕ್ಕನೆಂದರೆ ಆತನ ಹಳ್ಳದಲ್ಲಿ ಹುಡುಗಿಯರು ಬಿದ್ದರೆಂದೇ ಅರ್ಥ. ಅದು ನಿಮ್ಮ ತಪ್ಪೂ ಅಲ್ಲ ಬಿಡಿ. ತುಲಾ ರಾಶಿಯ ಪುರುಷ ತನ್ನ ಮೊಗದಲ್ಲಿ ನಗು ಚೆಲ್ಲಿದನೆಂದರೆ, ಆತನನ್ನು ದ್ವೇಷಿಸುತ್ತಿದ್ದ ವ್ಯಕ್ತಿಯೂ ಆತನೆಡೆಗೆ ಆಕರ್ಷಿತನಾಗುತ್ತಾನೆಂದರೆ ಆತನ ಆಕರ್ಷಕ ವ್ಯಕ್ತಿತ್ವವೇ ಕಾರಣ. ತುಲಾ ರಾಶಿಯ ಪುರುಷ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಕೊಂಚ ಹೆಚ್ಚು ಯೋಚಿಸುತ್ತಾನೆ. ಯಾರಾದರೂ ಆತನ ನಿರ್ಧಾರದ ಬಗ್ಗೆ ಅಪಸ್ವರ ಎತ್ತಿದರೆ ತಕ್ಷಣ ತನ್ನ ನಿರ್ಧಾರ ಬದಲಾಯಿಸುತ್ತಾನೆ. 
 
ನಿಮಗೆ ನಿಜವಾಗಿಯೂ ತುಲಾ ರಾಶಿಯ ಪುರುಷನ ಜೊತೆಗೆ ಜಗಳ ಮಾಡಿ ಗೆಲ್ಲಬೇಕೆದಿದ್ದರೆ, ಆತ ಹೇಳುವುದಕ್ಕೆಲ್ಲಾ, ಕಿವಿ ಮುಚ್ಚಿ ಆತನಿಗೆ ಬೆನ್ನು ತಿರುಗಿಸಿ ಬಿಡಿ. ಆಗ ಆತನೇ ಒಂದು ನಗು ನಕ್ಕು ನಿಮ್ಮ ಬಳಿ ಬಂದು ಸಮಾಧಾನದ ಮಾತುಗಳನ್ನಾಡಲು ಆರಂಭಿಸುತ್ತಾನೆ. ಆಗ ನೀವು ಗೆಲ್ಲುತ್ತೀರಿ. ರೊಮ್ಯಾನ್ಸ್ ಮಟ್ಟಿಗೂ ಅಷ್ಟೇ, ತುಲಾ ರಾಶಿಯ ಪುರುಷನ ಮೊದಲ ನೋಟಕ್ಕೇ ಹುಡುಗಿಯರು ಬೀಳುತ್ತಾರೆ. ಆತನೊಂದಿಗೆ ಮಾತನಾಡಿ ಸಲುಗೆ ಬೆಳೆದು ಪ್ರೀತಿ ಮೂಡಿದ ಮೇಲೆ ಎಲ್ಲಾದರೂ, ತೊಂದರೆ ಆರಂಭವಾಗಿ ವಿರಸ ಮೂಡುತ್ತಿದ್ದರೆ, ಆತ ಮಾತ್ರ ಯಾವಾಗಲೂ ಬೇರೆಯಾಗುವ ದಿನವನ್ನು ಮುಂದೂಡತ್ತಲೇ ಇರುತ್ತಾನೆ. ಅಂತಹ ವ್ಯಕ್ತಿತ್ವ ಅವನದ್ದು. ಅಷ್ಟೇ ಅಲ್ಲ, ಪ್ರತಿ ಸಾರಿಯೂ ತನ್ನದು ಲವ್ವೋ, ಫ್ರೆಂಡ್‌ಶಿಪ್ಪೋ ಎಂಬ ಗೊಂದಲದಲ್ಲೇ ಇರುತ್ತಾನೆ. ಹಾಗಾಗಿ ಮದುವೆ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ತುಂಬ ಕಷ್ಟಪಡುತ್ತಾನೆ. ಹೀಗಾಗಿ ಹಲವರ ಮನಸ್ಸಿಗೆ ನೋವಾಗುವ ಸಂಭವವೂ ಹೆಚ್ಚು. ಬಹಳಷ್ಟು ಸಾರಿ ಇವರು ತಮಗೆ ಸರಿಸಮನಾದ, ತಮ್ಮ ಇಷ್ಟದ ಪರ್ಫೆಕ್ಟ್ ಹುಡುಗಿಯ ಹುಡುಕಾಟದಲ್ಲಿ ಮೈಮರೆಯುತ್ತಾರೆ. ಅಂತಹ ಹುಡುಗಿ ಸಿಕ್ಕಾಗ, ತಾವು ಅಂದುಕೊಂಡಂತೆ ಆಕೆ ತಮ್ಮನ್ನು ಇಷ್ಟಪಡುವುದಿಲ್ಲ ಎಂದು ತಿಳಿದಾಗ ತುಲಾ ರಾಶಿಯ ಪುರುಷರು ಭಗ್ನ ಪ್ರೇಮಿಗಳಾಗುತ್ತಾರೆ. ಆದರೂ ಜೀವನದಲ್ಲಿ ತನ್ನ ಹಣೆಬರಹ ಎಂದುಕೊಂಡು ಹಾಗೆಯೇ ಮುಂದುವರಿಯುತ್ತಾರೆ. ಆದರೆ ಇದು ಅವರ ಜೀವನದಲ್ಲಿ ಅವರ ಮನಸ್ಸಿನ ಮೇಲಾದ ದೊಡ್ಡ ಗಾಯವಾಗಿರುತ್ತದೆ.
 
