ನಿರ್ದೇಶಕ ರಾಜೇಂದ್ರಸಿಂಗ್ ಬಾಬುರವರಿಗೆ ಪ್ರಾಯಶಃ ಹಳೆಯ ದಿನಗಳು ನೆನಪಾಗಿರಬೇಕು. ಅವರ ನಿರ್ದೇಶನದ ಸಿಂಹದ ಮರಿ ಸೈನ್ಯ ಚಿತ್ರವನ್ನು ಮೆಚ್ಚದವರಿಲ್ಲ. ಈಗ ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರಕ್ಕಾಗಿ ಸಿಂಹದ ಮರಿ ಸೈನ್ಯ ಚಿತ್ರವನ್ನೂ ಮೀರಿಸುವಂತೆ ವಿಶೇಷ ಆಸ್ಥೆ ವಹಿಸುತ್ತಿರುವುದೇ ಬಾಬುರವರ ದಣಿವರಿಯದ ಸ್ವಭಾವವನ್ನು ಹೇಳುತ್ತಿದೆ.
ಈ ಚಿತ್ರದ ಅನಿಮೇಷನ್ ಗ್ರಾಫಿಕ್ಸ್ ಕಾರ್ಯಕ್ಕೆಂದೇ ಬಾಬು ನ್ಯೂಯಾರ್ಕ್‌ಗೆ ಹೋಗಿದ್ದಾರಂತೆ. ಚಿತ್ರದಲ್ಲಿ 20 ನಿಮಿಷದ ಗ್ರಾಫಿಕ್ಸ್ ಅಳವಡಿಸಬೇಕಾಗಿ ಬಂದಿದ್ದು ಅದಕ್ಕೆ 3 ಕೋಟಿ ರೂ. ಖರ್ಚಾಗಲಿದೆ ಎಂಬುದು ವಿಶೇಷ.
ಭಯೋತ್ಪಾದಕರನ್ನು ಸದೆ ಬಡಿಯಲು ಏನೆಲ್ಲಾ ಶ್ರಮಪಡುವ ನಾಯಕನ ಸಾಹಸಕ್ಕೆ ಮಕ್ಕಳು ಹೇಗೆ ಸಹಕಾರ ನೀಡುತ್ತಾರೆ ಎಂಬುದು ಚಿತ್ರದ ಕಥೆಯಂತೆ. ಚಿತ್ರದಲ್ಲಿ ಉಪೇಂದ್ರ ಮತ್ತು ರಮ್ಯಾ ನಾಯಕ-ನಾಯಕಿ. ಚಿತ್ರದ ಒಂದು ಹಾಡಿನಲ್ಲಿ ಕನ್ನಡ ಚಿತ್ರರಂಗದ ಖ್ಯಾತನಾಮರೆಲ್ಲಾ ಬಂದುಹೋಗಲಿದ್ದಾರೆ ಎಂಬುದು ಮತ್ತೊಂದು ಸುದ್ದಿ.
ಒಟ್ಟಿನಲ್ಲಿ ರವಿಚಂದ್ರನ್ರವರ ಕನಸಿನ ಮದುವೆ ಮನೆ ಚಿತ್ರದಲ್ಲಿ ಸೇರಿಸಲಾಗದ ಎಲ್ಲಾ ನಾಯಕನಟರನ್ನು ಬಾಬುರವರು ಒಂದು ಹಾಡಿನಲ್ಲಾದರೂ ಒಟ್ಟಿಗೆ ಸೇರಿಸಿದ್ದಾರಲ್ಲಾ ಅನ್ನೋದೇ ಸಮಾಧಾನ.
|