ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಂತ್ಯ ಕಂಡ ದೀಪಿಕಾ ಪಡುಕೋಣೆ- ರಣಬೀರ್ ಪ್ರೇಮಾಧ್ಯಾಯ! (Ranbir Kapoor | Deepika Padukone | Katrina Kaif | Ajab Prem Ki Ghajab Kahani)
ಸುದ್ದಿ/ಗಾಸಿಪ್
Feedback Print Bookmark and Share
 
Ranbir Kapoor, Deepika Padukone
IFM
ಬಾಲಿವುಡ್ ಕಂಡ ಅತಿ ಸುಂದರ ಜೋಡಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ತಮ್ಮ ಪ್ರೇಮ ಅಧ್ಯಾಯಕ್ಕೆ ಕೊನೆಗೂ ಎಳ್ಳು ನೀರು ಬಿಟ್ಟಿದ್ದಾರೆ. ಇವರಿಬ್ಬರು ಬೇರೆ ಬೇರೆಯಾಗುತ್ತಿದ್ದಾರೆ ಎಂದು ಹಲವು ಸಮಯಗಳಿಂದಲೇ ಆಗೀಗ ಕಾಲಂಗಳಲ್ಲಿ ಸ್ಥಾನ ಗಿಟ್ಟಿಸುತ್ತಿದ್ದರೂ, ಈ ಬಾರಿ ನಿಜಕ್ಕೂ ಅಧಿಕೃತವಾಗಿ ಬೇರೆಯಾಗಿದ್ದಾರೆ ಎಂಬುದು ದಿಟವಾಗಿದೆ!

ಮೊನ್ನೆ ಮೊನ್ನೆಯಷ್ಟೇ ರಣಬೀರ್ ಬರ್ತ್‌ಡೇಗೆ ದುಬಾರಿ ಲ್ಯಾಪ್‌ಟಾಪನ್ನು ಗಿಫ್ಟ್ ಕೊಟ್ಟಿದ್ದ ದೀಪಿಕಾ ಹಾಗೂ ರಣಬೀರ್ ನಡುವಿನ ಬಿರುಕಿಗೆ ಕಾರಣವಾದ್ರೂ ಏನು ಎಂದರೆ ಮೊದಲು ಸಿಗುವ ಉತ್ತರ ಕತ್ರಿನಾ ಕೈಫ್! ಅಜಬ್ ಪ್ರೇಮ್ ಕೀ ಗಜಬ್ ಕಹಾನಿ ಹಾಗೂ ರಾಜನೀತಿ ಚಿತ್ರಗಳಲ್ಲಿ ಕತ್ರಿನಾ ಕೈಫ್ ಹಾಗೂ ರಣಬೀರ್ ಜೋಡಿಗಳಾಗಿ ನಟಿಸುತ್ತಿದ್ದಾರೆ. ರಣಬೀರ್ ಕತ್ರಿನಾ ಜೊತೆ ಈ ಸಿನಿಮಾಗಳ ಪ್ರಚಾರಕ್ಕಾಗಿ ರ‌್ಯಾಂಪ್‌ಗಳಲ್ಲಿ ಹೆಜ್ಜೆ ಹಾಕಿದಾಗ, ಸೆಟ್‌ನಲ್ಲಿ ಕತ್ರಿನಾ ಜೊತೆಗೆ ಅನ್ಯೋನ್ಯವಾಗಿರೋದೆಲ್ಲಾ ಗಾಸಿಪ್ ಕಾಲಂಗಳಲ್ಲಿ ಸುದ್ದಿಯಾದಾಗ ಅತ್ತ ದೀಪಿಕಾ ಹೊಟ್ಟೆಯಲ್ಲಿ ಅವಲಕ್ಕಿ ಕುಟ್ಟಿದ ಹಾಗಾಗಿತ್ತೋ ಏನೋ. ಅದಕ್ಕೆ ಪೂರಕವೆಂಬಂತೆ, ರಣಬೀರ್ ಇತ್ತೀಚೆಗೆ ಸಂದರ್ಶನದಲ್ಲಿ ಕತ್ರಿನಾ ಸದ್ಯದ ಬಾಲಿವುಡ್ಡಿನ ಅತ್ಯುತ್ತಮ ಹಾಗೂ ಸುಂದರ ನಟಿ ಎಂದು ಮಾತಿನ ಸರ್ಟಿಫಿಕೆಟ್ ಬೇರೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲ, ಕತ್ರಿನಾ ಹಾಗೂ ನನ್ನ ಜೋಡಿ ತೆರೆಯ ಮೇಲೆ ಸುಂದರವಾಗಿ ಕಾಣುತ್ತದೆ ಎಂದೆಲ್ಲ ಹೇಳಿಕೊಂಡಿದ್ದಾನೆ. ಇವೆಲ್ಲ ಮಾತುಗಳು ಈ ಇಬ್ಬರು ಬೇರೆಬೇರೆಯಾಗೋದಕ್ಕೆ ಕಾರಣ ಎನ್ನಲಾಗುತ್ತಿದೆ.

