ಗೋಲಿಬಾರ್, ಲಾಕಪ್ಡೆತ್, ಚಾಮುಂಡಿ, ದುರ್ಗಿಯಂಥಾ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆಯ ರಾಮು ಫಿಲಂಸ್ ಕನ್ನಡ ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು. ಇದು ರಾಮು ಮಾಲಿಕತ್ವದ ಸಂಸ್ಥೆ.
ಆದರೆ ಒಂದು ವರ್ಷದ ಹಿಂದೆ ರಾಮು ನಿರ್ಮಾಣ ಸಂಸ್ಥೆಯಲ್ಲಿ ಏನು ನಡೆಯುತ್ತಿದೆ ಎಂದೇ ಗೊತ್ತಾಗದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ರವಿಚಂದ್ರನ್ ನಟನೆಯ ಮಲ್ಲ ಚಿತ್ರದ ನಂತರ ಈ ಸಂಸ್ಥೆಯ ಮತ್ತಾವ ಚಿತ್ರವೂ ಯಶಸ್ಸು ಕಂಡಿರಲಿಲ್ಲವಾದ್ದರಿಂದ ರಾಮು ನಿರ್ಮಾಣದಿಂದ ಹೊರಗುಳಿಯಲಿದ್ದಾರೆಯೇ ಎಂಬ ಸಂದೇಹ ಎಲ್ಲರನ್ನೂ ಕಾಡುತ್ತಿತ್ತು.
ಆದರೆ ಈಗ ಏಕಕಾಲಕ್ಕೆ 3 ಚಿತ್ರಗಳ ನಿರ್ಮಾಣದ ವಿವಿಧ ಹಂತದಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ರಾಮು ಫಿಲಂಸ್ ಮತ್ತೊಮ್ಮೆ ಮೈಕೊಡವಿಕೊಂಡು ನಿಂತಿದೆ. ಸುದೀಪ್ ಅಭಿನಯದ ಗೂಳಿ ಬಿಡುಗಡೆಗೆ ಸಿದ್ಧವಾಗಿದ್ದರೆ, ಮಾಲಾಶ್ರೀ ಅಭಿನಯದ ಕಿರಣ್‌ಬೇಡಿ ಶೇಕಡ 50ರಷ್ಟು ಚಿತ್ರೀಕರಣ ಮುಗಿಸಿದೆ. ಪ್ರಜ್ವಲ್ ಅಭಿನಯದಲ್ಲಿ ಗುಲಾಮ ಚಿತ್ರವೂ ಸೆಟ್ಟೇರಲಿದೆ. ನಿರ್ಮಾಣ ಸಂಸ್ಥೆಯೊಂದು ಸಂಪೂರ್ಣ ಚಟುವಟಿಕೆಯಲ್ಲಿದ್ದಾಗಲೇ ಚಿತ್ರೋದ್ಯಮಕ್ಕೊಂದು ಖದರ್ ಬರುತ್ತದೆ ಎಂಬ ಮಾತು ಸುಳ್ಳಲ್ಲ.
ಒಟ್ಟಿನಲ್ಲಿ ಮುಂಬರಲಿರುವ ದಿನಗಳು ರಾಮು ದಿನಗಳು ಎಂದು ಹೇಳಬಹುದು.
|