ಬಾಕ್ಸ್ ಆಫೀಸ್‌ನಲ್ಲಿ ಗಳಿಕೆಯ ಭರವಸೆ ಮೂಡಿಸಿದ ಪ್ಯಾಡ್‌ಮ್ಯಾನ್

ರಾಮಕೃಷ್ಣ ಪುರಾಣಿಕ 

ಮುಂಬೈ, ಸೋಮವಾರ, 12 ಫೆಬ್ರವರಿ 2018 (18:35 IST)

ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್‌ಮ್ಯಾನ್ ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಆರಂಭವನ್ನು ಪಡೆಯದಿದ್ದರು ನಂತರದಲ್ಲಿ ಆವೇಗವನ್ನು ಪಡೆದುಕೊಂಡಿದೆ. ಚಲನಚಿತ್ರವು ಸಾಮಾಜಿಕ ಕಳಕಳಿ ಹೊಂದಿರುವ ಕಥಾಹಂದರವನ್ನು ಹೊಂದಿದೆ. ಈ ಮೊದಲು ಎರಡು ರಾಜ್ಯಗಳಲ್ಲಿ ನಿಷೇಧಿಸಲ್ಪಟ್ಟ ಪದ್ಮಾವತ್ ಚಿತ್ರ ನಂತರದಲ್ಲಿ ಬಿಡುಗಡೆಯಾಯಿತು. ಆದಾಗ್ಯೂ ಸಹ ಪ್ಯಾಡ್‌ಮ್ಯಾನ್‌ನ ಆರಂಭವು ಸಾಕಷ್ಟು ಉತ್ತಮವಾಗಿತ್ತು.
ಮೊದಲ ದಿನ (ಶುಕ್ರವಾರ) 10.26 ಕೋಟಿಗಳನ್ನು ಗಳಿಸಿದೆ. ಮೌಖಿಕ ಪ್ರಚಾರದಿಂದ ಎರಡನೇ ದಿನದ ಗಳಿಕೆಯು ಸುಧಾರಣೆ ಕಂಡು 13.68 ಕೋಟಿಯಷ್ಟಾಗಿದೆ. ಭಾನುವಾರ 15.56 ಕೋಟಿ ರೂಪಾಯಿಯನ್ನು ಈ ಚಿತ್ರ ಸಂಪಾದಿಸಿದೆ. ಒಟ್ಟಾರೆ 39.5 ಕೋಟಿ ತಲುಪಿದ ಗಳಿಕೆಯು ಉತ್ತಮ ಆರಂಭವನ್ನೇ ಪಡೆಯಿತು. ಈಗ ಚಲನಚಿತ್ರವು ವಾರದ ದಿನಗಳಲ್ಲಿ ಸ್ಥಿರವಾದ ಗಳಿಕೆಯನ್ನು ಕಾಯ್ದುಕೊಳ್ಳಬೇಕಿದೆ.
 
