ಕತ್ರಿನಾಳ ಝೆರಾಕ್ಸ್ ಕಾಪಿ ಝರೀನ್ ಸಲ್ಮಾನ್‌ಗೆ ನಾಯಕಿ!

Veer
IFM
ಸಲ್ಮಾನ್ ಖಾನ್ ಅವರ ಮುಂಬರುವ ವೀರ್ ಚಿತ್ರದಲ್ಲಿ ಕ್ಯೂಟ್ ಹುಡುಗಿ ಝರೀನ್ ಖಾನ್ ಎಂಬಾಕೆ ನಾಯಕಿಯಾಗಿದ್ದಾಳೆ. ಹೊಸದಾಗಿ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿರುವ ಈ ಝರೀನ್ ಖಾನ್ ಈಗ ಸಾಕಷ್ಟು ಹವಾ ಸೃಷ್ಟಿಸುತ್ತಿದ್ದಾಳೆ. ಹೇಳಿ ಕೇಳಿ ಸಲ್ಮಾನ್ ಖಾನ್ ತನ್ನ ವೀರ್ ಚಿತ್ರದ ಮೂಲಕ ಹೊಸ ಲುಕ್‌ನಲ್ಲಿ ಭಾರೀ ಹೈಪ್ ಸೃಷ್ಟಿಸುತ್ತಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯೂ ಆಗಲಿದೆ. ಇಂಥ ಸಂದರ್ಭದಲ್ಲಿ ಈಕೆಯ ಹೆಸರೂ ಕೂಡಾ ಸಾಮಾನ್ಯ ಎಂದರೆ ನಿಮ್ಮ ಊಹೆ ತಪ್ಪು. ವಿಶೇಷವೆಂದರೆ ಈ ಝರೀನ್ ಖಾನ್ ಥೇಟ್ ಸಲ್ಮಾನ್ ಖಾನ್ ಅವರ ಮನದನ್ನೆ ಕತ್ರಿನಾ ಕೈಫ್ ಥರಾನೇ ಇದ್ದಾಳೆ!

ಹೌದು. ಈಕೆ ಝರೀನ್ ಖಾನ್. ಮೂಗು, ಬಿಳಿಯ ಮೈಬಣ್ಣ, ನೀಳ ಕಾಯ, ತೆಳು ಮೈಕಟ್ಟು ನೋಡಿದರೆ ಮುಖದ ಶೇಪ್ ಎಲ್ಲವೂ ಥೇಟ್ ಕತ್ರಿನಾ ಕೈಫ್ ಥರಾನೇ ಇದೆ. ಅಂದು ಐಶ್ವರ್ಯಾ ರೈಯನ್ನು ಪ್ರೀತಿಸಿ ಕೈಕೊಟ್ಟ ಕೆಲವೇ ದಿನಗಳಲ್ಲಿ ಥೇಟ್ ಐಶ್ವರ್ಯಾ ರೈಯಂಥ ಸ್ನೇಹ ಉಲ್ಲಾಳ್ ಎಂಬ ಹುಡುಗಿಯನ್ನು ನಮ್ಮ ಕರ್ನಾಟಕದಿಂದ ಕರೆತರಿಸಿ ತನ್ನ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ ಸಲ್ಮಾನ್ ಖಾನ್ ಈಗ ಕತ್ರಿನಾಳಂಥ ಹುಡುಗಿಯನ್ನೇ ಕರೆತರಲು ಕಾರಣವೇನು? ಈಗ ಕತ್ರಿನಾ ಕೂಡಾ ಕೈಕೊಟ್ಟಳೇ ಎಂದು ಡೌಟು ಪಡಬೇಡಿ. ಇದು ಕೇವಲ ಕಾಕತಾಳೀಯ.
IFM