ಇದಲ್ಲದೆ, ದೀಪಿಕಾ ಮೊನ್ನೆ ಮೊನ್ನೆ ನನ್ನ ಹಾಗೂ ರಣಬೀರ್ ಮನಸ್ತಾಪಕ್ಕೆ ನೇರವಾಗಿ ಕತ್ರಿನಾಳೇ ಹೊರೆ ಎಂದು ದೂರಿದ್ದಳು. ಇತ್ತೀಚೆಗೆ ದೀಪಿಕಾ ತನ್ನ ಇನ್ನೊಂದು ಚಿತ್ರದ ಶೂಟಿಂಗ್ ಸಂದರ್ಭ ನಾಯಕ ನಟ ಫರ್ಹಾನ್ ಅಖ್ತರ್ ಜೊತೆಗೆ ಸ್ವಲ್ಪ ಹೆಚ್ಚೇ ಅನ್ನುವಂಥ ಸಲುಗೆ ಹೊಂದಿದ್ದಾಳೆ ಎಂದು ಸುದ್ದಿ ಹಬ್ಬಿತ್ತು. ಈ ಸುದ್ದಿ ಹಬ್ಬಲು ಕತ್ರಿನಾಳೇ ಕಾರಣ ಎಂಬುದು ದೀಪಿಕಾಳ ಆರೋಪ. ತಾನು ಹಾಗೂ ಫರ್ಹಾನ್ ಅಖ್ತರ್ ಸೆಟ್‌ನಲ್ಲಿದ್ದಾಗ ಅಲ್ಲಿಗೆ ಕತ್ರಿನಾ ಬಂದಿದ್ದಳು. ಕತ್ರಿನಾ ಬಂದು ಹೋದ ಮೇಲೆಯೇ ಈ ಸುದ್ದಿ ಹಬ್ಬಿದ ಕಾರಣ, ಕತ್ರಿನಾಳೇ ಬಾಲಿವುಡ್ ತುಂಬೆಲ್ಲ ಇಂಥ ಇಲ್ಲ ಸಲ್ಲದ ಗಾಸಿಪ್ ಹಬ್ಬಿಸಿದ್ದಾಳೆ ಎಂಬುದು ದೀಪಿಕಾಳ ಊಹಾಪೋಹ.