ತುಲಾ ರಾಶಿಯ ಪುರುಷರು ಭಾವನಾತ್ಮಕವಾಗಿ ವಿಚಾರವನ್ನು ಅಳೆಯುವುದಿಲ್ಲ. ಪ್ರಾಕ್ಟಿಕಲ್ ಆಗಿ ಜೀವನವನ್ನು ನೋಡುತ್ತಾರೆ, ಹಾಗೆಯೇ ಒಂದು ವಿಚಾರವನ್ನು ಅಳೆಯುತ್ತಾರೆ ಕೂಡಾ. ಹಾಗೆಯೇ ಇನ್ನೊಬ್ಬರ ಖಾಸಗಿ ವಿಚಾರದಲ್ಲಿ ಅಂತಹ ದೊಡ್ಡ ಆಸಕ್ತಿಯನ್ನು ಹೊಂದಿರುವುದಿಲ್ಲ. ಹಾಗಾಗಿ ನೀವು ನಿಮ್ಮ ಖಾಸಗಿ ವಿಚಾರವನ್ನು ಆತನಲ್ಲಿ ಹೇಳಿ ಮನಸ್ಸು ಹಗುರ ಮಾಡಿಕೊಳ್ಳಬಹುದು. ಯಾಕೆಂದರೆ ಆತ, ಅದನ್ನು ಇನ್ನೊಬ್ಬರಲ್ಲಿ ಮಸಾಲೆ ಸೇರಿಸಿ ಹೇಳುವುದಿಲ್ಲ. ಅದನ್ನು ಆತ ಗೌಪ್ಯವಾಗಿಡುತ್ತಾನೆ. ಆತನನ್ನು ಸಂಪೂರ್ಣವಾಗಿ ನಂಬಬಹುದು.
 
ನಿಮ್ಮ ಕನಸುಗಳು, ಸುಪ್ತ ಬಯಕೆ, ಆಸೆ ಆಕಾಂಕ್ಷೆಗಳನ್ನು ಆತ ಅಷ್ಟೇ ಸೌಮ್ಯವಾಗಿ ಆಲಿಸಬಲ್ಲ ಈತ. ಆದರೆ ಅದೆಲ್ಲವನ್ನು ನನಸು ಮಾಡಬಲ್ಲ ಈತ ಎಂದು ಮಾತ್ರ ಅಂದುಕೊಳ್ಳಬೇಡಿ. ನೀವು ತಪ್ಪು ಮಾಡಿದಾಗಲೂ ಆತ ನಿಮ್ಮ ಪರ ವಾದಿಸಲಾರ. ಈತ ಹಣಕಾಸಿನ ವಿಚಾರದಲ್ಲಿ ಧಾರಾಳಿ.
 
