ಹೌದು. ಗುಳಿಕೆನ್ನೆಯ ರಜಪೂತ ಚೆಲುವೆ ಪ್ರೀತಿ ಝಿಂಟಾ ಮುಂಬೈನ ಮನೆಯಲ್ಲಿ ಇತ್ತೀಚೆಗೆ ಕಳ್ಳತನವಾಗಿದೆ. ಐಪಿಎಲ್‌ನಲ್ಲಿ ಭಾಗವಹಿಸಿದ ಮೇಲೆ ಸುಸ್ತಾದ ಪ್ರೀತಿ, ಒಂದೆರಡು ತಿಂಗಳು ಬಿಡುವು ಮಾಡಿಕೊಂಡು ತನ್ನ ಸಹೋದರ ಹಾಗೂ ಕೆಲವು ಗೆಳೆಯರೊಂದಿಗೆ ಅಮೆರಿಕಾಕ್ಕೆ ಹೋಗಿದ್ದಳಂತೆ. ಅಲ್ಲಿ ಎಲ್ಲೆಡೆ ಸುತ್ತಾಡಿ ಮರಳಿ ಬಂದಾಗ ಪ್ರೀತಿ ಮನೆಯಲ್ಲಿ ಕಳ್ಳತನವಾಗಿತ್ತು. ಹಲವು ಚಿನ್ನಾಭರಣಗಳು ಹಾಗೂ ಸಾಕಷ್ಟು ದುಡ್ಡು ಮನೆಯಿಂದ ಕಾಣೆಯಾಗಿದೆ.
ಪ್ರೀತಿ ಝಿಂಟಾಗೆ ಮನೆಯಲ್ಲಿ ಕಳ್ಳತನವಾಗಿದ್ದು ತಿಳಿದದ್ದು ಆಕೆಯ ಮನೆಯ ಕೆಲಸದವರಿಂದಾಗಿ. ಕೆಲಸದವರು ಪ್ರೀತಿ ಇಲ್ಲದಾಗ ಮನೆಯಲ್ಲಿ ಕಳ್ಳತನವಾಗಿದ್ದು ನೋಡಿ ಆಕೆಯ ಅಮ್ಮನಿಗೆ ತಿಳಿಸಿದರು. ಆಕೆಯ ಅಮ್ಮ ಮುಂಬೈಗೆ ಓಡೋಡಿ ಬಂದು ಕಳ್ಳತನ ವರದಿಯನ್ನು ಪೊಲೀಸರಿಗೆ ನೀಡಿದ್ದು, ಕೇಸು ದಾಖಲಾಗಿದೆ.
IFM
ಈ ಬಗ್ಗೆ ಮಾತನಾಡಿದ ಪ್ರೀತಿ, ಐಪಿಎಲ್ ಸಂದರ್ಭ ಸಾಕಷ್ಟು ತೊಡಗಿಸಿಕೊಂಡು ಸುಸ್ತಾಗಿದ್ದೆ. ಹಾಗಾಗಿ ನನಗೆ ಸ್ವಲ್ಪ ದಿನಗಳ ಬಿಡುವು ಬೇಕಾಗಿತ್ತು. ಇಲ್ಲೇ ಇದ್ದರೆ ಏನಾದರೊಂದು ಕೆಲಸವಾಗುತ್ತದೆ. ಹಾಗಾಗಿ ಅಮೆರಿಕಕ್ಕೆ ಹೋಗಿದ್ದೆ. ಅಲ್ಲಿ ಹಲವೆಡೆ ಸುತ್ತಾಡಿ ಮನಸ್ಸು ಫ್ರೆಶ್ ಮಾಡಿಕೊಂಡು ಮರಳಿದ್ದೇನೆ. ಆದರೆ ಹಲವರು ನಾನು ಅಮೆರಿಕದಲ್ಲೇ ನೆಲೆ ನಿಲ್ಲಲು ಹೋಗಿದ್ದೇನೆಂದು ತಿಳಿದಿದ್ದರು. ಹಾಗೇನೂ ಇಲ್ಲ. ನಾನು ಭಾರತ ಬಿಟ್ಟು ಬೇರೆಡೆ ಜೀವನ ಪರ್ಯಂತ ವಾಸವಿರಲು ಇಚ್ಛೆಪಡುವುದಿಲ್ಲ ಎಂದರು.
ಕಳ್ಳತನವಾದುದು ಹೌದೇ ಎಂದಾಗ, ಹೌದು. ಕಳ್ಳತನವಾಗಿದೆ. ಅಮ್ಮನ ಸ್ವಲ್ಪ ದುಡ್ಡು ಮನೆಯಲ್ಲಿತ್ತು. ಕೆಲವು ಆಭರಣಗಳೂ ಇತ್ತು. ಇವೆಲ್ಲವೂ ಕಾಣೆಯಾಗಿದೆ. ಅಮ್ಮ ದೂರನ್ನೂ ದಾಖಲಿಸಿದ್ದಾಳೆ ಎಂದರು. ಕೆಲಸದವರೇ ಈ ಸುದ್ದಿಯನ್ನು ತಿಳಿಸಿದ್ದರಿಂದ ಪೊಲೀಸರು ಕೆಲಸದವರ ಮೇಲೂ ಸಂಶಯ ವ್ಯಕ್ತಪಡಿಸಿ ವಿಚಾರಣೆ ನಡೆಸುತ್ತಿದ್ದಾರೆ.