ನಾಯಕ ಚಿತ್ರವಿಚಿತ್ರ ವೇಷ ಧರಿಸಿದರೆ ಚಿತ್ರ ಹಿಟ್ ಆಗುತ್ತದೆ ಎಂಬುದು ಕೆಲವರ ವಾದವಾದರೆ, ಐಟಂ ಸಾಂಗು ಇರದಿದ್ರೆ ಕಷ್ಟ ಎಂಬ ಅಭಿಪ್ರಾಯ ಇನ್ನು ಕೆಲವರದು. ಚಿತ್ರಕ್ಕೆ ವಿಭಿನ್ನವಾದ ಕಥೆಯಿರಬೇಕು ಎಂದು ಬಯಸುವವರದು ಮತ್ತೊಂದು ಗುಂಪು. ಟೈಟಲ್ ವಿಚಿತ್ರವಾಗಿರಬೇಕು ಎಂಬ ಚಿಂತನೆ ಇನ್ನು ಕೆಲವರದು. ಹೀಗೆ ಚಿತ್ರವನ್ನು ಗೆಲ್ಲಿಸಲಿಕ್ಕೆ ಅಥವಾ ದಡ ಮುಟ್ಟಿಸಲಿಕ್ಕೆ ಚಿತ್ರೋದ್ಯಮಿಗಳು ಹಲವು ಸರ್ಕಸ್ ಮಾಡುತ್ತಾರೆ ಎಂಬ ಮಾತು ಸುಳ್ಳಲ್ಲ.
ಕಿರುತೆರೆಯ ಪ್ರತಿಭಾವಂತ ಕಲಾವಿದ ಅರವಿಂದ್ ಕೌಶಿಕ್ ತಮ್ಮ ನಿರ್ದೇಶನದ ಚಿತ್ರಕ್ಕೆ ನಮ್ ಏರಿಯಾಲಿ ಒಂದಿನ ಎಂದು ಹೆಸರಿಟ್ಟಿದ್ದರ ಕುರಿತು ವಿವರಣೆ ನೀಡುವಾಗ ಇದೆಲ್ಲಾ ನೆನಪಿಗೆ ಬಂತು. ಒಂದೇ ಏರಿಯಾದಲ್ಲಿ ವಾಸ ಮಾಡುವ ನಾಯಕ ಮತ್ತು ನಾಯಕಿಯ ಮಧ್ಯೆ ಪ್ರೀತಿ ಅಂಕುರಿಸುವುದು, ಇದಕ್ಕೂ ಮುಂಚಿತವಾಗಿ ಅಲ್ಲಿ ಯಾವುದೋ ಗಲಭೆ ನಡೆಯುವುದು ಇವೆಲ್ಲ ಅಂಶಗಳನ್ನು ಮನದಲ್ಲಿಟ್ಟುಕೊಂಡು ಚಿತ್ರಕ್ಕೆ ಈ ಹೆಸರು ಇರಿಸಲಾಗಿದೆ ಎಂಬುದು ನಿರ್ದೇಶಕರ ವಿವರಣೆ.
ಏರಿಯಾ, ಗಲಭೆ ಇತ್ಯಾದಿ ಪದಗಳೆಲ್ಲಾ ಬಂದ ಮೇಲೆ ಮಚ್ಚು, ಲಾಂಗುಗಳೂ ಕಾಣಿಸಿಕೊಳ್ಳುತ್ತವೆ ಅಲ್ಲವೇ ಎಂಬ ಪ್ರಶ್ನೆಗೆ, ಹೆಚ್ಚಿರುವುದಿಲ್ಲ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ ಎಂಬುದು ನಿರ್ದೇಶಕರ ವಿವರಣೆ. ಅನಿಶ್ ಹಾಗೂ ಮೇಘನಾ ಪ್ರಧಾನ ಪಾತ್ರಗಳಲ್ಲಿದ್ದಾರೆ. ಚಿತ್ರದ ಹೆಚ್ಚಿನ ಭಾಗ ಮೈಸೂರಿನಲ್ಲಿ ಚಿತ್ರೀಕರಣಗೊಳ್ಳುತ್ತದೆ.
ಸಾಂಸ್ಕೃತಿಕ ರಾಜಧಾನಿಯಲ್ಲಿ ಲಾಂಗು-ಮಚ್ಚಿನ ಸಂಸ್ಕೃತಿ..!! ಹೀಗೂ ಉಂಟೇ..?!!
|