Ranbir Kapoor, Katrina Kaif
IFM


ಅದೇನೇ ಇರಲಿ, ಕೇವಲ ಇಷ್ಟೇ ಆಗಿದ್ದರೆ ಈ ಇಬ್ಬರು ಎಂದೋ ಬೇರೆ ಬೇರೆಯಾಗಿರುತ್ತಿದ್ದರು. ಎರಡು ವರ್ಷಗಳ ಕಾಲ ಸಂಬಂಧ ಬೆಳೆಯುತ್ತಿರಲಿಲ್ಲ. ಇದಕ್ಕೆ ಇನ್ನಷ್ಟು ಕಾರಣವಿದೆ. ಹಲವು ಇಂತಹ ಇರುಸು ಮುರುಸುಗಳು ಈ ಹಿಂದೆ ಎಷ್ಟೋ ನಡೆದಿವೆ ಎಂಬುದಂತೂ ನಿಜ. ದೀಪಿಕಾ ಓಂ ಶಾಂತಿ ಓಂ ಚಿತ್ರದಲ್ಲಿ ನಟಿಸುವ ಸಂದರ್ಭ ಕೇವಲ ಒಬ್ಬ ಮಾಡೆಲ್ ಆಗಿದ್ದಳು. ಬಾಲಿವುಡ್ ನಂಟು ಹೇಳಕೊಳ್ಳುವ ಮಟ್ಟಿಗೇನೂ ಇರಲಿಲ್ಲ. ಆಗ ದೀಪಿಕಾಗೆ ನಿಹಾರ್ ಪಾಂಡ್ಯ ಎಂಬೊಬ್ಬ ಗೆಳೆಯನಿದ್ದ. ಗೆಳೆತನಕ್ಕಿಂತಲೂ ಸ್ವಲ್ಪ ಹೆಚ್ಚೇ ಅನ್ನುವಂಥ ಸಲುಗೆ ಅವರ ನಡುವಿತ್ತು ಎಂಬುದು ಬಲ್ಲ ಮೂಲಗಳ ಮಾತು. ಆಮೇಲೆ, ಇತ್ತ ಬಾಲಿವುಡ್ ಸಂಪರ್ಕ ಬಂದಾಗ ಆತನ ಸಂಗ ಬಿಟ್ಟ ದೀಪಿಕಾ ಹೆಚ್ಚು ಖ್ಯಾತಿ ಪಡೆದದು ಧೋನಿ, ಯುವರಾಜ್ ಜೊತೆಗೆ. ಇಂತಿಪ್ಪ ದೀಪಿಕಾ ಆಮೇಲೆ, ತನ್ನ ಓಂ ಶಾಂತಿ ಓಂ ಚಿತ್ರದ ಜೊತೆಗೇ ಬಿಡುಗಡೆ ಕಂಡ ಬನ್ಸಾಲಿ ಅವರ ಚಿತ್ರ ಸಾವರಿಯಾ ಚಿತ್ರದ ಹೀರೋ, ಹಾಲುಗಲ್ಲದ ಸುರಸುಂದರಾಂಗ ರಣಬೀರ್ ಕಪೂರ್ ಎಂಬ ಕಪೂರ್ ಕುಡಿಯ ಕುಡಿನೋಟಕ್ಕೆ ಮರುಳಾಗಿದ್ದು ಗೊತ್ತೇ ಇದೆ.

ಚೆಲುವಾಂತ ಚೆನ್ನಿಗ ರಣಬೀರ್ ಕೂಡಾ, ಇಂಥ ಗಾಸಿಪ್ ವಿಷಯದಲ್ಲಿ ಅದಕ್ಕೂ ಮೊದಲು ಸಾಕಷ್ಟು ಸುದ್ದಿ ಮಾಡಿದವನೇ. ಮೊದಲ ಚಿತ್ರದ ಸಂದರ್ಭ ತನ್ನ ನಾಯಕಿ ಅನಿಲ್ ಕಪೂರ್ ಮಗಳು ಸೋನಂ ಕಪೂರ್ ಜತೆಗೆ ಖುಲ್ಲಂಖುಲ್ಲಾ ಆಗಿ ಸರಸವಾಡುತ್ತಿದ್ದ ಎಂಬ ಅಂತೆಕಂತೆಗಳೂ ಇವೆ. ಆಮೇಲೆ ದೀಪಿಕಾ ಪ್ರವೇಶವಾದ ಮೇಲೆ ಸೋನಂ ಸಂಗ ಬಿಟ್ಟ ಎಂಬ ಸುದ್ದಿಯೂ ಇದೆ. ಇದಾದ ಮೇಲೆ ದೀಪಿಕಾ ಗೆಳೆತನವಿರುವಾಗಲೇ ರಣಬೀರ್‌ಗೆ ಸಾಕಷ್ಟು ಗೆಳತಿಯರಿದ್ದುದು, ರಣಬೀರ್ ಅವರೆಲ್ಲರನ್ನೂ ಆಗಾಗ ಭೇಟಿಯಾಗುತ್ತಿದ್ದುದು ಇವೆಲ್ಲವೂ ದೀಪಿಕಾಗೂ ಗೊತ್ತು.

