Widgets Magazine

ಅಯೋಧ್ಯೆ ತೀರ್ಪು: ವಿವಾದಿತ ಜಮೀನು ರಾಮಲಲ್ಲಾ ಪಾಲು, ಮಂದಿರ ನಿರ್ಮಾಣದ ಹೊಣೆ ಸರ್ಕಾರಕ್ಕೆ

ನವದೆಹಲಿ| Krishnaveni K| Last Modified ಶನಿವಾರ, 9 ನವೆಂಬರ್ 2019 (11:14 IST)
ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ವಿವಾದದ ಕುರಿತಂತೆ ದೇಶವೇ ಕಾಯುತ್ತಿರುವ ಮಹಾನ್ ತೀರ್ಪನ್ನು ಸುಪ್ರೀಂಕೋರ್ಟ್ ನೀಡಿದ್ದು, ಇದು ಐವರು ನ್ಯಾಯಮೂರ್ತಿಗಳ ಸರ್ವಾನುಮತದ ತೀರ್ಪು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
 

ಸುಮಾರು ಅರ್ಧಗಂಟೆಗಳ ಕಾಲ ತೀರ್ಪು ಓದಲು ಸಮಯ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ ಮುಖ್ಯ ನ್ಯಾಯಮೂರ್ತಿ ನ್ಯಾ. ರಂಜನ್ ಗೊಗೊಯ್ ತೀರ್ಪು ನೀಡಿದ್ದಾರೆ.
 
ಮೊದಲಿಗೆ ಪ್ರಕರಣದ ಇತಿಹಾಸದ ವಿವರಣೆ ನೀಡಿದ ನ್ಯಾಯಮೂರ್ತಿಗಳು ಮೊದಲನೆಯದಾಗಿ ಶಿಯಾ ವಕ್ಷ್ ಬೋರ್ಡ್ ಈ ಪ್ರಕರಣದಲ್ಲಿ ಪ್ರಮುಖ ದಾವೇದಾರ ಅಲ್ಲ ಎಂದು ಅರ್ಜಿ ತಳ್ಳಿ ಹಾಕಿದರು. ಸುನ್ನಿ ವಕ್ಷ್ ಬೋರ್ಡ್ ಪ್ರಕರಣದ ಪ್ರಮುಖ ದಾವೇದಾರ ಎಂದು ನಿರ್ಣಯಕ್ಕೆ ಬಂದಿರುವುದಾಗಿ ಹೇಳಿದರು. ಅಂತಿಮವಾಗಿ ಇದು ರಾಮ್ ಲಲ್ಲಾ ಮತ್ತು ಸುನ್ನಿ ವಕ್ಷ್ ಬೋರ್ಡ್ ನಡುವಿನ ದಾವೆಯಾಗಿ ಪರಿಗಣಿಸಲಾಯಿತು.
 
ಈ ಪ್ರಕರಣದಲ್ಲಿ ಜನರ ಭಾವನೆಗಳಿಗೆ ಬೆಲೆ ಕೊಡಲಾಗಿದೆ. ಹಾಗೆಯೇ ಪುರಾತತ್ವ ಇಲಾಖೆಗಳ ಸಾಕ್ಷ್ಯಗಳನ್ನೂ ಪರಿಗಣಿಸಲಾಗಿದೆ. ಬಾಬರಿ ಮಸೀದಿ ಖಾಲಿ ಸ್ಥಳದಲ್ಲಿ ನಿರ್ಮಾಣವಾಗಿರಲಿಲ್ಲ. ಮಸೀದಿ ಅಡಿಪಾಯದ ಕೆಳಗೆ ವಿಶಾಲವಾದ ರಚನೆಯಿತ್ತು. ಅದು ಇಸ್ಲಾಮಿಕ್ ರಚನೆಯಾಗಿರಲಿಲ್ಲ. ಉತ್ಖನನದ ವೇಳೆ ಸಿಕ್ಕ ರಚನೆಗಳು ಇಸ್ಲಾಮಿಕ್ ಆಗಿರಲಿಲ್ಲ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ. ಈ ಮೂಲಕ ಮಸೀದಿ ಯಾವುದೋ ಒಂದು ಕಟ್ಟದ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂದು ಸಾಬೀತಾದಂತಾಗಿದೆ.
 
ಹಳೆಯ ಕಟ್ಟಡದ ವಿನ್ಯಾಸ, ಅವಶೇಷಗಳು ಇದ್ದಿದ್ದು ನಿಜ. ಆದರೆ ಅದರ್ಥ ಮಂದಿರ ಒಡೆದೇ ಮಸೀದಿ ಕಟ್ಟಲಾಗಿದೆ ಎನ್ನುವುದಕ್ಕೆ ಖಚಿತತೆ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
 
