ಮುಸ್ಸಂಜೆ ಮಾತಿನ ಕಥೆಗೆ ಕುಳಿತ ಸುದೀಪ್ ಚಿತ್ರದ ಬಗ್ಗೆ ಮನಬಿಚ್ಚಿ ಮಾತನಾಡಿದರು. ತಾವೇ ಸ್ವತ: ಇಷ್ಟಪಟ್ಟ ಚಿತ್ರ ಎಂದು ನೇರವಾಗಿ ಹೇಳಿದರು.
ಮುಸ್ಸಂಜೆ ಮಾತಿನ ಕಥೆ ಅದರ ಹೆಸರಿಗೆ ತಕ್ಕಂತೆ ಮುದ್ದಾಗಿದೆ. ಕಥೆ ಕೇಳಿದ ತಕ್ಷಣ ನಾನು ಒಪ್ಪಿಕೊಂಡೆ. ಸಾಮಾನ್ಯವಾಗಿ ನಿರ್ದೇಶಕರು ನನಗೆ ಕಥೆ ಒಪ್ಪಿಸುವಲ್ಲಿ ಹೆದರಿಕೊಳ್ಳುತ್ತಾರೆ. ಆದರೆ ನಿರ್ದೇಶಕ ಮಹೇಶ್ ನೇರವಾಗಿ ನನಗೆ ಕಥೆ ಹೇಳಿದರು ಎಂದು ತಮ್ಮ ಮುಸ್ಸಂಜೆ ಮಾತನ್ನು ಮುಗಿಸಿದರು.
ನಂತರ ಮುಸ್ಸಂಜೆ ಮಾತು ವಾಲಿದ್ದು, ನಟಿ ರಮ್ಯಾ ಕಡೆಗೆ. ಸ್ವತ: ಸುದೀಪ್ ನನಗೆ ಫೋನ್ ಮಾಡಿ 'ಈ ಚಿತ್ರವನ್ನು ಒಪ್ಪಿಕೊಳ್ಳಿ' ಎಂದರು. ಸಾಮಾನ್ಯವಾಗಿ ಸುದೀಪ್ ಯಾರನ್ನೂ ಒಪ್ಪಿಕೊಳ್ಳಿ ಎಂದು ಹೇಳುವುದಿಲ್ಲ. ಆದರೆ ಇಲ್ಲಿ ಅವರು ಕಥೆಯನ್ನು ಇಷ್ಟಪಟ್ಟು ಹೇಳಿದ್ದಾರೆಂದು ನನ್ನ ಬ್ಯುಸಿ ಶೆಡ್ಯೂಲ್‌ನಲ್ಲೂ ಈ ಚಿತ್ರವನ್ನು ಒಪ್ಪಿಕೊಂಡೆ. ನಿಜಕ್ಕೂ ಇದು ಉತ್ತಮ ಚಿತ್ರ. ಭಾವನಾತ್ಮಕ ದೃಶ್ಯಗಳಲ್ಲಿ ನಟಿಸುವುದರಲ್ಲಿ ಸುದೀಪ್ ನಿಪುಣ. ಚಿತ್ರ ನೋಡಿದ ಮೇಲೆ ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಬೇಕೆಂದೆನಿಸಿತು. ಆದ್ದರಿಂದ ಇಷ್ಟಪಟ್ಟು ಆ ಕೆಲಸ ಮಾಡಿದೆ ಎಂದು ತಮ್ಮ ಮಾತು ಮುಗಿಸಿದರು ರಮ್ಯಾ.
ನಿರ್ದೇಶಕ ಮಹೇಶ್, ಈ ಕಥೆಗೆ ಸುದೀಪ್ ಸೂಕ್ತ ವ್ಯಕ್ತಿ ಎಂದು ಅವರನ್ನೇ ಸಂಪರ್ಕಿಸಿದರಂತೆ. ಚಿತ್ರಕ್ಕೆ ಶ್ರೀಧರ್ ಸಂಗೀತ ನೀಡಿದ್ದಾರೆ. ಅನುಪ್ರಭಾಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸುರೇಶ್ ಹಾಗೂ ಭರತ್ ಚಿತ್ರ ನಿರ್ಮಿಸಿದ್ದಾರೆ.
|