Ranbir Kapoor, Deepika Padukone
IFM
ದೀಪಿಕಾ ಸಮೀಪವರ್ತಿಗಳು ಹೇಳುವಂತೆ, ದೀಪಿಕಾಗೆ ಆಕೆಯ ಮೇಲೆ ತುಂಬ ಪ್ರೀತಿ ಹೊಂದಿರುವ ಹಾಗೂ ಇನ್ನಾವ ಹುಡುಗಿಯರ ಜೊತೆಗೂ ಫ್ಲರ್ಟ್ ಮಾಡದಂಥ ಬಾಯ್‌ಫ್ರೆಂಡ್ ಬೇಕು. ಆದರೆ ರಣಬೀರ್ ಹಾಗಿರಲಿಲ್ಲ. ನಂದಿತಾ ಮೆಹ್ತಾನಿ ಎಂಬ ಹುಡುಗಿಯೂ ಸೇರಿದಂತೆ ಹಲವು ಹುಡುಗಿಯರ ಜೊತೆಗೆ ಈತನ ಚೆಲ್ಲಾಟವೇನೂ ಕಡಿಮೆಯಿರಲಿಲ್ಲ ಎಂಬುದು ದೀಪಿಕಾ ಆರೋಪ. ರಣಬೀರ್‌ಗಾಗಿ ನಾನು ನಿಹಾರ್ ಪಾಂಡ್ಯ, ಯುವರಾಜ್ ಸಿಂಗ್‌ರನ್ನೇ ಬಿಟ್ಟಿದ್ದೇನೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ರಣಬೀರ್‌ನಿಂದಲೂ ಬರಬೇಕು ಎಂಬುದು ದೀಪಿಕಾ ವಾದ. ಈ ವಾದವನ್ನು ದೀಪಿಕಾ ಸಾಕಷ್ಟು ಬಾರಿಯೂ ರಣಬೀರ್ ಮುಂದಿಟ್ಟಿದ್ದಳು ಕೂಡಾ.

ದೀಪಿಕಾಳ ಈ ಒತ್ತಡ ರಣಬೀರ್‌ಗೆ ಸಾಕು ಸಾಕಾಗಿದೆ. ನನಗೆ ನನ್ನದೇ ಆದ ಪ್ರಪಂಚ ಬೇಕು. ಹೆಚ್ಚು ಪೊಸೆಸಿವ್ ಆಗಬೇಡ ಎಂದು ರಣಬೀರ್ ದೀಪಿಕಾಗೆ ಹೇಳಿದ್ದಾನೆ. ಆದರೆ ಅದಕ್ಕೆ ವಿರುದ್ಧವಾಗಿ ದೀಪಿಕಾ, ನಾವಿಬ್ಬರೂ ಜೋಡಿಗಳು ಎಂದಾದ ಮೇಲೆ ಪೊಸೆಸಿವ್‌ನೆಸ್ ಸಹಜ ಎಂದಿದ್ದಾಳೆ. ಇಂಥ ಮಾತುಕತೆಯೆಲ್ಲಾ ನಡೆದ ಮೇಲೆ ದೀಪಿಕಾ, ರಣಬೀರ್ ಹಾಗೂ ಕತ್ರಿನಾರ ರಾಜನೀತಿ ಶೂಟಿಂಗ್ ನಡೆಯುತ್ತಿದ್ದ ಭೋಪಾಲ್‌ಗೆ ಹೋಗಿ ಅಲ್ಲಿ 20 ದಿನ ರಣಬೀರ್ ಏನೇನು ಮಾಡುತ್ತಾನೆ ಎಂದು ನೋಡಿದ್ದಾಳೆ. ಅಲ್ಲಿಂದ ಬಂದ ಮೇಲೆ ರಣಬೀರ್- ದೀಪಿಕಾರ ಪ್ರೇಮಪರಿಣಯ ಬಹುತೇಕ ಅಂತ್ಯಗೊಂಡಂತಾಗಿದೆ ಎನ್ನಲಾಗಿದೆ.

