ಮತ್ತೆ ಒಂದಾದ್ರು ಶಿವಣ್ಣ ಸುದೀಪ್: ಮುಸುಕಿನ ಗುದ್ದಾಟಕ್ಕೆ ಬ್ರೇಕ್!

ಸೋಮವಾರ, 20 ಮೇ 2013 (13:19 IST)

PR
ಇತ್ತೀಚಿನವರೆಗೂ ಚೆನ್ನಾಗಿಯೇ ಇದ್ದವರು. ಒಂದೇ ಚಿತ್ರದಲ್ಲಿ ನಟಿಸಬೇಕು, ಒಬ್ಬರ ಚಿತ್ರವನ್ನು ಇನ್ನೊಬ್ಬರು ನಿರ್ದೇಶಿಸಬೇಕು ಎಂದೆಲ್ಲ ಮಾತುಕತೆಗಳು ನಡೆಯುತ್ತಿದ್ದವು. ನೋಡುಗರಿಗೆ ಅಣ್ಣ-ತಮ್ಮಂದಿರಂತೆಯೇ ಕಾಣುತ್ತಿದ್ದರು. ಆದರೆ ಯಾರದೋ ಕುತಂತ್ರದಿಂದ ಇಬ್ಬರೂ ಪರಸ್ಪರ ಮುಖ ನೋಡದ ಪರಿಸ್ಥಿತಿ ಸೃಷ್ಟಿಯಾಗಿತ್ತು!

ಅದಾಗಿ ಹೆಚ್ಚು ಕಡಿಮೆ ಎರಡು ವರ್ಷಗಳೇ ಸಂದಿವೆ. ಡಾ.ರಾಜ್ ಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ನಡೆದ ಅಹಿತಕರ ಘಟನೆಯ ನಂತರ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ದೂರವಾಗಿದ್ದರು. ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಆದರೆ ತಪ್ಪುಗಳನ್ನು ಇಬ್ಬರೂ ಅರ್ಥ ಮಾಡಿಕೊಂಡಿರುವಂತಿದೆ. ಅವರು ಮತ್ತೆ ಒಂದಾಗಿದ್ದಾರೆ.

ಹೌದು, ಇದಕ್ಕೆ ಕಾರಣವಾಗಿರುವುದು ಅಜಯ್ ರಾವ್ ಮತ್ತು ನಟಿಸುತ್ತಿರುವ 'ರೋಸ್' ಚಿತ್ರದ ಮುಹೂರ್ತ ಸಮಾರಂಭ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಹೊರತುಪಡಿಸಿ ಚಿತ್ರರಂಗದ ಬಹುತೇಕ ಎಲ್ಲ ಪ್ರಮುಖ ನಾಯಕ ನಟರೂ ನೆರೆದಿದ್ದ ಸಮಾರಂಭದಲ್ಲಿ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಕೂಡ ಭಾಗವಹಿಸಿದ್ದರು. ಇಬ್ಬರೂ ತುಂಬಾ ಆತ್ಮೀಯವಾಗಿ ನಡೆದುಕೊಂಡು, ಅವರ ಅಭಿಮಾನಿಗಳಿಗೆ ಶುಭ ಸಂದೇಶ ನೀಡಿದರು.

ಶಿವರಾಜ್ ಕುಮಾರ್ ಮತ್ತು ಗೀತಾ ಅವರ ವಿವಾಹದ 27ನೇ ವಾರ್ಷಿಕೋತ್ಸವ ಇದಕ್ಕೆ ಮತ್ತಷ್ಟು ಮೆರುಗು ನೀಡಿತು. ಚಿತ್ರತಂಡ ಎಲ್ಲರಿಗೂ ಅನಿರೀಕ್ಷಿತವಾಗಿರುವ ರೀತಿಯಲ್ಲಿ ಕೇಕ್ ತಯಾರಿಸಿತ್ತು. ಕೇಕ್ ಕಟ್ ಮಾಡಿದ ಶಿವಣ್ಣ, ಅದನ್ನು ಸುದೀಪ್‌ಗೆ ತಿನ್ನಿಸಿದರು. ಸುದೀಪ್ ಕೂಡ ಶಿವಣ್ಣನಿಗೆ ಕೇಕ್ ತಿನ್ನಿಸಿದರು. ಇಬ್ಬರೂ ಜತೆಯಾಗಿ ಸಾಕಷ್ಟು ಫೋಟೊಗಳಿಗೆ ಪೋಸ್ ಕೊಟ್ಟರು. ಇನ್ನು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಉಳಿಯುವುದಿಲ್ಲ ಎಂಬಂತೆ ಕಂಡು ಬಂದರು.

