Widgets Magazine

ಪೂಜಾ ಗಾಂಧಿ ಮೇಲೆ ರಾಗಿಣಿಗೆ ಯಾಕೆ ಅಷ್ಟೊಂದು ಕೋಪ?

ರಾಜೇಶ್ ಪಾಟೀಲ್|
PR
ನಾಯಕರಾದರೂ ಭಿನ್ನಮತ ಮರೆತು ಒಂದಾಗಬಹುದು, ಆದರೆ ನಾಯಕಿಯರು, ಅದರಲ್ಲೂ ಸ್ಯಾಂಡಲ್‌ವುಡ್ ನಾಯಕಿಯರು ಒಂದಾಗಲಾರರು. ಸುಖಾ ಸುಮ್ಮನೆ ಕೋಳಿ ಜಗಳ ಮಾಡುತ್ತಲೇ ಇರುತ್ತಾರೆ. ಕಾರಣವೇ ಇಲ್ಲದೆ ಇನ್ನೊಬ್ಬ ನಟಿಯನ್ನು ಕಿಚಾಯಿಸುವುದು, ಹೆಸರು ಹೇಳದೆ ಏನನ್ನೋ ಹೇಳುವುದು ಮಾಡುತ್ತಲೇ ಇರುತ್ತಾರೆ.

ಈಗ ಈ ಮಾತು ಹೇಳಲು ಕಾರಣ, ರಾಗಿಣಿ ದ್ವಿವೇದಿ ಮತ್ತು ಪೂಜಾ ಗಾಂಧಿ ನಡುವಿನ ಎಪಿಸೋಡ್. ಇಬ್ಬರ ನಡುವೆ ನಿಜಕ್ಕೂ ಏನು ನಡೆದಿದೆ ಎಂಬುದು ಗೊತ್ತಿಲ್ಲ. ಆದರೆ ಇಬ್ಬರೂ ಕನ್ನಡದ ಟಾಪ್ ಹೀರೋಯಿನ್‌ಗಳು. ಹಾಗಾಗಿ ವೃತ್ತಿಪರ ಸ್ಪರ್ಧೆಯ ಕಾರಣ ಇಂತಹದ್ದೊಂದು ಘಟನೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.

PR
ಅದು ಸುವರ್ಣ ವಾಹಿನಿಯ ಪ್ರಶಸ್ತಿ ಪ್ರದಾನ ಸಮಾರಂಭ. ಸೃಜನ್ ಲೋಕೇಶ್ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. ಅತ್ಯುತ್ತಮ ನಟಿ ಪ್ರಶಸ್ತಿ ಘೋಷಿಸಿ, ಪ್ರಶಸ್ತಿ ನೀಡಲು ವೇದಿಕೆಗೆ ರಾಗಿಣಿ ದ್ವಿವೇದಿಯನ್ನು ಆಹ್ವಾನಿಸಲಾಗಿತ್ತು. ಅದರಂತೆ ವೇದಿಕೆಗೆ ಬಂದ ರಾಗಿಣಿ 'ಚಾರುಲತಾ' ಚಿತ್ರದ ನಟನೆಗಾಗಿ ಪ್ರಿಯಾಮಣಿಗೆ ಪ್ರಶಸ್ತಿ ಘೋಷಿಸಿ, ಹಸ್ತಾಂತರಿಸಿದರು.

ಆದರೆ ರಾಗಿಣಿ ಕೈಯಲ್ಲಿದ್ದ ಕಾರ್ಡ್‌ನಲ್ಲಿ ಇನ್ನೂ ಒಂದು ಹೆಸರಿತ್ತು. ಅದು ಮಳೆ ಹುಡುಗಿ ಪೂಜಾ ಗಾಂಧಿ. ಅವರು ನಾಯಕಿಯಾಗಿದ್ದ 'ದಂಡುಪಾಳ್ಯ' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ನೀಡಬೇಕಿತ್ತು. ಅವರ ಹೆಸರನ್ನೂ ಅಲ್ಲಿ ಬರೆಯಲಾಗಿತ್ತು. ಆದರೆ ರಾಗಿಣಿಯವರು ಪೂಜಾ ಗಾಂಧಿ ಹೆಸರನ್ನು ಬಿಟ್ಟು, ಕೇವಲ ಪ್ರಿಯಾಮಣಿ ಹೆಸರನ್ನು ಮಾತ್ರ ಘೋಷಿಸಿ ಪ್ರಶಸ್ತಿ ನೀಡಿದ್ದರು.

