ಗಣೇಶ ಚತುರ್ಥಿ ವಿಶೇಷ ಹೋಳಿಗೆ...

ಬೆಂಗಳೂರು, ಮಂಗಳವಾರ, 11 ಸೆಪ್ಟಂಬರ್ 2018 (15:31 IST)

ಗಣೇಶ ಚತುರ್ಥಿ ಎಂದರೇ ವಿಶೇಷ ತಿಂಡಿ ಕಜ್ಜಾಯಗಳ ಹಬ್ಬ. ನಮ್ಮಲ್ಲಿ ಸಾಮಾನ್ಯವಾಗಿ ಯಾವ ಹಬ್ಬ ಅಥವಾ ವಿಶೇಷ ದಿನ ಬಂದಾಗ ಹೋಳಿಗೆಯನ್ನು ಮಾಡೇ ಮಾಡುತ್ತಾರೆ. ಹಾಗಿರುವಾಗ ಗಣೇಶ ಚತುರ್ಥಿಗೆ ಹೋಳಿಗೆ ಇಲ್ಲವೆಂದರೆ ಹೇಗೆ..? ಕೆಲವರು ಇದನ್ನು ಹೋಳಿಗೆ ಎಂದರೆ ಕೆಲವು ಕಡೆ ಒಬ್ಬಟ್ಟು ಎಂದು ಕರೆಯುತ್ತಾರೆ. ಒಬ್ಬೊಬ್ಬರೂ ಒಂದೊಂದು ರೀತಿಯ ಹೋಳಿಗೆಯನ್ನು ತಯಾರಿಸುತ್ತಾರೆ. ಕಡಲೆ ಬೇಳೆ ಮತ್ತು ಕಾಯಿ ಹೋಳಿಗೆಯನ್ನು ಮಾಡುವ ವಿಧಾನಕ್ಕಾಗಿ ಈ ಕೆಳಗೆ ನೋಡಿ.
1. ಬೇಳೆ ಹೋಳಿಗೆ:
ಕಡಲೆ ಬೇಳೆ - 2-3 ಕಪ್
ಕಾಯಿ ತುರಿ - 1/2 ಕಪ್
ತುರಿದ ಬೆಲ್ಲ ಅಥವಾ ಸಕ್ಕರೆ - ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ - 2 ಚಮಚ
ಮೈದಾಹಿಟ್ಟು - 2 ಕಪ್
ಚಿರೋಟಿ ರವೆ - 1/4 ಕಪ್
ತುಪ್ಪ - 2-3 ಚಮಚ
ಅರಿಶಿಣ - ಚಿಟಿಕೆ
ಉಪ್ಪು - ಸ್ವಲ್ಪ
ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
ಮೊದಲಿಗೆ ಚಿರೋಟಿ ರವೆ ಮತ್ತು ಮೈದಾಹಿಟ್ಟನ್ನು ತೆಗೆದುಕೊಂಡು ಅದಕ್ಕೆ ಅರಿಶಿಣ, ಉಪ್ಪು, ತುಪ್ಪವನ್ನು ಹಾಕಿ ಅಗತ್ಯವಿರುವಷ್ಟು ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಮಿಶ್ರಣ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾಗಿರಬೇಕು. ತಯಾರಿಸಿದ ಹಿಟ್ಟಿಗೆ ಸ್ವಲ್ಪ ಹೆಚ್ಚೇ ಎಣ್ಣೆಯನ್ನು ಸವರಿ 4-5 ಗಂಟೆ ಹಾಗೆಯೇ ನೆನೆಯಲು ಬಿಟ್ಟರೆ ಕಣಕ ಸಿದ್ದವಾಗುತ್ತದೆ.
 
