ಮೈಕ್ ಹಿಡಿದು ಯಾವುದೇ ಆತಂಕ, ಅರಿಮೆಗಳು ಇಲ್ಲದಂತೆ ಆಲಾಪನೆ ತೆಗವ ಈ ಪುಟಾಣಿಗಳು ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುತ್ತಾರೆ. ವೃತ್ತಿಪರ ಗಾಯಕರಂತೆ ತಮ್ಮದೇ ಶೈಲಿಯೊಂದಿಗೆ ನಿರ್ಭಿಡೆಯ ಪ್ರದರ್ಶನ ನೀಡುವ ಚಿಣ್ಣರು ಪ್ರತಿಭೆಯಲ್ಲಿ ಮಾತ್ರ ದೈತ್ಯರೆಂದೇ ಹೇಳಬಹುದು. ಹೌದು ಈಗ ಹೇಳ ಹೊರಟಿರುವುದು ಜೀ ಕನ್ನಡ ವಾಹಿನಿಯ ಸರಿಗಮಪ ಲಿಟ್ಲ್ ಚಾಂಪ್ಸ್ ಕಾರ್ಯಕ್ರಮದ ಕುರಿತು.
ದಿನದಿದಂದ ದಿನಕ್ಕೆ ವೀಕ್ಷಕರ ಗಮನ ಸೆಳೆಯುತ್ತಿರುವ ಕನ್ನಡ ವಾಹಿನಿಗಳ ಸಂಗೀತ ಆಧರಿತ ಕಾರ್ಯಕ್ರಮಗಳಲ್ಲಿ ಸುವರ್ಣ ವಾಹಿನಿಯ ಕಾನ್ಪಿಡೆಂಟ್ ಸ್ಟಾರ್ ಸಿಂಗರ್ಸ್ ಮತ್ತು ಪ್ರಮುಖವಾದವುಗಳು. ಕಾನ್ಪಿಡೆಂಟ್ನಲ್ಲಿ ಹದಿ ಹರೆಯದವರ ಭರಾಟೆಯಿದ್ದರೆ, ಸರಿಗಮಪದಲ್ಲಿ ಚಿಣ್ಣರದೇ ಕಲರವ.
ಒಟ್ಟು 1220 ಪುಟಾಣಿಗಳು ಆಯ್ಕೆಯಾಗಿದ್ದ ಈ ಸ್ಪರ್ಧೆಯ ಮೊದಲ ಹಂತದಲ್ಲಿ 64 ಮಂದಿ ವಿಜಯಶಾಲಿಗಳಾದರು. ರಾಜು ಅನಂತಸ್ವಾಮಿ ಮತ್ತು ಸುಮಾಶಾಸ್ತ್ರಿ ಈ ಸಂದರ್ಭದಲ್ಲಿ ತೀರ್ಪುಗಾರರಾಗಿದ್ದರು. ಎರಡನೇ ಹಂತದಲ್ಲಿ ತೀರ್ಪುಗಾರರಾಗಿದ್ದ ಬಿ.ಜಯಶ್ರೀ ಮತ್ತು ಹೇಮಂತ್ಕುಮಾರ್ ಒಟ್ಟು ಹದಿನೆಂಟು ಮಂದಿಯನ್ನು ಆಯ್ಕೆಮಾಡಿದ್ದು ಅವರಲ್ಲಿ ತಲಾ ಇಬ್ಬರು ಹುಡುಗರು-ಹುಡುಗಿಯರು ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದಾರೆ.
ಇಂದು ಮತ್ತು ನಾಳೆ (28 ಮತ್ತು 29) ನಡೆಯಲಿರುವ ಸೆಮಿಫೈನಲ್‌ನಲ್ಲಿ ಈ ನಾಲ್ವರು ಪುಟಾಣಿಗಳಾದ ಓಹಿಲೇಶ್ವರಿ, ಅಜಯ್, ಸಹನಾ ಮತ್ತು ಆದರ್ಶರವರುಗಳು ಪಾಲ್ಗೊಳ್ಳಲಿದ್ದು ಅವರ ನಡುವೆ ಜುಗಲ್ಬಂದಿ ನಡೆಯಲಿದೆ. ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರಾಗಿರುವ ಈ ನಾಲ್ವರಲ್ಲಿ ಫೈನಲ್ ತಲುಪುವವರು ಯಾರು ಎಂಬುದು ಈಗ ಕುತೂಹಲ ಕೆರಳಿಸಿದೆ.
|