ವಿರಾಟ್ ಕೊಹ್ಲಿ ವಿಶ್ವದಾಖಲೆಯ ಜತೆಗೆ ಟೀಂ ಇಂಡಿಯಾಗೆ ಗೆಲುವಿನ ನಗೆ

ಪೋರ್ಟ್ ಆಫ್ ಸ್ಪೇನ್| Krishnaveni K| Last Modified ಸೋಮವಾರ, 12 ಆಗಸ್ಟ್ 2019 (08:39 IST)
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು  ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಭಾರತ ಡಕ್ ವರ್ತ್ ಲೂಯಿಸ್ ನಿಯಮದನ್ವಯ 59 ರನ್ ಗಳಿಂದ ಗೆದ್ದುಕೊಂಡಿದೆ.

 
ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ವಿರಾಟ್ ಕೊಹ್ಲಿಯ ಶತಕದ ಅಬ್ಬರಿಂದಾಗಿ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 279 ರನ್ ಗಳಿಸಿತು. ಏಕದಿನ ಕ್ರಿಕೆಟ್ ನಲ್ಲಿ 42 ನೇ ಶತಕ ಬಾರಿಸಿದ ಕೊಹ್ಲಿ ವಿಂಡೀಸ್ ವಿರುದ್ಧ ಗರಿಷ್ಠ ರನ್ ಗಳಿಸಿದ ಪಾಕಿಸ್ತಾನದ ಜಾವೇದ್ ಮಿಯಾಂದಾದ್ ದಾಖಲೆ ಮುರಿದರು. 125 ಎಸೆತಗಳಲ್ಲಿ 120 ರನ್ ಗಳಿಸಿದ ಕೊಹ್ಲಿಗೆ ಯುವ ಆಟಗಾರ ಶ್ರೇಯಸ್ ಅಯ್ಯರ್ 68 ಎಸೆತಗಳಲ್ಲಿ 71 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು. ಶಿಖರ್ ಧವನ್ ಮತ್ತೆ ವಿಫಲರಾದರೆ ರೋಹಿತ್ ಶರ್ಮಾ ಕೇವಲ 18 ರನ್ ಗಳಿಗೆ ಔಟಾದರು.
 
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಗೆ ಮಳೆಯ ಕಾರಣದಿಂದ ಪಂದ್ಯವನ್ನು 46 ಓವರ್ ಗಳಿಗೆ ಕಡಿತಗೊಳಿಸಲಾಯಿತು. 46 ಓವರ್ ಗಳಲ್ಲಿ ವಿಂಡೀಸ್ 279 ರನ್ ಗಳಿಸಬೇಕಿತ್ತು. ಆದರೆ ವಿಂಡೀಸ್ 42 ಓವರ್ ಗಳಲ್ಲಿ 210 ರನ್ ಗಳಿಗೆ ಆಲೌಟ್ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಭಾರತದ ಪರ ಭುವನೇಶ್ವರ್ ಕುಮಾರ್ 4, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಕಬಳಿಸಿದರು.
ಇದರಲ್ಲಿ ಇನ್ನಷ್ಟು ಓದಿ :