ಆತ ಆಕೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾನೆ. ಅವಳನ್ನು ಬಿಟ್ಟು ಇತರ ಹುಡುಗಿಯರನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಆದರೆ ಆತನನ್ನು ಮತ್ತೊಂದು ಹುಡುಗಿ ಪ್ರೀತಿಸುತ್ತಾಳೆ. ಇವಳದ್ದು ಬರೀ ಏಕಮುಖ ಪ್ರೇಮ. ಇದು ತರುಣ್ ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರ 'ಸೀನ'ದ ಒನ್ಲೈನ್ ಸ್ಟೋರಿ.
ಬಸವರಾಜ್ ಬಳ್ಳಾರಿ ನಿರ್ದೇಶಿಸುತ್ತಿರುವ ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು. ಈ ಹಿಂದೆ ತರುಣ್ ನಟಿಸಿದ ಗೆಳೆಯ ಹಾಗೂ ಹನಿಹನಿ ಚಿತ್ರ ನೀರೀಕ್ಷಿತ ಮಟ್ಟದ ಯಶಸ್ಸನ್ನು ಕಾಣಲಿಲ್ಲ. ಆದರೆ ಈ ಚಿತ್ರದ ಮೂಲಕವಾದರೂ ಚಿತ್ರರಂಗದಲ್ಲಿ ತರುಣ್ ತಮ್ಮದೇ ಛಾಪನ್ನು ಮೂಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕು.
ಇಲ್ಲಿ ನಾಯಕಿ ಸಮಾಜಮುಖಿ. ಸಮಾಜದ ಅನಾಥ ಮಕ್ಕಳಿಗಾಗಿ ಆಕೆ ದುಡಿಯುತ್ತಾಳೆ. ಇದರಿಂದ ಮನಸೋತ ನಾಯಕ ಆಕೆಯನ್ನು ಪ್ರೀತಿಸುತ್ತಾನೆ. ಆದರೆ ಇದೇ ಹೊತ್ತಿಗೆ ನಾಯಕನನ್ನು ಮತ್ತೊಬ್ಬಳು ಹುಡುಗಿ ಪ್ರೀತಿಸುತ್ತಾಳೆ. ನಾಯಕ ಇಲ್ಲಿ ಶ್ರೀರಾಮನಂತೆ ತನ್ನ ಮನದನ್ನೆಗಾಗಿ ಕಾತರಿಸುತ್ತಿರುತ್ತಾನೆ. ಆದರೆ ಆಕೆ ಇವನಿಗೆ ಸಿಗುತ್ತಾಳಾ ಎಂಬುದನ್ನು ಮಾತ್ರ ಕಾದುನೋಡಬೇಕಷ್ಟೇ. ನಾಯಕಿಯಾಗಿ ಪ್ರಿಯಾಂಕಾ ಹಾಗೂ ಅಂತರಾರೆಡ್ಡಿ ನಟಿಸುತ್ತಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಕವಿರಾಜ್ ಚಿತ್ರಕ್ಕೆ ಹಾಡು ಬರೆದಿದ್ದಾರೆ. ಮುರಳಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
|