Widgets Magazine

ರೋಹಿತ್ ಶರ್ಮಾ ಅಮೋಘ ಆಟ; ಭಾರತಕ್ಕೆ ಒಂದು ವಿಕೆಟ್ ಜಯ

Rohit Sharma
ಕಟಕ್| ನಾಗರಾಜ ಬಿ.|
WD


ತೀವ್ರ ಪೈಪೋಟಿಯಿಂದ ಸಾಗಿದ ವೆಸ್ಟ್‌ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಂತೂ ಒಂದು ವಿಕೆಟ್ ಅಂತರದ ಜಯ ದಾಖಲಿಸುವಲ್ಲಿ ಆತಿಥೇಯ ತಂಡ ಯಶಸ್ವಿಯಾಗಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿಕೊಂಡಿದೆ.

ಪಂದ್ಯದ ಸ್ಟಾರ್ ಎನಿಸಿಕೊಂಡ ರೋಹಿತ್ ಶರ್ಮಾ ಅಮೋಘ 72 ರನ್ ಬಾರಿಸುವ ಮೂಲಕ ಲೊ ಸ್ಕೋರಿಂಗ್ ಮ್ಯಾಚ್‌ನಲ್ಲಿ ಭಾರತಕ್ಕೆ ಗೆಲುವಿನ ಹಾದಿ ತೋರಿಸಿದರು. ಒಂದು ಹಂತದಲ್ಲಿ ವಿಂಡೀಸ್ ಗೆಲುವು ಖಚಿತವೆನಿಸಿದ್ದರೂ ಅಂತಿಮ ವಿಕೆಟ್‌ಗೆ ಗೆಲುವಿಗೆ ಬೇಕಾದ 12 ರನ್ನುಗಳನ್ನು ಪೇರಿಸಿದ ಬೌಲರುಗಳಾದ ವರುಣ್ ಆರೋನ್ ಮತ್ತು ಉಮೇಶ್ ಯಾದವ್ ಭಾರತಕ್ಕೆ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.

212 ರನ್ನುಗಳ ಗುರಿ ಬೆನ್ನತ್ತಿದ್ದ ಭಾರತ ತಂಡವು 59 ರನ್ನುಗಳಾಗುವಷ್ಟರಲ್ಲಿ ಅಗ್ರ ಕ್ರಮಾಂಕದ ಎಲ್ಲ ಐದು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡಕ್ಕೆ ಬಿರುಸಿನ ಆರಂಭವೊದಗಿಸಿದ್ದ ನಾಯಕ ವೀರೇಂದ್ರ ಸೆಹ್ವಾಗ್ (20), ಪಾರ್ಥಿವ್ ಪಟೇಲ್ (12), ಗೌತಮ್ ಗಂಭೀರ್ (4), ವಿರಾಟ್ ಕೊಹ್ಲಿ (3) ಮತ್ತು ಸುರೇಶ್ ರೈನಾ (5) ಅಲ್ಪ ಮೊತ್ತದಲ್ಲಿ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ದರು.

ಈ ಹಂತದಲ್ಲಿ ಜತೆಗೂಡಿದ ರೋಹಿತ್ ಮತ್ತು ರವೀಂದ್ರ ಜಡೇಜಾ ಭಾರತಕ್ಕೆ ಆಸರೆಯಾದರು. ಇವರಿಬ್ಬರು ಆರನೇ ವಿಕೆಟ್‌ಗೆ 83 ರನ್ನುಗಳ ಮಹತ್ವದ ಜತೆಯಾಟ ನೀಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡುವ ಯತ್ನ ಮಾಡಿದರು.

ಈ ನಡುವೆ ಜಡೇಜಾ (38) ವಿಕೆಟ್ ಪಡೆದ ಕೀರಾನ್ ಪೊಲಾರ್ಡ್ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸುವಲ್ಲಿ ನರೆವಾದರು. ಇದಾದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ (6) ಮತ್ತೊಮ್ಮೆ ರನೌಟ್ ಬಲೆಗೆ ಸಿಲುಕಿದರು.

ಆದರೆ ಮತ್ತೊಂದು ಬದಿಯಿಂದ ತಂಡಕ್ಕೆ ಆಸರೆಯಾಗಿದ್ದ ರೋಹಿತ್ ಶರ್ಮಾ ಮಾತ್ರ ಏಕಾಂಕಿ ಹೋರಾಟವನ್ನು ಮುಂದುವರಿಸಿದರು. ಆಕರ್ಷಕ ಅರ್ಧಶತಕ ಬಾರಿಸಿದಿ ರೋಹಿತ್ 72 ರನ್ ಗಳಿಸಿದರು.

ಇವರಿಗೆ ಉತ್ತಮ ಸಾಥ್ ನೀಡಿದ ಕರ್ನಾಟಕದ ವಿನಯ್ ಕುಮಾರ್ 18 ರನ್ನುಗಳ ಮಹತ್ವದ ನೆರವು ನೀಡಿದರು. ಆದರೆ ಅಂತಿಮ ಹಂತದಲ್ಲಿ ರೋಹಿತ್ ಹಾಗೂ ವಿನಯ್ ವಿಕೆಟುಗಳು ಬೆನ್ನು ಬೆನ್ನಿಗೆ ಪತನವಾಗುತ್ತಿದ್ದಂತೆಯೇ ಭಾರತದ ಗೆಲುವಿನ ಆಸೆ ಬಹುತೇಕ ಕಣ್ಮರೆಯಾಗಿತ್ತು.

ಆದರೆ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿರುವ ಯುವ ವೇಗಿಗಳಾದ ವರುಣ್ ಆರೋನ್ ಮತ್ತು ಉಮೇಶ್ ಯಾದವ್ ತಲಾ ಒಂದು ಬೌಂಡರಿಗಳನ್ನು ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ಒದಗಿಸಕೊಟ್ಟರು. ತಲಾ ಆರು ರನ್ ಗಳಿಸಿದ ಅವರಿಬ್ಬರು ಅಜೇಯರಾಗುಳಿದರು.

ಅಂತಿಮವಾಗಿ ವಿಂಡೀಸ್ ಒಡ್ಡಿದ ಸವಾಲನ್ನು ಭಾರತ ಇನ್ನೂ ಏಳು ಎಸೆತಗಳು ಬಾಕಿ ಉಳಿದಿರುವಂತೆಯೇ ಒಂಬತ್ತು ವಿಕೆಟ್ ನಷ್ಟಕ್ಕೆ ತಲುಪಿತು. ವಿಂಡೀಸ್ ಪರ ಕೆಮರ್ ರೂಚ್ ಮೂರು ಹಾಗೂ ರಸ್ಸೆಲ್ ಎರಡು ವಿಕೆಟುಗಳನ್ನು ಕಬಳಿಸಿದರು.


ಇದರಲ್ಲಿ ಇನ್ನಷ್ಟು ಓದಿ :