Widgets Magazine

ಉಪವಾಸ ನಿರತ ನಾಯ್ಡು ಬಂಧನ, ಆಸ್ಪತ್ರೆಗೆ ದಾಖಲು

ಹೈದರಾಬಾದ್| ಗಿರಿಧರ್|
ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಆಮರಣಾಂತ ನಿರಶನ ನಡೆಸುತ್ತಿದ್ದ ತೆಲುಗು ದೇಶಂ ಪಕ್ಷದ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು ಅವರನ್ನು ಸೋಮುವಾರ ಮುಂಜಾನೆ ಬಲವಂತವಾಗಿ ವಶಕ್ಕೆ ತೆಗೆದುಕೊಂಡಿರುವ ಪೊಲೀಸರು, ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇಲ್ಲಿನ ಶಾಸಕರ ಭವನದಲ್ಲಿ ಕಳೆದ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಚಂದ್ರಬಾಬು ನಾಯ್ಡು ಅವರನ್ನು ಸುಮಾರು ಏಳು ಗಂಟೆಗಳ ಕಾಲ ನಡೆದ ಹೈಡ್ರಾಮಾದ ನಂತರ ಬಂಧಿಸಲಾಯಿತು.

ಈ ಸಂದರ್ಭದಲ್ಲಿ ಟಿಡಿಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ಕೂಡ ನಡೆದಿದೆ. ಘಟನೆಯಲ್ಲಿ ನಾಯ್ಡು ಪುತ್ರ ಲೋಕೇಶ್, ವಿಧಾನ ಪರಿಷತ್ ಸದಸ್ಯ ವೈ.ವಿ.ಬಿ. ರಾಜೇಂದ್ರ ಪ್ರಸಾದ್ ಮತ್ತು ಇತರರು ಗಾಯಗೊಂಡರು.

ನಾಯ್ಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ, ಅವರು ಚಿಕಿತ್ಸೆಗೆ ಸ್ಪಂದಿಸದೆ ಉಪವಾಸ ಮುಂದುವರಿಸಿದ್ದಾರೆ.

ಈ ನಡುವೆ ನಾಯ್ಡು ಮೇಲೆ ಆತ್ಮಹತ್ಯೆ ಯತ್ನ ಹಾಗೂ ಟಿಡಿಪಿಯ ಇತರ ನಾಯಕರ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.

ನಾಯ್ಡು ಬಂಧಿಸುತ್ತಿದ್ದಂತೆ ಟಿಡಿಪಿ ಸೋಮವಾರ ಬಂದ್‌ಗೆ ಕರೆ ನೀಡಿದೆ. ಇದನ್ನು ಎಡಪಕ್ಷಗಳು ಕೂಡ ಬೆಂಬಲಿಸಿವೆ. ರಾಜ್ಯದ ಹಲವೆಡೆ ಟಿಡಿಪಿ ಕಾರ್ಯಕರ್ತರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಮಳೆಯಿಂದ ಭಾರೀ ನಷ್ಟಕ್ಕೊಳಗಾಗಿರುವ ರೈತರಿಗೆ ಅಲ್ಪ ಪರಿಹಾರವನ್ನಷ್ಟೇ ನೀಡಲಾಗಿದೆ. ಇದನ್ನು ಹೆಚ್ಚು ಮಾಡಬೇಕೆಂದು ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ನಾಯ್ಡು ಅವರನ್ನು ಬಂಧಿಸಲು ಭಾನುವಾರ ರಾತ್ರಿ 10 ಗಂಟೆಯಿಂದಲೇ ಯತ್ನಿಸಲಾಗಿತ್ತು. ಅವರು ಉಪವಾಸ ನಡೆಸುತ್ತಿದ್ದ ಶಾಸಕರ ಭವನದ ಸುತ್ತ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ಜಮಾವಣೆ ಮಾಡಲಾಗಿತ್ತು.

ಇದನ್ನು ಗಮನಿಸಿದ ಸಾವಿರಾರು ಟಿಡಿಪಿ ಕಾರ್ಯಕರ್ತರು ನಾಯ್ಡು ರಕ್ಷಣೆಗೆ ಮುಂದಾಗಿದ್ದರು. ಅವರನ್ನು ಬಂಧಿಸದಂತೆ ತಡೆಯಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. ಆದರೂ ಪೊಲೀಸರು ನಾಯ್ಡು ಅವರನ್ನು ಬಂಧಿಸಿದರು.ಇದರಲ್ಲಿ ಇನ್ನಷ್ಟು ಓದಿ :