ಸಿಹಿಕಹಿ ಚಂದ್ರುರವರ ಪತ್ನಿ ಸಿಹಿಕಹಿ ಗೀತಾರವರು ನಿರ್ದೇಶಿಸಿರುವ ಪಾಯಿಂಟ್ ಪರಿಮಳ ಧಾರಾವಾಹಿ ಈಗಾಗಲೇ ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದು ಅದು ವೀಕ್ಷಕರೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೂ ಒಂದೆರಡು ದೃಶ್ಯಗಳನ್ನು ನೋಡುತ್ತಿದ್ದಂತೆಯೇ ಏಕತಾನತೆ ಮೂಡುತ್ತದೆ ಎನ್ನುವುದು ಸುಳ್ಳಲ್ಲ.
ಇದಕ್ಕೆ ಕಾರಣ ಈ-ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸಿಲ್ಲಿ ಲಲ್ಲಿ ಧಾರಾವಾಹಿಯ ನೆರಳಿನಿಂದ, ಗುಂಗಿನಿಂದ ಪಾಯಿಂಟ್ ಪರಿಮಳ ಆಚೆ ಬರದಿರುವುದು. ಸಿಲ್ಲಿ ಲಲ್ಲಿ ಧಾರಾವಾಹಿಯಲ್ಲಿ ಡಾಕ್ಟರ್ ವಿಟ್ಠಲ್‌ರಾವ್ ಮತ್ತು ಅವನ ಪತ್ನಿ ಲಲಿತಾಂಬ ಮಧ್ಯೆಯಲ್ಲಿ ನರ್ಸ್ ಲಲಿತಾಳೂ ಇರುತ್ತಾಳೆ. ಡಾಕ್ಟರ್ ವಿಟ್ಠಲ್‌ರಾವ್‌ಗೆ ಆಕೆ ಲೈನು ಹೊಡೆಯಲು ಪ್ರಯತ್ನಿಸುವುದು, ಪತ್ನಿ ಲಲಿತಾಂಬ ಬಂದು ತಪ್ಪಿಸುವುದು ಧಾರಾವಾಹಿಯಲ್ಲಿ ಕಂಡುಬರುತ್ತಿತ್ತು. ಇದೇ ಚಿತ್ರಣ ಪಾಯಿಂಟ್ ಪರಿಮಳದಲ್ಲೂ ಕಂಡುಬರುತ್ತದೆ. ವ್ಯತ್ಯಾಸವೆಂದರೆ ಪರಿಮಳಳ ತಂಗಿ ತನ್ನ ಭಾವನಿಗೇ ಲೈನು ಹೊಡೆಯುತ್ತಿರುತ್ತಾಳೆ, ಪರಿಮಳ ಕೋಪಿಸಿಕೊಳ್ಳುತ್ತಿರುತ್ತಾಳೆ.
ಎರಡೂ ಧಾರಾವಾಹಿಗಳೂ ಒಂದೇ ಸಂಸ್ಥೆಯಿಂದ ನಿರ್ಮಾಣಗೊಂಡಿರುವುದು ಮತ್ತು ಎರಡಕ್ಕೂ ಎಂ.ಎಸ್.ನರಸಿಂಹಮೂರ್ತಿಯವರೇ ಕಥೆ-ಸಂಭಾಷಣೆಗಳನ್ನು ಬರೆದಿರುವುದೂ ಇದಕ್ಕೆ ಕಾರಣವಾಗಿರಬಹುದು. ಆದರೆ ಇದೇ ಜಾಡಲ್ಲಿ ಮುಂದುವರಿದರೆ ಪ್ರಾಯಶಃ ವೀಕ್ಷಕರಿಗೆ ಏಕತಾನತೆ ಎನ್ನಿಸಬಹುದು.
ಈ ನಿಟ್ಟಿನಲ್ಲಿ ನಿರ್ದೇಶಕಿ ಸಿಹಿಕಹಿ ಗೀತಾರವರು ಯೋಚಿಸುವುದು ಒಳ್ಳೆಯದು ಎಂಬುದು ನಮ್ಮ ನಮ್ರ ಸಲಹೆ.
|