ಹಿಂದೂಗಳು ಅಯೋಧ್ಯೆಯನ್ನು ರಾಮಜನ್ಮಭೂಮಿ ಎಂದು ನಂಬುತ್ತಾರೆ. ಈ ವಿವಾದಿತ ಸ್ಥಳದಲ್ಲೇ ಹಿಂದೂಗಳು ಪೂಜೆ ಮಾಡುತ್ತಾ ಬಂದಿದ್ದಾರೆ. ರಾಮಹುಟ್ಟಿದ್ದು ಇಲ್ಲಿಯೇ ಎಂಬುದಕ್ಕೆ ಯಾವುದೇ ವಿವಾದವಿಲ್ಲ. ಮಸೀದಿಯ ಪ್ರಮುಖ ಗುಂಬಜನ್ನು ರಾಮನ ಜನ್ಮ ಸ್ಥಳ ಎಂದು ನಂಬುತ್ತಾರೆ. ಪುರಾಣಗಳಲ್ಲೂ ರಾಮಲಲ್ಲಾ ಬಗ್ಗೆ ಉಲ್ಲೇಖವಿದೆ. ಚಬೂತರ್, ಸೀತಾ ರಸೋಯಿ, ಭಂಡಾರ್ ಗಳೆಲ್ಲವೂ ರಾಮನ ಹುಟ್ಟಿಗೆ ಪುಷ್ಠಿ ಕೊಡುತ್ತವೆ.
 
ಹಾಗಂತ ಕೇವಲ ನಂಬಿಕೆಯಿಂದ ಹಕ್ಕನ್ನು ಸಾಬೀತು ಮಾಡಲು ಸಾಧ‍್ಯವಿಲ್ಲ. ಕಾನೂನಿನ ಆಧಾರದ ಮೇಲೆ ಭೂಮಿಯ ಹಕ್ಕನ್ನು ನಿರ್ಧರಿಸಲಾಗುತ್ತದೆ. ಮಸೀದಿಯ ಕೆಳಗಡೆ ಇರೋದು ಹಿಂದು ರಚನೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲ. ವಿವಾದಿತ ಸ್ಥಳದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಮಾಡುತ್ತಿದ್ದರು. ಆದರೆ 1856 ರಿಂದ 57 ರವರೆಗೆ ವಿವಾದಿತ ಸ್ಥಳದಲ್ಲಿ ನಮಾಜ್ ಮಾಡುತ್ತಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ.
 
ಮಸೀದಿಯ ಒಳಭಾಗದಲ್ಲಿ ಹಿಂದೂಗಳು ಕೂಡಾ ಪೂಜೆ ಮಾಡುತ್ತಿದ್ದರು. ಆದರೆ ವಿವಾದಿತ ಸ್ಥಳವಾದಾಗ ಬ್ರಿಟಿಷರು ಇದನ್ನು ಎರಡು ಭಾಗ ಮಾಡಿದರು. ಇದನ್ನು  ನಿರ್ಬಂಧಿಸಿದಾಗ ಹಿಂದೂಗಳು ಹೊರಭಾಗದಲ್ಲಿ ಪೂಜೆ ಮಾಡಲಾರಂಭಿಸಿದರು. ಮಸೀದಿಯ ಮುಖ್ಯ ಗುಂಬಜ್ ಕೆಳಗೆ ಗರ್ಭಗುಡಿ ಇತ್ತೆಂದು ನಂಬಲಾಗುತ್ತಿದೆ.
 
ಇನ್ನು, ಇತಿಹಾಸಕಾರರ ವಿವರಣೆ, ಸಾಕ್ಷ್ಯ ಹಿಂದೂಗಳ ಪರವಿದೆ. ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ.  ಆದರೆ ಅಂದು ಮಸೀದಿಗೆ ಹಾನಿ ಮಾಡಿದ್ದು ಕಾನೂನಿನ ಉಲ್ಲಂಘನೆ. ಸಂವಿಧಾನ ಎಲ್ಲಾ ಧರ್ಮದವರಿಗೂ ಸಮಾನ ಹಕ್ಕು ನೀಡಿದೆ. ಅಲಹಾಬಾದ್ ಕೋರ್ಟ್ ಜಮೀನನ್ನು ಮೂರು ಭಾಗ ಮಾಡಿರುವುದು ಸರಿಯಲ್ಲ. ಸುನ್ನಿ ಬೋರ್ಡ್ ಗೆ ಪ್ರತ್ಯೇಕ ಜಾಗ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
 
ಸುನ್ನಿ ವಕ್ಷ್ ಗೆ ಪ್ರತ್ಯೇಕ ಮಸೀದಿ ನಿರ್ಮಾಣಕ್ಕೆ ಸರ್ಕಾರ ಪ್ರತ್ಯೇಕವಾಗಿ 5 ಎಕರೆ ಭೂಮಿ ನೀಡಬೇಕ. ರಾಮಜನ್ಮ ಭೂಮಿ ಸ್ಥಳವನ್ನು ಟ್ರಸ್ಟ್ ಗೆ ಕೊಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ.
 
ಮಂದಿರ ನಿರ್ಮಿಸಲು ನಿಯಮ ರೂಪಿಸಿ ಎಂದು ಆದೇಶ ನೀಡಿದ ಸುಪ್ರೀಂ ಈ ಮೂಲಕ ಮಂದಿರ ನಿರ್ಮಾಣಕ್ಕೆ ಸ್ಪಷ್ಟ ಹಸಿರು ನಿಶಾನೆ ತೋರಿದೆ. ಇನ್ನು, ಈ ಮೂಲಕ ವಿವಾದಿತ ಜಮೀನು ರಾಮಲಲ್ಲಾ ಪಾಲಾಗಿದೆ ಎನ್ನಬಹುದು. ಮಂದಿರ ನಿರ್ಮಾಣದ ಹೊಣೆ ಸರ್ಕಾರದ್ದು ಎಂದು ಆದೇಶ ನೀಡಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :