ಮುಖ್ಯ ಪುಟ > ಮನರಂಜನೆ > ಸ್ಯಾಂಡಲ್ ವುಡ್ > ಸುದ್ದಿ/ಗಾಸಿಪ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಂಚ್ ನೀಡುವ ಪಂಚ್ಲೈನ್‌ಗಳು
ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಒಂದಲ್ಲ ಒಂದು ಹೊಸ ಪ್ರಯೋಗ ನಡೆಯುತ್ತಲೇ ಇದೆ. ಹೊಸ ರೀತಿಯಲ್ಲಿ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಚಿತ್ರದ ಟೈಟಲ್ನಿಂದಲೇ ಆರಂಭವಾಗುತ್ತದೆ. ಅದಕ್ಕಾಗಿ ಇತ್ತೀಚಿನ ಹೆಚ್ಚಿನ ಚಿತ್ರಗಳ ಹೆಸರಿನ ಕೆಳಗೆ ಸ್ಟೈಲಿಶ್ ಆಗಿರುವಂತಹ ಒಂದು ಪಂಚ್ಲೈನ್ ಕೊಟ್ಟಿರುತ್ತಾರೆ.

ಇಂತಹ ಪಂಚ್ಲೈನ್ಗಳು ಕೇಳಲು ವಿಶಿಷ್ಟವಾಗಿರುವುದರಿಂದಲೇ ಅನೇಕರು ಇದರಿಂದಾಗಿಯೇ ಚಿತ್ರಮಂದಿರಕ್ಕೆ ಧಾವಿಸುತ್ತಾರೆ. ಅದಕ್ಕಾಗಿಯೇ ಇತ್ತೀಚಿನ ಹೆಚ್ಚಿನ ಚಿತ್ರಗಳೆಲ್ಲ ಪಂಚ್ಲೈನ್ ಹೊಂದಿರುತ್ತವೆ. ಹಿಂದೆ ಉಪೇಂದ್ರ ಅಭಿನಯಿಸಿದ 'ಎ' ಚಿತ್ರ 'ಬುದ್ದಿವಂತರಿಗೆ ಮಾತ್ರ' ಎಂಬ ಪಂಚ್ಲೈನ್ ಒಳಗೊಂಡಿತ್ತು. ಅವರದೇ ಇತ್ತೀಚಿನ ಚಿತ್ರ ಬುದ್ದಿವಂತದಲ್ಲಿ 'ಕಡ್ಡಾಯವಾಗಿ ಹೆಣ್ಣುಮಕ್ಕಳಿಗೆ ಮಾತ್ರ' ಎಂಬ ಪಂಚ್ಲೈನ್ ಇರುವುದು ವಿಶೇಷ.

ನಂತರ ಭರ್ಜರಿ ಯಶಸ್ಸನ್ನು ಕಂಡ ಜೋಗಿ ಚಿತ್ರ 'ಎ ಫೀಲ್ ದಟ್ ನೆವರ್ ಎಂಡ್ಸ್' ಎಂಬ ಪಂಚ್ಲೈನ್ ಹೊಂದಿತ್ತು. ಆ ನಂತರ ಬಂದ ಹೆಚ್ಚಿನ ಚಿತ್ರಗಳೆಲ್ಲವೂ ಪಂಚ್ಲೈನ್ಗಳನ್ನು ಹೊಂದಿದ್ದವು. ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದ ಮುಂಗಾರು ಮಳೆ ಚಿತ್ರದಲ್ಲಿ ಕೇಳಲು ಹಿತವೆನಿಸುವಂತೆ 'ಹನಿ ಹನಿ ಪ್ರೇಮ್ಕಹಾನಿ' ಎಂಬ ಸುಂದರವಾದ ಅಡಿಬರಹವೇ ಚಿತ್ರಪ್ರೇಮಿಗಳನ್ನು ಆಕರ್ಷಿಸಿತು. ನಂತರದ ದುನಿಯಾ ಚಿತ್ರ 'ಯಾರ್ ಗೋರಿ ಮೇಲೂ ಯಾರ್ ಯಾಕ್ ಸತ್ರು ಅಂತಾ ಬರಿಯಲ್ಲ' ಎಂಬ ವಿಶಿಷ್ಟ ಪಂಚ್ಲೈನ್ ಹೊಂದಿತ್ತು. ಈ ಚಿತ್ರವೂ ಹಿಟ್ ಆಯಿತು. ಯೋಗರಾಜ ಭಟ್ ನಿರ್ದೇಶನದ ಗಾಳಿಪಟ ಚಿತ್ರ 'ಮನದ ಮುಗಿಲಲ್ಲಿ ಮೊಹಬ್ಬತ್' ಎಂಬ ಪಂಚ್ಲೈನ್ ಹೊಂದಿತ್ತು. ನಂದ ಲವ್ಸ್ ನಂದಿತಾ ಚಿತ್ರದಲ್ಲಿ 'ಪಾತಕಲೋಕದಲ್ಲೊಂದು ಮೊಹಬ್ಬತ್' ಎಂಬ ಪಂಚ್ಲೈನ್ನ್ನು ಹೊಂದಿತ್ತಲ್ಲದೇ ಈ ಚಿತ್ರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