ನಂತರ 2-3 ಗಂಟೆ ನೆನೆಸಿದ ಕಡಲೆಬೇಳೆ, ಚಿಟಿಕೆ ಅರಿಶಿಣ ಮತ್ತು ಅಗತ್ಯವಿರುವಷ್ಟು ನೀರನ್ನು ಹಾಕಿ ಬೇಯಿಸಿಕೊಳ್ಳಿ. ಇದರೊಂದಿಗೆ 2 ಚಮಚ ಎಣ್ಣೆಯನ್ನು ಸೇರಿಸಿದರೆ ಬೇಳೆ ಶೀಘ್ರವಾಗಿ ಬೇಯುತ್ತದೆ. ಹೀಗೆ ಬೇಳೆ ಬೆಂದ ನಂತರ ಅದರ ನೀರನ್ನು ಸೋಸಿ. ಆ ನಂತರ ಸೋಸಿದ ಬೇಳೆಗೆ ನಿಮ್ಮ ರುಚಿಗೆ ತಕ್ಕಂತೆ ಬೆಲ್ಲ ಅಥವಾ ಸಕ್ಕರೆಯನ್ನು ಸೇರಿಸಿ, ಇದಕ್ಕೆ ಕಾಯಿತುರಿ, ಏಲಕ್ಕಿ ಪುಡಿಯನ್ನು ಬೆರೆಸಿ ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ ಚೆನ್ನಾಗಿ ಎಲ್ಲವೂ ಬೆರೆಯುವಂತೆ ತಿರುಗಿಸಿ. ಇವೆಲ್ಲವೂ ಚೆನ್ನಾಗಿ ಮಿಕ್ಸ್ ಆದನಂತರ ಉರಿಯನ್ನು ಆಫ್ ಮಾಡಿ ಈ ಮಿಶ್ರಣ ಸ್ವಲ್ಪ ತಣ್ಣಗಾಗಲು ಬಿಡಿ. ನಂತರ ಅದನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಹೂರಣವನ್ನು ತಯಾರಿಸಿಕೊಳ್ಳಿ. ನೀವು ಹೂರಣವನ್ನು ತಯಾರಿಸಲು ತೊಗರಿ ಬೇಳೆ ಹಾಗೂ ಹೆಸರು ಬೇಳೆಯನ್ನೂ ಸಹ ಬಳಸಬಹುದು.
 
ಈ ಮೊದಲೇ ತಯಾರಿಸಿಟ್ಟುಕೊಂಡ ಕಣಕ ನಾದಿಕೊಳ್ಳಿ ಹಾಗೂ ಅದನ್ನು ಮತ್ತು ಹೂರಣವನ್ನು ಚಿಕ್ಕ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕದ ಉಂಡೆಯನ್ನು ಪೂರಿಯ ಹದಕ್ಕೆ ಲಟ್ಟಿಸಿಕೊಂಡು ಅಥವಾ ಕೈಯಲ್ಲೇ ತಟ್ಟಿ ಅದರೊಳಗೆ ಹೂರಣವನ್ನು ತುಂಬಬೇಕು. ನಂತರ ಎಣ್ಣೆಯನ್ನು ಹಚ್ಚಿಕೊಂಡು ಅಥವಾ ಮೈದಾ ಹಿಟ್ಟಿನಲ್ಲಿ ಅದ್ದಿಕೊಂಡು ಚಪಾತಿಯ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಅದನ್ನು ಮಧ್ಯಮ ಉರಿಯಲ್ಲಿ ತವಾದ ಮೇಲೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಹೋಳಿಗೆ ಅಥವಾ ಒಬ್ಬಟ್ಟು ರೆಡಿಯಾಗುತ್ತದೆ. ಇದನ್ನು ನೀವು ಹಾಲಿನ ಜೊತೆಗೆ ಅಥವಾ ತುಪ್ಪದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.
 
2. ಕಾಯಿ ಹೋಳಿಗೆ:
 
ಕಾಯಿ ತುರಿ - 3-4 ಕಪ್
ತುರಿದ ಬೆಲ್ಲ ಅಥವಾ ಸಕ್ಕರೆ - ರುಚಿಗೆ ತಕ್ಕಷ್ಟು
ಏಲಕ್ಕಿ ಪುಡಿ - 2 ಚಮಚ
ಮೈದಾಹಿಟ್ಟು - 2 ಕಪ್
ಚಿರೋಟಿ ರವೆ - 1/4 ಕಪ್
ತುಪ್ಪ - 2-3 ಚಮಚ
ಅರಿಶಿಣ - ಚಿಟಿಕೆ
ಉಪ್ಪು - ಸ್ವಲ್ಪ
ಎಣ್ಣೆ - ಸ್ವಲ್ಪ
 
ಮಾಡುವ ವಿಧಾನ:
ಈ ಮೊದಲೇ ಹೇಳಿದಂತೆ ಮೈದಾಹಿಟ್ಟು, ರವೆ, ತುಪ್ಪ, ಉಪ್ಪು ಮತ್ತು ಅರಿಶಿಣವನ್ನು ಸೇರಿಸಿ ಕಣಕವನ್ನು ತಯಾರಿಸಿಕೊಳ್ಳಿ. ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ಕಾಯಿ ತುರಿ ಮತ್ತು ರುಚಿಗೆ ತಕ್ಕಷ್ಟು ಬೆಲ್ಲವನ್ನು ಸೇರಿಸಿ ಚೆನ್ನಾಗಿ ತಿರುವಿ. ಇದು ಪಾಕ ಬಂದು ಸ್ವಲ್ಪ ಗಟ್ಟಿಯಾದಾಗ ಇದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಸ್ಟೌ ಆಫ್ ಮಾಡಿದರೆ ಹೂರಣ ಸಿದ್ಧವಾಗುತ್ತದೆ.
 
