ಮಳೆ ಹುಡುಗ, ಗೋಲ್ಡನ್ಸ್ಟಾರ್ ಗಣೇಶನ ಮದುವೆಯ ಆರತಕ್ಷತೆ ನಗರದ ಹೊರವಲಯದ ಗೋಲ್ಡನ್ ಪಾಮ್ ರೆಸಾರ್ಟಿನಲ್ಲಿ ಅದ್ಧೂರಿಯಾಗಿ ನಡೆಯಿತು. ನೆರೆದವರೆಲ್ಲ ತಮ್ಮ ಮನೆ ಹುಡುಗನ ಆರತಕ್ಷತೆ ತಮ್ಮದೇ ಮನೆಯಲ್ಲಿ ನಡೆಯುತ್ತಿದೆ ಎಂಬಂತೆ ಭಾಗವಹಿಸಿ ವಧೂವರರನ್ನು ಹಾರೈಸಿದರು.
ಮದುವೆಯ ಆರತಕ್ಷತೆ ವ್ಯವಸ್ಥೆಗೊಂಡಿದ್ದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ಮುಂಗಾರು ಮಳೆ, ಕೃಷ್ಣ, ಗಾಳಿಪಟ ಚಿತ್ರತಂಡದ ಹುಡುಗರು ಮುಂದೆ ನಿಂತು ಸಮಾರಂಭಕ್ಕೆ ಬರುವವರ ಕಾಳಜಿ ವಹಿಸಿದ್ದು ಗಣೇಶ್ ಗಳಿಸಿರುವ ಪ್ರೀತಿಗೆ, ಉಳಿಸಿಕೊಂಡಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿತ್ತು.
ಭಾನುವಾರ ತಡರಾತ್ರಿಯವರೆಗೆ ನಡೆದ ಈ ಆರತಕ್ಷತೆ ಸಮಾರಂಭದಲ್ಲಿ ಬಂದವರೆಲ್ಲಾ ಗಣೇಶ್-ಶಿಲ್ಪಾ ದಂಪತಿಗಳಿಗೆ ಹೊಗಳಿಕೆಯ ಆರತಿ ಎತ್ತಿದರು, ಹಾರೈಕೆಯ ಅಕ್ಷತೆ ಹಾಕಿದರು. ಈ ಅರ್ಥದಲ್ಲಿ ಅದು ನಿಜವಾದ 'ಆರತಿ-ಅಕ್ಷತೆ' ಸಮಾರಂಭವೇ ಆಗಿತ್ತು. ಒಂದರ್ಥದಲ್ಲಿ ಕನ್ನಡ ಚಿತ್ರರಂಗವೇ ಅಲ್ಲಿ ಸೇರಿತ್ತು. ಯಾರ ಬಾಯಲ್ಲೂ 'ಗಣೇಶ್ ಅವರು' ಅಥವಾ 'ಗಣೇಶ್ ಸಾರ್' ಎಂಬ ಉಪಚಾರದ ಮಾತಿರಲಿಲ್ಲ. 'ನಮ್ ಹುಡುಗ ಗಣೇಶ' ಎಂಬ ಏಕವಚನದ ಮಾತಲ್ಲಿಯೇ ಬಹುವಚನದ ಪ್ರೀತಿ ತುಂಬಿಕೊಡುವ ನಿರ್ವಾಜ್ಯ ಪ್ರೇಮ ಅಲ್ಲಿ ಇಣುಕುತ್ತಿತ್ತು.
ಚಿತ್ರರಂಗದ ಆಯ್ದ ಗೆಳೆಯರನ್ನು ಮಾತ್ರವೇ ಕರೆಸಿಕೊಂಡು ಕಳೆದ 11 ರಂದು ತರಾತುರಿಯಲ್ಲಿ ಗಣೇಶ ಮದುವೆ ಮಾಡಿಕೊಂಡಾಗ 'ಹೀಗೂ ಉಂಟೇ?' ಎಂದು ಕೇಳಿದವರುಂಟು. ಆದರೆ ಸನ್ನಿವೇಶದ ಸೂಕ್ಷ್ಮತೆ, ಗಂಭೀರತೆ ಹಾಗೂ ಅನಿವಾರ್ಯತೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಗಣೇಶ್ ಮತ್ತೊಮ್ಮೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ತದ ನಂತರ ಮಾವನ ಮನೆ ಬಾರಕೂರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ನಮಸ್ಕಾರಾ.. ನಮಸ್ಕಾರಾ.. ನಮಸ್ಕಾರಾ ಎಂದು ಹೇಳುವ ಮೂಲಕ ಗಣೇಶ್, ಸಾಕ್ಷಾತ್ ಕಾಮಿಡಿಟೈಂ ಗಣೇಶ್ ಆಗಿಯೇ ರಂಜಿಸಿ ಸರಳತೆ ಮೆರೆದಿದ್ದರು.
