ನಿರ್ಮಾಣ: ದೇವಗನ್ ಫಿಲಂಸ್ ನಿರ್ದೇಶನ: ಅಜಯ್ ದೇವಗನ್ ಗೀತೆರಚನೆ: ಮುನ್ನಾ ದಿಮಾನ್ ಸಂಗೀತ: ವಿಶಾಲ್ ಭಾರದ್ವಾಜ್ ಪಾತ್ರವರ್ಗ: ಅಜಯ್ ದೇವಗನ್, ಕಾಜೋಲ್, ದಿವ್ಯ ದತ್, ಸುಮಿತ್ ರಾಘವನ್, ಇಶಾ ಶ್ರಾವಣಿ, ಕರಣ್ ಖನ್ನಾ
ಬಾಲಿವುಡ್ ದಂಪತಿಗಳಾದ ಕಾಜೋಲ್ ಮತ್ತು ಅಜಯ್ ದೇವಗನ್ ಇದುವರೆಗೆ ಹಲ್‌ಚಲ್, ಗೂಂಡಾರಾಜ್, ಇಶ್ಕ್, ಪ್ಯಾರ್ ತೋ ಹೋನಾ ಹಿ ತಾ, ದಿಲ್ ಕ್ಯಾ ಕರೇ ಹಾಗೂ ರಾಜೂ ಚಾಚಾದಲ್ಲಿ ಜತೆಯಾಗಿ ನಟಿಸಿದ್ದರು. ಇದೀಗ ಅವರದೇ ನಿರ್ಮಾಣದ ಯೂ, ಮಿ ಔರ್ ಹಮ್ ತಯ್ಯಾರಾಗುತ್ತಿದ್ದು, ಎಪ್ರಿಲ್ 11ರಂದು ತೆರೆಕಾಣಲಿದೆ.
ಬಾಲಿವುಡ್ ರಾಣಿಯಾಗಿ ಮೆರೆದ ಕೃಷ್ಣ ಸುಂದರಿ ಕಾಜೋಲ್ ವಿವಾಹ, ಮಕ್ಕಳು ಎಂಬುದಾಗಿ ಸಂಸಾರದಲ್ಲಿ ಮುಳುಗಿದ ಬಳಿಕ, ಕಳೆದ ಎಂಟುವರ್ಷದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸಿದ್ದರು. ಅವರು ನಟಿಸಿದ 'ಫನಾ' ಚಿತ್ರದಲ್ಲಿ ಕಣ್ಣಿಲ್ಲದ ಹೆಣ್ಣಿನ ಮನೋಜ್ಞ ಅಭಿನಯ ನೀಡಿ ಪ್ರೇಕ್ಷಕರನ್ನು ಸೆಳೆದಿದ್ದರು. ಮತ್ತು ತನ್ನ ಜನಪ್ರಿಯೆ ಕುಂದಿಲ್ಲ ಎಂದು ಖಚಿತಪಡಿಸಿಕೊಂಡಿದ್ದರು.
ಪ್ರಸ್ತುತ ಯು, ಮಿ... ಅಜಯ್ ನಿರ್ದೇಶನದ ಚೊಚ್ಚಲ ಚಿತ್ರ. ಅಜಯ್ ಯಾವರೀತಿಯಲ್ಲಿ ಸಿನಿಮಾ ಮಾಡಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕ ಕುತೂಹಲಿಯಾಗಿದ್ದಾನೆ. ತಾರೆ ಜಮೀನ್ ಪರ್ ಚಿತ್ರದ ನಿರ್ದೇಶನ ಮಾಡಿದ ಅಮೀರ್ ಖಾನ್‌ನನ್ನು ಪ್ರೇಕ್ಷಕ ಎಂಬ ಪರೀಕ್ಷಕ ಉತ್ತಮ ಅಂಕಗಳನ್ನು ನೀಡಿ ಪಾಸ್ ಮಾಡಿದ್ದಾನೆ. ಇದೀಗ ಅಜಯ್ ಸರದಿ.
ಅಜಯ್(ಅಜಯ್ ದೇವಗನ್) ಮತ್ತು ಪಿಯಾ(ಕಾಜೋಲ್) ಒಂದು ಹಡಗಿನಲ್ಲಿ ಭೇಟಿಯಾಗುತ್ತಾರೆ. ಹಡಗಿನಲ್ಲಿ ಮದ್ಯ ಸರಬರಾಜು ಮಾಡಿದ ಪಿಯಾ ಆತನಿಗೆ ಶರಾಬಿಗಿಂತ ಹೆಚ್ಚಿನ ನಶೆ ಏರಿಸಿದ್ದಳು. ಆತನೊಬ್ಬ ಮುಂಚೂಣಿಯ ಮನೊವೈದ್ಯನಾಗಿದ್ದರೂ, ಪಿಯಾ ಆತನ ಮನಸ್ಸನ್ನು ಕೆಡಿಸಿದ್ದಳು.