ಸಲ್ಮಾನ್‌ಗೆ ಮಾತ್ರ ಝರೀನ್ ಖಾನ್ ಥೇಟ್ ಕತ್ರಿನಾಳಂತೆ ಇದ್ದಾಳೆ ಎಂದರೆ ಸಿಟ್ಟು ಬರುತ್ತದೆ. 'ಕತ್ರಿನಾ ಥರ ಬೆಳ್ಳಗೆ ಹಾಗೂ ಉದ್ದವಾದ ಶಾರ್ಪ್ ಮೂಗು ಇದೆ ಬಿಟ್ಟರೆ ಕತ್ರಿನಾಗೂ ಝರೀನ್‌ಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲದೆ, ಈಗಷ್ಟೆ ಕಾಲಿಟ್ಟ ನಟಿಯೊಬ್ಬಳನ್ನು ಬಾಲಿವುಡ್ಡಿನ ಖ್ಯಾತ ನಟಿಯೊಂದಿಗೆ ಹೋಲಿಸುವುದು ಸಲ್ಲ' ಎಂದು ಉಪದೇಶಾಮೃತ ಸುರಿಸಿದ್ದಾನೆ. ಆದರೂ ಜನರು ಮಾತ್ರ ವೀರ್ ಹೀರೋಯಿನ್ ಥೇಟ್ ಕತ್ರಿನಾರಂತೆ ಅನ್ನುತ್ತಾ ಝರೀನ್ ಹೊಗಳೋದನ್ನು ನಿಲ್ಲಿಸಿಲ್ಲ. ಕೇವಲ ಜನರು ಮಾತ್ರವಲ್ಲ. ಬಾಲಿವುಡ್ಡಿಗೆ ಬಾಲಿವುಡ್ಡೇ ಈಕೆಯನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟಿದೆ. ಅರೆ ಈಕೆ ಕತ್ರಿನಾಳ ಝೆರಾಕ್ಸ್ ಕಾಪಿಯಂತೇ ಇದ್ದಾಳಲ್ಲ ಎಂದು ಬಹುತೇಕರು ಅಂದಿದ್ದಾರೆ. ಇದರಿಂದ ಝರೀನ್ ಉಬ್ಬಿಹೋಗಿದ್ದಾಳೆ. ''ನನ್ನನ್ನು ಕತ್ರಿನಾಳಂಥ ಅತ್ಯಂತ ಸುಂದರಿ, ಸೆಕ್ಸೀ ನಟಿಯಂತೆ ನಾನಿದ್ದೇನೆಂದು ನನ್ನನ್ನು ಆಕೆಗೆ ಹೋಲಿಸುತ್ತಿರುವುದು ನನಗೆ ಸಂದ ಹೊಗಳಿಕೆ ಅಂತಲೇ ನಾನು ಅಂದುಕೊಂಡಿದ್ದೇನೆ. ಕತ್ರಿನಾಳನ್ನು ನಾನು ಬಹಳ ಸಾರಿ ಭೇಟಿಯಾಗಿದ್ದೇನೆ. ಆಕೆಯೆಷ್ಟು ಸುಂದರವಾಗಿದ್ದಾಳೆಂದರೆ ಪ್ರತಿ ಸಾರಿ ಆಕೆಯೆಡೆಗೆ ನೋಡಿದಾಗಲೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಅದ್ಭುತ ಸುಂದರಿ ಆಕೆ. ಆಕೆಯಿಂದ ಬೇರೆಡೆಗೆ ದೃಷ್ಟಿಯನ್ನು ಹರಿಸಲಾಗುವುದಿಲ್ಲ. ಆಕೆಯನ್ನೇ ನೋಡುತ್ತಿರಬೇಕೆನ್ನಿಸುವಷ್ಟು ಸುಂದರಿ ಕತ್ರಿನಾ. ತುಂಬಾ ಜನರು ನನ್ನ ಬಳಿ ಬಂದು, ನೀನು ಕತ್ರಿನಾಳಂತೆಯೇ ಇದ್ದಿ ಎಂದು ಹೇಳಿದ್ದಾರೆ. ಆದರೆ ಪ್ರಾಮಾಣಿಕವಾಗಿ ಹೇಳೋದಾದ್ರೆ ನಾನು ಕನ್ನಡಿ ಮುಂದೆ ನಿಂತು ನೋಡಿದರೆ ನಾನು ಕತ್ರಿನಾಳಂತೆ ಕಾಣಿಸುವುದೇ ಇಲ್ಲ. ನಾನು ಕತ್ರಿನಾಳಂತಿದ್ದೇನೆ ಎಂದು ನನಗನಿಸಿಲ್ಲ'' ಎಂದಿದ್ದಾಳೆ.
Zarin Khan
IFM


