Widgets Magazine

ಪಂಚಭೂತಗಳಲ್ಲಿ ಲೀನವಾದ 'ಚಾಮಯ್ಯ ಮೇಷ್ಟ್ರು'

K.S.Ashwath
ಇಳಯರಾಜ|
NRB
ಹಿರಿಯ ಪೋಷಕ ನಟ ಅಶ್ವತ್ಥ್ ಅವರ ಅಂತ್ಯಸಂಸ್ಕಾರ ಶಾಂತ ರೀತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಶ್ಚಂದ್ರ ಚಿತಾಗಾರದಲ್ಲಿ ನಡೆಸಲಾಯಿತು. ಅಶ್ವತ್ಥ್ ಅವರ ಹಿರಿಮಗ, ನಟ ಶಂಕರ್ ಅಶ್ವತ್ಥ್ ಅಗ್ನಿಸ್ಪರ್ಷ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಆ ಮೂಲಕ ಕನ್ನಡ ಚಿತ್ರರಂಗದ ಮಹತ್ತರ ಸುದೀರ್ಘ ಅಧ್ಯಾಯವೊಂದು ಕೊನೆಗೊಂಡಿತು.

ಮಧ್ಯಾಹ್ನ ಮೂರು ಗಂಟೆವರೆಗೂ ಜವರೇಗೌಡ ಪಾರ್ಕಿನಲ್ಲಿ ಅಂತಿಮ ದರ್ಶನಕ್ಕಿಡಲಾಗಿದ್ದ ಅವರ ದೇಹವನ್ನು ಮಧ್ಯಾಹ್ನ ಮೂರು ಗಂಟೆಗೆ ಸರಸ್ವತೀಪುರಂನ ಅವರ ಮನೆಗೆ ಕರೆತರಲಾಯಿತು. ನಂತರ ಮನೆಯಲ್ಲಿ ವಿಧಿವಿಧಾನಗಳನ್ನು ಮುಗಿಸಿ ಚಾಮುಂಡಿಬೆಟ್ಟದ ತಪ್ಪಲಿ ಚಿತಾಗಾರಕ್ಕೆ ಕರೆದೊಯ್ಯಲಾಯಿತು. ಆರಂಭದಲ್ಲಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡುವುದೆಂದು ತೀರ್ಮಾನಿಸಿದ್ದರೂ, ನಂತರ ಸಮಗ್ರ ಬ್ರಾಹ್ಮಣ ವಿಧಿವಿಧಾನಗಳ ಮೂಲಕ ಕಟ್ಟಿಗೆಯಲ್ಲಿಯೇ ದೇಹವನ್ನು ಸುಡುವ ನಿರ್ಧಾರಕ್ಕೆ ಬರಲಾಯಿತು.

ಅಶ್ವತ್ಥ್ ಮಧ್ಯರಾತ್ರಿ 1.45ಕ್ಕೆ ನಿಧನರಾದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ ನಂತರ, ಮದ್ಯಾಹ್ನದವರೆಗೂ ಸಾಗರೋಪಾದಿಯಲ್ಲಿ ಅಶ್ವತ್ಥ್ ಅವರ ಅಭಿಮಾನಿಗಳು ಅಶ್ವತ್ಥ್ ಅವರ ಅಂತಿಮ ದರ್ಶನಕ್ಕಾಗಿ ಆಗಮಿಸಿದರು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ, ಗಣ್ಯರೂ ಅಶ್ವತ್ಥ್ ಅವರಿಗಾಗಿ ಕಂಬನಿ ಮಿಡಿದರು. ಊಹಿಸಿದ್ದಕ್ಕಿಂತಲೂ ಅಪಾರ ಪ್ರಮಾಣದಲ್ಲಿ ಅಭಿಮಾನಿಗಳು ಅಶ್ವತ್ಥ್ ಅವರ ಅಂತಿಮ ದರ್ಶನ ಮಾಡಿದರೂ, ಎಲ್ಲೂ ಯಾವುದೇ ಅಹಿತಕರ ಘಟನೆ ನಡೆಯದೆ, ಶಿಸ್ತುಬದ್ಧ, ಶಾಂತಿಯುತವಾಗಿಯೇ ಎಲ್ಲ ವಿಧಿವಿಧಾನಗಳೂ ಪೂರ್ಣಗೊಂಡವು.

ಬ್ರಾಹ್ಮಣ ಸಂಪ್ರದಾಯದ ವಿಧಿವಿಧಾನಗಳಂತೆ ಅಂತಿಮ ಕಾರ್ಯಗಳು ನಡೆದವು. ಅಂತಿಮಯಾತ್ರೆಯಲ್ಲಿ ಚಿತ್ರರಂಗದ ಗಣ್ಯರೂ ಭಾಗವಹಿಸಿದರು. ಹಿರಿಯ ಪೋಷಕ ನಟ ಶಿವರಾಂ ಎಲ್ಲ ವಿಧಿವಿಧಾನ ಕಾರ್ಯಗಳಲ್ಲೂ ಭಾಗವಹಿಸಿದರು.

85 ವರ್ಷಗಳನ್ನು ಪೂರೈಸಿದ್ದ ಅಶ್ವತ್ಥ್ ತಮ್ಮ ಹಿರಿ ಮಗ ನಟ ಶಂಕರ್ ಅಶ್ವತ್ಥ್ ಸೇರಿದಂತೆ, ನಾಲ್ವರು ಮಕ್ಕಳನ್ನು ಅಗಲಿದ್ದಾರೆ. ವಿಧಿವಿಧಾನಗಳನ್ನು ಹಿರಿ ಮಗ ಶಂಕರ್ ಅಶ್ವತ್ಥ್ ನೆರವೇರಿಸಿದರು.