ಕಾರ್ಡ್‌ನಲ್ಲಿ ಇನ್ನೊಂದು ಹೆಸರಿದೆ ಎಂದು ಹಿಂದಿನಿಂದ ನಿರೂಪಕ ಸೃಜನ್ ಸಾಕಷ್ಟು ಬಾರಿ ಹೇಳಿದರೂ ರಾಗಿಣಿ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಸ್ವತಃ ನಿರೂಪಕರೇ ಪೂಜಾ ಗಾಂಧಿ ಹೆಸರನ್ನು ಘೋಷಿಸಿದರು. ವೇದಿಕೆಗೆ ಬಂದ ಪೂಜಾ ಗಾಂಧಿ ಪ್ರಶಸ್ತಿ ಸ್ವೀಕರಿಸಿ, ರಾಗಿಣಿಯತ್ತ ಬಿರು ನೋಟ ಬೀರಿ ಹೊರಟು ಹೋದರು. ನಂತರ ಅವರು ಸಮಾರಂಭದಲ್ಲೂ ಉಳಿಯಲಿಲ್ಲ. ಕಾರು ಹತ್ತಿ ಮನೆಯತ್ತ ದಾಪುಗಾಲು ಹಾಕಿದರು. ಅವರ ಮುಖ ಕಪ್ಪು ಕಪ್ಪಾಗಿತ್ತು. ರಾಗಿಣಿ ವಿರುದ್ಧ ಬುಸುಬುಸು ಎನ್ನುತ್ತಿದ್ದರು.

ನನ್ನ ಮೇಲೆ ರಾಗಿಣಿಗೆ ಏನೋ ಕೋಪ ಇರಬೇಕು, ಅದೇ ಕಾರಣದಿಂದ ಕಾರ್ಡ್‌ನಲ್ಲಿ ನನ್ನ ಹೆಸರಿದ್ದರೂ ಓದಲಿಲ್ಲ. ಅವರ ವರ್ತನೆಯಿಂದ ತುಂಬಾ ಬೇಜಾರಾಯಿತು ಎಂದು ಪೂಜಾ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಅತ್ತ ರಾಗಿಣಿ ಬೇರೆಯದೇ ಕಥೆ ಹೇಳುತ್ತಿದ್ದಾರೆ. ಅವರ ಕೈಯಲ್ಲಿದ್ದ ಕಾರ್ಡ್‌ನಲ್ಲಿ ಪ್ರಿಯಾಮಣಿ ಹೆಸರು ಮಾತ್ರ ಇತ್ತಂತೆ. ಅಲ್ಲಿ ಪೂಜಾ ಗಾಂಧಿಯ ಪ್ರಸ್ತಾಪವೇ ಇರಲಿಲ್ಲ. ಇಲ್ಲದ ಹೆಸರನ್ನು ನಾನು ಹೇಗೆ ಓದಿ ಹೇಳಲಿ, ಹೇಗೆ ಪ್ರಶಸ್ತಿ ನೀಡಲಿ ಎಂದು ತನ್ನ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಂತೂ ರಮ್ಯಾ, ಐಂದ್ರಿತಾ ರೇ ಜತೆಗಿನ ಒಂದೊಂದು ಸುತ್ತಿನ ಜಗಳ ಮುಗಿಸಿರುವ ರಾಗಿಣಿ ಈಗ ಪೂಜಾ ಗಾಂಧಿಯನ್ನು ಟಾರ್ಗೆಟ್ ಮಾಡಿದ್ದಾರೆ. ಇನ್ನೇನೇನು ನಡೆಯಲಿದೆಯೋ ಕಾದು ನೋಡಬೇಕು.


ಇದರಲ್ಲಿ ಇನ್ನಷ್ಟು ಓದಿ :