ಮುಂಗಾರು ಮಳೆ ಚಿತ್ರ ಹಿಟ್ ಆದ ಬಳಿಕ ಹೊಸ ಹುಡುಗರ ಚಿತ್ರಗಳು ಸಾಕಷ್ಟು ಬಂದಿವೆ. ಇದರಲ್ಲಿ ಕೆಲವು ತಕ್ಕ ಮಟ್ಟಿನ ಯಶಸ್ಸು ಕಂಡರೆ ಇನ್ನು ಕೆಲವು ಅಂಗಾತ ಮಲಗಿವೆ. ಆದರೆ ದಿನದಿಂದ ದಿನಕ್ಕೆ ಸೆಟ್ಟೇರುವ ಹೊಸ ಚಿತ್ರಗಳ ಸಂಖ್ಯೆಯಂತೂ ಏರುತ್ತಲೇ ಇವೆ.
ಇನ್ನೆರಡು ತಿಂಗಳು ಹೊಸ ಚಿತ್ರಗಳೂ ಬಿಡುಗಡೆಯಾಗುವುದರ ಜೊತೆಗೆ ಹೊಸ ಚಿತ್ರಗಳು ಸೆಟ್ಟೇರುತ್ತಿವೆ. ಗೆಳೆಯ ಚಿತ್ರದ ನಿರ್ದೇಶಕ ಹರ್ಷ ನಿರ್ದೇಶಿಸುತ್ತಿರುವ ಬಿರುಗಾಳಿ ಚಿತ್ರ ಈಗಾಗಲೇ ಸೆಟ್ಟೇರಿ ಚಿತ್ರೀಕರಣ ನಡೆಯುತ್ತಿದೆ. ಏ.14 ರಂದು ನಾಗತಿಹಳ್ಳಿ ನಿರ್ದೇಶನದ ಒಲವೇ ಜೀವನ ಲೆಕ್ಕಾಚಾರ ಚಿತ್ರ ಸೆಟ್ಟೇರಿದೆ. ಇಂತಿ ನಿನ್ನ ಪ್ರೀತಿಯ ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಇಲ್ಲಿ ನಾಯಕನಾಗಿ ನಟಿಸುತ್ತಿದ್ದು, ಕೆ.ಮಂಜು ಇದನ್ನು ನಿರ್ಮಿಸುತ್ತಿದ್ದಾರೆ. ಅದೇ ದಿನ ಮುರಳಿ ಅಭಿನಯದ ಶಿವಮಣಿ ಚಿತ್ರ ಕೂಡಾ ಸೆಟ್ಟೇರಿದೆ. ಪ್ರಿಯಾಂಕಾ ಎಂಬ ಚಿತ್ರ ಕೂಡಾ ಚಿತ್ರೀಕರಣ ಆರಂಭಿಸಿದೆ. ಇದು ಸಂಪೂರ್ಣ ಹೊಸ ಮುಖಗಳನ್ನು ಒಳಗೊಂಡಿದೆ.
ನಮ್ಮೆಜಮಾನ್ರು ಚಿತ್ರದ ಮುಹೂರ್ತ ಸದ್ಯದಲ್ಲೇ ನಡೆಯಲಿದೆ. ಅದರ ಜೊತೆ ಎಸ್.ನಾರಾಯಣ್ ನಿರ್ದೇಶನದ ಚೈತ್ರದ ಚಂದ್ರಮ ಚಿತ್ರ 18 ರಂದು ಸೆಟ್ಟೇರುತ್ತಿದೆ. 21 ರಂದು ಶಿವರಾಜ್ ಕುಮಾರ್ ಅಭಿನಯದ ಪರಮೇಶ ಪಾನ್ವಾಲ ಚಿತ್ರದ ಮುಹೂರ್ತ ನಡೆಯಲಿದೆ. 23 ಕ್ಕೆ ಶ್ರೀನಿವಾಸ್ ರಾಜು ನಿರ್ದೇಶನದಲ್ಲಿ ಪ್ರಜ್ವಲ್ ಅಭಿನಯಿಸುವ ಹೊಸ ಚಿತ್ರ ಸೆಟ್ಟೇರುತ್ತದೆ. ಅಂದೇ ದಿಗಂತ್ ಹಾಗೂ ತೇಜಸ್ವಿನಿ ಅಭಿನಯದ ಇನ್ನೂ ಹೆಸರಿಡದ ಚಿತ್ರ ಆರಂಭವಾಗಲಿದೆ.
ಹೀಗೇ ಕನ್ನಡ ಚಿತ್ರರಂಗಕ್ಕೆ ಇದು ಸುಗ್ಗಿಯ ಕಾಲ. ಹಿಂದೆ ತಿಂಗಳಿಗೆ ಹೆಚ್ಚೆಂದರೆ ಒಂದೆರಡು ಚಿತ್ರ ಸೆಟ್ಟೇರುತ್ತಿದ್ದ ವೇಳೆ, ಇಂದು ವಾರದಲ್ಲಿ ಮೂರ್ನಾಲ್ಕು ಚಿತ್ರಗಳು ಸೆಟ್ಟೇರುತ್ತಿರುವುದು ನಿಜಕ್ಕೂ ಒಂದು ಆಶಾದಾಯಕ ಬೆಳವಣಿಗೆ.
|