ಅದಕ್ಕೂ ಮೊದಲು ಚಿತ್ರಕ್ಕೆ ಸುದೀಪ್ ಕ್ಲಾಪ್ ಮಾಡಿದರೆ, ಶಿವಣ್ಣ ಕ್ಯಾಮರಾ ಸ್ವಿಚ್ ಆನ್ ಮಾಡಿ ಶುಭ ಕೋರಿದರು.

ಇವರನ್ನು ಹೊರತುಪಡಿಸಿ ಸಮಾರಂಭದಲ್ಲಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಗಣೇಶ್, ದುನಿಯಾ ವಿಜಯ್, ಲವ್ಲಿ ಸ್ಟಾರ್ ಪ್ರೇಮ್, ನಿರ್ದೇಶಕ ಪ್ರೇಮ್, ರಕ್ಷಿತಾ, ಶ್ರೀಕಿ, ಪೂಜಾ ಗಾಂಧಿ, ಹರ್ಷಿಕಾ ಪೂಣಚ್ಚ ಮುಂತಾದವರು ಭಾಗವಹಿಸಿದ್ದರು.

ಸುದೀಪ್ ಪ್ರಯತ್ನವೇ?:
ಸ್ಯಾಂಡಲ್‌ವುಡ್‌ನ ಇಬ್ಬರು ಆಸ್ತಿಗಳಾದ ಶಿವಣ್ಣ ಮತ್ತು ಸುದೀಪ್ ಒಂದಾಗುವಲ್ಲಿ ಯಾರ ಪ್ರಯತ್ನ ಎಂಬುದು ಸ್ಪಷ್ಟವಿಲ್ಲ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಸುದೀಪ್ ಇದರ ಮುಂದಾಳತ್ವ ತೆಗೆದುಕೊಂಡಿದ್ದಾರೆ ಎಂಬ ಸುಳಿವು ಸಿಗುತ್ತಿದೆ.

ಕಳೆದ ವಾರ ಪ್ರಸಾರವಾದ ಬಿಗ್ ಬಾಸ್ ಸಂಚಿಕೆಯಲ್ಲಿ ಶಿವಣ್ಣ ನಾಯಕನಾಗಿರುವ 'ಕಡ್ಡಿಪುಡಿ' ಚಿತ್ರತಂಡ ಭಾಗವಹಿಸಿತ್ತು. ನಿರ್ದೇಶಕ ದುನಿಯಾ ಸೂರಿ, ಯೋಗರಾಜ್ ಭಟ್, ನಿರ್ಮಾಪಕ ಸ್ವಯಂವರ ಚಂದ್ರು ಪಾಲ್ಗೊಂಡು, ಚಿತ್ರದ ಪ್ರಚಾರ ಮಾಡಿದರು. ಈ ಸಂದರ್ಭ ಸುದೀಪ್ ಚಿತ್ರದ ಬಗ್ಗೆ, ಶಿವಣ್ಣನ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನಾಡಿದ್ದರು. ಇಬ್ಬರೂ ಮತ್ತೆ ಒಂದಾಗುವ ಸಂಕೇತಗಳನ್ನು ನೀಡಿದ್ದರು. ಬೆನ್ನಿಗೆ ಇಬ್ಬರೂ ಒಂದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರಪ್ರೇಮಿಗಳಿಗೆ ಅಚ್ಚರಿಯ ಉಡುಗೊರೆ ನೀಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

Widgets Magazine
Widgets Magazine