ತುಲಾ ರಾಶಿಯ ಪುರುಷನ ಮನೆಯಲ್ಲಿ ಯಾವಾಗಲೂ ಬಂಧುಬಳಗ ಇದ್ದೇ ಇರುತ್ತದೆ. ಆದರೆ ತುಲಾ ರಾಶಿಯ ಪುರುಷ ತುಂಬಾ ಜನಜಂಗುಳಿಯಿರುವ ಪ್ರದೇಶವನ್ನು ಇಷ್ಟಪಡುವುದಿಲ್ಲ. ಜನರೆಂದರೆ ಇವರಿಗಿಷ್ಟವಾದರೂ, ತುಂಬ ಜನ ಒಂದೆಡೆ ಸೇರಿದರ ಇವರಿಗೆ ಅಷ್ಟು ಇಷ್ಟವಾಗುವುದಿಲ್ಲ. ತುಲಾ ರಾಶಿಯ ಪುರುಷನನ್ನು ನೀವು ಮದುವೆಯಾಗುತ್ತೀರೆಂದಾದಲ್ಲಿ ಮನೆಯನ್ನು ನೀಟಾಗಿ, ಸ್ವಚ್ಛವಾಗಿ ಇಡೋದನ್ನು ಕಲಿಯಬೇಕು. ಆತ ನಿಮಗೆ ಹಾಗಿರಬೇಕು, ಹೀಗರಬೇಕೆಂದು ಏನೂ ಹೇಳಲಿಕ್ಕಿಲ್ಲವಾದರೂ, ಅದು ಆತನ ನಡವಳಿಕೆಯಲ್ಲೇ ವ್ಯಕ್ತವಾಗುತ್ತದೆ.
 
ಹೊರಗಡೆ ತುಂಬ ಹೊತ್ತು ಇರೋದು, ಮನೆಗೆ ಬೇಗನೆ ಬಾರದಿರೋದು ಅಥವಾ ಮನೆಯಲ್ಲೇ ಇದ್ದರೆ ಇಡೀ ದಿನ ಗಡದ್ದಾಗಿ ನಿದ್ದೆ ಮಾಡೋದು ಇವರ ಕೆಲವು ಅಭ್ಯಾಸಗಳಾಗಿರುತ್ತದೆ. ಇವಿಷ್ಟು ಬಿಟ್ಟರೆ, ತುಂಬ ವಿನಯಶೀಲ, ತಾಳ್ಮೆಯ, ಪ್ರೀತಿಯ ಗಂಡನಾಗಬಲ್ಲ ಎಲ್ಲ ಲಕ್ಷಣಗಳೂ ಇವರಲ್ಲಿದೆ. ತನ್ನ ನಗುವಿನಲ್ಲೇ ಹೆಂಡತಿಯ ಕೋಪವನ್ನು ಕರಗಿಸಿಬಿಡಬಲ್ಲ ಶಕ್ತಿಯೂ ಇವರಲ್ಲಿದೆ. ನೀವು ಅವರನ್ನು ತುಂಬ ಪ್ರೀತಿಯಿಂದ ಕಾಳಜಿಯಿಂದ ಕಂಡರೆ ಅವರೂ ಕೂಡಾ ನಿಮ್ಮ ಪ್ರೀತಿಯ ಎರಡರಷ್ಟು ಪ್ರೀತಿ, ಕಾಳಜಿಯನ್ನು ನಿಮಗೆ ಧಾರೆಯೆರೆಯುವುದು ಖಂಡಿತ.
 
ಸ್ತ್ರೀ- ತುಲಾ ರಾಶಿಯ ಮಹಿಳೆ ಒಬ್ಬ ಸಂಪೂರ್ಣ ಸ್ತ್ರೀಯಾಗಿರುತ್ತಾಳೆ. ಪುರುಷನ ಲಾಜಿಕ್ ರೀತಿಯಲ್ಲೂ ಆಕೆ ವಾದಿಸಿ ಪುರುಷನನ್ನೇ ಸೋಲಿಸಬಲ್ಲಳು. ವಾದ ಎಂಬುದು ಈಕೆಗೆ ಇಷ್ಟ. ಯಾವ ಬಗೆಯಲ್ಲಾದರೂ ಈಕೆ ವಾದಿಸಬಲ್ಲಳು. ಆಕೆ ವಾದಿಸುವಾಗಲೂ ನಡುವಲ್ಲಿ ನಗುತ್ತಲೇ ಇರಬಲ್ಲಳು. ಹಾಗಾಗಿ ಇದು ಜಗಳವಾಗುವುದಿಲ್ಲ. ವಾದದಲ್ಲಿ ಗೆಲ್ಲುವ ಜೊತೆಗೆ ನಿಮ್ಮ ಹೃದಯವನ್ನೂ ಗೆದ್ದುಬಿಡಬಲ್ಲಳು.
 
