ದುಡ್ಡಿದ್ದವನಿಗೆ ಗಾಂಧಿನಗರಿಯಲ್ಲಿ ಮಣೆಹಾಕುವ ಮಂದಿ ಬೇಕಾದಷ್ಟಿದ್ದಾರೆ. ಅದೇ ಆತ ಬಿದ್ದರೆ ಗೇಲಿ ಮಾಡುವವರಿಗೇನೂ ಕಡಿಮೆಯಿಲ್ಲ. ಆದರೆ ಇಂತಹ ಗೇಲಿಯನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಅದೇ ಗಾಂಧಿನಗರಿ ಎದುರು ಸೆಟೆದು ನಿಂತವರ ಸುದ್ದಿ ಇದು.
ಈ ಸುದ್ದಿಯ ಹೀರೋ ಇಕ್ಬಾಲ್ ರಾಜ್. ಈ ಹಿಂದೆ ಇವರು ಲಿಮಿಸ್ಟರ್ 'ಎಕ್ಸ್' ಎಂಬ ಚಿತ್ರ ನಿರ್ಮಿಸಿ ಕೈ ಸುಟ್ಟುಕೊಂಡರು. ಆಗ ಗಾಂಧಿನಗರ ಶಿಳ್ಳೆ ಹೊಡೆದು 'ಹೆಂಗಿದ್ದೋನು ಹೆಂಗಾದ' ಎಂದು ಗೇಲಿ ಮಾಡಿತ್ತು. ಆದರೆ ಇಂದು ಅದೇ ಇಕ್ಬಾಲ್ ರಾಜ್ 'ಚಮತ್ಕಾರಕ್ಕೆ ನಮಸ್ಕಾರ' ಎಂಬ ಚಿತ್ರ ನಿರ್ಮಿಸಿ, ಸ್ವತ: ತಾವೇ ನಾಯಕನಾಗಿ ನಟಿಸುತ್ತಿದ್ದಾರೆ. "ಇದು ವ್ಯಕ್ತಿಯೊಬ್ಬನ ವೈಯಕ್ತಿಕ ಜೀವನದ ಕಥೆಯನ್ನು ಆಧರಿಸಿದೆ" ಎನ್ನುವ ಅವರು, ವ್ಯಕ್ತಿಯೊಬ್ಬ ಸೋತಾಗ ಜನ ಯಾವ ರೀತಿ ಹೀಯಾಳಿಸುತ್ತಾರೆ ಎನ್ನುವುದನ್ನು ಚಿತ್ರ ಒಳಗೊಂಡಿದೆ ಎಂದು ವಿವರಿಸಿದಾಗ ಹಿಂದೆ ಅವರು ಅನುಭವಿಸಿರಬಹುದಾದ ಅವಮಾನದ ಜ್ವಾಲೆ ಎದ್ದು ಕಾಣುತ್ತಿತ್ತು.
ಇತ್ತೀಚೆಗೆ ಚಿತ್ರಕ್ಕಾಗಿ ಹುಚ್ಚನ ದೃಶ್ಯವೊಂದನ್ನು ರಾಜಾಜಿನಗರದಲ್ಲಿ ಚಿತ್ರೀಕರಿಸಲಾಯಿತು. ಹಳೆಯ ಪ್ಯಾಂಟು, ಅಲ್ಲಲ್ಲಿ ಹರಿದು ಹೋಗಿರುವ ಅಂಗಿ ಹಾಗೂ ಮಾಸಿದ ಟೈ ಕಟ್ಟಿಕೊಂಡ ಇಕ್ಬಾಲ್, ಸೆಕ್ಯುರಿಟಿಯವನಲ್ಲಿ "ಏಯ್ ನಾನು ಯಾರ್ ಗೊತ್ತೇನೋ, ಮಿಸ್ಟರ್ ಎಕ್ಸ್ ಕಣೋ, ಮಿಸ್ಟರ್ ಎಕ್ಸ್" ಎಂದು ಹೇಳುವ ದೃಶ್ಯವೊಂದನ್ನು ನಿರ್ದೇಶಕ ರಾಜೇಶ್ ಕುಮಾರ್ ಚಿತ್ರಿಸಿಕೊಂಡರು. ಚಿತ್ರದಲ್ಲಿ ಭೂಗತ ಲೋಕದ ವ್ಯಕ್ತಿಗಳನ್ನು ಹಾಗೂ ಪೊಲೀಸ್ ಅಧಿಕಾರಿಯೊಬ್ಬರನ್ನು ಬಳಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ನಿರ್ದೇಶಕರು ತಿಳಿಸಿದರು.
|