ಈವರೆಗೆ ರಣಬೀರ್ ಹಾಗೂ ದೀಪಿಕಾ ಪ್ರೇಮಕ್ಕೆ ಅಡ್ಡಿಯಾಗಿದ್ದು ರಣಬೀರ್ ತಾಯಿ ನೀತು ಸಿಂಗ್. ಆಮೇಲೆ ನೀತು ಇತ್ತೀಚೆಗಷ್ಟೆ ದೀಪಿಕಾ ಒಕೆ ಎಂದು ರಣಬೀರ್‌ಗೆ ಹೇಳಿದ್ದಳು ಎಂದು ಸುದ್ದಿಯಾಗಿತ್ತು. ಆದರೆ ಇದಕ್ಕೂ ಮೊದಲೇ, ರಣಬೀರ್ ತಂದೆ ರಿಷಿ ಕಪೂರ್, ರಣಬೀರ್‌ಗೆ ದೀಪಿಕಾ ಎಲ್ಲ ಫ್ರೆಂಡ್‌ಗಳಂತೆ ಒಬ್ಬ ಫ್ರೆಂಡ್ ಅಷ್ಟೇ. ರಣಬೀರ್ ದೀಪಿಕಾಳನ್ನು ಸ್ಪೆಷಲ್ ಆಗಿ ನೋಡಿಲ್ಲ ಎಂದಿದ್ದರು. ರಣಬೀರ್‌ನ ಆಪ್ತ ಮೂಲಗಳ ಪ್ರಕಾರ, ದೀಪಿಕಾ ರಣಬೀರ್‌ನ ಗೆಳತಿಯಾಗಿದ್ದರೂ, ಆತ ತನ್ನ ಇತರ ಗೆಳತಿಯರಿಗಿಂತ ದೀಪಿಕಾಗೆ ಮಹತ್ವದ ಹಾಗೂ ವಿಶೇಷ ಸ್ಥಾನವನ್ನೇನೂ ನೀಡಿರಲಿಲ್ಲ. ಆದರೆ ದೀಪಿಕಾ ಮಾತ್ರ ರಣಬೀರ್‌ನನ್ನು ವಿಶೇಷ ಸ್ಥಾನದಲ್ಲಿ ಕಲ್ಪಿಸಿಕೊಂಡಿದ್ದಳು. ಹಾಗಾಗಿ ಇವರ ಎರಡು ವರ್ಷದ ಲವ್ ಲೈಫ್ ಅಂಥ ರಸವತ್ತಾಗೇನೂ ಇರಲಿಲ್ಲ ಎನ್ನಲಾಗಿದೆ. ಏನೋ... ಒಟ್ಟಾರೆ ಇವರಿಬ್ಬರ ನಡುವಿನ ಪ್ರೇಮ ಸೇತುವೆಯಂತೂ ಕುಸಿದಿದೆ ಎನ್ನದೆ ವಿಧಿಯಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ರಿಷಿ ಕಪೂರ್, ಕತ್ರಿನಾ ಕೈಫ್, ರಾಜನೀತಿ