Widgets Magazine

ರಾಗಿಣಿ-ಮಂಜು ಕೊನೆಗೂ ರಾಜಿ: Ragini IPS ಮೇ 24ಕ್ಕೆ ರಿಲೀಸ್

ರಾಜೇಶ್ ಪಾಟೀಲ್|
PR
PR
ಕೆಲವರ ಪ್ರಕಾರ, 'ರಾಗಿಣಿ ಐಪಿಎಸ್' ಸ್ಥಗಿತಕ್ಕೆ ನಾಯಕಿ ರಾಗಿಣಿ ದ್ವಿವೇದಿ ಮೇಲಿನ ಕೋಪವೇ ಕಾರಣ. ಇನ್ನು ಕೆಲವರ ಪ್ರಕಾರ, ಶಾಸಕ ಅಭ್ಯರ್ಥಿಯಾಗಿ ಸ್ಪರ್ಧಿಸಲು ಟಿಕೆಟ್ ಬೇಕು ಎಂದು ನಿರ್ಮಾಪಕ ಕೆ. ಮಂಜು ಬೆನ್ನು ಹತ್ತಿದ್ದು. ಆದರೆ ಈಗ ಪರಿಸ್ಥಿತಿ ತಿಳಿಯಾಗಿದೆ. ಮಂಜು ಟಿಕೆಟ್ ವಂಚಿತರಾಗಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ರಾಗಿಣಿ ಜತೆ ರಾಜಿಯೂ ಆಗಿದ್ದಾರೆ!

ವರ್ಷದಿಂದ ಡಬ್ಬಾದಲ್ಲೇ ಸುದ್ದಿ ಮಾಡುತ್ತಿರುವ ಚಿತ್ರ 'ರಾಗಿಣಿ ಐಪಿಎಸ್'. ಈ ಚಿತ್ರದಲ್ಲಿ ಮೊದಲ ಬಾರಿಗೆ ರಾಗಿಣಿ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ರಾಗಿಣಿ ಕೈಯಲ್ಲಿರುವ ಏಕೈಕ ಚಿತ್ರವೂ ಇದೇ ಆಗಿದೆ. ಆದರೂ ಇದರ ಶೂಟಿಂಗ್ ಮುಗಿದಿರಲಿಲ್ಲ. ಚಿತ್ರೀಕರಣ ಸ್ಥಗಿತಗೊಳಿಸಿ ಮಂಜು ಅಚ್ಚರಿಗೆ ಕಾರಣರಾಗಿದ್ದರು.

ಆದರೆ ಕೆಲ ದಿನಗಳ ಹಿಂದೆ ಚಿತ್ರೀಕರಣ ಮುಗಿಸಲಾಗಿದೆ. ಬಾಕಿ ಇದ್ದ ಒಂದು ಹಾಡನ್ನು ಶೂಟ್ ಮಾಡಿ ಕುಂಬಳಕಾಯಿ ಒಡೆಯಲಾಗಿದೆ. ಈ ಸಂದರ್ಭ ರಾಗಿಣಿ ಜತೆ ಮಂಜು ಫೋಟೊಗೆ ಪೋಸ್ ಕೂಡ ಕೊಟ್ಟರು. ನಮ್ಮ ನಡುವೆ ಅಂತದ್ದೇನಿಲ್ಲ ಎಂದು ಇಬ್ಬರೂ ಜತೆಯಾಗಿ ನಿಂತು ಕಿಸಿದರು. ಪುಣ್ಯಕ್ಕೆ ಇದೇ ಖುಷಿಯಲ್ಲಿ ರಾಗಿಣಿ ಜತೆ ಇನ್ನೊಂದು ಚಿತ್ರ ಮಾಡುವುದಾಗಿ ಮಾತ್ರ ಮಂಜು ಹೇಳಲಿಲ್ಲ!

ಅಂದ ಹಾಗೆ, 'ರಾಗಿಣಿ ಐಪಿಎಸ್' ಮೇ 24ರಂದು ಬಿಡುಗಡೆಯಾಗುತ್ತಿದೆ. ಅಂದೇ ರಾಗಿಣಿ ಹುಟ್ಟುಹಬ್ಬ ಕೂಡ ಆಗಿರುವುದರಿಂದ ಅವರ ಪಾಲಿಗೆ ಡಬಲ್ ಧಮಾಕಾ.

ಇನ್ನು ರಾಗಿಣಿ ಖಾಲಿ ಖಾಲಿ ಎಂಬ ಆರೋಪಕ್ಕೆ ಸ್ಪಷ್ಟನೆಯ ರೀತಿಯ ಉತ್ತರ ಬಂದಿದೆ. 'ಮತ್ತೆ ಬನ್ನಿ ಪ್ರೀತ್ಸೋಣ' ಖ್ಯಾತಿಯ ರವೀಂದ್ರ ಎಚ್.ಪಿ. ದಾಸ್ ನಿರ್ದೇಶನದ ಹೊಸ ಚಿತ್ರದಲ್ಲಿ ನಾನೇ ನಾಯಕಿ ಎಂದು ರಾಗಿಣಿ ಹೇಳಿಕೊಂಡಿದ್ದಾರೆ. ಕಥೆ ತುಂಬಾ ಇಷ್ಟವಾಗಿದೆ ಎನ್ನುವುದನ್ನು ಬಿಟ್ಟರೆ, ನಾಯಕ ಸೇರಿದಂತೆ ಯಾವುದೇ ಗುಟ್ಟು ಬಿಟ್ಟು ಕೊಡಲಿಲ್ಲ.

ರಾಗಿಣಿ ಐಪಿಎಸ್ ಮತ್ತು ವಿಕ್ಟರಿ ಚಿತ್ರಗಳಲ್ಲಿ ಐಟಂ ಹಾಡುಗಳಲ್ಲಿ ಕುಣಿದಿರುವುದಕ್ಕೆ ಐಟಂ ಗರ್ಲ್ ಎಂದು ಕರೆದಿರುವುದನ್ನು ರಾಗಿಣಿ ತೀವ್ರವಾಗಿ ಆಕ್ಷೇಪಿಸಿದರು. ಆ ಹಾಡುಗಳು ಸ್ಪೆಷಲ್ ನಂಬರ್‌ಗಳೇ ಹೊರತು, ಐಟಂ ಹಾಡುಗಳಲ್ಲಿ. ಎರಡೂ ಚಿತ್ರಕ್ಕೆ ಅಗತ್ಯವಾಗಿತ್ತು ಎಂದು ಇತರ ನಾಯಕಿಯರಂತೆ ಡೈಲಾಗ್ ಹೊಡೆದರು.


ಇದರಲ್ಲಿ ಇನ್ನಷ್ಟು ಓದಿ :