ಕೆ.ಎಸ್.ಅಶ್ವತ್ಥ್ ಉದ್ಯಾನವನ!: ಹಿರಿಯ ನಟ ಕೆ.ಎಸ್. ಅಶ್ವತ್ಥ್ ಸ್ಮರಣಾರ್ಥ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಉದ್ಯಾವನಕ್ಕೆ ಕೆ.ಎಸ್.ಅಶ್ವತ್ಥ್ ಉದ್ಯಾನವನ ಎಂದು ಹೆಸರಿಡುವುದಾಗಿ ಕಂಠೀರವ ಸ್ಟುಡಿಯೋದ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ್ ತಿಳಿಸಿದ್ದಾರೆ. ಪ್ರಬುದ್ಧ ಪೋಷಕ ನಟರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ಈ ಉದ್ಯಾನವನಕ್ಕೆ ಅಶ್ವತ್ಥ್ ಅವರ ಹೆಸರಿಡಲು ಚಿಂತಿಸಲಾಗಿದೆ ಎಂದು ಅವರು ಹೇಳಿದರು.

ನಾಟಕ ರಂಗದಿಂದ 1954ರಲ್ಲಿ ಬೆಳ್ಳಿ ಬದುಕಿನ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ಅಶ್ವತ್ಥ್ ಅವರು ಮೊಟ್ಟ ಮೊದಲು ನಾಯಕ ನಟನಾಗಿ ಸ್ತ್ತ್ರೀ ರತ್ನ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ, 1960ರ ನಂತರ ಪೋಷಕ ಪಾತ್ರಗಳಿಗೆ ಒಲವು ನೀಡತೊಡಗಿದರು. ಹೀಗಾಗಿ ಅಸಂಖ್ಯಾತ ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳನ್ನು ಕಾಣುವಂತಾಗಿ, ಅವರ ಪ್ರತಿಭೆ ಬೆಳಕಿಗೆ ಬಂತು. ಅಲ್ಲಿಂದ ಇಲ್ಲಿಯವರೆಗೆ ಅವರು 371 ಚಿತ್ರಗಳಲ್ಲಿ ನಟಿಸಿದ್ದಾರೆ.

ಆರಂಭದ ದಿನಗಳ ಪೌರಾಣಿಕ ಚಿತ್ರಗಳಾದ ಮಹಿಷಾಸುರ ಮರ್ದಿನಿ, ಸ್ವರ್ಣಗೌರಿ, ಭಕ್ತ ಪ್ರಹ್ಲಾದ, ದಶಾವತಾರ, ನಾಗಾರ್ಜುನ ಮತ್ತಿತರ ಚಿತ್ರಗಳಲ್ಲಿ ಅಶ್ವತ್ಥ್ ಅವರ ನಾರದನ ಪಾತ್ರ ಜನಮೆಚ್ಚುಗೆ ಪಡೆಯಿತು. ನಂತರ ಅರವತ್ತರ ದಶಕದಲ್ಲಿ ಹಿರಿಯ ನಟಿ ಪಂಡರಿಬಾಯಿ ಹಾಗೂ ಡಾ.ಲೀಲಾವತಿ ಅವರ ಜತೆ ಅಶ್ವತ್ಥ್ ಜೋಡಿ ಜನಪ್ರಿಯವಾಯಿತು. ನಾಗರ ಹಾವು ಸೇರಿದಂತೆ ಪಂಚಾಮೃತ, ಜೇನುಗೂಡು, ನಮ್ಮ ಮಕ್ಕಳು ಚಿತ್ರಗಳು ಅಶ್ವತ್ಥ್ ಅವರ ಜನಪ್ರಿಯ ಚಿತ್ರಗಳು.

ಭೂಪತಿ ಚಿತ್ರದಲ್ಲಿ ದರ್ಶನ್ ಅವರ ಅಜ್ಜನಾಗಿ ನಟಿಸಿದ್ದು ಅವರ ಕೊನೆಯ ಅಭಿನಯ. 1994ರಲ್ಲಿ ಸ್ವಯಂನಿವೃತ್ತಿ ಘೋಷಿಸಿಕೊಂಡರೂ, ಕೆಲವು ವರ್ಷಗಳ ನಂತರ ಡಾ.ರಾಜ್ ಅವರ ಒತ್ತಾಯದಿಂದ ಅವರ ಜೊತೆಗೆ ಶಬ್ದವೇದಿ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಅವರ ನಟನಾ ಕೌಶಲ್ಯವನ್ನು ಗುರುತಿಸಿದ ತುಮಕೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು. ಇದಲ್ಲದೆ, ಕರ್ನಾಟಕ ಸರಕಾರದ ಪ್ರತಿಷ್ಠಿತ ಡಾ.ರಾಜ್ ಕುಮಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳು ಅಶ್ವತ್ಥ್ ಅವರಿಗೆ ಲಭಿಸಿವೆ. ಎರಡು ಬಾರಿ ರಾಜ್ಯ ಸರಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಗೂ ಅಶ್ವತ್ಥ್ ಭಾಜನರಾಗಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :