ನೋಡ ಬನ್ನಿ ಮೈಸೂರು ದಸರಾ...

ಜಂಬೂ ಸವಾರಿ ತಾಲೀಮು
WD
ರಾಜ ದರ್ಬಾರ
ಇದೆಲ್ಲದರ ನಡುವೆ, ಅಂಬಾವಿಲಾಸ ಅರಮನೆಯಲ್ಲಿ ನಡೆಯುವ ದಸರಾ ಖಾಸಗಿ ದರ್ಬಾರ್ ಗತದಿನಗಳ ರಾಜವೈಭವವನ್ನು ಮತ್ತೆ ನಮ್ಮ ಕಣ್ಮುಂದೆ ತೆರೆದಿಡುತ್ತದೆ. ನವರಾತ್ರಿಗೆ ಮೊದಲೇ ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭವಾಗುತ್ತದೆ. ಇದು ಎಲ್ಲರಿಂದ ಸಾಧ್ಯವಿಲ್ಲ. ಇದಕ್ಕಾಗಿ ತಲೆತಲಾಂತರದಿಂದ ಮೈಸೂರಿಗೆ ಸಮೀಪದ ಗೆಜ್ಜಗಳ್ಳಿ ಗ್ರಾಮದಿಂದ ಆಯ್ದ ಕೆಲವರನ್ನು ಕರೆತರಲಾಗುತ್ತದೆ. ಅವರೇ ಸಿಂಹಾಸನವನ್ನು ಜೋಡಿಸುತ್ತಾರೆ.

ನವರಾತ್ರಿ ಸಂದರ್ಭ ಅರಮನೆಯ ಸಂಪ್ರದಾಯದಂತೆ ಪೂಜಾಕಾರ್ಯವನ್ನು ನೆರವೇರಿಸಿ ಒಡೆಯರ್ ಮನೆತನದ ರಾಜರಾದ ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಿಂಹಾಸನವನ್ನು ಅಲಂಕರಿಸುತ್ತಾರೆ.

ಈ ಸಂದರ್ಭ ಫಳಫಳನೆ ಹೊಳೆಯುವ ರೇಷ್ಮೆ ವಸ್ತ್ರಕ್ಕೆ ಚಿನ್ನದ ಜರಿ ಕೂರಿಸಿದ ರಾಜಪೋಷಾಕು, ಅಲ್ಲದೆ ಜರಿಪೇಟ, ಅತ್ಯಮೂಲ್ಯ ಆಭರಣ ಧರಿಸಿದ ಒಡೆಯರ್ ದರ್ಬಾರ್ ಹಾಲ್‌ಗೆ ಬರುತ್ತಿದ್ದಂತೆಯೇ ಇಂದ್ರನ ಐಭೋಗವನ್ನು ನೆನಪಿಸುವಂತೆ ಮಾಡುತ್ತದೆ.

ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದ ದಿನ ಶ್ರೀಕಂಠದತ್ತ ಒಡೆಯರ್ ಅವರಿಗೆ ಬೆಳಿಗ್ಗೆ ಎದ್ದ ತಕ್ಷಣ ಆರತಿ ಎತ್ತಿ ಎಣ್ಣೆ ಶಾಸ್ತ್ರ ಮಾಡಿ, ಅರಮನೆಗೆ ಬರುವ ಕ್ಷೌರಿಕರಿಂದ ಚೌಲ ಮಾಡಿಸಿ ನಂತರ ಮಂಗಳ ಸ್ನಾನ ಮಾಡಲಾಗುತ್ತದೆ. ಮುತ್ತೈದೆಯರು ಹಾಗೂ ಪುರೋಹಿತ ಮನೆತನದ ಮಹಿಳೆಯರು ಒಡೆಯರ್‌ಗೆ ಆರತಿ ಬೆಳಗುತ್ತಾರೆ. ಇದಾದ ನಂತರ ಒಡೆಯರ್ ಪೂಜೆಗೆ ಅಣಿಯಾಗುತ್ತಾರೆ.

WD
ಚಾಮುಂಡಿತೊಟ್ಟಿಯಲ್ಲಿ ಗಣಪತಿಗೆ ಪೂಜೆ ಮಾಡಿ ನಂತರ ಕಳಶಪೂಜೆ, ಕಂಕಣಪೂಜೆ ನಡೆಸಿ, ಕುಲದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಒಡೆಯರ್ ಜೊತೆಗೆ ಅವರ ಶ್ರೀಮತಿ ಪ್ರಮೋದಾದೇವಿ ಸಹ ರಾಜಮನೆತನದ ಪದ್ಧತಿಯಂತೆ ಕಂಕಣ ಧರಿಸುತ್ತಾರೆ. ಇಲ್ಲಿಂದಲೇ ಎಲ್ಲಾ ರೀತಿಯ ಕಠಿಣ ವ್ರತಗಳು ಪ್ರಾರಂಭವಾಗುತ್ತವೆ.

ಚಂಡಿಕಾಹೋಮ, ಬಲಿ, ಮಹಿಷವಧೆ, ಶಮೀವೃಕ್ಷ ಪೂಜೆ ಸೇರಿದಂತೆ ಹಲವು ಪೂಜಾವಿಧಿಗಳು ಸಾಂಗೋಪವಾಗಿ ನಡೆಯುತ್ತವೆಯಲ್ಲದೆ, ದೇವಿ ಭಾಗವತವನ್ನು ಪಾರಾಯಣ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಮಹಿಷಾಸುರನನ್ನು ಸಂಹರಿಸಲಾಗುತ್ತದೆ.

