2007ನೇ ಸಾಲಿನಲ್ಲಿ ಅತ್ಯುತ್ತಮ ಚೊಚ್ಚಲ ಚಿತ್ರ ನಿರ್ದೇಶಕರಿಗೆ ನೀಡಲಾಗುವ ಗೊಲ್ಲಪುಡಿ ಶ್ರೀನಿವಾಸ ರಾಷ್ಟ್ರೀಯ ಪ್ರಶಸ್ತಿಯನ್ನು 'ತಾರೇ ಜಮೀನ್ ಪರ್' ಚಿತ್ರದ ಮೂಲಕ ನಿರ್ದೇಶನಕ್ಕಿಳಿದ ಬಾಲಿವುಡ್ ನಟ ಅಮೀರ್ ಖಾನ್ ಪಡೆದುಕೊಂಡಿದ್ದಾರೆ.
ಚೆನ್ನೈನಲ್ಲಿ ಬುಧವಾರ ನಡೆಯುವ ವರ್ಣರಂಜಿತ ಸಮಾರಂಭದಲ್ಲಿ 1.5 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನೊಳಗೊಂಡ ಈ ಪ್ರಶಸ್ತಿಯನ್ನು ಅಮೀರ್ ಖಾನ್‌ಗೆ ನೀಡಲಾಗುತ್ತದೆ ಎಂದು ಅಮೀರ್ ಖಾನ್ ಜೊತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾರುತಿ ರಾವ್ ತಿಳಿಸಿದರು. ತಮ್ಮ ಪುತ್ರ, ದಿ.ಶ್ರೀನಿವಾಸ ಹೆಸರಿನಲ್ಲಿ ಪ್ರತಿವರ್ಷ ಈ ಪ್ರಶಸ್ತಿಯನ್ನು ಮಾರುತಿ ರಾವ್ ನೀಡುತ್ತಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆ.ಬಾಲಚಂದರ್, ವಿಧು ವಿನೋದ್ ಚೋಪ್ರಾ ಅವರು ಅತಿಥಿಗಳಾಗಿ ಆಗಮಿಸಲಿದ್ದು, ನಟ ಅನುಪಮ್ ಖೇರ್ ಅವರು ಉಪನ್ಯಾಸ ನೀಡಲಿದ್ದಾರೆ. ಸಮಾರಂಭದ ಬಳಿಕ ಜಗಜಿತ್ ಸಿಂಗ್ ಅವರಿಂದ ಗಾಯನ ಕಚೇರಿ ನಡೆಯಲಿದೆ.
"ತಮ್ಮ ಕಿರಿಯ ಪುತ್ರ ಶ್ರೀನಿವಾಸ್ 26ನೇ ವರ್ಷದಲ್ಲೇ ಚಿತ್ರ ನಿರ್ದೇಶನಕ್ಕಿಳಿದಿದ್ದಾಗ ಭಾರೀ ಸಂತೋಷವಾಗಿತ್ತು. ಖ್ಯಾತ ಪ್ರೊಡಕ್ಷನ್ ಕಂಪನಿ, ತಂದೆಯ ಅನುಭವ, ಪ್ರೀತಿಸುವ ಕುಟುಂಬ...ಹೀಗೆ ಅವನಿಗೆ ಎಲ್ಲ ಬೆಂಬಲಗಳೂ ಇದ್ದವು. ಆದರೆ ಅದೊಂದು ಕರಾಳ ದಿನ ನಾವು ಆತನನ್ನು ಕಳೆದುಕೊಂಡೆವು. ಆದರೆ ಇದೇ ಬೇಸರದಲ್ಲಿ ದಿನಕಳೆಯುವ ಬದಲು, ಅವನನ್ನು 'ಮರುಜೀವ'ಗೊಳಿಸಲು ತೀರ್ಮಾನಿಸಿದೆವು" ಎಂದು ಮಾರುತಿ ರಾವ್ ಅವರು ಈ ಪ್ರತಿಷ್ಠಾನ ಸ್ಥಾಪನೆಯ ಉದ್ದೇಶ ವಿವರಿಸಿದರು.
ಹೊಸ ನಿರ್ದೇಶಕರ ಜಾಣ್ಮೆ, ಪರಿಶ್ರಮವನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದಕ್ಕಾಗಿ ಪ್ರತಿವರ್ಷ ಈ ಪ್ರಶಸ್ತಿ ನೀಡಲಾಗುತ್ತದೆ.