ಕಡಿಮೆ ವೆಚ್ಚದಲ್ಲಿ ಪ್ಯಾಡ್‌ ತಯಾರಿಸುವ ಯಂತ್ರವನ್ನು ಕಂಡುಹಿಡಿದ ತಮಿಳುನಾಡು ಮೂಲದ ಅರುಣಾಚಲಂ ಮುರುಗನಾಥನ್ ಜೀವನ ಕಥೆಯನ್ನು ಆಧರಿಸಿರುವ ಈ ಚಿತ್ರ ಮಹಿಳೆಯರಲ್ಲಿ ಪ್ಯಾಡ್‌ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿರ್ದೇಶಕ ಬಾಲ್ಕಿ ಯಶಸ್ವಿಯಾಗಿದ್ದಾರೆ. ಅಕ್ಷಯ್ ಕುಮಾರ್ ತಮ್ಮ ಗಮನಾರ್ಹ ನಟನೆಯನ್ನು ಮತ್ತೆ ಸಾಬೀತು ಪಡಿಸಿದ್ದಾರೆ. ವೈಭವೀಕರಣವಿಲ್ಲದ ಚಿತ್ರದಲ್ಲಿ ರಾಧಿಕಾ ಆಪ್ಟೆ ಮತ್ತು ಸೋನಂ ಕಪೂರ್ ಕೂಡಾ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಉದ್ಯಮಶೀಲತೆ ಮತ್ತು ಸಾಮಾಜಿಕ ಕಳಕಳಿ ಕುರಿತು ಪ್ರೇರಣೆ ನೀಡಬಹುದಾದ ಜೀವನಚರಿತ್ರೆಯನ್ನು ಹೊಂದಿದೆ ಈ ಚಲನಚಿತ್ರ. ನೈಜ ಜೀವನವನ್ನು ಆಧರಿಸಿರುವ ಈ ಚಿತ್ರಕ್ಕೆ ಸಿನಿಮೀಯ ಸ್ಪರ್ಶವನ್ನು ಕೊಟ್ಟಿದ್ದರೂ ಸಹ ನೈಜ ಜೀವನದ ಕಥೆಯ ಮೇಲೆ ಹೆಚ್ಚು ಬದಲಾವಣೆಗಳಾಗಿಲ್ಲ.
ದುಬಾರಿ ಶುಚಿಯಾದ ಸ್ಯಾನಿಟರಿ ನ್ಯಾಪ್ಕಿನ್ ಬಳಕೆಗೆ ಮನೆಯ ಮಹಿಳೆಯರನ್ನು ಓಲೈಸುವಲ್ಲಿ ವಿಫಲನಾಗುವ ಕಥಾನಾಯಕ, ತಾನೇ ಅವುಗಳನ್ನು ಕಡಿಮೆ ಬೆಲೆಯಲ್ಲಿ ತಯಾರಿಸುವ ಪ್ರಯತ್ನ ಮಾಡುತ್ತಾನೆ. ಅವುಗಳ ಪ್ರಯೋಗಕ್ಕಾಗಿ ಹೆಂಡತಿ (ರಾಧಿಕಾ ಆಪ್ಟೆ) ಮತ್ತು ತಂಗಿಯರಿಗೆ ಹೇಳುತ್ತಾನೆ. ತಾನು ತಯಾರಿಸಿದ ಉತ್ಪನ್ನ ವಿಫಲವಾಗಿದ್ದು ತಿಳಿದು ಮರಳಿ ಪ್ರಯತ್ನಿಸುತ್ತಾನೆ, ಆದರೆ ಹಲವು ಬಾರಿಯ ವಿಫಲದ ನಂತರ ಹೆಂಡತಿಯೂ ಅವುಗಳ ಪ್ರಯೋಗಕ್ಕೆ ನಿರಾಕರಿಸುತ್ತಾಳೆ. ನಂತರ ತನ್ನ ಪ್ರಯೋಗಕ್ಕಾಗಿ ವೈದ್ಯಕೀಯ ವಿದ್ಯಾರ್ಥಿನಿಯರನ್ನು ಸಂಪರ್ಕಿಸುತ್ತಾನೆ. ಅಲ್ಲಿಯೂ ಸಫಲನಾಗದೇ ಹೋಗುತ್ತಾನೆ. ಹೀಗೆ ಮುರುಗನಾಥನ್ ಅವರು ಪಟ್ಟ ಕಷ್ಟ ಹಾಗೂ ಅನುಭವಿಸಿದ ಅವಮಾನಗಳನ್ನು ಒಂದೊಂದಾಗಿ ಕಥಾ ಎಳೆಗಳನ್ನಾಗಿ ಬಿಚ್ಚಿಡುತ್ತಾ ಕಥೆ ಮುಂದೆ ಸಾಗುತ್ತದೆ. 
 
