Widgets Magazine

ರವಿಚಂದ್ರನ್ Lip Kissಗೆ ಹೆದರಿ 'ಅಪೂರ್ವ'ದಿಂದ ಪಾರುಲ್ ಔಟ್!

ರಾಜೇಶ್ ಪಾಟೀಲ್|
PR
ಕನ್ನಡ ಚಿತ್ರರಂಗದ ಕನಸುಗಾರ, ಅವರು ನಾಯಕಿಯರನ್ನು ತುಂಬಾ ಗ್ಲಾಮರಸ್ ಆಗಿ ತೋರಿಸುತ್ತಾರೆ ಎಂದು ಅವರಿವರು ಹೇಳಿದ ನಂತರವಷ್ಟೇ ರವಿಚಂದ್ರನ್ ನಾಯಕನಾಗಿರುವ 'ಅಪೂರ್ವ' ಚಿತ್ರದಲ್ಲಿ ನಟಿಸಲು ಪಾರುಲ್ ಯಾದವ್ ಒಪ್ಪಿಕೊಂಡಿದ್ದರು. ಅದೇ ಕಾರಣಕ್ಕೆ ಕನಸುಗಾರನ ಕ್ರೇಜಿಗಳನ್ನೂ ಸಹಿಸಿಕೊಂಡಿದ್ದರು. ಆದರೆ ಕೊನೆಗೂ ತನ್ನ ಕೈಲಿ ಇನ್ನು ಸಹಿಸೋದು ಸಾಧ್ಯವೇ ಇಲ್ಲ ಎಂದು ಹೊರ ಬಿದ್ದಿದ್ದಾರೆ!

'ಅಪೂರ್ವ' ಚಿತ್ರಕ್ಕೆ ಪಾರುಲ್ ಯಾದವ್ ನಾಯಕಿಯಾದರೆ ಚೆನ್ನ ಎಂದು ಯೋಚಿಸಿದ್ದ ರವಿಚಂದ್ರನ್ ಆರಂಭದಲ್ಲೇ ಸಂಪರ್ಕಿಸಿದ್ದರು. ಆದರೆ ಆಗ ತಾನು ಬ್ಯುಸಿ ಇದ್ದೇನೆ ಎಂಬ ಕಾರಣ ನೀಡಿ ತಪ್ಪಿಸಿಕೊಂಡಿದ್ದರು. ಆದರೆ ವಾಸ್ತವದಲ್ಲಿ ಅವರು ರವಿಚಂದ್ರನ್ ಚಿತ್ರದಲ್ಲಿ ನಟಿಸಲು ನಿರಾಕರಿಸಲು ಕಾರಣ, ಕ್ರೇಜಿ ಸ್ಟಾರ್‌ಗೆ ವಯಸ್ಸಾಗಿದೆ ಎನ್ನುವುದು.

ನಂತರ ರವಿಚಂದ್ರನ್ ಬಗ್ಗೆ ಒಂದಷ್ಟು ತಿಳಿದುಕೊಂಡ ಮೇಲೆ ಪಾರುಲ್‌ಗೆ ತಾನು ತಪ್ಪು ಮಾಡಿದೆನೇನೋ ಎಂಬ ಭಾವನೆ ಬಂದಿತ್ತು. ಅದೇ ಕಾರಣದಿಂದ ರವಿಚಂದ್ರನ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು ಎನ್ನುವುದು ಗಾಂಧಿನಗರದ ಗುಲ್ಲು. ಚಿತ್ರದಲ್ಲಿ ನಟಿಸುವುದಕ್ಕೂ ಮೊದಲು ರಿಹರ್ಸಲ್ ಇರಲಿ ಎಂಬ ಕಾರಣಕ್ಕೋ ಏನೋ, ಸುವರ್ಣ ಫಿಲಂ ಅವಾರ್ಡ್ಸ್ ಸಮಾರಂಭದಲ್ಲಿ ಒಂದು ಹಾಡಿಗೆ ರವಿಚಂದ್ರನ್ ಮತ್ತು ಪಾರುಲ್ ಯಾದವ್ ಜತೆಯಾಗಿಯೇ ಹೆಜ್ಜೆ ಹಾಕಿದ್ದರು.

ಈ ನಡುವೆ 'ಅಪೂರ್ವ' ಚಿತ್ರದ ಫೋಟೊ ಶೂಟ್‌ನಲ್ಲೂ ಪಾರುಲ್ ಭಾಗವಹಿಸಿದ್ದರು. ಚಿತ್ರದಲ್ಲಿ ಪಾರುಲ್‌ರದ್ದು 19ರ ಹುಡುಗಿಯ ಪಾತ್ರ, ರವಿಚಂದ್ರನ್‌ರದ್ದು 60ರ ಮುದುಕನ ಪಾತ್ರ. ಪ್ರಯೋಗಾತ್ಮಕ ಚಿತ್ರವಾಗಿರುವುದರಿಂದ ನಟನೆಗೆ ಉತ್ತಮ ಅವಕಾಶವಿರಬಹುದು ಎಂದು ಪಾರುಲ್ ಅಂದುಕೊಂಡಿದ್ದರಾದರೂ, ಒಂದೇ ಒಂದು ವಿಚಾರಕ್ಕೆ ಹೆದರಿ ಪ್ರಾಜೆಕ್ಟ್‌ನಿಂದ ಹೊರ ಬಿದ್ದಿದ್ದಾರೆ. ಅದು ಲಿಪ್ ಟು ಲಿಪ್ ಕಿಸ್!

ಹೌದು, ಈಗಾಗಲೇ ಪಾರುಲ್ ಅಡ್ವಾನ್ಸ್ ಹಣ ಪಡೆದಿರುವ 'ಅಪೂರ್ವ' ಚಿತ್ರದಲ್ಲಿ ರವಿಚಂದ್ರನ್ ಮತ್ತು ನಾಯಕಿ ನಡುವೆ ಲಿಪ್ ಟು ಲಿಪ್ ಕಿಸ್ ಸನ್ನಿವೇಶಗಳಿವೆ. ಇದು ಗೊತ್ತಿದ್ದೇ ಹಿಂದೆ ಮುಂದೆ ನೋಡಿ ತಲೆಯಾಡಿಸಿದ್ದ ಪಾರುಲ್ ಕೊನೆಯ ಹಂತದಲ್ಲಿ ನಿರ್ಧಾರ ಬದಲಾಯಿಸಿದ್ದಾರೆ. ರವಿಚಂದ್ರನ್ ಚಿತ್ರದಲ್ಲಿ ನಟಿಸದೇ ಇರಲು ನಿರ್ಧರಿಸಿದ್ದಾರೆ.

ಆದರೆ ರವಿಚಂದ್ರನ್ ಮಾತ್ರ ಬೇರೆಯದೇ ಉತ್ತರ ನೀಡಿದ್ದಾರೆ. ಪಾರುಲ್ ಯಾದವ್‌ಗೆ ಪಾತ್ರ ಹೊಂದುತ್ತಿಲ್ಲ. ಹಾಗಾಗಿ ಆಕೆಯನ್ನು ಕೈ ಬಿಡಲಾಗಿದೆ. ಅಷ್ಟಕ್ಕೂ ಆಕೆಯನ್ನು ನಾಯಕಿಯನ್ನಾಗಿ ಆಯ್ಕೆಯೇ ಮಾಡಿರಲಿಲ್ಲ. ನಾಯಕಿಯ ಹುಡುಕಾಟ ನಡೆಯುತ್ತಿದೆ ಎಂದಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :