ಬಳ್ಳಾರಿ ಎಂದರೆ ಇದುವರೆಗೂ ನೆನಪಾಗುತ್ತಿದ್ದುದು ಅಲ್ಲಿನ ರಣಬಿಸಿಲು, ಬಳ್ಳಾರಿ ಜಾಲಿಗಿಡ ಅಥವಾ ಅಲ್ಲಿನ ಗಣಿ ಪ್ರದೇಶಗಳ ಧೂಳು. ಅದೀಗ ಬದಲಾಗಿದೆ. ಬಳ್ಳಾರಿ ಎಂದರೆ ಗಣಿಧಣಿಗಳು ನೆನಪಾಗುತ್ತಾರೆ. ರಾಜಕೀಯ ವಲಯಕ್ಕೆ ಮಾತ್ರ ಮೀಸಲಿದ್ದ ಅವರ ಕಾರ್ಯಚಟುವಟಿಕೆಗಳು ಈಗ ಸಿನಿಮಾರಂಗಕ್ಕೂ ವಿಸ್ತರಿಸಿರುವುದೇ ಇದಕ್ಕೆ ಕಾರಣ.
ಸಾಯಿಕುಮಾರ್ ಮತ್ತು ಸಾಯಿಪ್ರಕಾಶ್ ಅಪೂರ್ವ ಸಂಗಮದ(!) ಸಿಟಿಜನ್ ಚಿತ್ರದ ಮುಹೂರ್ತದಲ್ಲಿ ಗಣಿಧಣಿ ಜನಾರ್ದನ ರೆಡ್ಡಿಯವರು ಕಾಣಿಸಿಕೊಂಡಾಗ ಕೆಲವರ ಹುಬ್ಬೇರಿತ್ತು. ಸಿ.ವಿ.ರೆಡ್ಡಿ ಎಂಬುವವರು ಈ ಚಿತ್ರದ ನಿರ್ಮಾಪಕರು ಎಂಬ ಸುದ್ದಿ ಹೊರಬಿದ್ದಾಗ ಜನಾರ್ಧನ ರೆಡ್ಡಿಯವರ ಹಾಜರಿಗೆ ಕಾರಣ ಸಿಕ್ಕಿತ್ತು.
ಸಾಯಿಕುಮಾರ್ ಅಭಿನಯದ 50ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಇತ್ತೀಚೆಗಷ್ಟೇ ಕುರುಗೋಡುವಿನ ಸಂಗಮೇಶ್ವರ ದೇವಾಲಯದಲ್ಲಿ ನಡೆಯಿತು. ಇದಕ್ಕಾಗೇ ಹೈದರಾಬಾದ್ ಡೆಕ್ಕನ್ ಸಂಸ್ಥೆಯಿಂದ ಹೆಲಿಕಾಪ್ಟರ್ ತರಿಸಲಾಗಿದ್ದು, ಸಮಾಜ ಘಾತುಕರಿಬ್ಬರನ್ನು ಅದರ ಕಾಲಿಗೆ ಕಟ್ಟಿ ಮೇಲೆ ಹಾರಿಸುವ ದೃಶ್ಯದ ಚಿತ್ರೀಕರಣವೂ ಅಂದು ನಡೆಯಿತು. ಈ ಕ್ಲೈಮ್ಯಾಕ್ಸ್ ದೃಶ್ಯ ಚಿತ್ರದ ಹೈಲೈಟ್ ಆಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಒಟ್ಟಿನಲ್ಲಿ ಪ್ರೇಕ್ಷಕ ಪ್ರಭುವನ್ನು ಮೆಚ್ಚಿಸಲು ಏನೇನೆಲ್ಲಾ ಸಾಹಸ ಮಾಡಬೇಕಾಗುತ್ತೆ ಅಲ್ವಾ?
|