ಅಪ್ರಾಪ್ತ ವಯಸ್ಸಿನ ಹುಡುಗಿಯನ್ನು ನಾಯಕಿ ಪಾತ್ರದಲ್ಲಿ ತೋರಿಸಲಾಗಿದೆ ಎಂಬು ವಿವಾದ ಹುಟ್ಟುಹಾಕಿದ್ದ ಚೆಲುವಿನ ಚಿತ್ತಾರ ಗೊತ್ತಲ್ಲ. ಈ ಚಿತ್ರದ ಮೂಲಕ ಹೆಸರು-ಹಣ ಎರಡನ್ನೂ ಸಂಪಾದಿಸಿದ್ದು ನಿರ್ದೇಶಕ ಎಸ್.ನಾರಾಯಣ್. ನಾಯಕ ಗಣೇಶ್‌ರಿಗೂ ಮೆಚ್ಚುಗೆಯ ಸುರಿಮಳೆಯಾದರೆ, ನಾಯಕಿ ಅಮೂಲ್ಯಾರನ್ನು ಪ್ರಸಿದ್ಧಿ ಹಾಗೂ ವಿವಾದಗಳ ಕೇಂದ್ರಬಿಂದುವನ್ನಾಗಿಸಿದ್ದೂ ಈ ಚಿತ್ರವೇ.
ಇವರಿಬ್ಬರ ಕಾಂಬಿನೇಷನ್ನಲ್ಲಿ ಚೈತ್ರದ ಚಂದ್ರಮ ಎಂಬ ಹೊಸ ಚಿತ್ರ ಪ್ರಾರಂಭವಾಗಲಿದೆ. ಇದಕ್ಕೂ ಮುಂಚೆ ಅಮೂಲ್ಯಾಗೆ ಹಲವು ಆಫರ್ಗಳು ಬಂದಿದ್ದರೂ ಶಾಲಾ ಪರೀಕ್ಷೆಗಳಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಅವರು ಒಪ್ಪಿರಲಿಲ್ಲ. ಈಗ ಒಂಬತ್ತನೇ ತರಗತಿಯ ಪರೀಕ್ಷೆಗಳು ಮುಗಿದಿದ್ದು ಏಪ್ರಿಲ್-ಮೇ ತಿಂಗಳಲ್ಲಿ ಶಾಲೆಗೆ ರಜವಿರುವುದರಿಂದ ಎಸ್.ನಾರಾಯಣ್‌ಗೆ ಕಾಲ್‌ಶೀಟ್ ಸಿಕ್ಕಿದೆಯಂತೆ.
ಎಂದಿನಂತೆ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ, ನಿರ್ದೇಶನದ ಜೊತೆಗೆ ಸಂಗೀತವನ್ನೂ ನೀಡಲಿದ್ದಾರಂತೆ ನಾರಾಯಣ್. ಈ ಕಾರಣಕ್ಕಗಿಯೇ ಅವರು ಮುಂಬೈನಲ್ಲಿ ಠಿಕಾಣಿ ಹೂಡಿದ್ದಾರಂತೆ. ಕುನಾಲ್ ಗಾಂಜಾವಾಲಾ ಮತ್ತು ಶ್ರೇಯಾ ಘೋಷಾಲ್‌ರಿಂದ ಹಾಡುಗಳನ್ನು ಹಾಡಿಸಬೇಕೆಂದು ಅವರ ಇರಾದೆಯಾಗಿರುವುದರಿಂದ ಈ ಕ್ರಮ ಎನ್ನುತ್ತಿವೆ ನಾರಾಯಣ್ ಆಪ್ತ ವಲಯಗಳು.
ಚೈತ್ರದ ಚಂದ್ರಮ ಮತ್ತೊಂದು ಚೆಲುವಿನ ಚಿತ್ತಾರವಾಗುವುದೋ ಅಥವಾ ಚೈತ್ರದ ಪ್ರೇಮಾಂಜಲಿಯಾಗುವುದೋ ಎಂಬುದನ್ನು ಕಾದುನೋಡಬೇಕಿದೆ.
|