ಬೆಳಿಗ್ಗೆ ಕಂಕಣಧಾರಿಗಳಾದ ಒಡೆಯರ್ ದಂಪತಿಗಳಿಗೆ ಪೂಜೆ ಮಾಡಲಾಗುತ್ತದೆ. ಜೊತೆಗೆ ದರ್ಬಾರ್‌ಗೆ ಬರುವ ಮುನ್ನ ಪತ್ನಿ ಪ್ರಮೋದಾದೇವಿಯವರು ಸುಮಂಗಲೆಯರೊಂದಿಗೆ ಒಡೆಯರ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ. ಇದು ಅರಮನೆಯ ಕಲ್ಯಾಣಮಂಟಪದ ಮೇಲ್ಭಾಗದಲ್ಲಿ ದಿನನಿತ್ಯ ನಡೆಯುತ್ತದೆ.

ದರ್ಬಾರ್ ಹಾಲ್‌ಗೆ ಆಗಮಿಸುವ ಒಡೆಯರ್, ಸಿಂಹಾಸನಕ್ಕೆ ಪೂಜೆ ಮಾಡಿ ಬಳಿಕ ರಾಜಗಾಂಭೀರ್ಯದಿಂದ ಸಿಂಹಾಸನವನ್ನೇರಿ ಆ ಸ್ಥಾನಕ್ಕೆ ಬಲಗೈಯಿಂದ ಸೆಲ್ಯೂಟ್ ಹೊಡೆದು ರಾಜಗತ್ತಿನಲ್ಲಿ ಆಸೀನರಾಗುತ್ತಾರೆ.

ಈ ಸಂದರ್ಭ ಹೊಗಳು ಭಟರಿಂದ ಬಹುಪರಾಕ್ ಕೇಳಿ ಬರುತ್ತದೆ. ನವರಾತ್ರಿಯ ಮೊದಲ ದಿನ ಅಂದರೆ ಪಾಡ್ಯದಂದು ಬೆಳಿಗ್ಗೆಯಿಂದ ಖಾಸಗಿ ದರ್ಬಾರ್ ನಡೆದರೆ, ಉಳಿದಂತೆ ಸಂಜೆ ವೇಳೆಯಲ್ಲಿ ನಡೆಯುತ್ತದೆ.

ಪ್ರತಿ ದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಕೆಲವು ವಿಧಿವಿಧಾನಗಳು ಕೂಡ ಇಲ್ಲಿ ನಡೆಯುತ್ತವೆ. ಅದರಂತೆ ಪಟ್ಟದ ಆನೆ, ಹಸು, ಕುದುರೆಗಳಿಗೆ ಅಲಂಕಾರ ಮಾಡಿ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆಗೆ ಇವುಗಳ ಪ್ರವೇಶವಾಗುತ್ತದೆ. ನಂತರ ದರ್ಬಾರ್ ಆರಂಭವಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ಈ ಖಾಸಗಿ ದರ್ಬಾರ್ ದಸರಾದ ಅತ್ಯಾಕರ್ಷಣೆಯಾಗಿರುತ್ತದೆ. ಈ ಸಂದರ್ಭ ಅರಮನೆ ಬಣ್ಣದ ಬೆಳಕಿನಿಂದ ಜಗಮಗಿಸುತ್ತಿರುತ್ತದೆ.

ಮುಂದಿನ ಪುಟದಲ್ಲಿ - ಜಂಬೂ ಸವಾರಿಇದರಲ್ಲಿ ಇನ್ನಷ್ಟು ಓದಿ :  

ದಸರಾ-ನವರಾತ್ರಿ

ಮೈಸೂರು ದಸರಾ ಉತ್ಸವ : ನಿಮಗೆ ತಿಳಿದ ಮತ್ತು ತಿಳಿಯದ ಸಂಗತಿಗಳು

ಮೈಸೂರು ದಸರಾ ಬಗ್ಗೆ ನಿಮಗೆಷ್ಟು ಗೊತ್ತು? ನಿಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ಮೈಸೂರು ದಸರಾ ಸಂಭ್ರಮದ ...

ಶಕ್ತಿದೇವತೆಯಿಂದ ಶಕ್ತಿ ಬೇಡುವ ಹಬ್ಬ

ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ...

ಮೈಸೂರು ದಸರಾ ಜಂಬೂ ಸವಾರಿಯ ರೂವಾರಿಗಳು

ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಬಲರಾಮನ ನೇತೃತ್ವದಲ್ಲಿ ಅರ್ಜುನ, ಮೇರಿ, ಗಜೇಂದ್ರ, ಕವಿತ, ವರಲಕ್ಷ್ಮಿ, ...

ಏನೂಂದ್ರೆ, ನಿಮ್ಮನೇಲಿ ಗೊಂಬೆಗಳ್ನ ಕೂರಿಸಿದ್ರಾ?

ಮೈಸೂರು ದಸರೆಗೆ ಗೊಂಬೆಗಳದ್ದೇ ಸಂಭ್ರಮ. ಮೈಸೂರಲ್ಲಿ ಮೈ ಮನಗಳ ಸೂರು ಮಾಡುವಂತಹ ಗೊಂಬೆಗಳದ್ದೇ ದರ್ಬಾರು. ...