''ನಾನು ಪಕ್ಕಾ ಮುಂಬೈ ಹುಡುಗಿ. ಸಾಮಾನ್ಯ ಬಾಲ್ಯವನ್ನು ಕಳೆದವಳು ನಾನು. ಸ್ಕೂಲ್‌ನಲ್ಲಿ ತುಂಬ ಬ್ರಿಲಿಯಂಟ್ ಆಗಿದ್ದರಿಂದ ಟೀಚರ್‌ಗಳೆಲ್ಲರ ಮುದ್ದಿನ ಹುಡುಗಿಯಾಗಿದ್ದೆ. ಪ್ರತಿ ಬಾರಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆಯುತ್ತಿದ್ದೆ. ಹಾಗಾಗಿ ನನ್ನ ಅಮ್ಮನಿಗೆ ನಾನು ವೈದ್ಯೆಯಾಗಬೇಕೆಂಬ ಕನಸಿತ್ತು. ನಾನು ಕೂಡಾ ಆ ದಿಸೆಯಲ್ಲೇ ಪ್ರಯತ್ನ ಪಡುತ್ತಿದ್ದೆ. ಆದರೆ, ಅದೇ ಸಮಯಕ್ಕೆ ನಮ್ಮ ಕೆಲವು ಕೌಟುಂಬಿಕ ಕಾರಣಗಳಿಂದಾಗಿ ನಮಗೆ ಹಣದ ತೊಂದರೆಯಿಂದಾಗಿ ಅಂಕ ಪಡೆದರೂ ವೈದ್ಯಕೀಯ ಓದಲಾಗಲಿಲ್ಲ. ಹೀಗಾಗಿ ನನ್ನ ಓದು ಅರ್ಧಕ್ಕೇ ನಿಂತಿತು. ಇಡೀ ಸಂಸಾರದ ಭಾರ ನನ್ನ ಹೆಗಲ ಮೇಲೆ ಬಿತ್ತು. ಅನಿವಾರ್ಯವಾಗಿ ನಾನು ಕೆಲಸಕ್ಕೆ ಸೇರಿದೆ.''