ಹೂರಣ ಸ್ವಲ್ಪ ತಣ್ಣಗಾದ ಮೇಲೆ ಕಣಕ ಹಾಗೂ ಹೂರಣ ಎರಡನ್ನೂ ಉಂಡೆಗಳನ್ನಾಗಿ ಮಾಡಿಕೊಳ್ಳಿ. ಕಣಕದ ಉಂಡೆಯನ್ನು ಪೂರಿಯ ಹದಕ್ಕೆ ಲಟ್ಟಿಸಿಕೊಂಡು ಅಥವಾ ಕೈಯಲ್ಲೇ ತಟ್ಟಿ ಅದರೊಳಗೆ ಹೂರಣವನ್ನು ತುಂಬಬೇಕು. ನಂತರ ಎಣ್ಣೆಯನ್ನು ಹಚ್ಚಿಕೊಂಡು ಅಥವಾ ಮೈದಾ ಹಿಟ್ಟಿನಲ್ಲಿ ಅದ್ದಿಕೊಂಡು ಚಪಾತಿಯ ಆಕಾರಕ್ಕೆ ಲಟ್ಟಿಸಿಕೊಳ್ಳಿ. ಅದನ್ನು ಮಧ್ಯಮ ಉರಿಯಲ್ಲಿ ತವಾದ ಮೇಲೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ಹೋಳಿಗೆ ಸಿದ್ಧವಾಗುತ್ತದೆ. ಇದನ್ನು ನೀವು ತುಪ್ಪದ ಜೊತೆಗೆ ತಿನ್ನಲು ರುಚಿಯಾಗಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬಿರು ಬೇಸಿಗೆಗೆ ಸವಿಯಿರಿ ತಂಪಾದ ಮೊಸರಿನ ತಿನಿಸುಗಳು

ಬೇಸಿಗೆಯ ದಾಹಕ್ಕೆ ಎಷ್ಟು ನೀರು ಕುಡಿದರೂ ಸಾಕು ಎಂದು ಅನ್ನಿಸುವುದಿಲ್ಲ. ಬಿರು ಬೇಸಿಗೆಯಲ್ಲಿ ದೇಹವನ್ನು ...

news

ಗಣೇಶ ಚತುರ್ಥಿಗೆ ಮಾಡಿ ಸಾಂಪ್ರದಾಯಿಕ ಪಂಚಕಜ್ಜಾಯಗಳು...

ಗಣೇಶನ ಹಬ್ಬವೆಂದರೆ ತಿಂಡಿಗಳ ಜಾತ್ರೆ. ಮೋದಕ, ಚಕ್ಕುಲಿ, ಕಡುಬು, ಲಡ್ಡು, ಹೋಳಿಗೆ.. ಹೀಗೆ ಪಟ್ಟಿ ಹನುಮನ ...

news

ಈ ಗಣೇಶ ಚತುರ್ಥಿಗೆ ರುಚಿಯಾದ ಬಗೆಬಗೆಯ ಮೋದಕಗಳನ್ನು ಮಾಡಿ ಸವಿಯಿರಿ..

ಇನ್ನೇನು ಈ ವರ್ಷದ ಗಣೇಶ ಚತುರ್ಥಿ ಬರುತ್ತಿದೆ. ಗಣೇಶ ಚತುರ್ಥಿ ಎಂದರೆ ತಿಂಡಿ ತಿನಿಸುಗಳದೇ ಹಬ್ಬ. ಇದು ...

news

ಬಹಳ ಉಪಯೋಗಕಾರಿಯಾದ ತೆಂಗಿನ ಎಣ್ಣೆಯನ್ನು ಇವುಗಳಿಗೆ ಮಾತ್ರ ಬಳಸಬೇಡಿ

ಬೆಂಗಳೂರು : ಸಾಮಾನ್ಯವಾಗಿ ತೆಂಗಿನ ಎಣ್ಣೆ ಬಹಳ ಉಪಯೋಗಕಾರಿಯಾಗಿರುವಂತಹದು. ಆದರೆ ತೆಂಗಿನ ಎಣ್ಣೆಯನ್ನು ...

Widgets Magazine