ಒರಟ ಐ ಲವ್ ಯೂ ಚಿತ್ರದಲ್ಲಿ ತನ್ನ ವಿಶಿಷ್ಟ ಅಭಿನಯದಿಂದಾಗಿ ಎಲ್ಲರ ಗಮನ ಸೆಳೆದ ಪ್ರಶಾಂತ್ ಈಗ ಮಹರ್ಷಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೆಸರು ಮಹರ್ಷಿಯಾದರೂ ಇದು ಸಾಹಸ ಪ್ರಧಾನ ಚಿತ್ರ ಎಂಬುದೊಂದು ವಿಶೇಷ. ಪ್ರಶಾಂತ್ಗೆ ಜೋಡಿಯಾಗಿರುವವರು ಪೂಜಾ ಗಾಂಧಿ.
ಮೃದು ಸ್ವಭಾವದ ನಾಯಕ ಅಮ್ಮನನ್ನು ತುಂಬಾ ಹಚ್ಚಿಕೊಂಡಿರುತ್ತಾನೆ. ಅಮ್ಮನ ಮೇಲೆ ಒಂದು ದಿನ ರೌಡಿಗಳು ಅಟ್ಯಾಕ್ ಮಾಡಿದಾಗ ಅಂದಿನಿಂದ ಆತ ಮಚ್ಚು ಹಿಡಿಯುತ್ತಾನೆ. ನಂತರದ ಕಥೆಯನ್ನು ಬೆಳ್ಳಿತೆರೆಯ ಮೇಲೆ ನೋಡಿ ಅನಂದಿಸಬೇಕು ಎನ್ನುತ್ತಾರೆ ಚಿತ್ರ ನಿರ್ದೇಶಕರು. ಒರಟ ಐ ಲವ್ ಯೂ ಚಿತ್ರದ ನಂತರ ಬಹಳಷ್ಟು ಆಫರ್‌ಗಳು ಬಂದರೂ ಕಥೆ ಇಷ್ಟವಾಗಲಿಲ್ಲವಾದ್ದರಿಂದ ಒಪ್ಪಿಕೊಂಡಿರಲಿಲ್ಲ. ಈ ಚಿತ್ರದ ಕಥೆ ತುಂಬಾ ಇಷ್ಟವಾಯಿತು, ಒಪ್ಪಿಕೊಂಡೆ ಎಂಬುದು ಪ್ರಶಾಂತ್ರವರ ವಿವರಣೆ.
ಒಟ್ಟಿನಲ್ಲಿ, ಮಚ್ಚು-ಲಾಂಗುಗಳಿಲ್ಲದೆಯೂ ಮುಂಗಾರು ಮಳೆ, ಅಮೃತ ವರ್ಷಿಣಿಯಂಥ ಚಿತ್ರಗಳನ್ನು ತೆಗೆಯಲು ಸಾಧ್ಯವಿದೆ ಎಂದು ತೋರಿಸಿಕೊಟ್ಟ ಚಿತ್ರರಂಗದಲ್ಲಿ ಬೀಡುಬಿಟ್ಟಿರುವ ಕೆಲವು ಚಿತ್ರಬ್ರಹ್ಮರು ಮಚ್ಚಿನ ಚಿತ್ರಗಳ ಪ್ರಭಾವದಿಂದ ಯಾವಾಗ ಹೊರ ಬರುತ್ತಾರೋ ಗೊತ್ತಿಲ್ಲ!! ಈ ಚಿತ್ರದ ನಾಯಕಿ ಪೂಜಾ ಗಾಂಧಿ ನಟಿಸಿರುವ ಚಿತ್ರಗಳಾವುವೂ ಫ್ಲಾಪ್ ಆಗಿಲ್ಲ. ಆದ್ದರಿಂದ ಈ ಚಿತ್ರವೂ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನಿರ್ಮಾಪಕರದು.
ಅವರ ನಂಬಿಕೆ ನಿಜವಾಗಲಿ.
|