ನಾಯಕನ ಹೇರ್‌ಸ್ಟೈಲ್ ಬದಲಿಸಿದರೆ ಚಿತ್ರ ಗೆಲ್ಲುತ್ತಾ? ಗೊತ್ತಿಲ್ಲ. ಆದರೆ ಗಾಂಧಿನಗರದ ಕೆಲ ನಿರ್ದೇಶಕರು ಇದನ್ನು ಅನುಸರಿಸುತ್ತಿದ್ದಾರೆ. ಇತ್ತೀಚಿನ ಹೆಚ್ಚಿನ ಚಿತ್ರಗಳಲ್ಲಿ ನಾಯಕನ ಹೇರ್‌ಸ್ಟೈಲ್ ಬದಲಿಸಿ ಆತನನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೆಯುತ್ತಿದೆ.
ಇಂದ್ರಜಿತ್ ನಿರ್ದೇಶಿಸಿ ಉಪೇಂದ್ರ ಹಾಗೂ ದೀಪಿಕಾ ಪಡುಕೋಣೆ ನಟಿಸಿದ ಐಶ್ವರ್ಯ ಚಿತ್ರದಲ್ಲಿ ಉಪೇಂದ್ರ ಅವರ ಕುತ್ತಿಗೆವರೆಗೆ ಇಳಿದಿದ್ದ ಕೂದಲನ್ನು ಸಣ್ಣಗೆ ಮಾಡಿ ಇಡೀ ಅವರ ಹೇರ್‌ಸ್ಟೈಲ್‌ನ್ನು ಬದಲಾಯಿಸಿದ್ದರು. ಆದರೆ ಚಿತ್ರ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಗೆಲ್ಲಲ್ಲಿಲ್ಲ. ನಂತರ ಬಂದ ಜೋಗಿ ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಹೇರ್‌ಸ್ಟೈಲು ಮೊದಲ ಎರಡೂ ದೃಶ್ಯಗಳಲ್ಲಿ ಸ್ಪಲ್ಪ ಮಟ್ಟಿಗೆ ಬದಲಿಸಲಾಗಿತ್ತು. ಆದರೆ ಈ ಚಿತ್ರ ಭರ್ಜರಿ ಯಶಸ್ಸನ್ನು ಕಂಡಿದ್ದಲ್ಲದೇ ಕ್ರೇಜಿ ಯುವಕರು ಕೂಡಾ ಜೋಗಿಯ ಹೇರ್‌ಸ್ಟೈಲ್ ಅನುಸರಿಸಿದರು. ನಂತರ ಈ ಟ್ರೆಂಡ್ ಚಿತ್ರರಂಗದಲ್ಲಿ ಮತ್ತಷ್ಟು ಹೆಚ್ಚಿತ್ತೆಂದರೆ ತಪ್ಪಾಗದು.
ಇತ್ತೀಚಿಗೆ ಬಂದ ಪ್ರಸಿದ್ಧ ನಾಯಕರ ಚಿತ್ರಗಳನ್ನು ಗಮನಿಸಿದರೆ ಅವರ ಹೇರ್‌ಸ್ಟೈಲ್ ವಿಭಿನ್ನವಾಗಿ ಮಾಡಲಾಗಿದೆ. ಗಜ ಚಿತ್ರದಲ್ಲಿ ದರ್ಶನ್ ತಮ್ಮ ಕೂದಲನ್ನು ಉದ್ದನೇ ಬಿಟ್ಟು ಸ್ಟೈಲಿಶ್ ಆಗಿ ಕಂಡಿದ್ದಾರೆ. ಚಿತ್ರವೂ ಯಶಸ್ವಿಯಾಗಿ ಶತದಿನಗಳತ್ತ ನಡೆಯುತ್ತಿದೆ. ಗೂಳಿ ಚಿತ್ರವನ್ನು ಗಮನಿಸಿದರೆ ಅಲ್ಲಿ ಸುದಿಪ್ ಅವರನ್ನು ಗುರುತಿಸುವುದೇ ಕಷ್ಟವಾಗಿದೆ. ಬದಲಾದ ಅವರ ಹೇರ್‌ಸ್ಟೈಲ್ ಅವರ ಪಾತ್ರಕ್ಕೆ ಸಾಥ್ ನೀಡಿದೆ. ಚಿತ್ರವೂ ಯಶಸ್ಸಿಯಾಗಿ ಮುನ್ನುಗ್ಗುತ್ತಿದೆ.
ಕಳೆದ ವಾರವಷ್ಟೇ ತೆರೆಕಂಡ ಸತ್ಯ ಇನ್ ಲವ್ ಚಿತ್ರದಲ್ಲಿ 40 ವರ್ಷ ದಾಟಿದ ಶಿವಾರಾಜ್‌ಕುಮಾರನನ್ನು 18ರ ಯುವಕರಂತೆ ತೋರಿಸಲಾಗಿದೆ. ಜನ ಶಿವಣ್ಣನ ಹೇರ್‌ಸ್ಟೈಲ್ ಮೆಚ್ಚಿದ್ದಾರೆ. ಗಡಿ ದಾಟಿದ ಪ್ರೀತಿಯನ್ನು ಪ್ರೇಕ್ಷಕರು ಇಷ್ಟಪಟ್ಟು ಚಿತ್ರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಜನ ತಮ್ಮ ನಾಯಕನನ್ನು ಸ್ವಲ್ಪ ಮಟ್ಟಿಗಾದರೂ ಡಿಫರೆಂಟ್ ಆಗಿ ನೋಡಲು ಇಷ್ಟಪಡುತ್ತಾರೆ. ಆದ್ದರಿಂದ ಹೇರ್‌ಸ್ಟೈಲ್‌ನಂತಹ ಸಣ್ಣ ಪುಟ್ಟ ಬದಲಾವಣೆಗಳು ಚಿತ್ರದ ಯಶಸ್ಸಿಗೂ ಸಹಾಯವಾಗುತ್ತವೆ ಎನ್ನುತ್ತಾರೆ ಸತ್ಯ ಇನ್ ಲವ್ ಚಿತ್ರದ ನಿರ್ದೇಶಕ ರಾಘವ್ ಲೋಕಿ.
ಇನ್ನೇನು ತೆರೆ ಕಾಣಲು ಸಿದ್ಧವಾಗಿರುವ ಶಿವಾರಾಜ್ ಕುಮಾರ್ ಮಾದೇಶ ಹಾಗೂ ನವೀನ್ ಕೃಷ್ಣ ಅಭಿನಯದ ಧಿಮಾಕು ಚಿತ್ರದಲ್ಲೂ ಇವರಿಬ್ಬರ ಹೇರ್‌ಸ್ಟೈಲ್ ಬದಲಾಯಿಸಲಾಗಿದೆ. ಆದರೆ ಆ ಚಿತ್ರಗಳು ಗೆಲ್ಲುತ್ತಾ ಎಂಬುದನ್ನು ಮಾತ್ರ ಕಾದು ನೋಡಬೇಕಾಗಿದೆ.
ಒಟ್ಟಾರೆ ಏನಾದರೂ ಮಾಡಿ ಪ್ರೇಕ್ಷಕರಿಗೆ ಹೊಸದ್ದನ್ನು ತೋರಿಸಬೇಕೆಂಬ ಗಾಂಧಿನಗರಿಯ ಮಂದಿಯ ಶ್ರಮವನ್ನು ಮೆಚ್ಚಬೇಕಾದ್ದೆ.
|