ಹಲವು ದಿನಗಳಿಂದ ಹರಡಿದ ವದಂತಿಗೆ ಈಗ ರೆಕ್ಕೆ ಪುಕ್ಕ ಬಂದು ಸುದೀಪ್ ಎಂಬ ಕನ್ನಡದ ತಣ್ಣನೆಯ ನಟ ಬಾಲಿವುಡ್‌ಗೆ ಪಯಣ ಬೆಳೆಸಲು ಸಿದ್ಧರಾಗಿದ್ದಾರೆ. ರಂಗೀಲಾ, ಭೂತ್ ಆರಿಜಿವಿ ಕಿ ಶೋಲೆ ಚಿತ್ರಗಳನ್ನು ನಿರ್ಮಿಸಿದ ಬಾಲಿವುಡ್ ಜಗತ್ತಿನ ರಾಮ್ ಗೋಪಾಲ್ ವರ್ಮಾ ಅವರ ಬ್ಯಾನರ್ ಅಡಿಯಲ್ಲಿ ಚಿತ್ರ ಸಧ್ಯದಲ್ಲಿ ಸೆಟ್ಟೆರಲಿದೆ.
ಈ ಹಿಂದೆ ಡಾ| ವಿಷ್ಣುವರ್ಧನರವರು ಹೇಮಾಮಾಲಿನಿಯವರೊಂದಿಗೆ "ಏಕ್ ಓರ್ ಇತಿಹಾಸ್" ಎಂಬ ಚಿತ್ರದಲ್ಲಿ ನಟಿಸಿದ್ದರು. ತೀರಾ ಇತ್ತೀಚೆಗೆ ಬಂದ ಇನ್ಸಪೆಕ್ಟರ್ " ಧನುಷ್" ಹಾಗೂ " ಖಾಕಿವರ್ದಿ" ಅವರ ಖಾತೆಯಲ್ಲಿರುವ ಇನ್ನೆರಡು ಚಿತ್ರಗಳು. ಚರಣ್ ರಾಜ್ ಸಹ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಶಾಮ್ ಬೆನಗಲ ಅವರ ಮಂಥನ್, ಭೂಮಿಕಾ, ಕನ್ನಡದ ಬರ ಚಿತ್ರದ ಹಿಂದಿ ಅವತರಣಿಕೆ "ಸೂಖಾ" ಚಿತ್ರಗಳಲ್ಲಿ ಅನಂತನಾಗ್ ನಟಿಸಿದ್ದಾರೆ. ಇಷ್ಟು ಬಿಟ್ಟರೆ ಹಿಂದಿ ಚಿತ್ರರಂಗದಲ್ಲಿ ಇತ್ತೀಚೆಗೆ ಯಾರೂ ಪ್ರಯತ್ನಪಟ್ಟ ಉದಾಹರಣೆಗಳಿರಲ್ಲ. ಆ ಸಾಲಿಗೆ ಸುದೀಪ್ ಸೇರುತ್ತಿರುವುದು ಅವರಿಗಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೇ ಹೆಮ್ಮೆಯ ವಿಷಯ.
ವಾಸ್ತವವಾಗಿ ಈ ಚಿತ್ರ ರಾಂಗೋಪಾಲ್ ವರ್ಮಾರ ಸಂಸ್ಥೆಯ ವತಿಯಿಂದ ಕನ್ನಡದಲ್ಲಿ ನಿರ್ಮಾಣವಾಗಬೇಕಿತ್ತು. ಆದರೆ ಹಿಂದಿಯಲ್ಲೇ ಆಗಬಹುದಲ್ಲಾ? ಎಂಬ ಸೂಚನೆ ಅವರ ವತಿಯಿಂದ ಬಂದಾಗ ಸ್ವಲ್ಪ ದಿನ ಕಾಲಾವಕಾಶ ಪಡೆದ ಸುದೀಪ್ ನಂತರ ಎಸ್ ಎಂದರಂತೆ. ಈಗಾಗಲೇ ಅವರ ಅಭಿನಯದ ಕಾಮಣ್ಣನ ಮಕ್ಕಳು, ಮುಸ್ಸಂಜೆ ಮಾತು ಹಾಗೂ ತೀರ್ಥ ಚಿತ್ರಗಳ ಚಿತ್ರೀಕರಣ ಮುಗಿದಿದೆ. ಗೂಳಿ ಬಿಡುಗಡೆಗೆ ಸಿದ್ಧವಾಗಿದೆ.
|