ಹನುಮಾನ್ ಚಾಲೀಸ ಗೊತ್ತು. ಬಹಳಷ್ಟು ಮಂದಿ ತಮಗೆ ಒಳ್ಳೆಯದಾಗಲೆಂದು ಅದನ್ನು ಪಠಿಸಿರುತ್ತೀರಿ ಕೂಡಾ. ಆದರೆ ಅಮಿತಾಬ್ ಚಾಲೀಸ ಗೊತ್ತಾ?
ಹೌದು. ಅಮಿತಾಬ್ ಚಾಲೀಸ ಈಗ ಬಂದಿದೆ. ಅದನ್ನು ಪಠಿಸಿದರೆ ಏನಾಗುತ್ತೆ ವಿದ್ಯೆ, ಬುದ್ಧಿ, ಇಷ್ಟಾರ್ಥ ಸಿದ್ಧಿಯಾಗುತ್ತಾ ಅಂತೆಲ್ಲ ಅಸಂಬದ್ಧ ಪ್ರಶ್ನೆಗಳನ್ನು ಇಲ್ಲಿ ಕೇಳುವ ಅಗತ್ಯವಿಲ್ಲ. ಇದು ಏನಿದ್ದರೂ ಅಭಿಮಾನಿಗಳ ಕಾಲ. ಹಾಗಾಗಿ ಇಲ್ಲಿ ಎಲ್ಲಾ ಚಾಲೀಸಗಳೂ ಹುಟ್ಟಿಕೊಳ್ಳೋದರಲ್ಲಿ ವಿಶೇಷವೇನೂ ಇಲ್ಲ.
ಪಾಟ್ನಾದಲ್ಲಿ ಅಮಿತಾಬ್ ಅವರ ಅಭಿಮಾನಿಯೊಬ್ಬರು ಅಮಿತಾಬ್ ಚಾಲೀಸ ರಚಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್, ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಸರ್ವ ವಿಧದಲ್ಲೂ ಗುಣಗಾನ ಮಾಡುವ ಅಮಿತಾಬ್ ಚಾಲೀಸವನ್ನು ರಚಿಸಿದ್ದಾರೆ. ಅಮಿತಾಬ್ ಅವರ ಸಾಧನೆ, ಜೀವನದ ಹಾದಿ, ಜೀವನ ಕ್ರಮ, 40 ವರ್ಷಗಳ ಸಿನಿಮಾ ಜೀವನ ಎಲ್ಲವ್ನು ವರ್ಣಿಸುವ ಚಾಲೀಸ ಇದಾಗಿದೆ.
ಅಮಿತಾಬ್ ಚಾಲೀಸವನ್ನು ಬರೆದ ಬಿಹಾರ ಮೂಲದ ವಕೀಲ ಕೆಲಸ ಮಾಡುತ್ತಿರುವ ಶರದ್ ಕುಮಾರ್ ಸಿಂಗ್ ಈ ಹಿಂದೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ನಿತೀಶ್ ಕುಮಾರ್ ಅವರ ಲಾಲೂ ಚಾಲೀಸ ಹಾಗೂ ನಿತೀಶ್ ಚಾಲೀಸವನ್ನೂ ರಚಿಸಿದ್ದರು. ಅಮಿತಾಬ್ ಚಾಲೀಸ ಅವರ ಮೂರನೇ ಚಾಲೀಸ.
ಅ.11ರಂದು ನಡೆದ ಅಮಿತಾಬ್ ಅವರ ಜನ್ಮದಿನಕ್ಕೆ ಉಡುಗೊರೆಯಾಗಿ ಶರದ್ ಕುಮಾರ್ ಸಿಂಗ್ ಈ ಅಮಿತಾಬ್ ಚಾಲೀಸ ರಚಿಸಿದ್ದಾರೆ. ಚಾಲೀಸ ಬರೆದ ಮೇಲೆ ಮಾತನಾಡಿದ ಅವರು, ನಾನೆಂದೂ ಅಮಿತಾಬ್ ಬಚ್ಚನ್ ಅವರನ್ನು ಮುಖತಃ ಭೇಟಿಯಾಗಿಲ್ಲ. ಆದರೆ ಅವರನ್ನು ಬಹಳ ವರ್ಷಗಳಿಂದ ಅಭಿಮಾನದಿಂದ ನೋಡಿದ್ದೇನೆ. ನಾನು ನಿಜಕ್ಕೂ ಅವರಿಂದ ಸಾಕಷ್ಟು ಪ್ರಭಾವಿತನಾಗಿದ್ದೇನೆ ಎಂದಿದ್ದಾರೆ.