ನಂತರ ಎಲ್ಲರೂ ಅವನನ್ನು ದೂರವಿಡುವಲ್ಲಿ ನಿರ್ಧರಿಸಿದಾಗ, ಸ್ವತಃ ಅವುಗಳನ್ನು ತಾನೇ ಉಪಯೋಗಿಸಿ ಸ್ವಯಂ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಾನೆ. ಅಲ್ಲಿಗೆ ಅವನನ್ನು ಸಹಿಸಿಕೊಳ್ಳದ ಊರಿನ ಜನ ಅವನನ್ನು ಊರಿಂದ ಬಹಿಷ್ಕಾರ ಹಾಕುತ್ತಾರೆ. ಅಲ್ಲಿಂದ ಹೊರಟು ತನ್ನ ನಿರಂತರ ಪ್ರಯತ್ನವನ್ನು ಮುಂದುವರೆಸುತ್ತಾನೆ. ಅವನಿಗೆ ಶಿಕ್ಷಣದ ಅನಿವಾರ್ಯವಾದಾಗ ಪ್ರೊಫೆಸರ್ ಒಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅಲ್ಲಿಯೂ ಅವಮಾನ ಮುಂದುವರಿಯುತ್ತದೆ, ಆದರೆ ಅಲ್ಲಿಯೇ ನಾಯಕನ ಸಾಧನೆಗೆ ಮಾರ್ಗವೊಂದು ದೊರೆಯುತ್ತದೆ ಮತ್ತು ಕಥೆಗೆ ಒಂದು ತಿರುವು ಸಿಗುತ್ತದೆ. ಅಲ್ಲಿ ಪ್ಯಾಡ್‌ಗೆ ಬೇಕಾದ ಕಚ್ಚಾವಸ್ತು ಅದರ ಉತ್ಪಾದನೆಯ ಕುರಿತು ತಿಳಿದುಕೊಳ್ಳುತ್ತಾನೆ. ಅಲ್ಲಿಯವರೆಗೂ ಪ್ಯಾಡ್ ಹಿಂದೆ ಓಡುತ್ತಿದ್ದ ನಾಯಕನಿಗೆ ಅರಿವಾಗಿದ್ದು, ತಾನು ತಯಾರಿಸಬೇಕಾಗಿದ್ದು ಪ್ಯಾಡ್ ಅಲ್ಲ, ಅದನ್ನು ತಯಾರಿಸುವ ಯಂತ್ರವನ್ನು ಕಂಡುಹಿಡಿಯುವುದು. ಅನಿವಾರ್ಯವಾಗಿ ಸಾಲದ ಸುಳಿಗೆ ಸಿಲುಕುತ್ತಾನೆ. ಅನಿವಾರ್ಯ ಕಾರಣಕ್ಕಾಗಿ ಸಿಕ್ಕ ಮಹಿಳೆಯಿಂದ (ಸೋನಂ ಕಪೂರ್), ಅವನ ಪ್ರಯತ್ನಕ್ಕೆ ಯಶಸ್ಸು ದೊರೆತಾಗ ಆಗುವ ಆನಂದವನ್ನು ಹಂಚಿಕೊಳ್ಳಲು ಮಡದಿಗೆ ದೂರವಾಣಿ ಮಾಡಿದಾಗ ಮತ್ತೆ ಕಾದಿತ್ತು ನಿರಾಸೆ. ಅದೇ ಸಮಯಕ್ಕೆ ಐಐಟಿಯಲ್ಲಿ ಸಂಶೋಧನಾ ಪ್ರದರ್ಶನದಲ್ಲಿ ಬಹುಮಾನ ಪಡೆದುಕೊಂಡಾಗ ಅವನ ಸಂಶೋಧನೆಯು ಜಗತ್ತಿಗೆ ಪರಿಚಯಿಸಲ್ಪಡುತ್ತದೆ.
 
ನಂತರ ಯಶಸ್ಸಿಗೆ ಕಾರಣವಾದ ಮಹಿಳೆಯ (ಸೋನಂ ಕಪೂರ್) ಸಹಾಯ ಮತ್ತು ಅವಳ ಸಲಹೆಯ ಮೇರೆಗೆ ತನ್ನ ಉತ್ಪನ್ನವನ್ನು ಬಹುತೇಕ ಯಶಸ್ವಿಗೊಳಿಸುತ್ತಾನೆ. ಈ ಮಧ್ಯೆ ಅನೇಕ ವ್ಯಾಪಾರಿಗಳು ವ್ಯಾಪಾರದ ದೃಷ್ಟಿಯಿಂದ ಯಂತ್ರದ ಪೇಟೆಂಟ್ ಅನ್ನು ಖರೀದಿಸಲು ಮುಂದೆ ಬಂದರೂ ಕಥಾನಾಯಕ ಅದನ್ನು ದೇಶದ ಮಹಿಳೆಯರಿಗೆ ಮತ್ತು ಉದ್ಯಮಶೀಲತೆಗಾಗಿ ಬಳಸಲು ನಿರ್ಧರಿಸುತ್ತಾನೆ. ಹೀಗೆ ಹಲವಾರು ಊರುಗಳಿಗೆ ಹೋಗಿ ತನ್ನ ಯಂತ್ರವನ್ನು ಮಹಿಳೆಯರಿಗೆ ಉದ್ಯೋಗ ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ದೃಢ ಸಂಕಲ್ಪ ಮಾಡುತ್ತಾ ಮುನ್ನಡೆಯುತ್ತಾನೆ. ಈ ಮಧ್ಯೆ ಯುಎಸ್ಎನಲ್ಲಿ ಮಾಡಿದ ನಾಯಕನ ಬಟ್ಲರ್ ಇಂಗ್ಲಿಷ್ ಭಾಷಣವು ಚಿತ್ರರಸಿಕರನ್ನು ನಗೆಗಡಲಲ್ಲಿ ತೇಲಿಸಲಿದೆ.
 
ಹೀಗೆ ಕಥೆ ಹಲವು ರೀತಿಯ ತಿರುವುಗಳು, ಹಾಸ್ಯ, ಸುಖ, ಕಷ್ಟ, ನೋವುಗಳನ್ನು ಹೊಂದಿದೆ. ಚಿತ್ರವು ಉದ್ಯಮಶೀಲತೆ ಮತ್ತು ಸಾಮಾಜಿಕ ಕಳಕಳಿಯನ್ನು ಉಂಟು ಮಾಡುವಲ್ಲಿ ಯಶಸ್ವಿಯಾಗಿದೆ.
 
