ಶಿವಣ್ಣ 'ಕಡ್ಡಿಪುಡಿ', 'ರಾಗಿಣಿ ಐಪಿಎಸ್' ಮೇ 24ಕ್ಕೆ ಬಿಡುಗಡೆಯಾಗಲ್ಲ

ಸೋಮವಾರ, 20 ಮೇ 2013 (13:08 IST)

PR
ಕನ್ನಡ ಸಿನಿ ಪ್ರೇಮಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕನಾಗಿರುವ, ದುನಿಯಾ ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರ ಮೇ 24ರಂದು ಬಿಡುಗಡೆಯಾಗುತ್ತಿಲ್ಲ!

ಕಾರಣ ಗೊತ್ತಿಲ್ಲ, ಆದರೆ 'ಕಡ್ಡಿಪುಡಿ' ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಲಾಗಿದೆ. ರಾಧಿಕಾ ಪಂಡಿತ್ ಇದೇ ಮೊದಲ ಬಾರಿ ಶಿವಣ್ಣನಿಗೆ ನಾಯಕಿಯಾಗಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಆಡಿಯೊ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಇದೇ ರೀತಿ ಒಂದೆರಡು ವಾರ ಕ್ರೇಜ್ ಹುಟ್ಟಿಸಿ, ನಂತರ ಬಿಡುಗಡೆ ಮಾಡುವ ತೀರ್ಮಾನಕ್ಕೆ ನಿರ್ಮಾಪಕ ಸ್ವಯಂವರ ಚಂದ್ರು ಬಂದಂತಿದೆ.

ಮೇ 24ಕ್ಕೆ ಬಿಡುಗಡೆಯೆಂದು ಘೋಷಣೆಯಾಗಿದ್ದ ಚಿತ್ರಕ್ಕೆ ಹಿನ್ನಡೆಯಾಗಲು ಇನ್ನೊಂದು ಕಾರಣ, ಈ ವಾರ ಬಿಡುಗಡೆಯಾಗುತ್ತಿರುವ ಇತರ ಚಿತ್ರಗಳು. ಆಕ್ಷನ್ ಕ್ವೀನ್ ಮಾಲಾಶ್ರೀ ಅವರ 'ಎಲೆಕ್ಷನ್', ಲೂಸ್ ಮಾದ ಯೋಗಿಯ 'ಜಿಂಕೆಮರಿ' ಹಾಗೂ 'ಕಾವೇರಿ ನಗರ' ಎಂಬ ಚಿತ್ರಗಳು ಮೇ 23 ಮತ್ತು 24ರಂದು ಬಿಡುಗಡೆಯಾಗುತ್ತಿವೆ.

ಅಲ್ಲದೆ, ನಾಯಕಿ ರಾಧಿಕಾ ಪಂಡಿತ್ ತನ್ನ ಸಹೋದರನ ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಶಿವರಾಜ್ ಕುಮಾರ್ ಕೂಡ ಮುಂದಿನ ಚಿತ್ರ 'ಭಜರಂಗಿ'ಯಲ್ಲಿ ನಟಿಸುತ್ತಿದ್ದಾರೆ. ಡೇಟ್ಸ್ ಸಮಸ್ಯೆಯಿಂದ ಪ್ರಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡು ಚಿತ್ರದ ಬಿಡುಗಡೆಯನ್ನು ವಾರ ಅಥವಾ ಎರಡು ವಾರದ ಮಟ್ಟಿಗೆ ಮುಂದೂಡಲು ನಿರ್ಧರಿಸಲಾಗಿದೆ.

ಅಂದ ಹಾಗೆ, ಕಡ್ಡಿಪುಡಿ ಚಿತ್ರದ ಜತೆ ಬಿಡುಗಡೆಯಾಗಬೇಕಿದ್ದ ರಾಗಿಣಿ ನಾಯಕಿಯಾಗಿರುವ 'ರಾಗಿಣಿ ಐಪಿಎಸ್' ಚಿತ್ರವೂ ಮುಂದಕ್ಕೆ ಹೋಗಿದೆ. ನಾಯಕಿ ಪ್ರಧಾನ ಚಿತ್ರ 'ಎಲೆಕ್ಷನ್' ಬಿಡುಗಡೆಯಾಗುತ್ತಿರುವುದರಿಂದ ಅದೇ ಸಾಲಿಗೆ ಸೇರುವ ಇನ್ನೊಂದು ಚಿತ್ರ ತೆರೆಗೆ ಬಂದರೆ ಪ್ರೇಕ್ಷಕರು ಬರಲಾರರು ಎಂಬುದನ್ನು ಮನಗಂಡು ನಿರ್ಮಾಪಕ ಕೆ. ಮಂಜು ಈ ತೀರ್ಮಾನಕ್ಕೆ ಬಂದಿದ್ದಾರೆ.

ಬಿಡುಗಡೆ ಮುಂದಕ್ಕೆ ಹಾಕಲ್ಪಟ್ಟಿರುವ ಈ ಎರಡೂ ಚಿತ್ರಗಳ ಮುಂದಿನ ಬದಲಾವಣೆ ಶೀಘ್ರದಲ್ಲೇ ಘೋಷಣೆಯಾಗುವ ನಿರೀಕ್ಷೆಗಳಿವೆ.ಇದರಲ್ಲಿ ಇನ್ನಷ್ಟು ಓದಿ :  

Widgets Magazine
Widgets Magazine