ವಿವಾಹ ಭೋಜನವಿದು.... ನಿನ್ನೆ ರಾತ್ರಿಯ ಆರತಕ್ಷತೆ ಸಮಾರಂಭದ ಸಮಯದಲ್ಲಿ ವ್ಯವಸ್ಥೆಗೊಳಿಸಲಾಗಿದ್ದ ಭೋಜನಕೂಟವಂತೂ ಚಂದಚಂದ ರುಚಿರುಚಿ. ಒಂದು ಕಡೆ ಯುವ ಜೋಡಿಯನ್ನು ನೋಡಿ ಕಣ್ಣುಗಳು ಚಪ್ಪರಿಸುತ್ತಿದ್ದರೆ ಮತ್ತೊಂದೆಡೆ ಬಾಯಿ ಚಪ್ಪರಿಸುವಂತಹ ಬಗೆ ಬಗೆಯ ಖಾದ್ಯಗಳು ಒಂದು ರೀತಿಯಲ್ಲಿ ಮಾಯಾಬಜಾರ್ ಚಿತ್ರದ 'ವಿವಾಹ ಭೋಜನವಿದು ವಿಚಿತ್ರ್ಯ ಭಕ್ಷ್ಯಗಳಿವು..' ಹಾಡನ್ನು ನೆನಪಿಸುತ್ತಿದ್ದವು.
ಈ ಸಂದರ್ಭದಲ್ಲಿ ಚಿತ್ರ ನಿರ್ದೇಶಕ ನಾಗಾಭರಣ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, "ನಮ್ಮ ಹುಡುಗರೆಲ್ಲಾ ಹೀಗೆ ಸೂಕ್ತ ವಯಸ್ಸಿಗೆ ಮದುವೆಯಾಗಿಬಿಡಬೇಕು. ಇದರಿಂದಾಗಿ ಅವರ ಕುರಿತು ಭ್ರಮೆಯಿಟ್ಟುಕೊಳ್ಳುವ ಹುಡುಗಿಯರಿಗೆ ವಾಸ್ತವದ ಅರಿವು ಮೂಡಿಸಿದಂತಾಗುತ್ತದೆ, ಅಡಾಲಸೆನ್ಸ್ ಹಂತದಲ್ಲಿರುವ ಹುಡುಗಿಯರಲ್ಲಿ ಒಂದು ಆರೋಗ್ಯಪೂರ್ಣ ವಿಚಾರ ಮೂಡುತ್ತದೆ. ನಮ್ಮ ಹುಡುಗ-ಹುಡುಗಿಯರಿಗೆ ಹಾಲಿವುಡ್-ಬಾಲಿವುಡ್ ಸಂಸ್ಕೃತಿಗಳು ಆದರ್ಶವಾಗಬಾರದು" ಎಂದು ನುಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಾ| ವಿಷ್ಣುವರ್ಧನ್ ದಂಪತಿಗಳು, ಶ್ರೀನಾಥ್ ದಂಪತಿಗಳು, ಮನೋಮೂರ್ತಿ, ಜಯಂತ್ ಕಾಯ್ಕಿಣಿ, ಯೋಗರಾಜ ಭಟ್, ರಾಜೇಂದ್ರ ಸಿಂಗ್ ಬಾಬು, ಜಯಮಾಲಾ, ಸುಂದರರಾಜ್ ದಂಪತಿಗಳು, ರಮೇಶ್ ಅರವಿಂದ್, ಶಿವರಾಜ್ ಕುಮಾರ್, ಪುನೀತ್ ರಾಜ್ಕುಮಾರ್, ರವಿಚಂದ್ರನ್ ಸೇರಿದಂತೆ ಇಡೀ ಚಿತ್ರರಂಗವೇ ಅಲ್ಲಿ ಜಮಾವಣೆಗೊಂಡಿತ್ತು.
ಒಟ್ಟಿನಲ್ಲಿ, ಗೋಲ್ಡನ್ ಸ್ಟಾರ್ ಗಣೇಶನ ಮದುವೆಯ ಆರತಕ್ಷತೆ ಸಮಾರಂಭವನ್ನು ಮಡಿಲಲ್ಲಿ ತುಂಬಿಕೊಂಡ ಗೋಲ್ಡನ್ ಪಾಮ್ ರೆಸಾರ್ಟ್ ನಿನ್ನೆ ರಾತ್ರಿ ಅಕ್ಷರಶಃ ತಾರಾಲೋಕವೇ ಆಗಿತ್ತು.
|