Widgets Magazine

ಭಾರತೀಯ ವಾಸ್ತುಶಿಲ್ಪವನ್ನು ಜಗತ್ತೇ ಗುರುತಿಸಲಿದೆ: ಕೋರೆ

ಹುಬ್ಬಳ್ಳಿ| ನಾಗೇಂದ್ರ ತ್ರಾಸಿ| Last Modified ಗುರುವಾರ, 20 ಜನವರಿ 2011 (17:54 IST)
ಮುಂದೊಂದು ದಿನ ಇಡಿ ಜಗತ್ತೇ ಭಾರತೀಯ ವಾಸ್ತುಶಿಲ್ಪವನ್ನು ಗುರುತಿಸುವ ಕಾಲ ಬರುತ್ತದೆ ಎಂದು ಸೊಸೈಟಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಭವಿಷ್ಯ ನುಡಿದಿದ್ದಾರೆ.

ನಗರದ ಕೆಎಲ್ಇ ಸೊಸೈಟಿಯ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾರಂಭಗೊಂಡ 2010-11ನೇ ಸಾಲಿನ ಸಾರ್ಕ್ ದೇಶಗಳ ಮಟ್ಟದ 53ನೇ ನಾಸಾ (ನ್ಯಾಶನಲ್ ಅಸೋಸಿಯೇಶನ್ ಆಫ್ ಸ್ಟೂಡೆಂಟ್ಸ್ ಆಫ್ ಆರ್ಕಿಟೆಕ್ಚರ್) ಸಮಾವೇಶ 'ಯುಟೊಪಿಯಾ-2010'ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರೋಮ್, ಯುರೋಪ್ ವಾಸ್ತುಶಿಲ್ಪಗಳನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆಯೇ ಭಾರತೀಯ ವಾಸ್ತುಶಿಲ್ಪವನ್ನೂ ಗುರುತಿಸಲಾಗುತ್ತದೆ. ಉತ್ತರ ಕರ್ನಾಟಕದ ಹಂಪಿ, ಐಹೊಳೆ ಸೇರಿದಂತೆ ರಾಷ್ಟ್ರಾದ್ಯಂತ ಪ್ರವಾಸಿ ತಾಣಗಳಲ್ಲಿರುವ ವಾಸ್ತುಶಿಲ್ಪವೇ ಇದಕ್ಕೆ ಸಾಕ್ಷಿ ಎಂದರು.

ಭಾರತೀಯ ವಾಸ್ತುಶಿಲ್ಪವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಜವಾಬ್ದಾರಿ ವಾಸ್ತುಶಿಲ್ಪಿಗಳ ಮೇಲಿದೆ. ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಐಐಎ ಅಧ್ಯಕ್ಷ ಪ್ರಫುಲ್ ಕಾರ್ಣಿಕ್ ಮಾತನಾಡಿ, ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳ ವಿಚಾರಶಕ್ತಿಯನ್ನು ಅಭಿವೃದ್ಧಿಗೊಳಿಸುವುದು ಈ ಸಮಾವೇಶದ ಮುಖ್ಯ ಉದ್ದೇಶ. ಲೂಟಿಯಾಗುತ್ತಿರುವ ಅರಣ್ಯ ಸಂಪತ್ತಿನಿಂದ ನೈಸರ್ಗಿಕ ಹಾನಿ ಹೆಚ್ಚಾಗಿ ಸಂಭವಿಸುತ್ತಿದೆ. ನೈಸರ್ಗಿಕ ವಿಪತ್ತು ಉಂಟಾದ ಸಂದರ್ಭದಲ್ಲಿ ಕಂಡುಕೊಳ್ಳಬೇಕಾದ ಪರಿಹಾರ ಕಾರ್ಯದ ಸಮಯದಲ್ಲಿ ವಾಸ್ತುಶಿಲ್ಪಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.


ಇದರಲ್ಲಿ ಇನ್ನಷ್ಟು ಓದಿ :