ಸಮುದ್ರದಲ್ಲಿ ಈ ಇಬ್ಬರ ನುಡುವೆ ಪ್ರೇಮಕತೆಯೊಂದು ಅಂಕುರಿಸಿತು. ಅಜಯ್ ಹಡಗಿನಲ್ಲಿ ತನ್ನ ಸ್ನೇಹಿತರ ಜತೆಗಿದ್ದ. ನಿಕಿಲ್ ಮತ್ತು ರೀನಾ ವಿವಾಹಿತರಾಗಿದ್ದು ಅಸಂತುಷ್ಟರಾಗಿದ್ದರೆ, ವಿಕ್ಕಿ ಮತ್ತು ನಿತಾಶ ಅವಿವಾಹಿತರಾಗಿದ್ದು, ಸಂತುಷ್ಟಿಯಿಂದಿದ್ದರು. ಪಿಯಾಳನ್ನು ಮೊದಲ ಬಾರಿ ಕಂಡ ಅಜಯ್ ಆಕೆಯಿಂದ ಹುಚ್ಚನಾಗಿದ್ದ. ಆಕೆಯನ್ನು ಒಲಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಾನೆ. ಹೇಗಾದರೂ ಪಿಯಾಳ ಪ್ರೀತಿ ಅಜಯ್‌ಗೆ ಬೇಕೇ ಬೇಕಾಗಿತ್ತು. ಆದರೆ ಕುಡಿದು ಚಿತ್ತಾಗಿದ್ದ ಅಜಯ್‌ನನ್ನು ಮೊದಲ ಬಾರಿ ಕಂಡ ಪಿಯಾ ಸುಲಭಕ್ಕೆ ಮಣಿಯಲಿಲ್ಲ. ಆದರೆ ಕೊನೆಗೂ ಪಿಯಾಳ ಹೃದಯ ಗೆಲ್ಲುವಲ್ಲಿ ಅಜಯ್ ಗೆಲ್ಲುತ್ತಾನೆ.
ಆದರೆ, ಈ ಪ್ರೇಮಕ್ಕೆ ಅಲೆಗಳ ಬಡಿತ ಜೋರಾಗಿಯೇ ಇತ್ತು. ಎಲ್ಲವೂ ಅವರಿಗೆ ವಿರುದ್ಧವಾಗಿಯೇ ಸಾಗುತ್ತದೆ. ಸುಳ್ಳು ಕಪಟತೆ ಅವರ ಸಂಬಂಧವನ್ನು ಹದಗೆಡಿಸುತ್ತದೆ. ಪ್ರೀತಿಯ ದೋಣಿ ಅಪಘಾತಕ್ಕೀಡಾಗಿ ಅವರ ಪ್ರೇಮ ಮುಳುಗುತ್ತದೆ.
ಆದರೆ ಸಮುದ್ರವೂ ಒಂದು ನಿರ್ಮಲ ಪ್ರೇಮವನ್ನು ಅಗಲಿಸದು. ನಂತರವೂ ಪಿಯಾಳಿಗಾಗಿ ಅಜಯ್ ಕಾಯುತ್ತಾನೆ. ಪಿಯಾ ಅಜಯ್ ಬಳಿ ಮರಳಿ ಬರುತ್ತಾಳೆ. ತಮ್ಮ ಸ್ನೇಹಿತರ ಹದಗೆಡುತ್ತಿರುವ ಸಂಬಂಧವನ್ನು ಕಂಡರೂ ಅವರ ಹಿತವಚನಗಳ ನಡುವೆಯೂ ಇಬ್ಬರು ವಿವಾಹವಾಗಲು ಮುಂದಾಗುತ್ತಾರೆ.
ಇವರು ತಮ್ಮ ವೈವಾಹಿಕ ಜೀವನವನ್ನು ಇತರರಿಗೆ ಮಾದರಿ ಎಂಬಂತೆ ನಡೆಸುತ್ತಾರೆ. ಆದರೆ ಎಲ್ಲೆಡೆ ಇರುವಂತೆ ಇಲ್ಲಿಯೂ ಸಮಸ್ಯೆಗಳು ಇಲ್ಲದೆ ಇರುವುದಿಲ್ಲ. ಏನೇ ಸಮಸ್ಯೆಗಳು ಬಂದರೂ ಪಿಯಾ ಮತ್ತು ಅಜಯ್ ಸುಲಭಕ್ಕೆ ಬಿಟ್ಟುಕೊಡುವವರಲ್ಲ. ಮದುವೆ ಎಂಬುದು ಅಂತ್ಯಗೊಳ್ಳುವಂತದಲ್ಲ, ಅದೊಂದು ಸುದೀರ್ಘ ಪಯಣ ಎಂದು ಭಾವಿಸಿದ ಅವರು ಮತ್ತಷ್ಟು ನಿಕಟತೆಯಿಂದ ಜತೆಯಲ್ಲಿ ಸಾಗುತ್ತಾರೆ.
ಎಲ್ಲ ವೈರುಧ್ಯಗಳನ್ನು ಮೆಟ್ಟಿನಿಂತ ಅವರು ಕುಸಿದಂತೆಲ್ಲ ಮತ್ತೆಮತ್ತೆ ಎದ್ದುನಿಲ್ಲುತ್ತಾರೆ. ಮತ್ತೆ ಹೊಸ-ನವೀನ ಪ್ರೀತಿಯೊಂದಿಗೆ. ಒಂದೇ ವ್ಯಕ್ತಿಯ ಪ್ರೇಮಪಾಶಕ್ಕೆ ಅನೇಕ ಬಾರಿ ಬೀಳುವ ಮೂಲಕ ಯಶಸ್ವೀ ಮದುವೆಗೆ ಏನು ಬೇಕಿದೆ ಎಂಬುದನ್ನು ತಮ್ಮ ಬದುಕಿನ ಮೂಲಕ ತಿಳಿಸುತ್ತಾರೆ.
ಇದೊಂದು ಅಜಯ್ ಮತ್ತು ಪಿಯಾ ನಡುವಿನ ವಿಶೇಷ ಪ್ರೇಮಕತೆ.
|