ಈ ಸಾಧನೆಗೆಲ್ಲಾ ಹೆಂಡತಿಯೇ ಸ್ಫೂರ್ತಿ ಎಂದು ಹೇಳುವ ಮುರುಗನಾಥನ್ ತಮ್ಮ ಹೆಂಡತಿಯೊಡನೆ ಈಗ ಸಂತೋಷವಾಗಿದ್ದಾರೆ. ಕೋಟ್ಯಾಧಿಪತಿಯಾಗುವ ಎಲ್ಲ ಅವಕಾಶಗಳಿದ್ದರೂ, ಅದನ್ನು ತಿರಸ್ಕರಿಸಿದ ಮುರುಗನಾಥನ್ ಅವರು ಸ್ವ-ಸಹಾಯ, ಸ್ತ್ರೀಶಕ್ತಿ ಸಂಘಗಳಿಗೆ ಕಡಿಮೆ ದರದಲ್ಲಿ ಯಂತ್ರಗಳನ್ನು ಒದಗಿಸುತ್ತಿದ್ದಾರೆ. ಅವರ ಜೀವನದ ಕಥೆಯನ್ನು ಪ್ಯಾಡ್‌ಮ್ಯಾನ್ ಚಲನಚಿತ್ರದ ಮೂಲಕ ನೈಜ ಶೈಲಿಯಲ್ಲಿ ಚಿತ್ರಿಸಲಾಗಿದೆ. ಚಿತ್ರಮಂದಿರದಿಂದ ಹೊರಬರುವಾಗ ಪ್ರತಿಯೊಬ್ಬರ ಮನದಲ್ಲೂ ಏನನ್ನಾದರೂ ಸಾಧಿಸುವ ಉತ್ಸಾಹ ಕಂಡುಬರಲಿದೆ. ಹಲವರು ಈ ಚಲನಚಿತ್ರದ ಪ್ರೇರಣೆಯಿಂದ ಉದ್ಯಮಶೀಲತೆಯಲ್ಲಿ ಆಸಕ್ತಿ ತೋರುವುದಂತೂ ಖಂಡಿತ. ಅದರಂತೆಯೇ ಎಲ್ಲರೂ ತಮ್ಮ ಕ್ಷೇತ್ರಗಳಲ್ಲಿ ಮುರುಗನಾಥನ್ ಆಗಲಿ ಎಂಬುವುದೇ ನಮ್ಮ ಆಶಯ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪ್ರಭಾಸ್ ಜೊತೆಗಿನ ಮದುವೆ ಕುರಿತ ಪ್ರಶ್ನೆಗೆ ಅನುಷ್ಕಾ ಪ್ರತಿಕ್ರಿಯೆ ಏನು ಗೊತ್ತಾ?

ದೀಪ್‌ವೀರ್ (ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್) ಅಭಿಮಾನಿಗಳು ಮಾತ್ರವಲ್ಲ, ಪ್ರನುಷ್ಕಾ (ಪ್ರಭಾಸ್ ...

news

ಸನ್ನಿ ಲಿಯೋನ್ ತಮ್ಮದೇ ಕಾಸ್ಮೆಟಿಕ್ ಬ್ರ್ಯಾಂಡ್ ಸ್ಥಾಪಿಸುತ್ತಿದ್ದಾರಂತೆ..!?

ಸನ್ನಿ ಲಿಯೋನ್ ತಮ್ಮ ಸ್ಟಾರ್‌ಸ್ಟ್ರಕ್ ಎನ್ನುವ ಕಾಸ್ಮೆಟಿಕ್ ಬ್ರ್ಯಾಂಡ್ ಶಿಘ್ರದಲ್ಲೇ ಬರಲಿದೆ ಮತ್ತು ಅದು ...

news

ಲೇಟೆಸ್ಟ್ ಇಂಟರ್ನೆಟ್ ಸೆನ್ಸೇಷನ್: ಒಂದೇ ದಿನದಲ್ಲಿ ನ್ಯಾಷನಲ್ ಕ್ರಶ್ ಆದ ಪ್ರಿಯಾ ಪ್ರಕಾಶ್ ವಾರಿಯರ್

ಮಲೆಯಾಳಂ ಯುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲ. ಆದರೆ ಈ ಚಂದದ ಹುಡುಗಿ ...

news

ರಾಧಿಕಾ ಪಂಡಿತ್ ಮಡಿಲಿಗೆ ಬಂತು ಮುದ್ದು ಕಂದಮ್ಮ!

ಬೆಂಗಳೂರು: ಪತಿ ರಾಕಿಂಗ್ ಸ್ಟಾರ್ ಯಶ್ ರನ್ನು ಬಿಟ್ಟು ಅಮೆರಿಕಾ ವಿಮಾನವೇರಿ ಅಣ್ಣನ ಮನೆಗೆ ತೆರಳಿರುವ ...

Widgets Magazine