ಒಂದೇ ಒಂದು ನಿರ್ಣಯಕ್ಕೆ ಅಥವಾ, ಒಂದೇ ಯೋಚನಾಧಾಟಿಗೆ ಈಕೆ ಅಂಟಿಕೊಂಡು ಬಿಡುವ ಜಾಯಮಾನದವಳಲ್ಲ. ಸ್ವಲ್ಪ ಆಡಂಬರ ತುಲಾ ರಾಶಿಯ ಮಹಿಳೆಗಿಷ್ಟ. ಕೊಳಕು, ಗಲೀಜು ಅವರಿಗಾಗುವುದಿಲ್ಲ. ಇಂಥ ಪರಿಸರದಲ್ಲಿ ಅವರು ಬೇಗ ಮೂಡ್ ಕಳೆದುಕೊಳ್ಳುತ್ತಾರೆ. ತುಲಾ ರಾಶಿಯ ಸ್ತ್ರೀಯರಲ್ಲಿ ಬಹುತೇಕರು ಮದುವೆಯ ನಂತರವೂ ಉದ್ಯೋಗ ಮುಂದುವರಿಸುತ್ತಾರೆ. ಇವರ ಪ್ರಕಾರ, ಮದುವೆಯ ನಂತರ ಇಬ್ಬರೂ ಸಂಸಾರವನ್ನೂ ಸಮನಾಗಿ ಸರಿದೂಗಿಸಿಕೊಂಡು ಹೋಗಬೇಕೆಂಬುದು.
 
ಸಂಬಂಧದಲ್ಲಿ ಇವರು ಇನ್ನೊಬ್ಬರನ್ನು ತಾವು ಕಂಟ್ರೋಲ್ ಮಾಡುವುದನ್ನು ಸಹಿಸಲಾರರು. ಗಂಡನಾದವನು ಹೆಂಡತಿಯನ್ನು ಡಾಮಿನೇಟ್ ಮಾಡಬಾರದು ಎಂಬ ಯೋಚನಾಲಹರಿ ಇವರದ್ದು. ಅವರ ಪ್ರಕಾರ, ಹೆಂಡತಿಗೂ ಇದು ಅನ್ವಯಿಸುತ್ತದೆ. ಗಂಡನ ನಿರ್ಧಾರಗಳಿಗೆ ಈಕೆ ಯಾವತ್ತೂ ಅಡ್ಡ ಬರಲಾರಳು, ಆದರೆ ಗಂಡ ತಪ್ಪು ನಿರ್ಧಾರ ತೆಗೆದುಕೊಂಡ ಅಂತನಿಸಿದರೆ, ಆತನನ್ನು ತನ್ನ ಮಾತುಗಳಿಂದಲೇ ಸರಿದಾರಿಗೆ ಕರೆತರುತ್ತಾಳೆ. ಸ್ವಲ್ಪ ಎಮೋಶನಲ್ ಆಗಿರುವ ಈಕೆ, ಸುಮ್ಮನೆ ಇನ್ನೊಬ್ಬರಿಗೆ ಕಮೆಂಟ್ ಪಾಸ್ ಮಾಡೋದಿಲ್ಲ.
 