''ಕಾಲೇಜಿನಲ್ಲಿ ಓದುತ್ತಿದ್ದಾಗ ನಾನು 100 ಕೆಜಿ ತೂಕವಿದ್ದೆ. ಜಂಕ್ ಫುಡ್ ನನಗೆ ಇಷ್ಟವಿತ್ತು. ಹಾಗಾಗಿ ಸರಿಯಾಗಿ ತಿನ್ನುತ್ತಿದೆ. ಆದರೆ ಮನೆಯ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಾಗ ನಾನು ಕೆಲಸ ಮಾಡಲು ತೊಡಗಿದೆ. ಲೈಫ್ ಬಗ್ಗೆ ಸೀರಿಯಸ್‌ನೆಸ್ ಬಂತು. ನನ್ನ ಓದು ಅರ್ಧಕ್ಕೇ ನಿಂತಿದ್ದರಿಂದ ನನಗೆ ಉತ್ತಮ ಸಂಬಳವಿರುವ ಕೆಲಸ ಸಿಗಲು ಸಾಧ್ಯವೇ ಇರಲಿಲ್ಲ. ಮೊದ ಮೊದಲು ಹೇಗೋ ಕೆಲಸದಿಂದ ಮನೆ ಸಂಭಾಳಿಸುತ್ತಿದ್ದರೂ, ನಂತರ ಮಾಡೆಲಿಂಗ್ ಜಗತ್ತು ನನ್ನನ್ನು ಸೆಳೆಯಿತು. ಆದರೆ ನಾನು ತುಂಬ ದಪ್ಪ ಇದ್ದೆ. ಆಗಿನಿಂದಲೇ ತೆಳ್ಳಗಾಗಲು ತೀರ್ಮಾನಿಸಿ, ಸ್ವೀಟ್ಸ್, ಚಾಟ್ಸ್, ಜಂಕ್‌ಫುಡ್ ಎಲ್ಲಾ ಬಿಟ್ಟೆ. ತೆಳ್ಳಗಾಗಿ ಮಾಡೆಲಿಂಗ್‌ಗೆ ಕಾಲಿಟ್ಟೆ. ಸಣ್ಣ ಪುಟ್ಟ ಮಾಡೆಲಿಂಗ್ ಮಾಡುತ್ತಾ ಇದ್ದೆ. ಮನೆ ಸಂಭಾಳಿಸಲು ದುಡ್ಡು ಸಾಕಾಗುತ್ತಿತ್ತು. ತಂಗಿ, ಅಮ್ಮ ಮನೆಯಲ್ಲಿದ್ದರು. ಆದರೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಅದೊಂದು ಸಡನ್ ಎಂಟ್ರಿ'' ಎನ್ನುತ್ತಾಳೆ ಝರೀನ್.
Veer
IFM


ಹಾಗಾದರೆ ವೀರ್ ಚಿತ್ರದಲ್ಲಿ ಅವಕಾಶ ದಕ್ಕಿದ್ದು ಹೇಗೆ ಎಂದರೆ, ಅಷ್ಟೇ ಇಂಟರೆಸ್ಟಿಂಗ್ ಕಥೆ ಹೇಳ್ತಾಳೆ ಝರೀನ್. ''ನಾನು ಮಾಡೆಲಿಂಗ್ ಲೋಕದಲ್ಲಿಯೇ ಹಾಯಾಗಿದ್ದೆ. ಆದರೆ ಅದೊಂದು ದಿನ ನಾನು ಕೆಲಸದಲ್ಲಿದ್ದಾಗ ಮುಕ್ತಾ ಆರ್ಟ್ಸ್ ಎಂಬಲ್ಲಿಂದ ನನಗೊಂದು ಕರೆ ಬಂತು. ಕೂಡಲೇ ಯುವರಾಜ್ ಸಿನಿಮಾ ಶೂಟಿಂಗ್ ನಡೆಯುತ್ತಿರುವ ಇಂಥ ಸ್ಥಳಕ್ಕೆ ಬನ್ನಿ ಎಂದರು ಕರೆ ಮಾಡಿದವರು. ನಾನು ಮಾಡೆಲಿಂಗ್ ಲೋಕದಲ್ಲಿ ಸಾಕಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೆ. ಹಾಗಾಗಿ ಅವರಿಗೆ ತುಂಬ ಪ್ರಶ್ನೆ ಕೇಳದೆ ಕರೆ ಮಾಡಿದವರು ಹೇಳಿದ ಸ್ಥಳಕ್ಕೆ ಹೋದೆ. ನೋಡಿದರೆ ಅಲ್ಲಿ ಸಲ್ಮಾನ್ ಖಾನ್ ಇದ್ದರು. ನಾನು ಸಲ್ಮಾನ್‌ನ ದೊಡ್ಡ ಫ್ಯಾನ್. ಸ್ವಲ್ಪ ಹೊತ್ತಿನ ನಂತರ ಸಲ್ಮಾನ್ ನನ್ನ ಬಳಿ ಬಂದರು. ನನಗಾದ ಖುಷಿಗೆ ಪಾರವೇ ಇರಲಿಲ್ಲ. ನಾನು ಆತನ ಫ್ಯಾನ್ ಎಂದು ಹೇಳಿ ಆಟೋಗ್ರಾಫ್ ಕೇಳಿದೆ. ಅವರು ಸಹಿ ಮಾಡಿದರು. ಜೊತೆಗೆ ನಗುತ್ತಾ, 'ಶೀಘ್ರದಲ್ಲೇ ನೀನೂ ಕೂಡಾ ನನ್ನ ಹಾಗೇ ಬೇರೆಯವರ ಆಟೋಗ್ರಾಫ್‌ಗಳಿಗೆ ಸಹಿ ಮಾಡುತ್ತಿ' ಎಂದರು. ನನಗೆ ಅರ್ಥವಾಗಲಿಲ್ಲ. ನಾನು ಅಲ್ಲಿಂದ ಬಂದೆ. ಆದರೆ ಕೆಲವೇ ದಿನಗಳಲ್ಲಿ ನನಗೆ ವೀರ್ ಚಿತ್ರಕ್ಕಾಗಿ ಆಫರ್ ಬಂತು'' ಎನ್ನುತ್ತಾಳೆ ಝರೀನ್.