ಪುನಿತ್ ರಾಜ್ಕುಮಾರ್ ಅಭಿನಯದ 'ಬಿಂದಾಸ್' ಚಿತ್ರಕ್ಕೆ 'ಬಿ ಹ್ಯಾಪಿ ನೋ ಬಿಪಿ' ಎಂಬ ಪಂಚ್ಲೈನ್ ನೀಡಿದರೆ ಇತ್ತೀಚೆಗೆ ತೆರೆಕಂಡ ಸತ್ಯ ಇನ್ ಲವ್ ಚಿತ್ರ 'ಪವರ್ ಆಫ್ ಹಾರ್ಟ್ ಬೀಟ್' ಎಂಬ ಪಂಚ್ಲೈನ್ನಿಂದ ಕಂಗೊಳಿಸುತ್ತಿತ್ತು. ಭರ್ಜರಿ ಯಶಸ್ಸಿನೊಂದಿಗೆ ಇನ್ನೂ ಪ್ರದರ್ಶನಗೊಳ್ಳುತ್ತಿರುವ ಮಿಲನ ಚಿತ್ರ 'ಕಲರ್ಸ್ ಆಫ್ ಲವ್' ಎಂಬ ಪಂಚ್ಲೈನ್ ಹೊಂದಿದೆ.

ಇನ್ನು ತೆರೆ ಕಾಣಬೇಕಾದ ಶಿವಧ್ವಜ್ ನಿರ್ದೇಶನದ ನೀನೇ ನೀನೇ ಚಿತ್ರ 'ಫಾರ್ ಎವರ್ ಆಂಡ್ ಎವರ್' ಎಂಬ ಪಂಚ್ಲೈನ್ ಹೊಂದಿದ್ದರೆ, ಹೃದಯಗಳ ವಿಷಯ ಚಿತ್ರವೂ 'ಶ್ ಮೂರನೆಯವರಿಗೆ ಪ್ರವೇಶವಿಲ್ಲ' ಎಂಬ ಪಂಚ್ಲೈನ್ ಹೊಂದಿದೆ. ಪೂಜಾಗಾಂಧಿ, ಅಜಯ್ ಅಭಿನಯದ ತಾಜ್ಮಹಲ್ ಚಿತ್ರ 'ಕಣ್ ಹನಿಗಳ ಕಹಾನಿ' ಎಂಬ ಪಂಚ್ಲೈನ್ನಿಂದ ರಾರಾಜಿಸುತ್ತಿದೆ. ಸದ್ಯದಲ್ಲೇ ಬಿಡುಗಡೆಗೊಳ್ಳಲಿರುವ ದುನಿಯಾ ಚಿತ್ರದ ನಾಯಕಿ ರಶ್ಮಿ ನಟಿಸಿರುವ ಮಂದಾಕಿನಿ ಚಿತ್ರ 'ನಿಸರ್ಗದ ಮುಂದೆ ಗಂಡು ಹೆಣ್ಣು ಒಂದೇ' ಎಂಬ ಪಂಚ್ಲೈನ್ನ್ನು ಹೊಂದಿದೆ.

ಹೀಗೆ ವಿಶಿಷ್ಟ ರೀತಿಯ ಪಂಚ್ಲೈನ್ ನೀಡಿ ಜನರನ್ನು ಆಕರ್ಷಿಸುವ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ ಎಂದರೆ ತಪ್ಪಿಲ್ಲ.
ಮತ್ತಷ್ಟು
ಆಕೆಯ ಹಿಂದೆ ಈತ, ಈತನ ಹಿಂದೆ ಮತ್ತೊಬ್ಬಾಕೆ
ನಾಯಕಿಯ ಸಿಹಿಮುತ್ತಿಗೆ ಐವರು ನಾಯಕರು
ಇಕ್ಬಾಲ್ ರಾಜ್ ಚಮತ್ಕಾರಕ್ಕೆ ನಮಸ್ಕಾರ
ರಾಜಕುಮಾರಿಗಾಗಿ ಒಟ್ಟಾದ ಅಣ್ಣ-ತಮ್ಮ
ಗಣೇಶನ ಅರಮನೆ
ಮಹರ್ಷಿ ಮಚ್ಚು ಹಿಡಿದಾಗ