ಭಾರತದ ಚೊಚ್ಚಲ ಚಂದ್ರ ಯಾತ್ರೆಯಾಗಿರುವ 'ಚಂದ್ರಯಾನ-1', ಚಂದ್ರನ ಮೇಲ್ಮೈಯಲ್ಲಿ ಅಪಾರ ಪ್ರಮಾಣದ ನೀರು ಇದೆ ಎಂಬುದನ್ನು ಪತ್ತೆ ಹಚ್ಚಿದ್ದು, ಇದರ ಹಿರಿಮೆಯು ನಾಸಾ ಒದಗಿಸಿದ ಚಂದ್ರನ ಖನಿಜಾಂಶ ನಕಾಶೆ ಯಂತ್ರ (ಎಂ3) ಕ್ಕೆ ಸಲ್ಲುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಶುಕ್ರವಾರ ಇಸ್ರೋ ಮತ್ತು ನಾಸಾ ಅಧಿಕೃತವಾಗಿ ಪ್ರಕಟಿಸಲಿದೆ.
PTI
ಚಂದ್ರನಲ್ಲಿ ನೀರು ದೊರೆತಿರುವ ಬಗ್ಗೆ ಬೆಂಗಳೂರಿನಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ದೇಶಕ ಮಾಧವನ್ ನಾಯರ್ ಪ್ರತಿಕ್ರಿಯಿಸಿ, ಇದೊಂದು ಅದ್ಭುತವಾದ ಸಾಕ್ಷ್ಯಾಧಾರವಾಗಿದೆ ಎಂದು ಹೇಳಿದ್ದಾರೆ. ನೀರಿನ ಇರುವಿಕೆಯ ಕುರುಹುಗಳಷ್ಟೇ ಇದುವರೆಗೆ ದೊರೆತಿದ್ದವು. ಇದೀಗ ಚಂದ್ರಯಾನ-1ರ ಮೂಲಕ ಅತ್ಯಂತ ಮಹತ್ವದ ಆಧಾರವೊಂದು ಲಭಿಸಿದೆ. ಇದುವರೆಗೆ ಚಂದ್ರನಲ್ಲಿ ನೀರು ಇರುವ ಸಂಗತಿಯು ಯಾವುದೇ ಗಗನ ಯಾತ್ರೆಯಲ್ಲಿಯೂ ಧನಾತ್ಮಕವಾಗಿ ಖಚಿತಪಟ್ಟಿರಲಿಲ್ಲ ಎಂದಿದ್ದಾರೆ ನಾಯರ್.