ಈಕೆ ಸಂಶಯಾಸ್ಪದವಾಗಿ ಯಾವಾಗಲೂ ಇನ್ನೊಬ್ಬರನ್ನು ನೋಡುವುದಿಲ್ಲ. ಆಕೆ ತನ್ನ ಗಂಡನನ್ನು ಸಂಪೂರ್ಣವಾಗಿ ನಂಬುತ್ತಾಳೆ. ಸುಮ್ಮಸುಮ್ಮನೆ ಗಂಡನ ಮೊಬೈಲ್ ಎಸ್ಎಂಎಸ್ ನೋಡೋದು, ಗಂಡನ ಖಾಸಗಿ ಇಮೈಲ್ ಚೆಕ್ ಮಾಡೋದು ಇಂತಹ ಕೆಲಸ ಮಾಡೋದಿಲ್ಲ. ತನ್ನ ನಿರ್ಧಾರ, ಯೋಚನೆಗಳನ್ನು ನೇರವಾಗಿ ಹೇಳುವ ಗುಣವುಳ್ಳ ಈಕೆ, ಕೊಳಕಾಗಿ ಗಂಡ ಮನೆಗೆ ಬರೋದನ್ನು ಸಹಿಸಲಾರಳು. 
 
ಮಾತಾಡೋದು ಇವಳಿಗೆ ಇಷ್ಟ. ಆದರೆ ಆಕೆಯ ಮಾತನ್ನು ಗಮನವಿಟ್ಟು ಆಲಿಸಬೇಕು. ಪಕ್ಕಾ ಸ್ತ್ರೀತ್ವ ತುಂಬಿ ಹರಿಯುವ ಈಕೆ ಪ್ರೀತಿ, ರೊಮ್ಯಾನ್ಸ್‌ನಲ್ಲೂ ಹಿಂದೆ ಬೀಳೋದಿಲ್ಲ. ಆದರೆ ಗಂಭೀರ ಪರಿಸ್ಥಿತಿಗಳಲ್ಲಿ ಥೇಟ್ ಹುಡುಗನ ಹಾಗೆ ಪರಿಸ್ಥಿತಿಯನ್ನು ನಿಭಾಯಿಸಬಲ್ಲಳು. ಗಂಡನಿಗೆ ಪ್ರತಿ ಕೆಲಸದಲ್ಲೂ ಸಪೋರ್ಟ್ ಮಾಡುವ ಈಕೆ, ಮಕ್ಕಳ ವಿಚಾರದಲ್ಲೂ ಅಷ್ಟೆ. ಮಕ್ಕಳನ್ನು ತುಂಬ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳುವ ಜೊತೆಗೆ ಅವರಿಗೆ ಅಷ್ಟೇ ಶಿಸ್ತನ್ನೂ ಕಲಿಸಬಲ್ಲಳು.
 
ಮಕ್ಕಳ ವಿಚಾರದಲ್ಲಿ ತನ್ನ ಗಂಡ ತುಂಬ ಶಿಸ್ತು, ಗಂಭೀರತೆಯನ್ನು ಬಯಸುತ್ತಿದ್ದಾನೆಂದಾದರೆ ಆಕೆ ತನ್ನ ಮಕ್ಕಳ ಕಣ್ಣೀರೊರೆಸಲು ನಿಲ್ಲುತ್ತಾಳೆ. ಆದರೆ ತನ್ನ ಗಂಡ ಮಕ್ಕಳನ್ನು ಅತಿಯಾಗಿ ಮುದ್ದು ಮಾಡುತ್ತಿದ್ದರೆ, ತಾನೇ ಮಕ್ಕಳಿಗೆ ಶಿಸ್ತು ಕಲಿಸುವ ನಿಪುಣೆ ಈಕೆ. ಕೆಲವೊಮ್ಮೆ ತನ್ನ ನಿಯಂತ್ರಣವನ್ನೇ ತಾನು ಕಳೆದುಕೊಂಡಂತಾಗುತ್ತಾಳಾದರೂ, ಈಕೆ ಬೇಗ ಸರಿಹೊಂದುತ್ತಾರೆ. 
 
