ದುನಿಯಾ ಸೂರಿ 'ಕಡ್ಡಿಪುಡಿ' ರಕ್ತಪಾತ+ಅಶ್ಲೀಲತೆ=A ಸರ್ಟಿಫಿಕೇಟ್

ಶುಕ್ರವಾರ, 31 ಮೇ 2013 (14:39 IST)

PR
PR
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯಿಸಿದ ಚಿತ್ರಕ್ಕೆ ಎ ಪ್ರಮಾಣಪತ್ರ ಸಿಗುತ್ತಿರುವುದು ಇದೇನೂ ಹೊಸತಲ್ಲ. ತೀರಾ ಕ್ರೌರ್ಯವಿದ್ದಾಗ ಪ್ರಾದೇಶಿಕ ಸೆನ್ಸಾರ್ ಮಂಡಳಿಯವರು ನಾಯಕ ಯಾರು ಎನ್ನುವುದನ್ನೂ ನೋಡದೆ, ಪ್ರೇಕ್ಷಕರ ಹಿತದೃಷ್ಟಿಯಿಂದ ಸೂಕ್ತ ದರ್ಜೆಯನ್ನು ಒದಗಿಸಿಬಿಡುತ್ತಾರೆ. ಅದರಂತೆ 'ಕಡ್ಡಿಪುಡಿ'ಗೂ A ಸರ್ಟಿಫಿಕೇಟ್ ಸಿಕ್ಕಿದೆ!

ಹೀಗಂತ ಯಾರು ಬೇಕಾದರೂ ಹೇಳುತ್ತಾರೆ. ಆದರೆ ಅಷ್ಟಕ್ಕೇ A ಸರ್ಟಿಫಿಕೇಟ್ ಸಿಕ್ಕಿದೆಯೇ? ಎ ಸರ್ಟಿಫಿಕೇಟ್ ನೀಡುವಷ್ಟು ಹಿಂಸೆ ಚಿತ್ರದಲ್ಲಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇದಕ್ಕೆ ಕಾರಣ, ಇತ್ತೀಚಿನ ದಿನಗಳಲ್ಲಿ ರೌಡಿಸಂ ಚಿತ್ರಗಳು ಮಾಮೂಲಿಯಾಗಿರುವುದು ಮತ್ತು ಅವುಗಳಿಗೆ ಎ ಸರ್ಪಿಫಿಕೇಟ್ ಸಿಗದಿರುವುದು. ಬಹುತೇಕ ರೌಡಿಸಂ ಸಿನಿಮಾಗಳು ಯು-ಎ ಪ್ರಮಾಣಪತ್ರದ ಅಡಿಯಲ್ಲೇ ಬಿಡುಗಡೆಯಾಗುತ್ತಿವೆ. ಆದರೂ ಕಡ್ಡಿಪುಡಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ಯಾಕೆ? ವಯಸ್ಕರು ಮಾತ್ರ ಈ ಚಿತ್ರವನ್ನು ನೋಡಬೇಕೆಂಬ ಷರತ್ತು ಯಾಕೆ?

ಹಿಂಸೆ, ಅಶ್ಲೀಲತೆ ಮತ್ತು ಕಿಕ್ ಕೊಡುವ ಸಂಭಾಷಣೆಗಳು! ಹೌದು, ಮೂಲಗಳ ಪ್ರಕಾರ ಚಿತ್ರದಲ್ಲಿ ರಕ್ತಚರಿತ್ರೆಯೇ ಇದೆ. ದುನಿಯಾ ಸೂರಿ ಈ ಹಿಂದಿನ ಸಿನಿಮಾಗಳಿಗಿಂತ ಒಂಚೂರು ಹೆಚ್ಚೇ ಹಿಂಸೆಯನ್ನು ವೈಭವೀಕರಿಸಲಾಗಿದೆ. ಇಷ್ಟು ಮಾತ್ರವಲ್ಲದೆ, ಐಂದ್ರಿತಾ ರೇ ಅರೆಬೆತ್ತಲಾಗಿದ್ದಾರೆ. 'ದಂಡುಪಾಳ್ಯ' ಚಿತ್ರದಲ್ಲಿ ಪೂಜಾ ಗಾಂಧಿ ಬೆತ್ತಲಾದಂತೆ ಇಲ್ಲೂ ಅಂತಹ ದೃಶ್ಯಗಳಿವೆ. ಜತೆಗೆ ನೇರಾನೇರ ಸಂಭಾಷಣೆಗಳು. ಇವಿಷ್ಟರ ಕಾರಣಕ್ಕೆ ಸೆನ್ಸಾರ್ ಮಂಡಳಿ ವಯಸ್ಕರ ಚಿತ್ರ ಎಂಬ ಪ್ರಮಾಣಪತ್ರ ನೀಡಿದೆ ಎನ್ನಲಾಗುತ್ತಿದೆ.

ಆದರೆ ಇಂತಹ ವಾದವನ್ನು ನಿರ್ದೇಶಕ ದುನಿಯಾ ಸೂರಿ ತಳ್ಳಿ ಹಾಕಿದ್ದಾರೆ. ನನಗೆ ಹೇಗೆ ಬೇಕೋ, ಹಾಗೆ ಚಿತ್ರೀಕರಿಸಿದ್ದೇನೆ. ತುಂಬಾ ವಿಭಿನ್ನವಾದ ಚಿತ್ರ. ಎಲ್ಲವನ್ನೂ ನೈಜವಾಗಿ, ಕಲಾತ್ಮಕವಾಗಿ ಚಿತ್ರಿಸಲು ಯತ್ನಿಸಿದ್ದೇನೆ. ಸೆನ್ಸಾರ್ ಮಂಡಳಿ ಯು-ಎ ಪ್ರಮಾಣಪತ್ರ ನೀಡುತ್ತದೆ ಎಂದು ನಂಬಿದ್ದೆ. ಆದರೆ ಎ ಪ್ರಮಾಣಪತ್ರ ಸಿಕ್ಕಿದೆ. ಆದರೂ ಸಮಸ್ಯೆಯಿಲ್ಲ ಎಂದಿದ್ದಾರೆ.

ದುನಿಯಾ ಸೂರಿ ನಿರ್ದೇಶನದ ಶಿವರಾಜ್ ಕುಮಾರ್, ರಾಧಿಕಾ ಪಂಡಿತ್ ನಾಯಕ-ನಾಯಕಿಯರಾಗಿರುವ 'ಕಡ್ಡಿಪುಡಿ' ಜೂನ್ 7ರ ಶುಕ್ರವಾರ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಸ್ವಯಂವರ ಚಂದ್ರು ನಿರ್ಮಾಣದ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ, ಕೃಷ್ಣ ಛಾಯಾಗ್ರಹಣವಿದೆ. ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ, ಶಿವಣ್ಣ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಗಳಿವೆ.ಇದರಲ್ಲಿ ಇನ್ನಷ್ಟು ಓದಿ :  

Widgets Magazine
Widgets Magazine