ಇಂತಿಪ್ಪ ಝರೀನ್ ಖಾನ್ ಈ ಹಿಂದೆಯೇ ಸಾಕಷ್ಟು ಸಿನಿಮಾ ನೋಡಿದ್ದಾಳೆ. ಬಾಲಿವುಡ್ಡಿನಲ್ಲಿ ಮುಂದುವರಿವ ಆಸೆ ಇದೆ. ರೇಖಾ ಅಂದರೆ ತುಂಬ ಇಷ್ಟವಂತೆ ಈಕೆಗೆ.ಇದರಲ್ಲಿ ಇನ್ನಷ್ಟು ಓದಿ :  

ತಾರಾ ಪರಿಚಯ

ಕನ್ನಡತಿ ದೀಪಿಕಾಳ ಬಾಲಿವುಡ್ ಹೆಜ್ಜೆಗಳು

ಕನ್ನಡತಿ ದೀಪಿಕಾ ಪಡುಕೋಣೆ ಮುಂಬೈಗೆ ಹಾರಿ ಬಾಲಿವುಡ್‌ನಲ್ಲಿ ಭವಿಷ್ಯದ ತಾರೆಯಾಗುವ ಎಲ್ಲ ಲಕ್ಷಣಗಳನ್ನೂ ...

ಬಾಲಿವುಡ್ಡಿನ ಝೀರೋ ಫಿಗರ್ ಕರೀನಾ ಕಪೂರ್

ಕಪೂರ್ ಕುಡಿ ಕರೀನಾ ಕಪೂರ್ ಸದ್ಯದ ಬಾಲಿವುಡ್‌ನ ಭಾರೀ ಬೇಡಿಕೆಯ ಪ್ರತಿಭಾವಂತ ನಟಿ. ಮೊದಮೊದಲು ಚಿತ್ರ ...

'ಸೂರ್ಯವಂಶ'ದ ಇಷಾ ಕೊಪ್ಪೀಕರ್‌ಗೆ ಕೂಡಿ ಬಂದ ಕಂಕಣ ಭಾಗ್ಯ!

ಕನ್ನಡದಲ್ಲಿ ರಮೇಶ್ ಜೊತೆಗೆ 'ಹೂಂ ಅಂತೀಯಾ ಊಹೂಂ ಅಂತೀಯಾ', ವಿಷ್ಣುವರ್ಧನ್ ಜೊತೆಗೆ 'ಸೂರ್ಯವಂಶ', ...

ಖ್ಯಾತ ಹಿನ್ನೆಲೆ ಗಾಯಕ ಮನ್ನಾ ಡೇಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ

ನವದೆಹಲಿ: 'ಶೋಲೇ' ಚಿತ್ರದ 'ಏ ದೋಸ್ತೀ ಹಮ್ ನಹೀ...'ಯಾಗಲೀ, 'ಪಡೋಸನ್' ಚಿತ್ರದ 'ಏಕ್ ಚತುರ ನಾರ್...' ...

Widgets Magazine
Widgets Magazine