ಮಕ್ಕಳು- ತುಲಾ ರಾಶಿಯ ಮಕ್ಕಳನ್ನು ನೋಡಿದ ತಕ್ಷಣ ಎಲ್ಲರೂ ಮೊದಲು ಹೇಳೋದು ವಾಹ್ವ್, ಎಂಥಾ ಮುದ್ದು ಮಗು ಎಂದು. ತುಂಬು ಕೆನ್ನೆ, ಮುದ್ದು ಮುಗ್ಧ ಮುಖದಿಂದ ತಕ್ಷಣ ಈ ರಾಶಿಯ ಮಕ್ಕಳು ಎಲ್ಲರ ಗಮನ ಸೆಳೆಯುತ್ತಾರೆ. ಯಾವಾಗಲೂ ತಾಳ್ಮೆ, ಸಮಾಧಾನದಿಂದ ಇರುವ ಈ ಮಕ್ಕಳು ಬಹುಬೇಗನೆ ನಿರ್ಧಾರ ತೆಗೆದುಕೊಂಡು ಬಿಡುತ್ತಾರೆ. ಆದರೆ ಯಾವತ್ತೂ ಕನ್‌ಕ್ಲೂಷನ್‌ಗೆ ಬರೋದು ಮಾತ್ರ ಇವರಿಗೆ ಕಷ್ಟವಾಗುತ್ತದೆ.
 
ಈ ಮಕ್ಕಳನ್ನು ಗದರಿಸಿ ಹೇಳೋದು ಸ್ವಲ್ಪ ಕಷ್ಟ. ಗದರಿಸಿದರೆ ಇವರ ಕೈಯಿಂದ ಕೆಲಸಮಾಡಿಸೋದು ಸಾಧ್ಯವೂ ಇಲ್ಲ. ತಾಳ್ಮೆ, ಸಮಾಧಾನದಿಂದ ಹೇಳಿದರೆ ಈ ರಾಶಿಯ ಮಕ್ಕಳು ಕೇಳುತ್ತಾರೆ. ಹೇಳಿದ ಕೆಲಸ ಮಾಡುತ್ತಾರೆ. ಜೊತೆಗೆ ಇಂಥದ್ದೊಂದು ಕೆಲಸ ಮಾಡು ಎಂದು ಹೇಳಿ ಮಾಡಬಹುದಾದ ವಿಧಾನಗಳನ್ನು ಆಘಾಗ ಹೇಳುತ್ತಿದ್ದರೆ, ಬೇಗ ಕೆಲಸ ಮಾಡಿ ಮುಗಿಸುತ್ತಾರೆ. 
 
ತುಲಾ ರಾಶಿಯ ಮಕ್ಕಳು ಯಾವಾಗಲೂ ತಾಳ್ಮೆ, ಶಾಂತಿಯ ವಾತಾವರಣವನ್ನೇ ಬಯಸುತ್ತಾರೆ. ದೊಡ್ಡ ಸ್ವರ, ಒರಟು ಬೈಗುಳ, ಕೆಟ್ಟ ಡಾರ್ಕ್ ಬಣ್ಣಗಳು ಇವರಿಗೆ ಹಿಡಿಸುವುದಿಲ್ಲ. ತುಸು ಉದಾಸೀನತೆಯೂ ಈ ಮಕ್ಕಳ ಗುಣ. ಆದರೂ ಕೆಲವೊಮ್ಮೆ ತುಂಬ ಚುರುಕಾಗಿರುವ ಇವರು ಕೆಲವೊಮ್ಮೆ ಮಾತ್ರ ಆಲಸಿಗಳಂತೆ ಮಾಡುತ್ತಾರೆ. ಹಾಗಾಗಿ ಅವರು ಆಲಸಿಗಳಂತಿರುವಾಗ ಗದರದೆ, ತಾಳ್ಮೆಯಿಂದ ತಿಳಿಹೇಳಿ.
 
ತುಲಾ ರಾಶಿಯ ಮಕ್ಕಳು ವಿನಯ ಶೀಲರು. ಕೆಲವೊಮ್ಮೆ ತುಂಬ ವಾದವನ್ನೂ ಮಾಡಬಲ್ಲರು. ತುಂಬ ವಿಧೇಯರಾಗಿರುವ ಇವರು ತಮ್ಮಲ್ಲಿ ಬೇರೆಯವರು ಇಟ್ಟ ನಂಬಿಕೆಯನ್ನು ಉಳಿಸುತ್ತಾರೆ. ಆದರೆ ಬೇರೆಯವರು ತಪ್ಪು ಮಾಡಿದಾಗಲೆಲ್ಲ ಅವರ ಪರ ವಾದಿಸಬೇಕೆಂದರೆ ಇವರು ರೆಡಿಯಿರುವುದಿಲ್ಲ. ಸತ್ಯ, ನ್ಯಾಯಕ್ಕೆ ಯಾವಾಗಲೂ ಇವರು ಬದ್ಧ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :